ದೆಹಲಿ ಆಗಸ್ಟ್ 15: ಭಾರತದ 78 ನೇ ಸ್ವಾತಂತ್ರ್ಯ ದಿನಾಚರಣೆಯ (Independence Day 2024) ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು (ಗುರುವಾರ) ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ಅವರ ಮಾಡಿರುವ ಸತತ 11 ನೇ ಭಾಷಣದಲ್ಲಿ ಸುದೀರ್ಘ ಭಾಷಣ ಇದಾಗಿದೆ. 98 ನಿಮಿಷಗಳ ಈ ಭಾಷಣವು 2016 ರ ಭಾಷಣದಲ್ಲಿ ಅವರ ಹಿಂದಿನ 96 ನಿಮಿಷಗಳ ದಾಖಲೆಯನ್ನು ಮೀರಿಸಿದೆ. 2017 ರಲ್ಲಿ ಅವರು ಮಾಡಿದ ಚಿಕ್ಕ ಭಾಷಣ 56 ನಿಮಿಷಗಳ ಅವಧಿಯದ್ದಾಗಿತ್ತು. ಮೋದಿಯವರ ಸ್ವಾತಂತ್ರ್ಯ ದಿನದ ಭಾಷಣಗಳು ಸರಾಸರಿ 82 ನಿಮಿಷಗಳು. ಅಂದಹಾಗೆ ಇದು ಭಾರತದ ಇತಿಹಾಸದಲ್ಲಿ ಯಾವುದೇ ಇತರ ಪ್ರಧಾನ ಮಂತ್ರಿಗಳು ಮಾಡಿದ ಭಾಷಣದ ಅವಧಿಗಿಂತ ಹೆಚ್ಚು.
ಮೋದಿಯವರಿಗಿಂತ ಮೊದಲು ಜವಾಹರಲಾಲ್ ನೆಹರು ಅವರು 72 ನಿಮಿಷಗಳ ಸುದೀರ್ಘ ಭಾಷಣವನ್ನು ಮಾಡಿದ್ದರು. ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಇಂದಿರಾಗಾಂಧಿ ಅವರು 1954 ಮತ್ತು 1966 ರಲ್ಲಿ ಕ್ರಮವಾಗಿ 14 ನಿಮಿಷಗಳಲ್ಲಿ ಅತಿ ಕಡಿಮೆ ಅವಧಿಯ ಭಾಷಣ ಮಾಡಿದರು.
ತಮ್ಮ 98 ನಿಮಿಷಗಳ ಸುದೀರ್ಘ ಭಾಷಣದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಈ ವರ್ಷದ ಆಚರಣೆಗಳ ಥೀಮ್ – ವಿಕಸಿತ್ ಭಾರತ್ 2047 ಬಗ್ಗೆ ಮಾತನಾಡಿದ್ದಾರೆ. ವಿಕಸಿತ್ ಭಾರತ್ 2047 ಗಾಗಿ, ನಾವು ದೇಶವಾಸಿಗಳಿಂದ ಸಲಹೆಗಳನ್ನು ಆಹ್ವಾನಿಸಿದ್ದೇವೆ. ನಾವು ಸ್ವೀಕರಿಸಿದ ಅನೇಕ ಸಲಹೆಗಳು ನಮ್ಮ ನಾಗರಿಕರ ಕನಸುಗಳು ಮತ್ತು ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತವೆ. ರಾಷ್ಟ್ರದ ಜನರು ಅಂತಹ ದೊಡ್ಡ ಕನಸುಗಳನ್ನು ಹೊಂದಿರುವಾಗ, ಅದು ನಮ್ಮ ಆತ್ಮವಿಶ್ವಾಸವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ ಮತ್ತು ನಾವು ಹೆಚ್ಚು ದೃಢನಿಶ್ಚಯವನ್ನು ಹೊಂದಿದ್ದೇವೆ ಎಂದು ಮೋದಿ ಹೇಳಿದ್ದಾರೆ.
ಕೋಲ್ಕತ್ತಾದ ಆಸ್ಪತ್ರೆಯಲ್ಲಿ ಪ್ರಶಿಕ್ಷಣಾರ್ಥಿ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಕೊಲೆಯಾದ ಹಿನ್ನೆಲೆಯಲ್ಲಿ ಮಹಿಳಾ ಸುರಕ್ಷತೆಯ ವಿಷಯದ ಬಗ್ಗೆಯೂ ಪ್ರಧಾನಿ ಮೋದಿ ಮಾತನಾಡಿದ್ದಾರೆ. ದೇಶ, ಸಮಾಜ, ರಾಜ್ಯ ಸರ್ಕಾರಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಮಹಿಳೆಯರ ವಿರುದ್ಧದ ಅಪರಾಧಗಳ ತ್ವರಿತ ತನಿಖೆ, ಅಪರಾಧವೆಸಗುವವರಿಗೆ ಶೀಘ್ರವಾಗಿ ಕಠಿಣ ಶಿಕ್ಷೆಯನ್ನು ನೀಡಬೇಕು. ಇದು ಸಮಾಜದಲ್ಲಿ ಆತ್ಮವಿಶ್ವಾಸವನ್ನು ತುಂಬಲು ಮುಖ್ಯವಾಗಿದೆ ಎಂದು ಮೋದಿ ಹೇಳಿದ್ದಾರೆ.
ಇದು ದೇಶದ ಸುವರ್ಣ ಯುಗ ಎಂದು ಘೋಷಿಸಿದ ಪ್ರಧಾನಮಂತ್ರಿಯವರು, ಕ್ಷೇತ್ರಗಳಾದ್ಯಂತ ಅಭಿವೃದ್ಧಿ, ಆರ್ಥಿಕ ಸುಧಾರಣೆಗಳು ಮತ್ತು ದೇಶದ ಯುವಜನರಿಗೆ ಭರವಸೆಗಳನ್ನು ನೀಡುವ ಹಲವಾರು ಯೋಜನೆಗಳನ್ನು ವಿವರಿಸಿದರು. ಪ್ರಾಕೃತಿಕ ವಿಕೋಪಗಳನ್ನು ನಿಭಾಯಿಸುವುದರಿಂದ ಹಿಡಿದು ಜಾತ್ಯತೀತ ನಾಗರಿಕ ಸಂಹಿತೆಯವರೆಗೆ ಉದ್ಯೋಗಸ್ಥ ಮಹಿಳೆಯರಿಗೆ ಹೆರಿಗೆ ರಜೆಯವರೆಗೆ, ಪ್ರಧಾನಿ ಮೋದಿ ಅವರು ರಾಷ್ಟ್ರೀಯ ಪ್ರಾಮುಖ್ಯತೆಯ ವಿವಿಧ ವಿಷಯಗಳ ಬಗ್ಗೆ ಪ್ರಸ್ತಾಪಿಸಿದರು.
ಇದನ್ನೂ ಓದಿ: ಪದೇ ಪದೇ ನಡೆಯುವ ಚುನಾವಣೆಗಳು ದೇಶದ ಪ್ರಗತಿಗೆ ಅಡೆತಡೆಗಳನ್ನು ಸೃಷ್ಟಿಸುತ್ತವೆ: ಮೋದಿ
ನಾವು ನಿರ್ಣಯದೊಂದಿಗೆ ಮುಂದುವರಿಯುತ್ತಿದ್ದೇವೆ ಆದರೆ ಕೆಲವು ಜನರು ಪ್ರಗತಿಯನ್ನು ಕಾಣುವುದಿಲ್ಲ ಅಥವಾ ಅವರಿಗೆ ಪ್ರಯೋಜನವಾಗದ ಹೊರತು ಭಾರತದ ಒಳಿತನ್ನು ಯೋಚಿಸುವುದಿಲ್ಲ.ದೇಶವು ಈ ಬೆರಳೆಣಿಕೆಯ ನಿರಾಶಾವಾದಿ ಜನರಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಬೇಕಾಗಿದೆ ಎಂದು ಮೋದಿ ವಿಪಕ್ಷ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ