26/11 ಮುಂಬೈ ಭಯೋತ್ಪಾದಕ ದಾಳಿ (Mumbai terror attack) ನಡೆದಾಗ ಮುಂಬೈನ ತಾಜ್ ಹೋಟೆಲ್ (Mumbai Taj Hotel)ನ ಜನರಲ್ ಮ್ಯಾನೇಜರ್ ಆಗಿದ್ದ ಕರಂಬಿರ್ ಕಾಂಗ್ ಅವರು ಅಂದಿನ ಭಯಾನಕತೆಯ ನೆನಪನ್ನು ವಿಶ್ವಸಂಸ್ಥೆಯಲ್ಲಿ ಮೆಲುಕುಹಾಕಿದರು. ವಿಶ್ವದಾದ್ಯಂತ ಸಂತ್ರಸ್ತರಿಗೆ ಶ್ರದ್ಧಾಂಜಲಿ ಸಲ್ಲಿಸಲು ಭಯೋತ್ಪಾದನೆಯ ಬಲಿಪಶುಗಳ ಮೊದಲ ಯುಎನ್ ಗ್ಲೋಬಲ್ ಕಾಂಗ್ರೆಸ್‌ನಲ್ಲಿ ಮಾತನಾಡಿದ ಅವರು, ದಾಳಿಯಲ್ಲಿ ತನ್ನ ಕುಟುಂಬಸ್ಥರನ್ನು ಹಾಗೂ ಸಹೋದ್ಯೋಗಿಗಳನ್ನು ಕಳೆದುಕೊಂಡ ಬಗ್ಗೆ ಹಾಗೂ ಸಹೋದ್ಯೋಗಿಗಳ ಹೋರಾಟದ ಬಗ್ಗೆ ನೆನಪಿಸಿದರಲ್ಲದೆ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುವಂತೆ ಅಂತಾರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿದರು.
“ದಾಳಿಯ ಸಮಯದಲ್ಲಿ ನನ್ನ ಹೆಂಡತಿ ಮತ್ತು ಇಬ್ಬರು ಚಿಕ್ಕ ಮಕ್ಕಳು ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಸಾವನ್ನಪ್ಪಿದರು. ನಾನು ಎಲ್ಲವನ್ನೂ ಕಳೆದುಕೊಂಡೆ. ನನ್ನ ಸಿಬ್ಬಂದಿಗಳು ಧೈರ್ಯದಿಂದ ಮಾತ್ರ ಶಸ್ತ್ರಸಜ್ಜಿತರಾಗಿದ್ದರು. ಹೀಗಾಗಿ ನಾವು ಅನೇಕ ಕೆಚ್ಚೆದೆಯ ಸಹೋದ್ಯೋಗಿಗಳನ್ನು ಕಳೆದುಕೊಂಡಿದ್ದೇವೆ ಮತ್ತು ಈ ವೀರರ ಹೋರಾಟವು ಆ ರಾತ್ರಿ ಸಾವಿರಾರು ಜೀವಗಳನ್ನು ಉಳಿಸಿದೆ” ಎಂದು ಅವರು ಹೇಳಿದರು.
ಮುಂದುವರೆದ ಮಾತನಾಡಿದ ಅವರು, “ನಮ್ಮ ಕಂಪನಿ ಮತ್ತು ಸಿಬ್ಬಂದಿ ಜಾಗತಿಕ ಪುರಸ್ಕಾರಗಳನ್ನು ಪಡೆದಿದ್ದರೂ, ನಾವು ನ್ಯಾಯವನ್ನು ಪಡೆಯಲು 14 ಸುದೀರ್ಘ ಮತ್ತು ನೋವಿನ ವರ್ಷಗಳನ್ನು ಕಳೆದಿದ್ದೇವೆ. ಹೋಟೆಲ್‌ಗೆ ಪ್ರವೇಶಿಸಿದ ಭಯೋತ್ಪಾದಕರು ತಮ್ಮ ಉದ್ದೇಶವನ್ನು ಪೂರೈಸಿದರೆ, ಅದನ್ನು ಯೋಜಿಸಿದ ಜನರು ಮತ್ತು ದಾಳಿಯನ್ನು ಸಂಘಟಿಸಿದ ಜನರು ಸ್ವತಂತ್ರರಾಗಿದ್ದಾರೆ” ಎಂದರು.
ಅಲ್ಲದೆ, “ಭಯೋತ್ಪಾದನೆಗೆ ನಮ್ಮದೇ ಆದ ಧಿಕ್ಕಾರದ ಕ್ರಮವಾಗಿ ಸಂಪೂರ್ಣವಾಗಿ ನಾಶವಾದ ಹೋಟೆಲ್ ಅನ್ನು 21 ದಿನಗಳಲ್ಲಿ ಮರು ಆರಂಭಿಸಿದ್ದೆವು. ರಾಷ್ಟ್ರೀಯವಾಗಿ ಮತ್ತು ಗಡಿಯುದ್ದಕ್ಕೂ ನ್ಯಾಯವನ್ನು ಪಡೆಯಲು ಒಟ್ಟಾಗಿ ಕೆಲಸ ಮಾಡಲು ನಾನು ಅಂತರರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡುತ್ತೇನೆ” ಎಂದರು.
“ಸದಸ್ಯ ರಾಷ್ಟ್ರಗಳು ನಮ್ಮೊಂದಿಗೆ ಸೇರಬೇಕು ಮತ್ತು ಭಯೋತ್ಪಾದನೆಯನ್ನು ಧಿಕ್ಕರಿಸುವುದರ ಜೊತೆಗೆ ಭಯೋತ್ಪಾದಕರಿಗೆ ಯಾವುದೇ ಸುರಕ್ಷಿತ ನೆಲೆಗಳು ಇಲ್ಲದಂತೆ ಮಾಡುವಲ್ಲಿ ಖಚಿತಪಡಿಸಿಕೊಳ್ಳಬೇಕು” ಎಂದರು.
Karambir Kang was the General Manager of the Taj Hotel in Mumbai when the 26/11 Mumbai terror attacks occurred.
His remarks at the "Call to Action" yesterday at the opening of the 1st Global Congress of #VictimsofTerrorism at the UN, New York. pic.twitter.com/rd9lsJgYYQ
— Ruchira Kamboj (@ruchirakamboj) September 9, 2022
26/11 ಮುಂಬೈ ಭಯೋತ್ಪಾದನಾ ದಾಳಿಯ ಬಲಿಪಶುಗಳು ಸೇರಿದಂತೆ ವಿಶ್ವದಾದ್ಯಂತ ಭಯೋತ್ಪಾದನೆಗೆ ಬಲಿಯಾದವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಭಯೋತ್ಪಾದನೆಯ ಬಲಿಪಶುಗಳ ಮೊದಲ ವಿಶ್ವಸಂಸ್ಥೆಯ ಜಾಗತಿಕ ಕಾಂಗ್ರೆಸ್ ಅನ್ನು ಸೆಪ್ಟೆಂಬರ್ 8-9 ರಿಂದ ನಡೆಸಲಾಯಿತು. ಯುನೈಟೆಡ್ ನೇಷನ್ಸ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಅವರ ಆಶ್ರಯದಲ್ಲಿ ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಛೇರಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಭಯೋತ್ಪಾದನೆಯ ಬಲಿಪಶುಗಳಿಗೆ ನೇರವಾಗಿ ಅನುಭವಗಳು, ಸವಾಲುಗಳು ಇತ್ಯಾದಿಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಅವಕಾಶ ನೀಡಲಾಗುತ್ತದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:23 am, Sat, 10 September 22