ಮುಂಬೈ: ಮುಖೇಶ್ ಅಂಬಾನಿ ನಿವಾಸದ ಬಳಿ ಪತ್ತೆಯಾಗಿದ್ದ ಸ್ಫೋಟಕ ಹೊತ್ತಿದ್ದ ಕಾರಿನ ಮಾಲೀಕ / ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದವ ಎನ್ನಲಾದ ಮನ್ಸುಖ್ ಹಿರೇನ್ ಸಾವಿನ ಪ್ರಕರಣದ ತನಿಖೆಯನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ತನಿಖಾ ದಳಕ್ಕೆ (NIA) ವಹಿಸಿದೆ. ಎನ್ಐಎ ಈಗಾಗಲೇ ಜಿಲೆಟಿನ್ ಕಡ್ಡಿ ಹೊತ್ತಿದ್ದ ಕಾರಿನ ತನಿಖೆಯನ್ನು ಮಾಡುತ್ತಿದೆ. ಹೀಗಾಗಿ ಈ ಪ್ರಕರಣಕ್ಕೆ ಸಂಬಂಧ ಹೊಂದಿರುವ ಕಾರಣ ಮನ್ಸುಖ್ ಹಿರೇನ್ ಸಾವಿನ ಹಿಂದಿನ ರಹಸ್ಯವನ್ನು ಬಯಲುಗೊಳಿಸುವ ಹೊಣೆಯನ್ನು ಕೂಡ ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಿದೆ.
ಮಾರ್ಚ್ 5ರಂದು ಮನ್ಸುಖ್ ಹಿರೇನ್ ಅವರ ಮೃತದೇಹ ಪತ್ತೆಯಾಗಿತ್ತು. ಆದರೆ ಮೃತದೇಹ ಪತ್ತೆಯಾದ ಕೆಲ ಗಂಟೆಗಳ ನಂತರ ಮನ್ಸುಖ್ ಹಿರೇನ್ ಕಾರಿನ ನಿಜವಾದ ಮಾಲೀಕರಲ್ಲ ಎಂಬ ಮಾತು ಕೇಳಿಬಂದಿತ್ತು. ಕಾರಿನ ನೈಜ ಮಾಲೀಕ ಸ್ಯಾಮ್ ಮ್ಯೂಟನ್ , ಮನ್ಸುಖ್ ಹಿರೇನ್ ಅವರಿಗೆ ಕಾರಿನ ನಿರ್ವಹಣೆಗಾಗಿ ಕಾರನ್ನು ನೀಡಿದ್ದರು. ಆದರೆ ಸ್ಯಾಮ್ ಮ್ಯೂಟನ್, ನೀಡಬೇಕಿದ್ದ ಹಣವನ್ನು ಪಾವತಿಸದಿದ್ದ ಕಾರಣ ಮನ್ಸುಖ್ ಹಿರೇನ್ ಅವರೇ ಕಾರನ್ನು ಇಟ್ಟುಕೊಂಡಿದ್ದರು ಎಂದು ಸಹ ವರದಿಯಾಗಿತ್ತು.
ಆದರೆ, ಮನ್ಸುಖ್ ಹಿರೇನ್ ಪತ್ನಿ ನಾಲ್ಕು ತಿಂಗಳ ಅವಧಿಗೆ ಅಂದರೆ ಫೆಬ್ರವರಿ 5ರ ವರೆಗೆ ಕಾರ್ನ್ನು ಪೊಲೀಸರಿಗೆ ನೀಡಿರುವುದಾಗಿ ತಿಳಿಸಿದ್ದರು. ಕೆಲ ದಿನಗಳ ಬಳಿಕ ಕಾರ್ ಕಳವಾಗಿತ್ತು. ಮನ್ಸುಖ್ ಹಿರೇನ್ ಮೃತಪಟ್ಟಿರುವ ಪ್ರಕರಣದಲ್ಲಿ ಸಚಿನ್ ವಾಜ್ ಪಾತ್ರ ಇದೆ ಎಂದು ಪತ್ನಿ ಆರೋಪಿಸಿದ್ದರು. ಇದೀಗ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ದಳ (NIA) ಹಾಗೂ ಭಯೋತ್ಪಾದಕ ವಿರೋಧಿ ದಳ (ATS) ತನಿಖೆಯಲ್ಲಿ ತೊಡಗಿದೆ.
ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾದ ಕಾರಿನಲ್ಲಿ ಜಿಲೆಟಿನ್ ಕಡ್ಡಿಗಳ ಜತೆ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿಯವರಿಗೆ ಬೆದರಿಕೆಯೊಡ್ಡಿರುವ ಪತ್ರವೊಂದು ಲಭಿಸಿತ್ತು. ಈ ಕಾರಿನಲ್ಲಿ ಸ್ಫೋಟಕವನ್ನು ಅಸೆಂಬಲ್ ಮಾಡಿಲ್ಲ, ಮುಂದಿನ ಬಾರಿ ಇದೇ ರೀತಿಯಲ್ಲಿರುವುದಿಲ್ಲ ಎಂದು ಪತ್ರದಲ್ಲಿ ಬರೆದಿತ್ತು. ಈ ಪತ್ರ ಹಿಂದಿಯಿಂದ ಇಂಗ್ಲಿಷಿಗೆ ತರ್ಜುಮೆ ಮಾಡಿ ಬರೆದದ್ದಾಗಿದ್ದು, ಹಲವಾರು ಅಕ್ಷರ ದೋಷಗಳಿದ್ದವು. ಪತ್ರವನ್ನು ನೋಡಿದರೆ ಪತ್ರ ಬರೆದ ವ್ಯಕ್ತಿಗೆ ಸರಿಯಾಗಿ ಬರೆಯಲು ಬರುವುದಿಲ್ಲ ಅಥವಾ ಬರೆಯಲು ಗೊತ್ತಿಲ್ಲ ಎಂಬಂತೆ ನಟಿಸಿದ್ದಾಗಿರಬಹುದು ಎಂದು ಮುಂಬೈ ಪೊಲೀಸರು ಹೇಳಿರುವುದಾಗಿ ವರದಿಯಾಗಿತ್ತು.
ಗಾಂದೇವಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ವಾಹನ ಪತ್ತೆಯಾಗಿತ್ತು. ಪೊಲೀಸರಿಗೆ ಮಾಹಿತಿ ಲಭಿಸಿದ ಕೂಡಲೇ ಬಾಂಬ್ ಪತ್ತೆ ಹಾಗೂ ನಿಷ್ಕ್ರಿಯ ದಳ ಮತ್ತು ಇತರ ಪೊಲೀಸ್ ತಂಡಗಳು ಘಟನಾ ಸ್ಥಳಕ್ಕೆ ದೌಡಾಯಿಸಿದ್ದವು. ಕಾರನ್ನು ತಪಾಸಣೆಗೊಳಪಡಿಸಿದಾಗ ಅದರೊಳಗೆ ಜಿಲೆಟಿನ್ ಪತ್ತೆಯಾಗಿದೆ. ಅದು ಬಿಡಿ ಬಿಡಿಯಾಗಿಯೇ ಇದ್ದುಸ್ಫೋಟಕವನ್ನು ಸಿದ್ಧಪಡಿಸಿರಲಿಲ್ಲ. ಈ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಮುಂಬೈ ಪೊಲೀಸ್ ವಕ್ತಾರ, ಉಪ ಪೊಲೀಸ್ ಆಯುಕ್ತ ಚೈತನ್ಯ. ಎಸ್ ಹೇಳಿದ್ದರು.
ಇದನ್ನೂ ಓದಿ: ಮುಕೇಶ್ ಅಂಬಾನಿ ಮನೆ ಮುಂದೆ ಜಿಲೆಟಿನ್ ಪತ್ತೆ ಪ್ರಕರಣ ; ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಸಸ್ಪೆಂಡ್
ಅಂಬಾನಿ ಮನೆ ಮುಂದೆ ಕಾರಿನಲ್ಲಿ ಜಿಲೆಟಿನ್ ಪ್ರಕರಣ; ಶವವಾಗಿ ಪತ್ತೆಯಾದ ಮನಸುಖ್ ಹಿರೇನ್