ಅರುಣಾಚಲದಲ್ಲಿ ಜೆಡಿಯು ಶಾಸಕರ ಪಕ್ಷಾಂತರಕ್ಕೂ ಬಿಹಾರ ಮೈತ್ರಿಕೂಟಕ್ಕೂ ಸಂಬಂಧವಿಲ್ಲ: ಸುಶೀಲ್ ಕುಮಾರ್ ಮೋದಿ
ಅರುಣಾಚಲ ಪ್ರದೇಶದಲ್ಲಿ ಜೆಡಿಯುವಿನ 6 ಶಾಸಕರು ಬಿಜೆಪಿಗೆ ಪಕ್ಷಾಂತರವಾಗಿದ್ದಾರೆ. ಈ ಘಟನೆ ಬಿಹಾರದ ಬಿಜೆಪಿ-ಜೆಡಿಯು ಮೈತ್ರಿಕೂಟದ ಸರ್ಕಾರಕ್ಕೆ ಧಕ್ಕೆ ತರದು ಎಂದು ರಾಜ್ಯಸಭಾ ಸಂಸದ ಸುಶೀಲ್ ಕುಮಾರ್ ಮೋದಿ ಹೇಳಿದ್ದಾರೆ.
ಪಟನಾ: ಜೆಡಿಯು-ಬಿಜೆಪಿ ಶಾಸಕರ ಕೋರಿಕೆಯ ಮೇರೆಗೆ ಬಿಹಾರದಲ್ಲಿ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿದ್ದಾರೆ. ಅರುಣಾಚಲ ಪ್ರದೇಶದಲ್ಲಿ ಜೆಡಿಯು ಶಾಸಕರ ಪಕ್ಷಾಂತರವು ಬಿಹಾರ ಸರ್ಕಾರಕ್ಕೆ ಯಾವುದೇ ಧಕ್ಕೆ ತರುವುದಿಲ್ಲ ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ, ರಾಜ್ಯಸಭಾ ಸಂಸದ ಸುಶೀಲ್ ಕುಮಾರ್ ಮೋದಿ ತಿಳಿಸಿದ್ದಾರೆ.
ಅರುಣಾಚಲ ಪ್ರದೇಶದಲ್ಲಿ ಆರು ಮಂದಿ ಜೆಡಿಯು ಶಾಸಕರು ಬಿಜೆಪಿಗೆ ಸೇರ್ಪಡೆಗೊಂಡ ನಂತರ ಬಿಹಾರದಲ್ಲಿ ಮೈತ್ರಿಕೂಟಕ್ಕೆ ಇರಿಸುಮುರಿಸಾಗಿತ್ತು. ಮೈತ್ರಿಕೂಟದ ಅಂಗವಾಗಿರುವ ಪಕ್ಷವೇ ತಮ್ಮ ಶಾಸಕರನ್ನು ಸೆಳೆದ ವಿಚಾರ ರಾಷ್ಟ್ರಪಟ್ಟದಲ್ಲಿ ಜೆಡಿಯು ವ್ಯಂಗ್ಯಕ್ಕೆ ಗುರಿಯಾಗುವಂತೆ ಮಾಡಿತ್ತು. ಈ ಘಟನೆಯ ನಂತರ ಕರೆದಿದ್ದ ಜೆಡಿಯು ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಹೊಸ ಅಧ್ಯಕ್ಷರಾಗಿ ಆರ್ಸಿಪಿ ಸಿಂಗ್ ಅವರನ್ನು ಆಯ್ಕೆ ಮಾಡಲಾಗಿತ್ತು.
ಈ ಬೆಳವಣಿಗೆಗಳ ತರುವಾಯ ಹೇಳಿಕೆ ನೀಡಿದ್ದ ಬಿಹಾರ ಸಿಎಂ ನಿತೀಶ್ ಕುಮಾರ್, ಮುಖ್ಯಮಂತ್ರಿ ಪದವಿ ತೊರೆಯಲು ಸಿದ್ಧನಿದ್ದೇನೆ ಎಂದಿದ್ದರು. ಬಿಜೆಪಿ ಜತೆಗಿನ ಸಖ್ಯ ತೊರೆಯುವ ಕುರಿತೂ ಜೆಡಿಯು ಕಾರ್ಯಕರ್ತರು ಒತ್ತಡ ಹಾಕಿದ್ದರು.
ಆದರೆ ನಿತೀಶ್ ಕುಮಾರ್ ರಾಜಕೀಯ ಅಂಗಳದ ಗೆಳೆಯ ಸುಶೀಲ್ ಕುಮಾರ್ ಮೋದಿ ಈ ಕಾವನ್ನು ಶಮನಗೊಳಿಸುವ ಯತ್ನಕ್ಕೆ ಕೈಹಾಕಿದ್ದಾರೆ. ಅರುಣಾಚಲಪ್ರದೇಶದಲ್ಲಿ ಏನೇ ಆದರೂ ಬಿಹಾರದಲ್ಲಿ ಬಿಜೆಪಿ-ಜೆಡಿಯು ಗೆಳೆತನಕ್ಕೆ ಧಕ್ಕೆ ಬರುವುದಿಲ್ಲ ಎಂದು ಗಾಯಕ್ಕೆ ಮುಲಾಮು ಸವರಿದ್ದಾರೆ.
ಬಿಹಾರದಲ್ಲಿ ಫಲಿತಾಂಶದ ನಂತರ ಬಿಜೆಪಿ ಶಾಸಕರೇ ನಿತೀಶ್ ಕುಮಾರ್ ಅವರಲ್ಲಿ ಮುಖ್ಯಮಂತ್ರಿಯಾಗಲು ಬೇಡಿಕೆಯಿಟ್ಟಿದ್ದರು. ಹೀಗಾಗಿ, ಅರುಣಾಚಲ ಪ್ರದೇಶದಲ್ಲಿ 6 ಶಾಸಕರ ಪಕ್ಷಾಂತರದ ನಂತರವೂ ಬಿಹಾರದಲ್ಲಿ ಬಿಜೆಪಿ-ಜೆಡಿಯು ಮೈತ್ರಿ ಸರ್ಕಾರ ಮುಂದುವರೆಯಲಿದೆ ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ತಿಳಿಸಿದ್ದಾರೆ.
ಸುಶೀಲ್ ಕುಮಾರ್ ಮೋದಿ ತ್ಯಾಗಕ್ಕೆ ಸಿಕ್ತು ಪ್ರತಿಫಲ! ಎಲ್ಜೆಪಿಗೆ ಕೈತಪ್ಪಿತು ಒಂದು ರಾಜ್ಯಸಭಾ ಸ್ಥಾನ