Mumbai Dust Storm: ಮುಂಬೈನಲ್ಲಿ ಧೂಳು ಸಹಿತ ಬಿರುಗಾಳಿ; ಹೋರ್ಡಿಂಗ್ ಬಿದ್ದು 8 ಸಾವು, 64 ಜನರಿಗೆ ಗಾಯ

|

Updated on: May 13, 2024 | 10:11 PM

ಮುಂಬೈನ ಘಾಟ್‌ಕೋಪರ್‌ನಲ್ಲಿ ಭಾರೀ ಮಳೆ ಮತ್ತು ಬಿರುಗಾಳಿಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಮುಂಬೈ ನಗರ ಮತ್ತು ಉಪನಗರಗಳಲ್ಲಿ ಬೃಹತ್ ಜಾಹೀರಾತು ಫಲಕ ಕುಸಿದು 8 ಮಂದಿ ಸಾವನ್ನಪ್ಪಿದ್ದಾರೆ ಮತ್ತು 64 ಮಂದಿ ಗಾಯಗೊಂಡಿದ್ದಾರೆ.

Mumbai Dust Storm: ಮುಂಬೈನಲ್ಲಿ ಧೂಳು ಸಹಿತ ಬಿರುಗಾಳಿ; ಹೋರ್ಡಿಂಗ್ ಬಿದ್ದು 8 ಸಾವು, 64 ಜನರಿಗೆ ಗಾಯ
ಮುಂಬೈನಲ್ಲಿ ಧೂಳು ಸಹಿತ ಬಿರುಗಾಳಿ
Follow us on

ಮುಂಬೈ: ಮುಂಬೈನಲ್ಲಿ (Mumbai Rain) ಈ ವರ್ಷದ ಮೊದಲ ಮಳೆಯಾಗಿದೆ. ಮುಂಬೈನಲ್ಲಿ ಧೂಳು ಸಹಿತ ಬಿರುಗಾಳಿಯೆದ್ದಿದ್ದು, ಗಾಳಿಯ ರಭಸಕ್ಕೆ ಬೃಹತ್ ಹೋರ್ಡಿಂಗ್ ಕುಸಿದಿದೆ. ಬೃಹನ್‌ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಪ್ರಕಾರ, ಇಂದು ಸಂಜೆ 4.30ರ ಸುಮಾರಿಗೆ ಹೋರ್ಡಿಂಗ್ ಕುಸಿದಿದ್ದರಿಂದ ಸುಮಾರು 100 ಜನರು ಸಿಕ್ಕಿಬಿದ್ದಿದ್ದಾರೆ. ಪಂತ್ ನಗರದ ಪೂರ್ವ ಎಕ್ಸ್‌ಪ್ರೆಸ್ ಹೆದ್ದಾರಿ (ಇಇಹೆಚ್) ಬಳಿ ಇರುವ ಜಾಹೀರಾತು ಫಲಕವು ಪೆಟ್ರೋಲ್ ಪಂಪ್‌ ಮೇಲೆ ಕುಸಿದಿದೆ. ಇದರಿಂದ 8 ಜನರು ಮೃತಪಟ್ಟಿದ್ದು, 64 ಜನರು ಗಾಯಗೊಂಡಿದ್ದಾರೆ.

ಹೋರ್ಡಿಂಗ್ ಪೆಟ್ರೋಲ್ ಪಂಪ್‌ನ ಸ್ಕ್ಯಾಫೋಲ್ಡಿಂಗ್ ಮತ್ತು ಪಂಪ್‌ನಲ್ಲಿ ನಿಲ್ಲಿಸಿದ್ದ ಕೆಲವು ವಾಹನಗಳನ್ನು ಹಾನಿಗೊಳಿಸಿದೆ. ಸದ್ಯ 12 ಅಗ್ನಿಶಾಮಕ ವಾಹನಗಳು ಮತ್ತು ಎರಡು ಕ್ರೇನ್‌ಗಳನ್ನು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. ಪೆಟ್ರೋಲ್ ಪಂಪ್‌ನಲ್ಲಿ ಈ ಘಟನೆ ನಡೆದಿರುವುದರಿಂದ ಕಟರ್‌ಗಳನ್ನು ಬಳಸುವಂತಿಲ್ಲ. ಕ್ರೇನ್ ಬಳಸಿ ಬಿಲ್‌ಬೋರ್ಡ್‌ನ ಮುರಿದ ತುಂಡುಗಳನ್ನು ಮೇಲಕ್ಕೆತ್ತಲಾಗುತ್ತಿದೆ. ಗಾಯಾಳುಗಳನ್ನು ರಾಜವಾಡಿ ಮತ್ತು ಎಚ್‌ಬಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: Karnataka Rains: ಕರ್ನಾಟಕದ ಈ ಜಿಲ್ಲೆಗಳಲ್ಲಿ ಮೇ 18ರವರೆಗೂ ಮಳೆ

ಘಾಟ್‌ಕೋಪರ್‌ನಲ್ಲಿ ಬೃಹತ್ ಹೋರ್ಡಿಂಗ್ ಕುಸಿದ ನಂತರ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಇಂದು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ತಂಡವನ್ನು ನಿಯೋಜಿಸಿದೆ. “ಕಾರ್ಯಾಚರಣೆಗಾಗಿ NDRF ಅಧಿಕಾರಿಗಳ ಒಂದು ತಂಡವನ್ನು ಘಾಟ್ಕೋಪರ್​ನಲ್ಲಿ ನಿಯೋಜಿಸಲಾಗಿದೆ. ಇದುವರೆಗೆ ಒಟ್ಟು 67 ಜನರನ್ನು ರಕ್ಷಿಸಲಾಗಿದೆ” ಎಂದು ಎನ್​ಡಿಆರ್​ಎಫ್ ತಿಳಿಸಿದೆ.

ರಸ್ತೆ ಬದಿಯಲ್ಲಿದ್ದ ಜಾಹೀರಾತು ಹೋರ್ಡಿಂಗ್ ಹತ್ತಿರದ ಮನೆಗಳು ಮತ್ತು ಪೆಟ್ರೋಲ್ ಪಂಪ್ ಮೇಲೆ ಕುಸಿದಿದ್ದು, ಇದರಿಂದ 100ಕ್ಕೂ ಹೆಚ್ಚು ಜನರು ಸಿಲುಕಿರುವ ಸಾಧ್ಯತೆಯಿದೆ ಎಂದು ಬಿಎಂಸಿ ತಿಳಿಸಿದೆ. ಮುಂಬೈ ಅಗ್ನಿಶಾಮಕ ದಳ, ಸ್ಥಳೀಯ ಪೊಲೀಸ್ ಸಿಬ್ಬಂದಿ ಮತ್ತು 108 ಆಂಬ್ಯುಲೆನ್ಸ್ ಸೇವೆಗಳನ್ನು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:53 pm, Mon, 13 May 24