ಮುಂಬೈ: ಈಗಾಗಲೇ ಸಸ್ಪೆಂಡ್ ಅಗಿರುವ ಪೊಲೀಸ್ ಅಧಿಕಾರಿ ಸಚಿನ್ ವಾಜೆಯನ್ನು ನ್ಯಾಯಾಲಯ ಫೆಬ್ರವರಿ 25ರವರೆಗೂ ರಾಷ್ಟ್ರೀಯ ತನಿಖಾ ದಳದ ವಶಕ್ಕೆ ವಹಿಸಿದೆ. ಮುಕೇಶ್ ಅಂಬಾನಿ ಅವರ ಮನೆಯ ಮುಂದೆ ಅಪರಿಚಿತ ಕಾರಿನಲ್ಲಿ ದೊರೆತ ಸ್ಫೋಟಕ ಪ್ರಕರಣದ ಬೆನ್ನುಬಿದ್ದಿದ್ದ ಎನ್ಎಐ ಸಚಿನ್ ವಾಜೆ ಅವರನ್ನು ವಶಕ್ಕೆ ಪಡೆದಿತ್ತು. ನ್ಯಾಯಾಲಯದಲ್ಲಿ ಮುಂಬೈ ಪೊಲಿಸ್ ಅಧಿಕಾರಿ ಸಚಿನ್ ವಾಜೆ ಅವರ ಪರ ವಾದಿಸಿದ ಸುದೀಪ್ ಪಾಸ್ಬೋಲಾ, ‘ಎನ್ಎಐ ಸಚಿನ್ ವಾಜೆ ಅವರನ್ನು 12 ಗಂಟೆಗಳ ಕಾಲ ಅಕ್ರಮವಾಗಿ ಇರಿಸಿಕೊಂಡಿದೆ’ ಎಂದು ಆರೋಪಿಸಿದರು. ಆದರೆ ಇದನ್ನು ನಿರಾಕರಿಸಿದ ರಾಷ್ಟ್ರಿಯ ಭದ್ರತಾ ದಳದ ವಕೀಲರು, ‘ಸಚಿನ್ ವಾಜೆ ಅವರನ್ನು ಹಿಂದಿನ ಪ್ರಕರಣದ ಕುರಿತು ವಿಷಯ ಸಂಗ್ರಹಿಸಲು ಕರೆಸಿಕೊಳ್ಳಲಾಗಿತ್ತಷ್ಟೇ. ಪ್ರಸ್ತುತ ಪ್ರಕರಣದಲ್ಲಿ ಆರೋಪಿಯನ್ನಾಗಿ ಕರೆಸಿಕೊಂಡಿರಲಿಲ್ಲ. ಅಲ್ಲದೆ, ವಿಚಾರಣೆಯಲ್ಲಿ ಸಚಿನ್ ವಾಜೆ ಸೂಕ್ತ ರೀತಿಯಲ್ಲಿ ಸಹಕಾರ ನೀಡಲಿಲ್ಲ’ ಎಂದು ವಾದಿಸಿದರು.
ಅಷ್ಟಕ್ಕೇ ನಿಲ್ಲಿಸದ ಸಚಿನ್ ವಾಜೆ ಪರ ವಕೀಲ ಸುದಿಪ್ ಪಾಸ್ಬೋಲಾ, ‘ಸಚಿನ್ ವಾಜೆ ಅವರನ್ನು ವಿಚಾರಣೆ ನಡೆಸುತ್ತಿರುವ ಕೊಠಡಿಯಲ್ಲಿ ಸಿಸಿಟಿವಿ ಇಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಆದರೆ ರಾಷ್ಟ್ರಿಯ ತನಿಖಾ ದಳ, ಅವರನ್ನು ತನಿಖೆಗೆ ಒಳಪಡಿಸಿದ ಕೊಠಡಿಯಲ್ಲಿ ಸಿಸಿಟಿವಿ ಇದ್ದು, ವಿಡಿಯೋ ಮಾತ್ರ ರೆಕಾರ್ಡ್ ಆಗುತ್ತಿದೆ. ಅದರೆ ಸಿಸಿಟಿವಿಯಲ್ಲಿ ಧ್ವನಿ ಮುದ್ರಣ ಆಗುತ್ತಿಲ್ಲ ಎಂದು ತಿಳಿಸಿದರು. ಇದೇ ಹೇಳಿಕೆಯನ್ನು ಲಿಖಿತ ರೂಪದಲ್ಲಿ ನೀಡುವಂತೆ ವಕೀಲ ಸುದೀಪ್ ಪಾಸ್ಬೋಲಾ ಕೇಳಿದಾಗ ಎನ್ಐಎ ಪರ ವಕೀಲರು ಲಿಖಿತ ರೂಪದಲ್ಲಿ ಹೇಳಿಕೆ ಒಪ್ಪಿಗೆ ಸೂಚಿಸಿದರು.
ಏನಿದು ಪ್ರಕರಣ
ಉದ್ಯಮಿ ಮುಕೇಶ್ ಅಂಬಾನಿ ಮನೆ ಬಳಿ ಸ್ಪೋಟಕ ಹೊತ್ತಿದ್ದ ಕಾರು ಸಿಕ್ಕ ಪ್ರಕರಣದಲ್ಲಿ ಎನ್ಐಎ ದಳದಿಂದ ಬಂಧಿಸಲ್ಪಟ್ಟಿದ್ದ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆಯನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಮುಂಬೈ ಸ್ಪೆಷಲ್ ಬ್ರ್ಯಾಂಚ್ನ ಹೆಚ್ಚುವರಿ ಪೊಲೀಸ್ ಕಮಿಷನರ್ ಸಚಿನ್ ವಾಜೆ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಸ್ಫೋಟಕ ಇಟ್ಟಿದ್ದ ತಂಡದಲ್ಲಿ ಸಚಿನ್ ವಾಜೆ ಕೂಡ ಭಾಗಿಯಾಗಿದ್ದು ಈ ಬಗ್ಗೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದರು.
ಎನ್ಕೌಂಟರ್ ಸ್ಪೆಷಲಿಸ್ಟ್ ಆಗಿದ್ದ ಸಚಿನ್ ವಾಜೆ, ಅಂಬಾನಿ ಮನೆ ಬಳಿ ಪತ್ತೆಯಾದ ವಾಹನದಲ್ಲಿ ಸ್ಫೋಟಕ ಇರಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಫೆಬ್ರವರಿ 25ರಂದು ದಕ್ಷಿಣ ಮುಂಬೈನ ಕಾರ್ಮಿಚೇಲ್ ರಸ್ತೆಯಲ್ಲಿರುವ ಅಂಬಾನಿ ಮನೆ ಬಳಿ ಸ್ಫೋಟಕ ತುಂಬಿರುವ ಕಾರೊಂದು ಪತ್ತೆಯಾಗಿತ್ತು. ಈ ಕಾರಿನೊಳಗೆ ಜಿಲೆಟಿನ್ ಕಡ್ಡಿಗಳನ್ನು ತುಂಬಿಸಿಡಲಾಗಿತ್ತು. ಅದೃಷ್ಟವಶಾತ್ ಜಿಲೆಟಿನ್ ಸ್ಫೋಟಗೊಳ್ಳದ ಕಾರಣ ಭಾರಿ ಅನಾಹುತ ತಪ್ಪಿತ್ತು.
ಮುಕೇಶ್ ಅಂಬಾನಿ ಅವರ ನಿವಾಸದ ಬಳಿ ಜಿಲೆಟಿನ್ ಕಡ್ಡಿಗಳನ್ನು ಇರಿಸಿದ ಮಹೇಂದ್ರಾ ಸ್ಕಾರ್ಪಿಯೋ ಕಾರನ್ನು ನಿರ್ವಹಿಸುತ್ತಿದ್ದ ಮನ್ಸುಖ್ ಹಿರೇನ್ ಅವರ ಮೃತದೇಹ ಪತ್ತೆಯಾಗಿತ್ತು. ಈ ಘಟನೆ ಹಿಂದೆ ಸಚಿನ್ ವಾಜೆ ಅವರ ಕೈವಾಡ ಇದೆ ಎಂದು ಮನ್ಸುಖ್ ಪತ್ನಿ ಆರೋಪಿಸಿದ್ದರು. ಈ ಆರೋಪ ಕೇಳಿ ಬಂದ ಮೇಲೆ ಘಟನೆಯ ತನಿಖೆಯ ಹೊಣೆ ಹೊತ್ತಿದ್ದ ವಾಜೆ ಅವರನ್ನು ತನಿಖಾ ತಂಡದಿಂದ ಕೈಬಿಡಲಾಗಿತ್ತು. ಶನಿವಾರ ವಜೆ ಅವರನ್ನು ಎನ್ಐಎ ಸತತ 12 ಗಂಟೆಗಳ ಕಾಲ ವಿಚಾರಣೆ ನಡೆಸಿ ರಾತ್ರಿ 11.50ಕ್ಕೆ ಅರೆಸ್ಟ್ ಮಾಡಿದೆ. ಭಾನುವಾರ ಅವರನ್ನು ಕೋರ್ಟ್ಗೆ ಹಾಜರು ಪಡಿಸಲಾಗುವುದು ಎಂದು ಎನ್ಐಎ ಅಧಿಕಾರಿಗಳು ತಿಳಿಸಿದ್ದರು.
ತಿಹಾರ್ ಜೈಲಿನವರೆಗೂ ವಿಸ್ತರಿಸಿದ ಪ್ರಕರಣ
ಮುಕೇಶ್ ಅಂಬಾನಿ ನಿವಾಸದ ಎದುರು ಅಪರಿಚಿತ ಕಾರಿನಲ್ಲಿ ಪತ್ತೆಯಾಗಿದ್ದ ಸ್ಫೋಟಕಗಳು ತಿಹಾರ್ ಜೈಲಿನವರೆಗೂ ಸಂಪರ್ಕ ಹೊಂದಿವೆ ಎಂಬ ವಿವರಗಳು ತಿಹಾರ್ ಜೈಲು ಅಧಿಕಾರಿಗಳು (ಮಾರ್ಚ್ 11) ನಡೆಸಿದ ಕಾರ್ಯಾಚರಣೆಯಲ್ಲಿ ಪತ್ತೆಯಾಗಿತ್ತು. ಜೈಷ್-ಉಲ್-ಹಿಂದ್ ಸಂಘಟನೆ ಪ್ರಕರಣದ ಹೊಣೆ ಹೊತ್ತುಕೊಂಡಿತ್ತು. ಇದೀಗ, ಜೈಷ್-ಉಲ್-ಹಿಂದ್ ಸಂಘಟನೆಯ ಟೆಲಿಗ್ರಾಂ ಚಾನೆಲ್ ಸೃಷ್ಟಿಯಾಗಿದ್ದ ಮೊಬೈಲ್ ಮತ್ತು ಸಿಮ್ ಕಾರ್ಡ್ ತಿಹಾರ್ ಜೈಲಿನಲ್ಲಿರುವುದು ಪತ್ತೆಯಾಗಿದೆ.
ಮಹಾರಾಷ್ಟ್ರ ಸರ್ಕಾರ ಕ್ರಮ ಕೈಗೊಳ್ಳಲಿದೆಯೇ?
ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ ಕೂಡ ಪ್ರಕರಣದ ಕುರಿತು ಬಿಕ್ಕಟ್ಟು ಶಮನ ಮಾಡಲು ಉದ್ಧವ್ ಠಾಕ್ರೆಯನ್ನು ಭೇಟಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಮುಕೇಶ್ ಅಂಬಾನಿ ಮನೆ ಮುಂದೆ ಸ್ಫೋಟಕ ಪತ್ತೆಯಾದ ಪ್ರಕರಣದಲ್ಲಿ ಉಂಟಾಗಿರುವ ವಿವಾದಕ್ಕೆ ಮಹಾವಿಕಾಸ್ ಅಘಾಡಿ (MVA) ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.
ಸಹಾಯಕ ಪೊಲೀಸ್ ಅಧಿಕಾರಿ ಸಚಿನ್ ವಾಜೆಯನ್ನು ರಾಷ್ಟ್ರೀಯ ತನಿಖಾ ದಳ (NIA) ಬಂಧಿಸಿದ್ದರಿಂದ ಮಹಾವಿಕಾಸ್ ಅಘಾಡಿ ಸರ್ಕಾರಕ್ಕೆ ಹಿನ್ನಡೆ ಉಂಟಾಗಿತ್ತು. ಮಹಾರಾಷ್ಟ್ರದಲ್ಲಿ ವಿರೋಧ ಪಕ್ಷ ಸ್ಥಾನದಲ್ಲಿರುವ ಬಿಜೆಪಿ, ಸಚಿನ್ ವಾಜೆಗೆ ಠಾಕ್ರೆ ಸರ್ಕಾರ ರಕ್ಷಣೆ ಕೊಡುತ್ತಿದೆ ಎಂದು ಆರೋಪಿಸಿತ್ತು.
Mukesh Ambani | ಮುಕೇಶ್ ಅಂಬಾನಿ ನಿವಾಸದ ಬಳಿ ಕಾರಿನಲ್ಲಿ ಜಿಲೆಟಿನ್ ಕಡ್ಡಿಗಳು ಪತ್ತೆ