ಕಲಬುರಗಿ: ಸರ್ಕಾರ ಬಡಜನರಿಗಾಗಿ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡುತ್ತದೆ. ಆದ್ರೆ ಸರ್ಕಾರದ ಯೋಜನೆಗಳು ಮಾತ್ರ ಬಹುತೇಕ ಫಲಾನುಭವಿಗಳಿಗೆ ತಲಪೋದಿಲ್ಲ. ಹೌದು.. ಕೊರೊನಾದಿಂದ ಇಡೀ ಜಗತ್ತೇ ತತ್ತರಿಸಿಹೋಗಿದೆ. ಅದರಲ್ಲೂ ಕೂಡಾ ಕಡುಬಡವರು ಉದ್ಯೋಗವಿಲ್ಲದೆ, ಹೊಟ್ಟೆ ತುಂಬಿಸಿಕೊಳ್ಳಲು ಪರದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯ, ಕೇಂದ್ರ ಸರ್ಕಾರ ಬಡವರ ಹೊಟ್ಟೆ ತುಂಬಿಸಲು ಉಚಿತವಾಗಿ ಅಕ್ಕಿ ಮತ್ತು ಗೋಧಿ ನೀಡುತ್ತಿದೆ. ಆದ್ರೆ ಕಲಬುರಗಿಯಲ್ಲಿ ಬಡ ಜನರ ಹೊಟ್ಟೆ ತುಂಬಿಸಬೇಕಿದ್ದ ಪಡಿತರ ಧಾನ್ಯಗಳು ಕಾಳ ಸಂತೆಯಲ್ಲಿ ಮಾರಾಟವಾಗ್ತಿವೆ.
ಕಲಬುರಗಿ ಜಿಲ್ಲೆ ಕೊರೊನಾದ ಹಾಟಸ್ಪಾಟ್ ಜಿಲ್ಲೆಯಾಗಿದೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇನ್ನೊಂದಡೆ ಲಕ್ಷಾಂತರ ಜನರು ಕೆಲಸವಿಲ್ಲದೆ ಮನೆಯಲ್ಲಿ ಕುಳಿತಿದ್ದಾರೆ. ಮಹಾರಾಷ್ಟ್ರ, ಬೆಂಗಳೂರು ಸೇರಿದಂತೆ ಅನೇಕ ಕಡೆ ತುತ್ತಿನ ಚೀಲ ತುಂಬಿಸಿಕೊಳ್ಳಲು ಹೋಗಿದ್ದ ಸಾವಿರಾರು ವಲಸೆ ಕಾರ್ಮಿಕರು ಇದೀಗ ತಮ್ಮೂರಿಗೆ ಬಂದು ಸೇರಿದ್ದಾರೆ. ತುತ್ತು ಅನ್ನಕ್ಕೂ ಪರದಾಡುವಂತಹ ಲಕ್ಷಾಂತರ ಜನರು, ಸರ್ಕಾರದ ಸಹಾಯಕ್ಕಾಗಿ ಕಾಯುತ್ತಿದ್ದಾರೆ. ಇಂತವರ ಸಂಕಷ್ಟ ನೋಡಿಯೇ ರಾಜ್ಯ ಮತ್ತು ಕೇಂದ್ರ ಸರ್ಕಾರ BPL ಕಾರ್ಡ್ ಇದ್ದವರಿಗೆ ಉಚಿತವಾಗಿ ಅಕ್ಕಿ, ಗೋಧಿ ಕೊಡುತ್ತಿದೆ.
ಸರ್ಕಾರ ನೀಡುತ್ತಿರುವ ಪಡಿತರ ಫಲಾನುಭವಿಗಳಿಗೆ ಸೇರ್ತಿಲ್ಲ:
ಆದ್ರೆ ಸರ್ಕಾರ ನೀಡುತ್ತಿರುವ ಅಕ್ಕಿ, ಬಹುತೇಕ ಫಲಾನುಭವಿಗಳಿಗೆ ಸೇರುತ್ತಿಲ್ಲ. ಸರ್ಕಾರ ನಮಗೆ ನೀಡಿದ್ದ ಅಕ್ಕಿ ತಲುಪಿಲ್ಲ ಎಂದು ಹೇಳುತ್ತಿದ್ದಾರೆ. ನೀಡಿದ್ರು ಕಡಿಮೆ ನೀಡಿದ್ದಾರೆ ಅನ್ನೋ ಅನೇಕ ದೂರುಗಳು ಕಲಬುರಗಿ ಜಿಲ್ಲೆಯಲ್ಲಿ ಕೇಳಿಬಂದಿದ್ದವು. ಈ ಬಗ್ಗೆ ಜಿಲ್ಲಾಡಳಿತ ಕೂಡಾ ಅನೇಕ ಪಡಿತರ ಅಂಗಡಿಗಳ ಲೈಸನ್ಸ್ ರದ್ದು ಮಾಡಿತು. ಹಾಗಂತ ಬಡಜನರ ಹೊಟ್ಟೆ ತುಂಬಿಸಬೇಕಿದ್ದ ಪಡಿತರ ಧಾನ್ಯಗಳು ಏನಾದವು, ಎಲ್ಲಿ ಸೇರಿದವು ಅಂತ ಪತ್ತೆ ಮಾಡ್ತಾ ಹೋದಾಗ ಗೊತ್ತಾಗಿದ್ದು, ಕರಾಳ ದಂಧೆಯ ಇನ್ನೊಂದು ಮುಖ.
ಹೌದು, ಬಡ ಜನರ ಹೊಟ್ಟೆ ತುಂಬಿಸಬೇಕಿದ್ದ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗ್ತಿರೋದು ಜಿಲ್ಲೆಯಲ್ಲಿ ಬಯಲಾಗಿದೆ. ಕಲಬುರಗಿ ಆಹಾರ ಇಲಾಖೆಯ ಅಧಿಕಾರಿಗಳು, ಜಿಲ್ಲಾ ಪೊಲೀಸರು ಕಳೆದ ಒಂದೇ ತಿಂಗಳಲ್ಲಿ ಜಿಲ್ಲೆಯಲ್ಲಿ ಮೂರು ಕಡೆ ಅಕ್ರಮವಾಗಿ ಪಡಿತರ ಧಾನ್ಯಗಳನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡುವದನ್ನು ಪತ್ತೆ ಮಾಡಿದ್ದಾರೆ.
3 ಸಾವಿರಕ್ಕೂ ಅಧಿಕ ಕ್ವಿಂಟಾಲ್ ಅಕ್ಕಿ ಜಪ್ತಿ:
ಕಲಬುರಗಿ ಜಿಲ್ಲೆಯಲ್ಲಿ ಮೂರು ದಾಳಿಗಳಲ್ಲಿ ಮೂರು ಸಾವಿರಕ್ಕೂ ಅಧಿಕ ಕ್ವಿಂಟಾಲ್ ಅಕ್ಕಿಯನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ನಗರದ ಚೌಕ್ ಮತ್ತು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಲಾ ಒಂದೊಂದು ಪ್ರಕರಣ, ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ. ಹೌದು ಬಡಜನರ ಹೊಟ್ಟೆ ತುಂಬಿಸಬೇಕಿದ್ದ ಪಡಿತರ ಅಕ್ಕಿಯನ್ನು, ಕಾಳ ಸಂತೆಯಲ್ಲಿ ಅಕ್ರಮ ದಂಧೆ ಮಾಡುವವರಿಗೆ ನೀಡಿದ್ದಾರೆ. ಅವರು ಅವುಗಳನ್ನು ಸಂಗ್ರಹಿಸಿ, ಬೇರೆ ಪಾಕೇಟ್ಗಳನ್ನು ಮಾಡಿ, ನೆರೆ ರಾಜ್ಯಗಳಿಗೆ ಕಳುಹಿಸಿ, ಲಕ್ಷಾಂತರ ರೂಪಾಯಿ ಹಣ ಸಂಪಾದಿಸುತ್ತಾರೆ.
ಹೌದು ಕಲಬುರಗಿ ಜಿಲ್ಲೆಯ ಬಡ ಜನರ ಹೊಟ್ಟೆ ತುಂಬಿಸಬೇಕಿದ್ದ ಪಡಿತರ ಧಾನ್ಯಗಳು, ನೆರೆಯ ಮಹಾರಾಷ್ಟ್ರ ಮತ್ತು ಬೇರೆ ರಾಜ್ಯಗಳಿಗೆ ಹೋಗುತ್ತವೆ. ಇದೇ ಅಕ್ಕಿಯನ್ನು ಪಾಲಿಶ್ ಮಾಡಿ, ಬೇರೆ ದೇಶಗಳಿಗೆ ಕಳುಹಿಸುವ ದಂಧೆ ಕೂಡಾ ಅನೇಕ ವರ್ಷಗಳಿಂದ ರಾಜ್ಯದಲ್ಲಿ ನಡೆಯುತ್ತಿದೆ. ಸರ್ಕಾರ ಉಚಿತವಾಗಿ ಬಡ ಜನರಿಗೆ ನೀಡುವ ಅಕ್ಕಿ ಸೇರಿದಂತೆ ಪಡಿತರ ಧಾನ್ಯಗಳನ್ನು ಮಾರಾಟ ಮಾಡಿ ಕೋಟ್ಯಂತರ ರೂಪಾಯಿ ಹಣ ಗಳಿಸುವ ಅಕ್ರಮ ದಂದೆಯೇ ರಾಜ್ಯದಲ್ಲಿ ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿದೆ. ಅನೇಕ ಕಡೆ ಪ್ರಕರಣ ದಾಖಲಾಗುತ್ತವೆ. ಆದ್ರೆ ಸರಿಯಾಗಿ ವಿಚಾರಣೆಯಾಗುತ್ತಿಲ್ಲಾ. ಹೀಗಾಗಿ ಅಕ್ರಮ ಕುಳಗಳು ನ್ಯಾಯಾಂಗದ ಕುಣಿಕೆಯಿಂದ ಕೂಡಾ ಪಾರಾಗುತ್ತಿವೆ.
Published On - 2:24 pm, Wed, 20 May 20