ರೈತರಿಗೆ ಸರ್ಕಾರ ನೀಡಿದ ಎಂಎಸ್​ಪಿ ಭರವಸೆಯು ಖರೀದಿ ಕೇಂದ್ರದಷ್ಟೇ ದೂರ; ಎಂಎಸ್​ಪಿ ಭರವಸೆಗೂ ವಾಸ್ತವಕ್ಕೂ ಇದೆ ಅಂತರ

Santosh Nair's article in 'Your India' series: ಭಾರತದಲ್ಲಿ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ರೈತರಿಗೆ ಒಂದು ಪ್ರಮುಖ ಭರವಸೆಯಾಗಿದ್ದರೂ, ಅದರ ಅನುಷ್ಠಾನದಲ್ಲಿ ಭಾರೀ ವ್ಯತ್ಯಾಸವಿದೆ. ಹತ್ತಿರದ ಖರೀದಿ ಕೇಂದ್ರ ಇರುವ ರೈತನಿಗೆ ಲಾಭವಾದರೆ, ದೂರದ ರೈತನಿಗೆ ಸ್ಥಳೀಯ ವ್ಯಾಪಾರಿಯೇ ಗತಿ. ಎಂಎಸ್‌ಪಿ ಬಗ್ಗೆ ರೈತರಿಗೆ ಅರಿವಿದ್ದರೂ, ವಾಸ್ತವ ಖರೀದಿ ಕಡಿಮೆ. ಕಾನೂನು ಖಾತರಿಯ ಬೇಡಿಕೆ ಮತ್ತು ಅದರ ಸವಾಲುಗಳ ಕುರಿತು ಈ ಲೇಖನ ಚರ್ಚಿಸುತ್ತದೆ.

ರೈತರಿಗೆ ಸರ್ಕಾರ ನೀಡಿದ ಎಂಎಸ್​ಪಿ ಭರವಸೆಯು ಖರೀದಿ ಕೇಂದ್ರದಷ್ಟೇ ದೂರ; ಎಂಎಸ್​ಪಿ ಭರವಸೆಗೂ ವಾಸ್ತವಕ್ಕೂ ಇದೆ ಅಂತರ
ರೈತ
Image Credit source: PTI
Edited By:

Updated on: Nov 18, 2026 | 4:52 PM

ಆ ಇಬ್ಬರು ರೈತರು ಹತ್ತಿ ಬೆಳೆಯುತ್ತಾರೆ. ಇಬ್ಬರೂ ಒಂದೇ ಜಿಲ್ಲೆಯವರು. ಅದೇ ಸೀಸನ್‌ನಲ್ಲಿ ಅವರಿಬ್ಬರೂ ರೇಡಿಯೋದಲ್ಲಿ ಒಂದೇ ಸುದ್ದಿಯನ್ನು ಕೇಳುತ್ತಾರೆ: ‘ಸರ್ಕಾರವು ಬೆಲೆಯನ್ನು ಏರಿಸಿದೆ’. ಅವರಲ್ಲಿ ಒಬ್ಬನಾದ ಭೀಮರಾವ್, ಸರ್ಕಾರಿ ಖರೀದಿ ಕೇಂದ್ರದಿಂದ ಆರು ಕಿಲೋಮೀಟರ್ ದೂರದಲ್ಲಿ ವಾಸಿಸುತ್ತಿರುತ್ತಾನೆ. ಆತ ಮುಂಜಾನೆ ಬೆಳಗಾಗುವ ಮುನ್ನವೇ ತನ್ನ ಬಂಡಿಯನ್ನು ತುಂಬಿಕೊಳ್ಳುತ್ತಾನೆ. ನೆರೆಹೊರೆಯವರ ಸಾಲಿನಲ್ಲಿ ನಿಲ್ಲುತ್ತಾನೆ. ಮಧ್ಯಾಹ್ನದ ಹೊತ್ತಿಗೆ ತನಗೆ ಘೋಷಿತ ಬೆಲೆ ಸಿಗುತ್ತದೆ ಎಂದು ಹೇಳುವ ಕಾಗದದ ಚೀಟಿಯನ್ನು ಪಡೆಯುತ್ತಾನೆ. ಮತ್ತೊಬ್ಬನಾದ ಧನ್‌ರಾಜ್ ವಾಸಿಸುತ್ತಿರುವ ಗ್ರಾಮವು ಅಂತ ಯಾವುದೇ ಖರೀದಿ ಕೇಂದ್ರಕ್ಕೆ ನೂರು ಕಿಮೀ ದೂರ ಇದೆ. ಆತನ ಬಳಿ ಬಂಡಿ ಇಲ್ಲ. ಮೇಲಾಗಿ, ಸ್ಥಳೀಯ ವ್ಯಾಪಾರಿಯಿಂದ ಸಾಲ ಪಡೆದಿರುತ್ತಾನೆ. ಆ ವ್ಯಾಪಾರಿಯು ಅಂದೇ ಮಧ್ಯಾಹ್ನ ಆತನ ಮನೆ ಬಾಗಿಲಿಗೆ ಬರುತ್ತಾನೆ, ಮಾರುಕಟ್ಟೆ ಕುಸಿದಿದೆ ಎಂದು ಹೇಳಿ ಕಡಿಮೆ ಮೊತ್ತವನ್ನು ಹೆಸರಿಸುತ್ತಾನೆ. ಧನ್‌ರಾಜ್ ಆ ಬೆಲೆಯನ್ನೇ ಒಪ್ಪಿಕೊಳ್ಳುತ್ತಾನೆ. ಈ ಇಬ್ಬರೂ ರೈತರು ಸಮಾನವಾಗಿ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಆದರೆ ಅವರ ಇಡೀ ವರ್ಷದ ಫಲವು ಒಂದು ಕಟ್ಟಡವು ಎಲ್ಲಿದೆ ಎಂಬುದರ ಮೇಲೆ ನಿರ್ಧಾರವಾಗಿದೆ.

ಪ್ರತಿ ವರ್ಷ, ಬಿತ್ತನೆ ಸೀಸನ್ ಆರಂಭವಾಗುವ ಮುನ್ನ ಸರ್ಕಾರವು ಬೆಲೆಯನ್ನು ಪ್ರಕಟಿಸುತ್ತದೆ. ಭತ್ತ, ಗೋಧಿ, ಹತ್ತಿ ಮತ್ತು ಇತರ ಸುಮಾರು ಎರಡು ಡಜನ್ ಬೆಳೆಗಳಿಗೆ ಕನಿಷ್ಠ ಇಂತಿಷ್ಟು ಬೆಲೆಯನ್ನು ಅದು ಘೋಷಿಸುತ್ತದೆ. ಇದನ್ನೇ ಕನಿಷ್ಠ ಬೆಂಬಲ ಬೆಲೆ ಅಥವಾ ಎಂಎಸ್‌ಪಿ (MSP) ಎಂದು ಕರೆಯಲಾಗುತ್ತದೆ. ಮಾರುಕಟ್ಟೆಯು ರೈತನ ಬೆಲೆಯನ್ನು ಈ ನಿಗದಿತ ಬೆಲೆಮಟ್ಟಕ್ಕಿಂತ ಕೆಳಗೆ ತಳ್ಳಲು ಸಾಧ್ಯವಿಲ್ಲ ಎಂಬುದಕ್ಕೆ ಇದು ಒಂದು ಭರವಸೆಯಾಗಿದೆ. ಭಾರತವು 1960ರ ದಶಕದಿಂದಲೂ ಇದರ ಯಾವುದೋ ಒಂದು ರೂಪವನ್ನು ಬಳಸುತ್ತ ಬಂದಿದೆ. ಈ ಪರಿಕಲ್ಪನೆಯು ವಿವೇಚನಾಯುಕ್ತವೂ ಆಗಿದೆ. ರೈತ ತಾನು ಯಾವುದೇ ಆದಾಯ ಗಳಿಸುವ ಮುನ್ನ ಬೀಜ, ರಸಗೊಬ್ಬರ, ನೀರು ಮತ್ತು ಶ್ರಮಕ್ಕಾಗಿ ಹಣ ಖರ್ಚು ಮಾಡುತ್ತಾನೆ. ತದನಂತರ ಮಳೆ ಮತ್ತು ಫಸಲಿಗಾಗಿ ಕಾಯುತ್ತಾನೆ. ಆತ ಮಾರಾಟ ಮಾಡುವ ದಿನದಂದು ಮಾರುಕಟ್ಟೆ ಬೆಲೆ ಅನಿರೀಕ್ಷಿತವಾಗಿ ಕುಸಿದರೆ, ಇಡೀ ವರ್ಷದ ಪರಿಶ್ರಮವೇ ಮಣ್ಣುಪಾಲಾಗಬಹುದು. ರೈತನಿಗೂ ಆ ಕುಸಿತಕ್ಕೂ ನಡುವೆ ರಕ್ಷಣೆಯ ಗೋಡೆಯಾಗಿ ನಿಲ್ಲುವುದೇ ಎಂಎಸ್‌ಪಿಯ (MSP) ಉದ್ದೇಶವಾಗಿದೆ.

Loading...

ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು (NSO) 2018-19ರ ಅವಧಿಗಾಗಿ ಕೃಷಿ ಕುಟುಂಬಗಳ ಮೇಲೆ ನಡೆಸಿದ ಬೃಹತ್ ಸಮೀಕ್ಷೆಯು ಈ ಭರವಸೆಯು ಎಷ್ಟರ ಮಟ್ಟಿಗೆ ತಲುಪುತ್ತದೆ ಎಂಬುದನ್ನು ತೋರಿಸುತ್ತದೆ. ಭತ್ತ ಬೆಳೆಯುವ ಕುಟುಂಬಗಳಲ್ಲಿ ಕೇವಲ ಶೇಕಡಾ 41 ರಷ್ಟು ಮಂದಿಗೆ ಮಾತ್ರ ತಮ್ಮ ಬೆಳೆಗೆ ಎಂಎಸ್‌ಪಿ ಇದೆ ಎಂಬುದು ತಿಳಿದಿತ್ತು. ಗೋಧಿಯ ವಿಚಾರದಲ್ಲಿ ಈ ಪ್ರಮಾಣವು ಶೇಕಡಾ 37 ರಷ್ಟಿತ್ತು. ಇನ್ನು ಕೆಲವು ಬೆಳೆಗಳಿಗಂತೂ ಇದು ಇನ್ನೂ ಕಡಿಮೆಯಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಭತ್ತ ಬೆಳೆಯುವ ಹತ್ತರಲ್ಲಿ ಸುಮಾರು ಆರು ಮಂದಿ ರೈತರಿಗೆ ತಾವು ಬೆಳೆದ ಬೆಳೆಗೆ ಸರ್ಕಾರವು ಬೆಲೆಯನ್ನು ಪ್ರಕಟಿಸಿದೆ ಎಂದೇ ತಿಳಿದಿರಲಿಲ್ಲ. ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗದ (CACP) ಸಲಹೆಯ ಮೇರೆಗೆ ಪ್ರತಿವರ್ಷ 22 ಬೆಳೆಗಳಿಗೆ ಈ ಬೆಲೆಯನ್ನು ಘೋಷಿಸಲಾಗುತ್ತದೆ. ಒಂದು ಭರವಸೆ ಯಾವ ಫಲಾನುಭವಿಗಳನ್ನು ತಲುಪಬೇಕೆಂದು ಉದ್ದೇಶಿಸಲಾಗಿತ್ತೋ, ಆ ಫಲಾನುಭವಿಗಳಿಗೆ ಆ ಭರವಸೆಯೇ ಕೇಳಿಸಲಿಲ್ಲ. ಇದರರ್ಥ, ಒಂದು ಭರವಸೆಯು ತಲುಪಿಸುವಿಕೆಯಲ್ಲಿ ಸೋತಿದೆ.

ಇದನ್ನೂ ಓದಿ: ರೇಷನ್ ಕಾರ್ಡ್: ಫಲಾನುಭವಿಗಳ ಪಟ್ಟಿಗೇ ಸೇರದ ಅರ್ಹರು; NFSA ಕಾಯ್ದೆ ಮತ್ತು ವಾಸ್ತವ

ವಿಷಯ ತಿಳಿದುಕೊಳ್ಳುವುದು ಬೇರೆ; ಆ ಬೆಲೆಗೆ ಮಾರಾಟ ಮಾಡುವುದು ಬೇರೆ. ಅದೇ ಸಮೀಕ್ಷೆಯಲ್ಲಿ, ಭತ್ತ ಬೆಳೆಯುವ ಕೇವಲ ನಾಲ್ವರಲ್ಲಿ ಒಬ್ಬ ರೈತ ಮಾತ್ರ ತನ್ನ ಬೆಳೆಯ ಕನಿಷ್ಠ ಸ್ವಲ್ಪ ಭಾಗವನ್ನಾದರೂ ಎಂಎಸ್‌ಪಿಗೆ ಮಾರಾಟ ಮಾಡಿದ್ದಾನೆ, ಮತ್ತು ಇತರ ಅನೇಕ ಬೆಳೆಗಳ ವಿಷಯದಲ್ಲಿ ಈ ಪಾಲು ಇನ್ನೂ ಕಡಿಮೆಯಿದೆ. ಇದರ ಕಾರ್ಯವಿಧಾನವು ಅರ್ಥವಾದರೆ, ಕಾರಣವೇನು ಎಂಬುದು ರಹಸ್ಯವಾಗಿ ಉಳಿಯುವುದಿಲ್ಲ. ಘೋಷಿತ ಬೆಲೆಯೆಂದರೆ ಅದೇನು ನೇರ ಖರೀದಿಯಲ್ಲ. ಸರ್ಕಾರವು ಪ್ರತಿಯೊಂದು ಬೆಳೆಯನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸುವುದಿಲ್ಲ. ಸಾರ್ವಜನಿಕ ವಿತರಣಾ ವ್ಯವಸ್ಥೆಗೆ (PDS) ಬೇಕಾದ ಅಕ್ಕಿ ಮತ್ತು ಗೋಧಿಯನ್ನು ನಿರ್ದಿಷ್ಟ ಪ್ರದೇಶಗಳಲ್ಲಿ, ಅದರಲ್ಲೂ ಮುಖ್ಯವಾಗಿ ಪಂಜಾಬ್, ಹರಿಯಾಣ ಮತ್ತು ಮಧ್ಯ ಭಾರತದ ಕೆಲವು ಭಾಗಗಳಲ್ಲಿ ಮಾತ್ರ ಖರೀದಿ ಕೇಂದ್ರೀಕೃತವಾಗಿದೆ. ಎಲ್ಲಿ ಸರ್ಕಾರವು ಭಾರಿ ಪ್ರಮಾಣದಲ್ಲಿ ಖರೀದಿಸುತ್ತದೆಯೋ ಅಲ್ಲಿ ಎಂಎಸ್‌ಪಿ ಎಂಬುದು ನಿಜವಾದ ಆದಾಯವಾಗಿದೆ. ಎಲ್ಲಿ ಖರೀದಿ ನಡೆಯುವುದಿಲ್ಲವೋ ಅಲ್ಲಿ ಎಂಎಸ್‌ಪಿ ಎಂಬುದು ಕೇವಲ ಪತ್ರಿಕೆಯಲ್ಲಿ ಬರುವ ಒಂದು ಸಂಖ್ಯೆಯಾಗಿ ಉಳಿಯುತ್ತದೆ. ವಾಸ್ತವ ಬೆಲೆಯನ್ನು ಆಯಾ ದಿನದ ಸ್ಥಳೀಯ ವ್ಯಾಪಾರಿಯೇ ನಿರ್ಧರಿಸುತ್ತಾನೆ.

ಹಾಗಾಗಿ ಒಂದೇ ಶಬ್ದದ ಅಡಿಯಲ್ಲಿ ಸಂಪೂರ್ಣವಾಗಿ ಭಿನ್ನವಾದ ಎರಡು ಕೃಷಿ ಜೀವನಗಳಿವೆ. ಪಂಜಾಬ್‌ನ ಗೋಧಿ ಬೆಳೆಗಾರನಿಗೆ ಎಂಎಸ್‌ಪಿ ಎಂಬುದು ಆ ವರ್ಷದ ಆದಾಯದ ವಿಶ್ವಾಸಾರ್ಹ ಭಾಗವಾಗಿದೆ. ಆದರೆ ದೂರದ ಜಿಲ್ಲೆಯೊಂದರಲ್ಲಿ ದ್ವಿದಳ ಧಾನ್ಯಗಳನ್ನು (Pulses) ಬೆಳೆಯುವ ರೈತನಿಗೆ ಅದೊಂದು ಕೇವಲ ವದಂತಿಯಾಗಿರಬಹುದು. ಒಂದೇ ಜಿಲ್ಲೆಯ ಕಲ್ಪಿತ ನೆರೆಹೊರೆ ರೈತರಾದ ಭೀಮರಾವ್ ಮತ್ತು ಧನ್‌ರಾಜ್ ಇಬ್ಬರೂ ಒಂದೇ ರೇಡಿಯೋ ಪ್ರಸಾರವನ್ನು ಕೇಳಿದ್ದರು. ಆದರೆ ಅವರಲ್ಲಿ ಒಬ್ಬರು ಮಾತ್ರ ಭರವಸೆಯನ್ನು ಪಡೆದರು.

ಅದಕ್ಕಾಗಿಯೇ ರೈತ ಸಂಘಟನೆಗಳು ಎಂಎಸ್‌ಪಿಗೆ ಕಾನೂನುಬದ್ಧ ಖಾತರಿಯನ್ನು ನೀಡುವಂತೆ ಒತ್ತಾಯಿಸುತ್ತಿವೆ. ಈ ಬೇಡ್ರಿಕೆಯು ಪ್ರತಿಭಟನೆಗಳ ಕೇಂದ್ರಬಿಂದುವಾಗಿದೆ. ಅವರ ವಾದ ಸರಳವಾಗಿದೆ: ಕಾನೂನಿನ ಬೆಂಬಲವಿಲ್ಲದ ಭರವಸೆಯು ಅಧಿಕಾರದಲ್ಲಿರುವವರ ಇಚ್ಛೆಯ ಮೇಲೆ ಅವಲಂಬಿತವಾಗಿರುತ್ತದೆ. ಆದರೆ ಮತ್ತೊಂದು ಬದಿಯ ವಾದವನ್ನೂ ಸಂಪೂರ್ಣವಾಗಿ ಕೇಳಬೇಕು. ಕಾನೂನುಬದ್ಧ ಖಾತರಿಯನ್ನು ಅನುಮಾನಿಸುವವರು ಅದರ ವೆಚ್ಚವನ್ನು ಬೆಟ್ಟು ಮಾಡಿ ತೋರಿಸುತ್ತಾರೆ. ಸರ್ಕಾರವು ಪ್ರತಿಯೊಂದು ಬೆಳೆಯನ್ನು ಎಂಎಸ್‌ಪಿಗೆ ಖರೀದಿಸಬೇಕಾದರೆ, ಅದಕ್ಕೆ ತಗಲುವ ವೆಚ್ಚ ಅತ್ಯಂತ ಹೆಚ್ಚಾಗಿರುತ್ತದೆ ಮತ್ತು ಹೆಚ್ಚುವರಿ ಧಾನ್ಯವನ್ನು ಸಂಗ್ರಹಿಸಿಡುವುದು ಹಾಗೂ ಮಾರಾಟ ಮಾಡುವುದು ಕಷ್ಟವಾಗುತ್ತದೆ. ಒಂದು ನಿಶ್ಚಿತ ದರ ನಿಗದಿ ಮಾಡಿದರೆ ರೈತರು ನೀರು ವಿರಳವಾಗಿರುವ ಪ್ರದೇಶಗಳಲ್ಲೂ ಸಹ ಭತ್ತದಂತಹ ಕೆಲವು ಬೆಳೆಗಳನ್ನೇ ಹೆಚ್ಚು ಬೆಳೆಯಲು ಮುಂದಾಗಬಹುದು. ಇದರಿಂದ ಕೆಲ ಆಹಾರವಸ್ತುಗಳು ಗ್ರಾಹಕರಿಗೆ ದುಬಾರಿಯಾಗಬಹುದು ಎಂದು ಅವರು ಎಚ್ಚರಿಸುತ್ತಾರೆ. ರೈತರು ಮತ್ತು ಸರ್ಕಾರದ ಬೊಕ್ಕಸ ಎರಡನ್ನೂ ಹೇಗೆ ರಕ್ಷಿಸುವುದು ಎಂಬುದರ ಕುರಿತು ಅರ್ಥಶಾಸ್ತ್ರಜ್ಞರಲ್ಲಿ ಭಿನ್ನಾಭಿಪ್ರಾಯಗಳಿವೆ. ಮಾರುಕಟ್ಟೆ ಬೆಲೆಯು ನಿಗದಿತ ಮಟ್ಟಕ್ಕಿಂತ ಕುಸಿದಾಗ ರೈತರಿಗೆ ಆ ವ್ಯತ್ಯಾಸದ ಮೊತ್ತವನ್ನು ಪಾವತಿಸುವಂತಹ ಇತರ ಆಲೋಚನೆಗಳೂ ಚಾಲ್ತಿಯಲ್ಲಿವೆ.

ಇದನ್ನೂ ಓದಿ: ಭಾರತದಲ್ಲಿ ಮಕ್ಕಳ ಮೊಬೈಲ್ ಬಳಕೆ: ಆರೋಗ್ಯಕರ ಬೆಳವಣಿಗೆಗೆ ಪರಿಹಾರಗಳು

ಈ ವಿವಾದದ ಭರಾಟೆಯಲ್ಲಿ ಇತ್ತಂಡಗಳೂ ಹಂಚಿಕೊಳ್ಳುವ ಸಾಮಾನ್ಯ ಅಂಶವು ಕಳೆದುಹೋಗಬಹುದು. ಆರ್ಥಿಕತೆಯಲ್ಲಿ ಬೇರೆ ಯಾರೂ ಅನುಭವಿಸದಷ್ಟು ರೀತಿಯಲ್ಲಿ ಮಳೆಯಿಂದ ಹಿಡಿದು ಕೀಟಗಳು ಮತ್ತು ಅನಿರೀಕ್ಷಿತ ಬೆಲೆ ಕುಸಿತದವರೆಗೆ ಎಲ್ಲಾ ರೀತಿಯ ಅಪಾಯಗಳನ್ನು ರೈತರು ಹೊರುತ್ತಾರೆ ಮತ್ತು ಅವರಿಗೆ ಕೆಲವು ರಕ್ಷಣೆಗಳ ಅಗತ್ಯವಿದೆ ಎಂಬುದನ್ನು ಪ್ರತಿಯೊಬ್ಬರೂ ಒಪ್ಪಿಕೊಳ್ಳುತ್ತಾರೆ. ಆದರೆ ಆ ರಕ್ಷಣೆಯನ್ನು ಹೇಗೆ ರೂಪಿಸಬೇಕು, ಯಾರು ಹಣ ಭರಿಸಬೇಕು ಮತ್ತು ಅದು ಎಷ್ಟರ ಮಟ್ಟಿಗೆ ತಲುಪಬೇಕು ಎಂಬುದರ ಕುರಿತು ಮಾತ್ರ ಭಿನ್ನಾಭಿಪ್ರಾಯವಿದೆ.

ಒಂದು ಹೆಡ್​ಲೈನ್ ಸಂಪೂರ್ಣವಾಗಿ ನಿಜವಾಗಿದ್ದರೂ ಅದು ಎಂದಿಗೂ ರೈತನ ಹೊಲವನ್ನು ತಲುಪದೇ ಇರಬಹುದು. “ಎಂಎಸ್‌ಪಿ ಏರಿಕೆಯಾಗಿದೆ” ಎಂಬ ವಾಕ್ಯವನ್ನು ಪ್ರತಿ ಸೀಸನ್‌ನಲ್ಲೂ ಪುನರಾವರ್ತಿಸಲಾಗುತ್ತದೆ. ನಮ್ಮಲ್ಲಿ ಹಲವರು ತಲೆಯಾಡಿಸುತ್ತೇವೆ. ಆದರೆ ಅದಕ್ಕೆ ಅರ್ಥ ತುಂಬುವ ಮುಂದಿನ ಮೂರು ಸರಳ ಪ್ರಶ್ನೆಗಳು ಯಾವುವೆಂದರೆ: ಯಾವ ಬೆಳೆಗೆ, ಯಾವ ರಾಜ್ಯದಲ್ಲಿ ಮತ್ತು ವಾಸ್ತವವಾಗಿ ಎಷ್ಟು ಪ್ರಮಾಣದಲ್ಲಿ ಖರೀದಿ ಮಾಡಲಾಗುತ್ತದೆ?

ನಿಮ್ಮ ಸ್ವಂತ ರಾಜ್ಯದಲ್ಲಿ ರೈತರು ಏನು ಬೆಳೆಯುತ್ತಾರೆ ಮತ್ತು ಅವರಿಂದ ಅದನ್ನು ಯಾರು ಖರೀದಿಸುತ್ತಾರೆ ಎಂಬುದು ನಿಮಗೆ ತಿಳಿದಿದೆಯೇ?

(ಆಧಾರಗಳು: ರಾಷ್ಟ್ರೀಯ ಸಾಂಖ್ಯಿಕ ಕಚೇರಿ (NSO), ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ, ಕೃಷಿ ಕುಟುಂಬಗಳ ಪರಿಸ್ಥಿತಿ ಮೌಲ್ಯಮಾಪನ (2018-19), ಡೌನ್ ಟು ಅರ್ಥ್ ವರದಿ ಮಾಡಿದಂತೆ; ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗ (CACP), ಭಾರತ ಸರ್ಕಾರ. ಭೀಮರಾವ್ ಮತ್ತು ಧನ್‌ರಾಜ್ ಕಾಲ್ಪನಿಕ ವ್ಯಕ್ತಿಗಳು; ಆದರೆ ಸಂಗತಿಗಳು ನೈಜವಾದವು.)

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Santosh Nair

Santosh Nair is Editor (Network Coordination), TV9 Network. With over two decades in media, he has played pivotal roles in some of the best newsrooms in the country. He is an avid reader who pens his thoughts after deep-diving into the subject matter.

Read More
Loading...
Unable to load recommendations.
Follow Us