ಛೀ ಮುಟ್ಬೇಡಿ, ದೂರ ಹೋಗಿ ಎಂದಿದ್ದಕ್ಕೆ ಮಹಿಳೆಯನ್ನು ರೈಲಿನಿಂದ ತಳ್ಳಿದ ವ್ಯಕ್ತಿ, ಎಡಗೈ ಕಟ್
ಮುಂಬೈ ರೈಲಿನಲ್ಲಿ ಮಹಿಳೆಗೆ ಕಿರುಕುಳ ನೀಡಿದ್ದ ವ್ಯಕ್ತಿಯೊಬ್ಬ ಆಕೆಯನ್ನು ರೈಲಿನಿಂದ ತಳ್ಳಿದ ಭೀಕರ ಘಟನೆ ನೈಗಾಂವ್‌ನಲ್ಲಿ ನಡೆದಿದೆ. 'ಮುಟ್ಬೇಡಿ' ಎಂದಿದ್ದಕ್ಕೆ ಕೋಪಗೊಂಡು ಚಲಿಸುವ ರೈಲಿನಿಂದ ತಳ್ಳಿದ್ದರಿಂದ ಮಹಿಳೆಯ ಎಡಗೈ ಮೊಣಕೈ ಸಮೀಪದಿಂದ ಕತ್ತರಿಸಿ ಹೋಗಿದೆ. ಗಂಭೀರ ಗಾಯಗೊಂಡ ಮಹಿಳೆ ಇದೀಗ ನ್ಯಾಯಕ್ಕಾಗಿ ಕಣ್ಣೀರಿಡುತ್ತಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಈ ಘಟನೆ ಸಮಾಜದಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಮುಂಬೈ, ನವೆಂಬರ್ 12: ಛೀ ಮುಟ್ಬೇಡಿ ಅಸಹ್ಯವಾಗುತ್ತೆ ದೂರ ಹೋಗಿ ಎಂದಿದ್ದಕ್ಕೆ ವ್ಯಕ್ತಿಯೊಬ್ಬ ಮಹಿಳೆಯನ್ನು ರೈಲಿನಿಂದ ಹೊರಗೆ ತಳ್ಳಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಮಹಿಳೆಯನ್ನು ಅನುಚಿತವಾಗಿ ಸ್ಪರ್ಶಿಸಲು ಬಂದ ವ್ಯಕ್ತಿಯನ್ನು ದೂರ ಹೋಗು ಎಂದಿದ್ದಕ್ಕೆ ಕೋಪಗೊಂಡು ಚಲಿಸುತ್ತಿದ್ದ ರೈಲಿನಿಂದ ಆಕೆಯನ್ನು ತಳ್ಳಿದ್ದಾನೆ. ಪರಿಣಾಮ ಮಹಿಳೆಯ ಎಡಗೈ ಮೊಣಕೈ ಸಮೀಪದಿಂದ ಕತ್ತರಿಸಿ ಹೋಗಿದ್ದು, ತಲೆಗೆ 16 ಹೊಲಿಗೆ ಹಾಕಲಾಗಿದೆ. ಈ ಘಟನೆ ಮುಂಬೈನ ನೈಗಾಂವ್ ರೈಲು ನಿಲ್ದಾಣದ ಬಳಿ ನಡೆದಿದೆ.
ರೈಲಿನಲ್ಲೇ ಮಹಿಳೆಗೆ ಕಿರುಕುಳ
ಮಹಿಳೆ ಬೋರಿವಲಿಯಿಂದ ವಿರಾರ್ ಕಡೆಗೆ ಹೋಗುವ ಲೋಕಲ್ ರೈಲನ್ನು ಹತ್ತಿದ್ದರು. ರೈಲು ನೈಗಾಂವ್ ನಿಲ್ದಾಣದ ಕಡೆಗೆ ಬರುತ್ತಿದ್ದಾಗ ಸಹಪ್ರಯಾಣಿಕನೊಬ್ಬ ಆಕೆಯನ್ನು ಅನುಚಿತವಾಗಿ ಸ್ಪರ್ಶಿಸಿ ಕಿರುಕುಳ ನೀಡಲು ಆರಂಭಿಸಿದ್ದಾನೆ. ಇದರಿಂದ ಅಸಮಾಧಾನಗೊಂಡ ಮಹಿಳೆ ಆತನನ್ನು ಪ್ರಶ್ನಿಸಿದ್ದಾರೆ.
‘ನಿಮ್ಮ ಮನೆಯಲ್ಲಿ ತಾಯಿ ಅಥವಾ ಸಹೋದರಿ ಇಲ್ಲವೇ? ಮಹಿಳೆಯರಿಗೆ ಗೌರವ ಕೊಡುವುದು ಗೊತ್ತಿಲ್ಲವೇ?’ ಎಂದು ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೂ ಆರೋಪಿ ತನ್ನ ವರ್ತನೆಯನ್ನು ನಿಲ್ಲಿಸಿಲ್ಲ. ಇದರಿಂದ ಕೋಪಗೊಂಡ ಮಹಿಳೆ ತನ್ನ ಚಪ್ಪಲಿಯನ್ನು ಆತನ ಮೇಲೆ ಎಸೆದಿದ್ದಾರೆ. ಆಗ ಇಬ್ಬರ ನಡುವೆ ವಾಗ್ವಾದ ಆರಂಭವಾಗಿದೆ.
ರೈಲಿನಿಂದ ಕೆಳಕ್ಕೆ ತಳ್ಳಿದ ಆರೋಪಿ
ಇಬ್ಬರ ನಡುವಿನ ಜಗಳವನ್ನು ಗಮನಿಸಿದ ಇತರ ಪ್ರಯಾಣಿಕರು ಮಧ್ಯಪ್ರವೇಶಿಸಲು ಪ್ರಯತ್ನಿಸಿದ್ದಾರೆ. ಆದರೆ ಆರೋಪಿ ಮಹಿಳೆಯ ಮೇಲೆ ನಿಂದನೆ ಮಾಡಿದ್ದಲ್ಲದೆ, ತನ್ನ ಚಪ್ಪಲಿಯಿಂದಲೂ ಹಲ್ಲೆ ಮಾಡಿದ್ದಾನೆ. ರೈಲು ನೈಗಾಂವ್ ನಿಲ್ದಾಣಕ್ಕೆ ಬಂದಾಗಲೂ ಜಗಳ ಮುಂದುವರೆದಿದೆ. ಈ ವೇಳೆ ಆರೋಪಿ ಮಹಿಳೆಯನ್ನು ರೈಲಿನಿಂದ ಕೆಳಕ್ಕೆ ತಳ್ಳಿದ್ದಾನೆ. ಪರಿಣಾಮ ಆಕೆ ಎರಡು ರೈಲು ಬೋಗಿಗಳ ನಡುವಿನ ಜಾಗಕ್ಕೆ ಬಿದ್ದಿದ್ದಾರೆ. ಮತ್ತೆ ಪ್ಲಾಟ್‌ಫಾರ್ಮ್ ಮೇಲೆ ಏರಲು ಪ್ರಯತ್ನಿಸುತ್ತಿದ್ದಾಗ ರೈಲು ಚಲಿಸಲು ಆರಂಭಿಸಿದೆ. ಈ ವೇಳೆ ಮಹಿಳೆಯ ಎಡಗೈ ರೈಲಿನ ಚಕ್ರಗಳ ಕೆಳಗೆ ಸಿಲುಕಿದೆ.
ಇದನ್ನೂ ಓದಿ:
ಅಸ್ಸಾಂನಲ್ಲಿ ರೈಲು ಅಪಘಾತ: ಹಳಿ ತಪ್ಪಿದ ಕೋಲ್ಕತಾ–ಸೈರಾಂಗ್ ಎಕ್ಸ್ಪ್ರೆಸ್ನ 7 ಬೋಗಿಗಳು, ಪ್ರಯಾಣಿಕರಿಗೆ ಗಾಯ
ಎಡಗೈ ಕಳೆದುಕೊಂಡ ಮಹಿಳೆ
ಈ ಭೀಕರ ಘಟನೆಯಲ್ಲಿ ಮಹಿಳೆಯ ಎಡಗೈಗೆ ಗಂಭೀರ ಗಾಯವಾಗಿದೆ. ಕೊನೆಗೆ ಮೊಣಕೈ ಸಮೀಪದಿಂದ ಕೈಯನ್ನು ಕಳೆದುಕೊಂಡಿದ್ದಾರೆ. ಅಲ್ಲದೆ ತಲೆಗೆ ಗಂಭೀರ ಗಾಯವಾಗಿದ್ದು, 16 ಹೊಲಿಗೆ ಹಾಕಲಾಗಿದೆ. ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ಮತ್ತು ಪ್ರಯಾಣಿಕರು ಮಹಿಳೆಯನ್ನು ಪ್ಲಾಟ್‌ಫಾರ್ಮ್ ಮೇಲೆ ಎತ್ತಿ ಆಸ್ಪತ್ರೆಗೆ ದಾಖಲಿಸಲು ನೆರವಾಗಿದ್ದಾರೆ. ಘಟನೆಯ ಬಳಿಕ ಗದ್ದಲದ ನಡುವೆ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಆದರೆ ಪೊಲೀಸರು ಕೆಲವೇ ಗಂಟೆಗಳಲ್ಲಿ ಆತನನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.
‘ನನಗೆ ನ್ಯಾಯ ಬೇಕು’ ಎಂದು ಕಣ್ಣೀರಿಟ್ಟ ಮಹಿಳೆ
ಆಸ್ಪತ್ರೆಯಲ್ಲಿರುವ ಮಹಿಳೆ ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಘಟನೆಯ ಬಗ್ಗೆ ನೋವು ಹಂಚಿಕೊಂಡಿದ್ದಾರೆ. ರೈಲಿನಲ್ಲಿ ತನ್ನನ್ನು ಅನುಚಿತವಾಗಿ ಸ್ಪರ್ಶಿಸುತ್ತಿದ್ದ ವ್ಯಕ್ತಿಯನ್ನು ಪ್ರಶ್ನಿಸಿದ್ದಕ್ಕೆ ಆತ ಕಿರುಕುಳ ಮುಂದುವರಿಸಿದ್ದ. ಆತನನ್ನು ಚಪ್ಪಲಿಯಿಂದ ಹೊಡೆದು ದೂರ ಸರಿಸಲು ಪ್ರಯತ್ನಿಸಿದಾಗ, ಆತ ತನ್ನ ಮೇಲೆ ದಾಳಿ ಮಾಡಿ ರೈಲಿನಿಂದ ತಳ್ಳಿದ್ದಾನೆ ಎಂದು ಹೇಳಿದ್ದಾರೆ.
‘ನನ್ನ ಇಡೀ ಕುಟುಂಬವನ್ನು ನಾನೇ ನೋಡಿಕೊಳ್ಳುತ್ತಿದ್ದೆ. ಮನೆಯ ಎಲ್ಲ ಜವಾಬ್ದಾರಿಯನ್ನೂ ನಾನೇ ನಿರ್ವಹಿಸುತ್ತಿದ್ದೆ. ಈಗ ಒಂದು ಕೈ ಕಳೆದುಕೊಂಡಿದ್ದೇನೆ. ಒಂದೇ ಕೈಯಿಂದ ಹೇಗೆ ಎಲ್ಲವನ್ನೂ ಮಾಡಲಿ? ನನ್ನ ಜೀವನವೇ ಬದಲಾಗಿದೆ. ನನಗೆ ನ್ಯಾಯ ಬೇಕು. ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು’ ಎಂದು ಮಹಿಳೆ ಮನವಿ ಮಾಡಿದ್ದಾರೆ. ಮಹಿಳೆಗೆ ನಾಲ್ಕು ವರ್ಷದ ಮಗುವಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
