ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯಲ್ಲಿ ಸಹಕಾರ; ಭಾರತ ಮತ್ತು ಯುರೋಪಿಯನ್ ಒಕ್ಕೂಟ ನಡುವೆ ಒಪ್ಪಂದಕ್ಕೆ ಸಹಿ

|

Updated on: Nov 24, 2023 | 9:32 PM

ಈ ಒಪ್ಪಂದವು ಆರ್ಥಿಕ ಬೆಳವಣಿಗೆ ಮತ್ತು ದೇಶಗಳ ನಡುವೆ ಸಂಪರ್ಕವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಇದರ ಭಾಗವಾಗಿ ಇತ್ತೀಚೆಗೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಎಂಒಯುಗೆ ಸಹಿ ಹಾಕಿದ್ದಾರೆ. ಈ ವಿಷಯವನ್ನು ಕೇಂದ್ರ ಸಚಿವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯಲ್ಲಿ ಸಹಕಾರ; ಭಾರತ ಮತ್ತು ಯುರೋಪಿಯನ್ ಒಕ್ಕೂಟ ನಡುವೆ ಒಪ್ಪಂದಕ್ಕೆ ಸಹಿ
ಒಪ್ಪಂದಕ್ಕೆ ಭಾರತ- ಯುರೋಪಿಯನ್ ಒಕ್ಕೂಟ ಸಹಿ
Follow us on

ದೆಹಲಿ ನವೆಂಬರ್ 24: ಭಾರತ- ಯುರೋಪಿಯನ್ ಒಕ್ಕೂಟ(EU) ನಡುವೆ ಮುಕ್ತ ವ್ಯಾಪಾರ ಒಪ್ಪಂದ ಆಗಿದೆ. ಸೆಮಿಕಂಡಕ್ಟರ್‌ಗಳ ಕುರಿತು ಭಾರತ ಮತ್ತು ಇಯು ನಡುವೆ ಪ್ರಮುಖ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಇದಕ್ಕೆ ಯುರೋಪಿಯನ್ ಆಂತರಿಕ ಮಾರುಕಟ್ಟೆಯ ಆಯುಕ್ತ ಥಿಯೆರಿ ಬ್ರೆಟನ್, ಭಾರತ ಸರ್ಕಾರದ ರೈಲ್ವೆ, ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ (Ashwini vaishnaw) ಸಹಿ ಹಾಕಿದ್ದಾರೆ. ಬಲವಾದ ಸೆಮಿಕಂಡಕ್ಟರ್ ಪೂರೈಕೆ ಮತ್ತು ನಾವೀನ್ಯತೆಯ ಮೇಲೆ ಯುರೋಪಿಯನ್ ಒಕ್ಕೂಟ- ಭಾರತ ಒಟ್ಟಿಗೆ ಕೆಲಸ ಮಾಡಲು ಒಪ್ಪಂದವು ಅನುಮತಿಸುತ್ತದೆ.

ಎರಡೂ ದೇಶಗಳು ಅನುಭವಗಳು, ಉತ್ತಮ ಅಭ್ಯಾಸಗಳು ಮತ್ತು ಸಂಬಂಧಿತ ಅರೆವಾಹಕ ಪರಿಸರ ವ್ಯವಸ್ಥೆಗಳ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳುತ್ತವೆ. ವಿಶ್ವವಿದ್ಯಾನಿಲಯಗಳು, ಸಂಶೋಧನಾ ಸಂಸ್ಥೆಗಳು ಮತ್ತು ವ್ಯವಹಾರಗಳ ನಡುವೆ ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆಗಳಲ್ಲಿ ಸಹಕಾರಕ್ಕಾಗಿ ಉಭಯ ದೇಶಗಳು ಒಟ್ಟಾಗಿ ಕೆಲಸ ಮಾಡುತ್ತವೆ. ಅರೆವಾಹಕಗಳ ಉದ್ಯಮಕ್ಕೆ ಕೌಶಲ್ಯ, ಪ್ರತಿಭೆ ಮತ್ತು ಉದ್ಯೋಗಿಗಳ ಅಭಿವೃದ್ಧಿ, ಕಾರ್ಯಾಗಾರಗಳ ಸ್ಥಾಪನೆ, ಪಾಲುದಾರಿಕೆ ಮತ್ತು ನೇರ ಹೂಡಿಕೆಯ ಉತ್ತೇಜನದ ಮೂಲಕ ಸಹಕಾರವನ್ನು ಸುಗಮಗೊಳಿಸಲು ಎರಡೂ ದೇಶಗಳು ಒಪ್ಪಿಕೊಂಡಿವೆ.


ಸೆಪ್ಟೆಂಬರ್‌ನಲ್ಲಿ ನವದೆಹಲಿಯಲ್ಲಿ ನಡೆದ ಜಿ 20 ನಾಯಕರ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ಮಧ್ಯಪ್ರಾಚ್ಯ ಯುರೋಪ್ ಆರ್ಥಿಕ ಕಾರಿಡಾರ್ ಅನ್ನು ಘೋಷಿಸಿದರು. IMEC ಭಾರತದಿಂದ ಯುರೋಪ್‌ಗೆ ಯೋಜಿತ ಹೊಸ ವ್ಯಾಪಾರ ಮಾರ್ಗವಾಗಿದೆ. ಭಾರತದ ಹೊರತಾಗಿ, ಈ ಬಹುರಾಷ್ಟ್ರೀಯ ಕಾರಿಡಾರ್ ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಫ್ರಾನ್ಸ್, ಜರ್ಮನಿ, ಇಟಲಿ, ಯುರೋಪಿಯನ್ ಯೂನಿಯನ್, ಅಮೆರಿಕವನ್ನು ಒಳಗೊಂಡಿದೆ. ಐಎಂಇಸಿಯ ವ್ಯಾಪಾರ ಮತ್ತು ಮೂಲಸೌಕರ್ಯ ಜಾಲಗಳನ್ನು ನಿರ್ಮಿಸಲು ದೆಹಲಿಯನ್ನು ವೇದಿಕೆಯಾಗಿ ನಿರ್ಧರಿಸಲಾಗಿದೆ. ಇದು ಆರ್ಥಿಕ ಬೆಳವಣಿಗೆ ಮತ್ತು ದೇಶಗಳ ನಡುವೆ ಸಂಪರ್ಕವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಇದರ ಭಾಗವಾಗಿ ಇತ್ತೀಚೆಗೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಎಂಒಯುಗೆ ಸಹಿ ಹಾಕಿದ್ದಾರೆ. ಈ ವಿಷಯವನ್ನು ಕೇಂದ್ರ ಸಚಿವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಅತ್ಯಾಧುನಿಕ ಮಾಡ್ಯೂಲ್ ಪ್ರೊಡಕ್ಷನ್ ಲೈನ್ ಉದ್ಘಾಟನೆ; ಇದು ಹೆಮ್ಮೆಯ ಸಂಗತಿ ಎಂದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್

ಆರ್ಥಿಕ ಕಾರಿಡಾರ್ ಎಂಬುದು ರಸ್ತೆಗಳು, ಬಂದರುಗಳು, ರೈಲ್ವೆಗಳ ಸಮಗ್ರ ಜಾಲವಾಗಿದ್ದು, ಸರಕುಗಳು ಮತ್ತು ಜನರ ಪರಿಣಾಮಕಾರಿ ಮತ್ತು ವೆಚ್ಚ-ಪರಿಣಾಮಕಾರಿ ಚಲನೆಗೆ ಅನುಕೂಲವಾಗುವಂತೆ ಪ್ರಮುಖ ಉತ್ಪಾದನಾ ಕೇಂದ್ರಗಳನ್ನು ಸಂಪರ್ಕಿಸುತ್ತದೆ. ಇವು ಸಾಮಾನ್ಯವಾಗಿ ದೇಶಗಳ ನಡುವಿನ ವ್ಯಾಪಾರವನ್ನು ಉತ್ತೇಜಿಸಲು, ಮೂಲಸೌಕರ್ಯ ಮತ್ತು ಕೈಗಾರಿಕಾ ಅಭಿವೃದ್ಧಿಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಈ ಕ್ರಮದಲ್ಲಿ ಭಾರತವು ವಿಶ್ವದ ರಾಷ್ಟ್ರಗಳೊಂದಿಗೆ ರಾಜತಾಂತ್ರಿಕ ಸಂಬಂಧವನ್ನು ಸುಧಾರಿಸುವ ಮೂಲಕ ವ್ಯಾಪ್ತಿ ಹೆಚ್ಚಿಸಲು ಪ್ರಯತ್ನಿಸುತ್ತಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ