ಮುಂಬೈ: ಟಿಆರ್ಪಿ ಗೋಲ್ಮಾಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಹೆಸರು ಮತ್ತೆ ಮುನ್ನೆಲೆಗೆ ಬಂದಿದೆ. ಸೋಮವಾರದಂದು ಮುಂಬೈ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ (Remand Report) ರಿಪಬ್ಲಿಕ್ ಟಿವಿ ವಾಹಿನಿಯ ಮಾಲೀಕರು, ಮಾಜಿ ಸಿಇಓ ಪಾರ್ಥೋ ದಾಸ್ಗುಪ್ತಾ ಅವರಿಗೆ ಲಕ್ಷಗಟ್ಟಲೆ ಹಣ ನೀಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ಅರ್ನಬ್ ಗೋಸ್ವಾಮಿ ಹೆಸರು ನೇರವಾಗಿ ಪ್ರಸ್ತಾಪವಾಗಿಲ್ಲವಾದರೂ ರಿಪಬ್ಲಿಕ್ ಟಿವಿ ವಾಹಿನಿಯ ಮಾಲೀಕರು ಅಕ್ರಮದಲ್ಲಿ ಶಾಮೀಲಾಗಿದ್ದಾರೆ ಎಂದು ಆಪಾದಿಸಲಾಗಿದೆ. ಆದರೆ, ಹೇಳಿಕೆಯ ಮುಂದುವರಿದ ಭಾಗದಲ್ಲಿ.. ಮುಂಬೈ ಪೊಲೀಸರು ಅರ್ನಬ್ ಗೋಸ್ವಾಮಿ ಹೆಸರನ್ನು ಉಲ್ಲೇಖಿಸಿದ್ದಾರೆ.
ರಿಪಬ್ಲಿಕ್ ಟಿವಿ ಮತ್ತು ರಿಪಬ್ಲಿಕ್ ಭಾರತ್ ವಾಹಿನಿಗಳ ಟಿಆರ್ಪಿಯನ್ನು ಅಕ್ರಮವಾಗಿ ಹೆಚ್ಚಿಸುವ ಸಲುವಾಗಿ ಬಾರ್ಕ್ ಸಂಸ್ಥೆಯ ಮಾಜಿ ಸಿಇಓ ಪಾರ್ಥೋ ದಾಸ್ಗುಪ್ತಾ ಅವರಿಗೆ ಅರ್ನಬ್ ಗೋಸ್ವಾಮಿ ಬೇರೆ ಬೇರೆ ಸಂದರ್ಭದಲ್ಲಿ ಲಕ್ಷಾಂತರ ರೂಪಾಯಿ ಹಣ ಸಂದಾಯಿಸಿದ್ದಾರೆ ಎಂದು ಮುಂಬೈ ಪೊಲೀಸರು ತಾವು ಕೋರ್ಟ್ಗೆ ಸಲ್ಲಿಸಿರುವ Remand Report ನಲ್ಲಿ ಉಲ್ಲೇಖಿಸಿದ್ದಾರೆ. ಈ ಮೂಲಕ ಟಿಆರ್ಪಿ ಅಕ್ರಮ ಪ್ರಕರಣದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಮುಂಬೈ ಪೊಲೀಸರು ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಹೆಸರನ್ನು ನೇರವಾಗಿ ಪ್ರಸ್ತಾಪಿಸಿದ್ದಾರೆ.
ಪಾರ್ಥೋ ದಾಸ್ಗುಪ್ತಾ ಅವರು ಬಾರ್ಕ್ ಸಂಸ್ಥೆಯ ಸಿಇಓ ಆಗಿದ್ದಾಗ ಅವರೊಂದಿಗೆ ಅಂದಿನ ಇತರೆ ಸಿಬ್ಬಂದಿ ಕೂಡಾ ಅಕ್ರಮದಲ್ಲಿ ಶಾಮೀಲಾಗಿರಬಹುದು ಎಂದು Remand Report ವರದಿಯಲ್ಲಿ ಅನುಮಾನಿಸಲಾಗಿದೆ. ಟೈಮ್ಸ್ ನೌ ವಾಹಿನಿಯಲ್ಲಿ ಜೊತೆಯಾಗಿ ಕೆಲಸ ಮಾಡಿದ್ದ ಅರ್ನಬ್ ಮತ್ತು ದಾಸ್ಗುಪ್ತಾ ಇಬ್ಬರೂ ರಿಪಬ್ಲಿಕ್ ಟಿವಿಯ ಟಿಆರ್ಪಿ ಹೆಚ್ಚಳದಲ್ಲಿ ಅಕ್ರಮ ಎಸಗಿದ್ದಾರೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಮುಂಬೈನ ಹೊಟೇಲುಗಳಲ್ಲಿ ಡಾಲರ್ ರೂಪದಲ್ಲಿ ಹಣ ನೀಡಿದ್ದಾರೆ
ಟಿಆರ್ಪಿ ಹೆಚ್ಚಿಸುವುದಕ್ಕಾಗಿ ಅವರಿಬ್ಬರೂ ಕನಿಷ್ಠ 3 ಬಾರಿ ಮುಂಬೈನ ಬೇರೆ ಬೇರೆ ಹೊಟೇಲುಗಳಲ್ಲಿ ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ದಾಸ್ಗುಪ್ತಾ ಅವರಿಗೆ ಅರ್ನಬ್ ದೊಡ್ಡ ಮೊತ್ತದ ನಗದನ್ನು ನೀಡಿದ್ದಾರೆ ಮತ್ತು ಒಂದು ಬಾರಿ ಯುಎಸ್ ಡಾಲರ್ನಲ್ಲಿ ಅವರಿಗೆ ಹಣ ಸಂದಾಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.