ಮುಂಬೈನ ಘಾಟ್‌ಕೋಪರ್‌ನಲ್ಲಿ ಭಾರಿ ಭೂಕುಸಿತ: ಇಬ್ಬರು ಬಲಿ, ನಾಲ್ಕೈದು ಜನರು ಮಣ್ಣಿನಡಿಯಲ್ಲಿ ಸಿಲುಕಿರುವ ಶಂಕೆ

ಮುಂಬೈನ ಘಾಟ್‌ಕೋಪರ್‌ನಲ್ಲಿ ಮುಸಲಧಾರ ಮಳೆಯಿಂದ ಭಾರೀ ಭೂಕುಸಿತ ಸಂಭವಿಸಿದ್ದು, ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ. ಚಿರಾಗ್ ನಗರದ ಗೌಸಿಯಾ ಚಾಲ್ ಬಳಿ ಗುಡ್ಡ ಕುಸಿದು 2-3 ಮನೆಗಳ ಮೇಲೆ ಬಿದ್ದಿದೆ. ನಾಲ್ಕರಿಂದ ಐದು ಮಂದಿ ಇನ್ನೂ ಸಿಲುಕಿರುವ ಆತಂಕವಿದ್ದು, NDRF, ಪೊಲೀಸ್ ಮತ್ತು ಅಗ್ನಿಶಾಮಕ ದಳ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಅಪಾಯಕಾರಿ ಪ್ರದೇಶದ ನಿವಾಸಿಗಳನ್ನು ಸ್ಥಳಾಂತರಿಸಲಾಗುತ್ತಿದೆ.

ಮುಂಬೈನ ಘಾಟ್‌ಕೋಪರ್‌ನಲ್ಲಿ ಭಾರಿ ಭೂಕುಸಿತ: ಇಬ್ಬರು ಬಲಿ, ನಾಲ್ಕೈದು ಜನರು ಮಣ್ಣಿನಡಿಯಲ್ಲಿ ಸಿಲುಕಿರುವ ಶಂಕೆ
ಮುಂಬೈ ಭೂಕುಸಿತ

Updated on: Aug 12, 2026 | 9:36 AM

ಮುಂಬೈ, ಆ.12 : ಮುಂಬೈನ ಘಾಟ್‌ಕೋಪರ್ ಪ್ರದೇಶದಲ್ಲಿ ಬುಧವಾರ ಮುಂಜಾನೆ ಮುಸಲಧಾರ ಮಳೆಗೆ ಭಾರಿ ಭೂಕುಸಿತ ಉಂಟಾಗಿದ್ದು, ಕನಿಷ್ಠ ಇಬ್ಬರು ಮೃತಪಟ್ಟು, ನಾಲ್ಕರಿಂದ ಐದು ಜನರು ಮಣ್ಣಿನಡಿಯಲ್ಲಿ ಸಿಲುಕಿರುವ ಭೀತಿ ವ್ಯಕ್ತವಾಗಿದೆ. ಘಟನಾ ಸ್ಥಳದಲ್ಲಿ NDRF, ಮುಂಬೈ ಅಗ್ನಿಶಾಮಕ ದಳ ಮತ್ತು ಪೊಲೀಸರು ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಬೃಹನ್ಮುಂಬೈ ಮಹಾನಗರ ಪಾಲಿಕೆ (BMC) ನೀಡಿದ ಮಾಹಿತಿಯಂತೆ, ಘಾಟ್‌ಕೋಪರ್‌ನ ಚಿರಾಗ್ ನಗರದಲ್ಲಿರುವ ಗೌಸಿಯಾ ಚಾಲ್ ಬಳಿ ಮುಂಜಾನೆ ಸುಮಾರು 3:48ರ ವೇಳೆಗೆ ಗುಡ್ಡದ ಒಂದು ಭಾಗ ಕುಸಿದು ಬಿದ್ದಿದೆ.

ಬೆಟ್ಟದ ಮಣ್ಣು ಮತ್ತು ಕಲ್ಲುಗಳು 2 ರಿಂದ 3 ಮನೆಗಳ ಮೇಲೆ ಬಿದ್ದಿದ್ದರಿಂದ, ನಿವಾಸಿಗಳು ಮಣ್ಣಿನಡಿಯಲ್ಲಿ ಸಿಲುಕಿಕೊಂಡರು. ಘಟನಾ ಸ್ಥಳದಿಂದ ಈವರೆಗೆ ಇಬ್ಬರ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ತಪಾಸಣೆಗಾಗಿ ಹತ್ತಿರದ ಆಸ್ಪತ್ರೆಗೆ ರವಾನಿಸಲಾಗಿದೆ.

ದುರಂತದಲ್ಲಿ ಗಾಯಗೊಂಡಿದ್ದ 18 ವರ್ಷದ ಸೊಹೇಲ್ ಅನ್ಸಾರಿ (ತಲೆಗೆ ಗಾಯ) ಮತ್ತು 14 ವರ್ಷದ ಮೊಹಮ್ಮದ್ ಅನ್ಸಾರಿ (ಬೆನ್ನಿಗೆ ಗಾಯ) ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಡಿಸಿಪಿ ಗಣೇಶ್ ಶಿಂಧೆ ಹಾಗೂ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. “ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಘಾಟ್‌ಕೋಪರ್ ಪೊಲೀಸ್ ಠಾಣೆ ವ್ಯಾಪ್ತಿಯ ಅಶೋಕನಗರದಲ್ಲಿ ಭೂಕುಸಿತ ಸಂಭವಿಸಿದೆ. ಇದುವರೆಗೆ ಇಬ್ಬರ ಮೃತದೇಹ ಪತ್ತೆಯಾಗಿದೆ. ಮಣ್ಣಿನಡಿಯಲ್ಲಿ ಇನ್ನು 3 ರಿಂದ 4 ಜನರು ಸಿಲುಕಿರುವ ಸಾಧ್ಯತೆಯಿದ್ದು, NDRF, ಪೊಲೀಸರು ಹಾಗೂ ಬಿಎಂಸಿ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.” ಎಂದು ಡಿಸಿಪಿ ಗಣೇಶ್ ಶಿಂಧೆ ಹೇಳಿದ್ದಾರೆ.

ಇದನ್ನೂ ಓದಿ: ಮತ್ತೆ ಕಾಶ್ಮೀರಿ ಪಂಡಿತರ ಮೇಲೆ ಉಗ್ರರ ಕಣ್ಣು: ಮನೆಗಳಲ್ಲೇ ಇರುವಂತೆ ಸೂಚನೆ

ಮುಂಬೈ ಮೇಯರ್ ರಿತು ತಾವ್ಡೆ ಮತ್ತು ಹೆಚ್ಚುವರಿ ಮಹಾನಗರ ಪಾಲಿಕೆ ಆಯುಕ್ತ ಅವಿನಾಶ್ ಧಾಕ್ನೆ ಅವರು ದುರಂತ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಅಪಾಯಕಾರಿ ಪ್ರದೇಶದಲ್ಲಿರುವ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Loading...
Unable to load recommendations.
Follow Us