ಕೇರಳದ ಎರ್ನಾಕುಲಂನಲ್ಲಿ ಶನಿವಾರ ಹಿಜಾಬ್ (Hijab) ಧರಿಸಿದ ಅನೇಕ ಮಹಿಳೆಯರು, ಹುಡುಗಿಯರು ದೊಡ್ಡ ಪ್ರಮಾಣದಲ್ಲಿ ರ್ಯಾಲಿ, ಸಭೆ ನಡೆಸಿದ್ದಾರೆ. ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಬ್ಯಾನರ್ ಹಿಡಿದು ರ್ಯಾಲಿ ನಡೆಸಿದ ಇವರು, ಹಿಜಾಬ್ ನಿಷೇಧದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಶಾಲಾ ಸಮವಸ್ತ್ರದ ಮೇಲೆ ಹಿಜಾಬ್ ಧರಿಸುವಂತಿಲ್ಲ ಎಂಬ ಕರ್ನಾಟಕ ಸರ್ಕಾರದ ಸುತ್ತೋಲೆ ಮತ್ತು ಕೇರಳದ ಶಾಲೆಗಳಲ್ಲಿ ವಿದ್ಯಾರ್ಥಿ ಪೊಲೀಸ್ ಕೆಡೆಟ್ಗಳಲ್ಲಿರುವ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವಂತಿಲ್ಲ ಎಂದು ಕೇರಳ ಸರ್ಕಾರ ಹೊರಡಿಸಿದ್ದ ಸುತ್ತೋಲೆಗಳನ್ನು ಹರಿದು ಹಾಕುವ ಮೂಲಕ ಸರ್ಕಾರಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕರ್ನಾಟಕದಲ್ಲಿ ಹಿಜಾಬ್ ವಿವಾದ ಬೂದಿ ಮುಚ್ಚಿದ ಕೆಂಡದಂತೆ ನಡೆಯುತ್ತಲೇ ಇದೆ. ಅದು ದೇಶವ್ಯಾಪಿ ವಿಸ್ತರಿಸಿದ್ದು ಗೊತ್ತೇ ಇದೆ.
ಕೇರಳದ ಶಾಲೆಗಳಲ್ಲಿ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಎಂಬ ವಿಭಾಗವಿದೆ. ಇದೊಂದು ಯುವಜನ ಅಭಿವೃದ್ಧಿ ಯೋಜನೆಯಾಗಿದ್ದು, ಇದರಲ್ಲಿ ವಿದ್ಯಾರ್ಥಿಗಳಲ್ಲಿ ಕಾನೂನು ಪಾಲನೆ, ಶಿಸ್ತು, ನಾಗರಿಕ ಪ್ರಜ್ಞೆ, ಬಡವರು-ದುರ್ಬಲ ವರ್ಗದವರ ಬಗ್ಗೆ ಸಹಾನುಭೂತಿ, ಸಮಾಜದಲ್ಲಿ ಕೆಟ್ಟದರ ಬಗ್ಗೆ ಪ್ರತಿರೋಧ ಒಡ್ಡುವುದನ್ನು ಕಲಿಸುವ, ಈ ಮೂಲಕ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಭವಿಷ್ಯದಲ್ಲಿ ಒಬ್ಬ ಅತ್ಯುತ್ತಮ ನಾಯಕನನ್ನಾಗಿ ರೂಪಿಸುವ ಪ್ರಯತ್ನಗಳು ನಡೆಯುತ್ತವೆ. ಇಲ್ಲೂ ಸಹ ಸಮವಸ್ತ್ರದ ಮೇಲೆ ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂದು ವಿದ್ಯಾರ್ಥಿನಿಯೊಬ್ಬಳು ಹೈಕೋರ್ಟ್ ಮೊರೆ ಹೋಗಿದ್ದಳು. ಆದರೆ ಕೇರಳ ಸರ್ಕಾರ , ಇಲ್ಲಿಯವರೆಗೆ ಇಲ್ಲದ್ದನ್ನು ಈಗ ಮಾಡಲಾಗದು. ಹೀಗೆ ಸ್ಟುಡೆಂಟ್ ಪೊಲೀಸ್ ಕೆಡೆಟ್ ವಿದ್ಯಾರ್ಥಿಗಳಿಗೆ ಹಿಜಾಬ್ ಮತ್ತು ಪೂರ್ಣ ತೋಳಿನ ಅಂಗಿ ಧರಿಸಲು ಕೊಟ್ಟರೆ, ಇನ್ನೂ ಬೇರೆ ಸಂಘಟನೆಗಳವರೂ ಅದಕ್ಕೆ ಬೇಡಿಕೆ ಇಡುತ್ತಾರೆ ಎಂದು ಹೇಳಿತ್ತು.
ಎರ್ನಾಕುಲಂನಲ್ಲಿ ನಡೆದ ರ್ಯಾಲಿ, ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಸಿ.ಎ. ಶಬ್ನಾ (ಇವರು ಮೂಲತಃ ಕೇರಳದವರಾಗಿದ್ದು, ಕರ್ನಾಟಕದ ಕಾನೂನು ಕಾಲೇಜಿನಲ್ಲಿ ಓದುತ್ತಿದ್ದಾರೆ. ಇತ್ತೀಚೆಗೆ ಕರ್ನಾಟಕದಲ್ಲಿ ನಡೆದ ಹಿಜಾಬ್ ಪರ ಹೋರಾಟದಲ್ಲಿ ಸಕ್ರಿಯರಾಗಿದ್ದರು), ಕಳೆದ ವರ್ಷ ಪರೀಕ್ಷೆಯ ವೇಳೆ ನಾನು ಹಿಜಾಬ್ ಧರಿಸಿಯೇ ಕುಳಿತಿದ್ದೆ. ಆಗ ಶಿಕ್ಷಕರು ಮತ್ತು ಪ್ರಿನ್ಸಿಪಾಲ್ ಬಂದು ಹಿಜಾಬ್ ತೆಗೆಯುವಂತೆ ಸೂಚಿಸಿದರು. ಆದರೆ ನಾನು ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತೆ. ಅದು ಅಲ್ಲಿಗೇ ಮುಗಿಯಿತು, ಲಾಕ್ಡೌನ್ ಶುರುವಾಯಿತು. ಲಾಕ್ಡೌನ್ ಮುಗಿದು ವಾಪಸ್ ಬಂದಾಗ ಶಿಕ್ಷಕರು ಮತ್ತು ಇತರ ಕೆಲವು ವಿದ್ಯಾರ್ಥಿಗಳಲ್ಲಿ ನನ್ನ ಬಗೆಗಿನ ಅಭಿಪ್ರಾಯ ಬದಲಾಗಿತ್ತು. ಅವರೆಲ್ಲ ನನ್ನನ್ನು ನಿರ್ಲಕ್ಷಿಸುತ್ತಿದ್ದರು. ನಾನು ಯಾರೊಂದಿಗೆ ರೂಂನಲ್ಲಿ ಇದ್ದೆನೋ, ಆಕೆಯೂ ಕೂಡ ಅಲ್ಲಿಂದ ಹೋಗುವಂತೆ ಹೇಳಿದಳು ಎಂದು ಹೇಳಿದರು.
ಸಾಮಾಜಿಕ ಕಾರ್ಯಕರ್ತೆ ಲುಬ್ನಾ ಸರ್ವಥ್ ಮಾತನಾಡಿ, ಸಾವಿತ್ರಿ ಬಾಯಿ ಫುಲೆ ಮತ್ತು ಫಾತಿಮಾ ಶೇಖ್ ಅವರು ಹಿಂದುಳಿದವರ ಶಿಕ್ಷಣಕ್ಕಾಗಿ ಶ್ರಮಿಸಿದವರು. ಅವರೂ ಕೂಡ ತಮ್ಮ ತಲೆಯ ಮೇಲೆ ಪಲ್ಲು ಅಥವಾ ಸ್ಕಾರ್ಫ್ ಕಟ್ಟುತ್ತಿದ್ದರು. ಬೇರೆಬೇರೆ ಹೆಸರಿನಿಂದ ಕರೆದರೂ ಇದು ನಮ್ಮ ದೇಶದಲ್ಲಿ ದೀರ್ಘ ಕಾಲದಿಂದಲೂ ಇರುವ ಒಂದು ಸಂಪ್ರದಾಯ. ತಲೆಗೆ ಸೆರಗು, ಸ್ಕಾರ್ಫ್ ಅಥವಾ ಹಿಜಾಬ್ ಧರಿಸುವುದರಿಂದ ಸಾಮಾಜಿಕವಾಗಿ ಯಾವುದೇ ಅನನುಕೂಲ ತರುವುದಿಲ್ಲ. ಅದರಲ್ಲಿ ಈಗ ಹಿಜಾಬ್ಗೆ ಮಾತ್ರ ನಿರಾಕರಣೆ ಮಾಡುವುದು ಅನ್ಯಾಯ ಎಂದು ಹೇಳಿದರು. ಹೀಗೆ ಹಲವು ಪ್ರಮುಖರು ಮಾತನಾಡಿ, ಹಿಜಾಬ್ಗೆ ಅವಕಾಶ ಕೊಡಲೇಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: Health: ಒಬ್ಬ ಭಾರತೀಯ ಪ್ರತಿ ವರ್ಷ ಸರಾಸರಿ 14 ಕೆಜಿ ಸಕ್ಕರೆ ಸೇವಿಸುತ್ತಾನೆ; ಅದು ಎಷ್ಟು ಅಪಾಯಕಾರಿ ಎಂದು ತಿಳಿದಿದೆಯೇ?
Published On - 8:39 am, Sun, 13 March 22