ಮುಂಬೈ ಮಹಾ ಸಾಧನೆ; ಕೊವಿಡ್ 19 ಲಸಿಕೆ ಮೊದಲ ಡೋಸ್​ ನೀಡಿಕೆ ಶೇ.100ರಷ್ಟು ಮುಕ್ತಾಯ

| Updated By: Lakshmi Hegde

Updated on: Nov 13, 2021 | 3:43 PM

ಕೊವಿಡ್​ 19 ಲಸಿಕೆ ಮೊದಲ ಡೋಸ್ ನೀಡಿಕೆ ಶೇ.100ರಷ್ಟು ಮುಗಿದಿದ್ದು ನಿಜಕ್ಕೂ ಮುಂಬೈ ಪಾಲಿಗೆ ಶುಭಸಮಾಚಾರ. ಒಂದು ಹಂತದಲ್ಲಿ ಮುಂಬೈ ನಗರವೀಗ ಕೊರೊನಾದಿಂದ ಹೆಚ್ಚು ಸುರಕ್ಷಿತವಾಗಿದೆ ಎಂದು ಮಹಾರಾಷ್ಟ್ರ ಕೊವಿಡ್​ 19 ಟಾಸ್ಕ್​ ಫೋರ್ಸ್​​ನ ಸದಸ್ಯ ಡಾ. ಓಂ ಶ್ರೀವಾಸ್ತವ್ ಹೇಳಿದ್ದಾರೆ.

ಮುಂಬೈ ಮಹಾ ಸಾಧನೆ; ಕೊವಿಡ್ 19 ಲಸಿಕೆ ಮೊದಲ ಡೋಸ್​ ನೀಡಿಕೆ ಶೇ.100ರಷ್ಟು ಮುಕ್ತಾಯ
ಸಾಂಕೇತಿಕ ಚಿತ್ರ
Follow us on

ದೇಶದಲ್ಲೀಗ ಕೊವಿಡ್​ 19 ಲಸಿಕೆ ಅಭಿಯಾನ (Covid 19 Vaccine Drive) ಶುರುವಾಗಿ 10 ತಿಂಗಳು ಕಳೆದಿವೆ. ಆದರೆ ಇನ್ನೂ ಎಲ್ಲರಿಗೂ ಮೊದಲ ಡೋಸ್​ ಲಸಿಕೆಯೇ ಆಗಿಲ್ಲ. ಹೀಗಿರುವಾಗ ಮುಂಬೈ ಒಂದು ಸಾಧನೆ ಮಾಡಿದೆ. ಮುಂಬೈನಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಮೊದಲ ಡೋಸ್​ ಕೊವಿಡ್​ 19 ಲಸಿಕೆ ನೀಡಿ ಮುಗಿದಿದೆ. ಅಂದರೆ ಮೊದಲ ಡೋಸ್​ ಕೊರೊನಾ ಲಸಿಕೆ ನೀಡಿಕೆಯಲ್ಲಿ ಪ್ರತಿಶತ ನೂರರಷ್ಟು ಸಾಧನೆ ಮಾಡಿದ ನಗರ ಅದಾಗಿದೆ. ಮುಂಬೈನಲ್ಲಿ ಶನಿವಾರ ಮಧ್ಯಾಹ್ನದ ಹೊತ್ತಿಗೆ 9,239,902 ಜನರಿಗೆ ಮೊದಲ ಡೋಸ್​ ಲಸಿಕೆ ನೀಡಲಾಗಿದೆ ಎಂದು ಕೊವಿನ್ ವೆಬ್​ಸೈಟ್​​ನಲ್ಲಿ ದಾಖಲಾಗಿದ್ದು, ಇದು ನಗರದ ಒಟ್ಟಾರೆ ವಯಸ್ಕ ಜನಸಂಖ್ಯೆ  9,236,546ಕ್ಕೆ ಸಮಾನವಾಗಿದೆ ಎಂದು ಹೇಳಲಾಗಿದೆ. ಇನ್ನು ನಗರದಲ್ಲಿ ಶೇ.65 ಜನರಿಗೆ ಅಂದರೆ 5,983,452 ಜನರಿಗೆ ಎರಡೂ ಡೋಸ್​ ಕೊವಿಡ್​ 19 ಲಸಿಕೆ ನೀಡಿ ಮುಗಿದಿದೆ. ಲಸಿಕಾ ಕೇಂದ್ರಗಳ ವಿಕೇಂದ್ರೀಕರಣ ಕೊರೊನಾ ಲಸಿಕೆ ನೀಡಿಕೆಯ ವೇಗವನ್ನು ಹೆಚ್ಚಿಸುವಲ್ಲಿ ಅತ್ಯಂತ ನಿರ್ಣಾಯಕ ಪಾತ್ರ ವಹಿಸಿದೆ ಎಂದು ಪುರಸಭೆ ಹೆಚ್ಚುವರಿ ಆಯುಕ್ತ ಸುರೇಶ್​ ಕಕಣಿ ಹೇಳಿದ್ದಾರೆ.   

ಮುಂಬೈನ ಈ ಸಾಧನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಾಂಕ್ರಾಮಿಕ ಕಾಯಿಲೆಗಳ ತಜ್ಞ, ಮಹಾರಾಷ್ಟ್ರ ಕೊವಿಡ್​ 19 ಟಾಸ್ಕ್​ ಫೋರ್ಸ್​​ನ ಸದಸ್ಯ ಡಾ. ಓಂ ಶ್ರೀವಾಸ್ತವ್​, ಕೊವಿಡ್​ 19 ಲಸಿಕೆ ಮೊದಲ ಡೋಸ್ ನೀಡಿಕೆ ಶೇ.100ರಷ್ಟು ಮುಗಿದಿದ್ದು ನಿಜಕ್ಕೂ ಮುಂಬೈ ಪಾಲಿಗೆ ಶುಭಸಮಾಚಾರ. ಒಂದು ಹಂತದಲ್ಲಿ ಮುಂಬೈ ನಗರವೀಗ ಕೊರೊನಾದಿಂದ ಹೆಚ್ಚು ಸುರಕ್ಷಿತವಾಗಿದೆ. ಹಾಗಂತ ಮುನ್ನೆಚ್ಚರಿಕಾ ಕ್ರಮಗಳನ್ನು ಮರೆತು, ನಿರ್ಲಕ್ಷ್ಯದಿಂದ ವರ್ತನೆ ಮಾಡಬಾರದು ಎಂದು ಹೇಳಿದ್ದಾರೆ. ಕೊರೊನಾ ವೈರಸ್​ ಎಂಬುದು ಊಹೆಗೂ ನಿಲುಕದ ಒಂದು ಸಾಂಕ್ರಾಮಿಕ. ಈಗಲೂ ಕೂಡ ಹಲವು ರಾಷ್ಟ್ರಗಳಲ್ಲಿ, ಲಸಿಕೆಗಳು ಇದ್ದಾಗ್ಯೂ ಕೂಡ ಪ್ರತಿದಿನ ದೊಡ್ಡ ಸಂಖ್ಯೆಯ ಕೊರೊನಾ ಕೇಸ್​ಗಳು ದಾಖಲಾಗುತ್ತಿವೆ. ಫ್ರಾನ್ಸ್​ ದೇಶವಂತೂ ತಮ್ಮಲ್ಲಿ ಐದನೇ ಅಲೆಯ ಅಬ್ಬರ ಶುರುವಾಗಿದ್ದಾಗಿ ಹೇಳಿಕೊಂಡಿದೆ. ಹಾಗಾಗಿ ತುಂಬ ಎಚ್ಚರಿಕೆಯಿಂದ ಇರಬೇಕು ಎಂದೂ ಕೂಡ ಶ್ರೀವಾಸ್ತವ್​ ಹೇಳಿದ್ದಾರೆ.

ಇನ್ನು ಉಳಿದೆಲ್ಲ ದೇಶಗಳಂತೆ ಮುಂಬೈನಲ್ಲೂ ಕೂಡ ಮೊದಲ ಹಂತದ ಕೊರೊನಾ ಲಸಿಕೆ ಅಭಿಯಾನ 2021ರ ಜನವರಿ 16ರಂದು ಪ್ರಾರಂಭವಾಯಿತು. ಆಗ ನಗರದಾದ್ಯಂತ ಕೇವಲ 10 ಕೊವಿಡ್​ 19 ಲಸಿಕಾ ಕೇಂದ್ರಗಳನ್ನು ತೆರೆಯಲಾಗಿತ್ತು. ಆದರೆ ಬರುಬರುತ್ತ ವ್ಯಾಕ್ಸಿನ್​ ಸೆಂಟರ್​​ಗಳ ಸಂಖ್ಯೆಯನ್ನು ಹೆಚ್ಚಿಸಲಾಯಿತು. ಈಗಂತೂ ಸಾರ್ವಜನಿಕ ಮತ್ತು ಖಾಸಗಿ ಎರಡೂ ಸೇರಿ 462 ಕೊವಿಡ್​ 19 ಲಸಿಕಾ ಕೇಂದ್ರಗಳಿವೆ. ಈ ಎರಡೂ ಮಾದರಿಯ ಕೇಂದ್ರಗಳು ಸಂಯೋಜಿತವಾಗಿ ದಿನಕ್ಕೆ 1,23,000 ಡೋಸ್​ ಲಸಿಕೆ ನೀಡುತ್ತಿವೆ.  ಇನ್ನು ಒಟ್ಟಾರೆ ದೇಶದಲ್ಲಿ ಶೇ.80ರಷ್ಟು ವಯಸ್ಕರಿಗೆ ಮೊದಲ ಡೋಸ್ ನೀಡಲಾಗಿದ್ದು, ಶೇ.38 ಮಂದಿಗೆ ಎರಡೂ ಡೋಸ್​ ನೀಡಲಾಗಿದೆ.

ಇದನ್ನೂ ಓದಿ: ಮಣಿಪುರದಲ್ಲಿ ಉಗ್ರರ ದಾಳಿ; ನಾಲ್ವರು ಯೋಧರು, ಕಮಾಂಡಿಂಗ್​ ಅಧಿಕಾರಿ ಕುಟುಂಬ ದುರ್ಮರಣ