ಕೊಯಮತ್ತೂರು: ತಮಿಳುನಾಡು ವಿಧಾನಸಭೆ ಚುನಾವಣೆಗೆ ಮುನ್ನ ಸೋಮವಾರ ರಾತ್ರಿ ರಾಜಕೀಯ ಪಕ್ಷಗಳು ಜನರಿಗೆ ಹಣ ಹಂಚಿವೆ ಎಂದು ಮಕ್ಕಳ್ ನೀಧಿ ಮಯ್ಯಂ (MNM) ಪಕ್ಷದ ಸಂಸ್ಥಾಪಕ ಕಮಲ್ ಹಾಸನ್ ಆರೋಪಿಸಿದ್ದಾರೆ. ಈ ಬಗ್ಗೆ ಅವರು ಕೊಯಮತ್ತೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಅಧಿಕಾರಿಯವರಿಗೆ ದೂರು ನೀಡಿದ್ದಾರೆ. ಕಮಲ್ ಹಾಸನ್ ಇದೇ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಕೆಲವೊಂದು ಮತಗಟ್ಟೆಗಳಲ್ಲಿ ಸಮಸ್ಯೆಯಾಗಿದೆ. ಆದರೆ ನಮ್ಮ ಪ್ರಧಾನ ದೂರು ಏನೆಂದರೆ ನಿನ್ನೆ ರಾತ್ರಿಯಿಂದ ರಾಜಕೀಯ ಪಕ್ಷಗಳು ಜನರಿಗೆ ಹಣ ಹಂಚಿವೆ. ಅವರು ತುಂಬಾ ಮೋಸದಿಂದ ಮತ್ತು ತ್ವರಿತ ಗತಿಯಲ್ಲಿ ಮಾಡಿದ್ದಾರೆ ಎಂದು ಕಮಲ್ ದೂರಿದ್ದಾರೆ.
ನಾವು ಕೆಲವರನ್ನು ಹಿಡಿದಿದ್ದೇವೆ, ಸಾಕ್ಷ್ಯಗಳು ಇವೆ. ಚುನಾವಣಾ ಆಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಎನ್ಡಿಟಿವಿ ಜತೆ ಮಾತನಾಡಿದ ಕಮಲ್ ಹೇಳಿದ್ದಾರೆ. ಈ ಕೃತ್ಯವನ್ನು ಖಂಡಿಸಿ ನಾನು ಪ್ರತಿಭಟನೆ ನಡೆಸುವುದಾಗಲೀ, ಮತದಾನ ಪ್ರಕ್ರಿಯೆಗೆ ತಡೆಯೊಡ್ಡುವುದಾಗಲೀ ಮಾಡುವುದಿಲ್ಲ. ನಾನು ಇಲ್ಲಿ ದೂರು ನೀಡಲು ಬಂದಿದ್ದೇನೆ ಎಂದಿದ್ದಾರೆ ಕಮಲ್.
ಚುನಾವಣಾ ಫಲಿತಾಂಶದ ಬಗ್ಗೆ ನಾನು ಧನಾತ್ಮಕವಾಗಿ ಚಿಂತಿಸುತ್ತಿದ್ದೇನೆ. ನಾನು ಕಮಲ್ ಹಾಸನ್ ಜತೆಗೆ ಬಂದಿದ್ದೇನೆ. ನಾನು ಅವರ ಮಗಳು, ಹಾಗಾಗಿ ಅವರ ಬೆಂಬಲಕ್ಕೆ ನಿಂತಿದ್ದೇನೆ. ಎಲ್ಲವೂ ಸರಿಹೋಗಲಿ ಎಂದು ಆಶಿಸುತ್ತೇನೆ ಎಂದು ಶ್ರುತಿ ಹಾಸನ್ ಪ್ರತಿಕ್ರಿಯಿಸಿದ್ದಾರೆ.
ಕೊಯಮತ್ತೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಮಕ್ಕಳ್ ನೀಧಿ ಮಯ್ಯಂ ಪಕ್ಷದಿಂದ ಕಮಲ್ ಹಾಸನ್ ಸ್ಪರ್ಧಿಸುತ್ತಿದ್ದು ಬಿಜೆಪಿಯ ವನತಿ ಶ್ರೀನಿವಾಸನ್, ಕಾಂಗ್ರೆಸ್ ಪಕ್ಷದ ಮಯೂರ ಎಸ್. ಜಯಕುಮಾರ್ ಕಣದಲ್ಲಿದ್ದಾರೆ.
ತಮಿಳುನಾಡಿನ 234 ಚುನಾವಣಾ ಕ್ಷೇತ್ರಗಳಿಗೆ ಚುನಾವಣೆಗೆ ಒಂದೇ ಹಂತದ ಮತದಾನ ನಡೆಯುತ್ತಿದ್ದು ಮಧ್ಯಾಹ್ನ 2 ಗಂಟೆಗೆ ನಮಕ್ಕಲ್ನಲ್ಲಿ ಶೇ 50.84 ಮತದಾನವಾಗಿದೆ. 3ಗಂಟೆಗೆ ರಾಣಿಪೇಟ್ ಜಿಲ್ಲೆಯಲ್ಲಿ ಶೇ 61.52ಮತದಾನವಾಗಿದೆ. ತಮಿಳುನಾಡಿನಲ್ಲಿ ಮತದಾನ ಶಾಂತಿಯುತವಾಗಿ ನಡೆಯುತ್ತಿದ್ದು ಯಾವುದೇ ಅಹಿತಕರ ಘಟನೆಗಳು ವರದಿ ಆಗಿಲ್ಲ ಎಂದು ತಮಿಳುನಾಡಿನ ಮುಖ್ಯ ಚುನಾವಣಾಧಿಕಾರಿ ಸತ್ಯಬ್ರತ ಸಹೋ ಹೇಳಿದ್ದಾರೆ.
ತೊಂಡಮುತ್ತೂರ್ ಕ್ಷೇತ್ರದಲ್ಲಿ ಎಐಎಡಿಎಂಕೆ ಕಾರ್ಯಕರ್ತರಿಂದ ಹಲ್ಲೆ: ಡಿಎಂಕೆ ಆರೋಪ
ತೊಂಡಮುತ್ತೂರ್ ವಿಧಾನಸಭಾ ಕ್ಷೇತ್ರದ ಸೆಲ್ವಪುರಂ ಮತಗಟ್ಟೆ ಹೊರಗಡೆ ಎಐಎಡಿಎಂಕೆ ಕಾರ್ಯಕರ್ತರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಡಿಎಂಕೆ ಅಭ್ಯರ್ಥಿ ಕಾರ್ತಿಕೇಯ ಶಿವಸೇನಾಪತಿ ಆರೋಪಿಸಿದ್ದಾರೆ.
ಡಿಎಂಕೆ ಹಣ ವಿತರಿಸುತ್ತಿರುವುದನ್ನು ನೋಡಿದ್ದೇವೆ : ಖುಷ್ಬೂ ಸುಂದರ್
ಡಿಎಂಕೆ ಕಾರ್ಯಕರ್ತರು ಮತದಾರರರಿಗೆ ಹಣ ವಿತರಿಸುತ್ತಿರುವುದನ್ನು ನಾವು ನೋಡಿದ್ದೇವೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ನಾವು ದೂರು ನೀಡಿದ್ದೇವೆ. ಅಡ್ಡದಾರಿ ಮೂಲಕ ಡಿಎಂಕೆ ಗೆಲ್ಲಲು ಪ್ರಯತ್ನಿಸುತ್ತಿದೆ ಎಂದು ಥೌಸಂಡ್ ಲೈಟ್ಸ್ ಚುನಾವಣಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಖುಷ್ಬೂ ಸುಂದರ್ ಹೇಳಿದ್ದಾರೆ.
ಗೆಲುವು ನಮ್ಮದೇ- ಕಾರ್ತಿ ಚಿದಂಬರಂ
ತಮಿಳುನಾಡು ಚುನಾವಣೆಯಲ್ಲಿ ಡಿಎಂಕೆ-ಕಾಂಗ್ರೆಸ್ ಮೈತ್ರಿಕೂಟ ಭರ್ಜರಿ ಗೆಲುವು ಗಳಿಸಲಿದೆ. 2019ರ ಚುನಾವಣೆ ಇಲ್ಲಿ ಮತ್ತೆ ಪುನರಾವರ್ತನೆಯಾಗಲಿದೆ ಎಂದು ಕಾಂಗ್ರೆಸ್ ನಾಯಕ ಕಾರ್ತಿ ಚಿದಂಬರಂ ಹೇಳಿದ್ದಾರೆ. ಶಿವಗಂಗಾ ಜಿಲ್ಲೆ ತಿರುಪತ್ತೂರ್ ಮತಗಟ್ಟೆಯಲ್ಲಿ ಪತ್ನಿ ಮತ್ತು ಮಗಳೊಂದಿಗೆ ಬಂದು ಕಾರ್ತಿ ಚಿದಂಬರಂ ಮತದಾನ ಮಾಡಿದ್ದಾರೆ.
ಉದಯನಿಧಿ ವಿರುದ್ಧ ಎಐಎಡಿಎಂಕೆ ದೂರು
ಮತದಾನ ಮಾಡುವಾಗ ಡಿಎಂಕೆ ಪಕ್ಷದ ಲೋಗೊ ತೊಟ್ಟಿದ್ದರು ಎಂದು ಆರೋಪಿಸಿ ಎಐಎಡಿಎಂಕೆ ಉದಯನಿಧಿ ಸ್ಟಾಲಿನ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
Tamil Nadu: AIADMK’s Babu Murugavel filed a complaint against DMK leader Udhayanidhi Stalin for wearing a shirt with party logo while casting his vote earlier today.
(File photo) pic.twitter.com/QJ5Lxl2i2j
— ANI (@ANI) April 6, 2021
ಖುಷ್ಬೂ ಸುಂದರ್ ವಿರುದ್ಧ ಡಿಎಂಕೆ ದೂರು
ಬಿಜೆಪಿ ಅಭ್ಯರ್ಥಿ ಖುಷ್ಬೂ ಸುಂದರ್ ತಮ್ಮ ಕಾರಿನಲ್ಲಿ ಬಿಜೆಪಿ ಧ್ವಜವಿರಿಸಿ ಮತಗಟ್ಟೆಗೆ ಬಂದಿದ್ದು, ಚುನಾವಣಾ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ಡಿಎಂಕೆ ಪಕ್ಷ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಇದನ್ನೂ ಓದಿ: Tamil Nadu Election 2021: ‘ನಾನು ರಾಜಕೀಯಕ್ಕಾಗಿ ಸಿನಿಮಾವನ್ನು ಸಂಪೂರ್ಣವಾಗಿ ಬಿಡಲೂ ಸಿದ್ಧನಿದ್ದೇನೆ..‘- ಕಮಲ್ ಹಾಸನ್
Published On - 4:35 pm, Tue, 6 April 21