ಚಲಿಸುವ ರೈಲಿನಲ್ಲಿ ಪೂಜೆ, ವಿಡಿಯೋ ವೈರಲ್ ಆದ ಬೆನ್ನಲ್ಲೇ ಭಾರತೀಯ ರೈಲ್ವೆಯಿಂದ ಸ್ಪಷ್ಟನೆ

ಚಲಿಸುವ ರೈಲಿನಲ್ಲಿ ಪೂಜೆ ನೆರವೇರಿಸಿದ ವಿಡಿಯೋ ವೈರಲ್ ಆಗಿ ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿತ್ತು. ಇದರ ಬಗ್ಗೆ ಸ್ಪಷ್ಟನೆ ನೀಡಿದ ಭಾರತೀಯ ರೈಲ್ವೆ, ಇದು ಸಾಮಾನ್ಯ ಕೋಚ್ ಅಲ್ಲ. ₹3 ಲಕ್ಷ ನೀಡಿ ಖಾಸಗಿಯಾಗಿ ಕಾಯ್ದಿರಿಸಿದ ಐಷಾರಾಮಿ 'ಸಲೂನ್ ಕಾರ್' ಬೋಗಿಯಲ್ಲಿ ನಡೆದ ಪೂಜೆ ಎಂದು ತಿಳಿಸಿದೆ. ಆದರೂ, ಚಲಿಸುವ ರೈಲಿನಲ್ಲಿ ಇಂತಹ ಆಚರಣೆಗಳ ಸುರಕ್ಷತೆಯ ಬಗ್ಗೆ ಚರ್ಚೆ ಮುಂದುವರೆದಿದೆ.

ಚಲಿಸುವ ರೈಲಿನಲ್ಲಿ ಪೂಜೆ, ವಿಡಿಯೋ ವೈರಲ್ ಆದ ಬೆನ್ನಲ್ಲೇ ಭಾರತೀಯ ರೈಲ್ವೆಯಿಂದ ಸ್ಪಷ್ಟನೆ
ಪೂಜೆ

Updated on: Jul 13, 2026 | 12:09 PM

ನವದೆಹಲಿ, ಜುಲೈ 13: ಇತ್ತೀಚೆಗಷ್ಟೇ ರೈಲು(Train) ಬೋಗಿಯೊಂದನ್ನು ವಧು-ವರರ ಕೋಣೆಯಂತೆ ಅಲಂಕರಿಸಲಾಗಿದ್ದ ‘ಹನಿಮೂನ್ ಕೋಚ್’ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿತ್ತು. ಈಗ ಚಲಿಸುವ ರೈಲಿನೊಳಗೇ ಪುರೋಹಿತರ ಸಮ್ಮುಖದಲ್ಲಿ ಮಂತ್ರ ಘೋಷಗಳೊಂದಿಗೆ ಧಾರ್ಮಿಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸುತ್ತಿರುವ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ವೈರಲ್ ವಿಡಿಯೋದಲ್ಲಿ, ಬಿಳಿ ವಸ್ತ್ರ ಧರಿಸಿದ ಭಕ್ತರ ಸಮ್ಮುಖದಲ್ಲಿ ಅರ್ಚಕರೊಬ್ಬರು ರೈಲು ಬೋಗಿಯ ನೆಲದ ಮೇಲೆಯೇ ಕುಳಿತು ಪೂಜೆನೆರವೇರಿಸುತ್ತಿರುವುದು ಕಂಡುಬಂದಿದೆ. ಸಾಮಾನ್ಯ ಪ್ರಯಾಣಿಕರು ಓಡಾಡುವ ರೈಲಿನಲ್ಲಿ ಇಂತಹ ಆಚರಣೆಗಳಿಗೆ ಅವಕಾಶವಿದೆಯೇ? ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಲು ಆರಂಭಿಸಿದ ಬೆನ್ನಲ್ಲೇ ಉತ್ತರ ರೈಲ್ವೆ ಅಧಿಕೃತ ಸ್ಪಷ್ಟನೆ ನೀಡಿದೆ.

ಸಾಮಾನ್ಯ ಬೋಗಿಯಲ್ಲ, ಇದು 3 ಲಕ್ಷದ ‘ಲಕ್ಸುರಿ ಸಲೂನ್ ಕಾರು’

ಸಾರ್ವಜನಿಕರ ಗೊಂದಲಕ್ಕೆ ತೆರೆ ಎಳೆದಿರುವ ರೈಲ್ವೆ ಇಲಾಖೆ, ಈ ಪೂಜೆ ನಡೆದಿರುವುದು ಸಾಮಾನ್ಯ ಪ್ರಯಾಣಿಕರ ಕೋಚ್‌ನಲ್ಲಿ ಅಲ್ಲ, ಬದಲಿಗೆ ಖಾಸಗಿಯಾಗಿ ಬುಕ್ ಮಾಡಲಾದ ಅತ್ಯಂತ ಐಷಾರಾಮಿ ‘ಸಲೂನ್ ಕಾರ್’ಬೋಗಿಯೊಳಗೆ ಎಂದು ಸ್ಪಷ್ಟಪಡಿಸಿದೆ.

ವಿಡಿಯೋ:

ಖಾಸಗಿ ವ್ಯಕ್ತಿಯೊಬ್ಬರು ಐಆರ್‌ಸಿಟಿಸಿ (IRCTC) ಮೂಲಕ ಈ ವಿಶೇಷ ಐಷಾರಾಮಿ ಕೋಚ್ ಅನ್ನು ಸಂಪೂರ್ಣವಾಗಿ ತಮಗಾಗಿ ಮಾತ್ರ ಬುಕ್ ಮಾಡಿದ್ದರು. ಜುಲೈ 8 ರಂದು ಈ  ಬುಕಿಂಗ್ ನಡೆದಿದ್ದು, ನವದೆಹಲಿಯಿಂದ ಮುಂಬೈವರೆಗಿನ ಏಕಮುಖ ಪ್ರಯಾಣಕ್ಕಾಗಿ ಆ ವ್ಯಕ್ತಿ ಬರೋಬ್ಬರಿ 3,08,580 ರೂಪಾಯಿಗಳನ್ನು ಮುಂಗಡವಾಗಿ ರೈಲ್ವೆ ಇಲಾಖೆಗೆ ಪಾವತಿಸಿದ್ದರು. ಜುಲೈ 10 ರಂದು ನವದೆಹಲಿಯಿಂದ ಹೊರಟ ‘ಪಶ್ಚಿಮ ಎಕ್ಸ್‌ಪ್ರೆಸ್’ (ರೈಲು ಸಂಖ್ಯೆ: 12926) ರೈಲಿಗೆ ಈ ವಿಶೇಷ ಸಲೂನ್ ಕಾರ್ ಅನ್ನು ಜೋಡಿಸಲಾಗಿತ್ತು.

ಮತ್ತಷ್ಟು ಓದಿ: Video: ಮುಂಬೈ ನಿಲ್ದಾಣದಲ್ಲಿ ಹೈಡ್ರಾಮಾ: ಯುವತಿಯ ಕಾಲು ಹಿಡಿದು ಹಠ ಮಾಡುತ್ತಾ ಪ್ಲಾಟ್‌ಫಾರ್ಮ್ ಮೇಲೆ ಮಲಗಿದ ಯುವಕ

ಏನಿದು ರೈಲ್ವೆ ಸಲೂನ್ ಕಾರ್?

ಸಾಮಾನ್ಯವಾಗಿ ರೈಲ್ವೆ ಸಲೂನ್ ಕಾರುಗಳು ಭಾರತೀಯ ರೈಲ್ವೆಯ ಅತ್ಯುನ್ನತ ಅಧಿಕಾರಿಗಳು, ಸಚಿವರು ಅಥವಾ ವಿಐಪಿಗಳ ಪ್ರಯಾಣಕ್ಕಾಗಿ ಮೀಸಲಾಗಿರುತ್ತವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಐಆರ್‌ಸಿಟಿಸಿ ಇದನ್ನು ಶ್ರೀಮಂತ ಸಾರ್ವಜನಿಕರಿಗೂ ಬಾಡಿಗೆಗೆ ನೀಡಲು ಆರಂಭಿಸಿದೆ.

ಚಲಿಸುವ ಐಷಾರಾಮಿ ಮನೆ: ಈ ಸಲೂನ್ ಕಾರು ಒಳಭಾಗದಲ್ಲಿ ಪಂಚತಾರಾ ಹೋಟೆಲ್‌ನಂತಿರುತ್ತದೆ. ಇದರಲ್ಲಿ ಎರಡು ಹವಾನಿಯಂತ್ರಿತ (AC) ಮಲಗುವ ಕೋಣೆಗಳು, ಸುಸಜ್ಜಿತ ಅಡುಗೆಮನೆ , ಲಿವಿಂಗ್ ರೂಮ್, ಊಟದ ಕೋಣೆ ಮತ್ತು ಪ್ರತ್ಯೇಕ ಶೌಚಾಲಯಗಳು ಇರುತ್ತವೆ.

ನಿಯಮಗಳು ಏನು ಹೇಳುತ್ತವೆ?

ಖಾಸಗಿ ವ್ಯಕ್ತಿಗಳು ಹಣ ಪಾವತಿಸಿ ಇಡೀ ಕೋಚ್ ಅನ್ನು ಬುಕ್ ಮಾಡಿರುವುದರಿಂದ, ಅದರ ಒಳಗಡೆ ಅವರ ವೈಯಕ್ತಿಕ ಸ್ವಾತಂತ್ರ್ಯ ಇರುತ್ತದೆ. ಆದರೆ, ಚಲಿಸುವ ರೈಲಿನಲ್ಲಿ ಸುರಕ್ಷತೆಯ ದೃಷ್ಟಿಯಿಂದ ಬೆಂಕಿ ಹಚ್ಚುವ ಪ್ರಕ್ರಿಯೆಗಳಿಗೆ ಕಟ್ಟುನಿಟ್ಟಿನ ನಿಷೇಧವಿದೆ.

ರೈಲ್ವೆ ಇಲಾಖೆಯು ಇದು ವಾಣಿಜ್ಯ ನಿಯಮಾವಳಿಗಳ ಅಡಿಯಲ್ಲೇ ನಡೆದಿದೆ ಎಂದು ಸ್ಪಷ್ಟಪಡಿಸಿದೆಯಾದರೂ, ಚಲಿಸುತ್ತಿರುವ ರೈಲಿನಲ್ಲಿ ಇಂತಹ ಧಾರ್ಮಿಕ ಆಚರಣೆಗಳನ್ನು ಮಾಡುವುದು ಎಷ್ಟು ಸುರಕ್ಷಿತ ಎಂಬ ಚರ್ಚೆ ಮಾತ್ರ ನೆಟ್ಟಿಗರ ನಡುವೆ ಇನ್ನೂ ಮುಂದುವರೆದಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:08 pm, Mon, 13 July 26

Loading...
Unable to load recommendations.
Follow Us