ಉತ್ತರ ಪ್ರದೇಶದಲ್ಲಿ ನಿಗೂಢ ಜ್ವರ ಪತ್ತೆ; ಹೊಸ ರೋಗಕ್ಕೆ 5 ಮಕ್ಕಳು ಸೇರಿ 6 ಜನ ಬಲಿ

| Updated By: ಸುಷ್ಮಾ ಚಕ್ರೆ

Updated on: Aug 24, 2021 | 3:57 PM

Uttar Pradesh Fever: ಕೊವಿಡ್ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಲ್ಲಿ ಕಾಣಿಸಿಕೊಂಡಿರುವ ನಿಗೂಢ ಜ್ವರ ಭಾರೀ ಆತಂಕ ಮೂಡಿಸಿದೆ.

ಉತ್ತರ ಪ್ರದೇಶದಲ್ಲಿ ನಿಗೂಢ ಜ್ವರ ಪತ್ತೆ; ಹೊಸ ರೋಗಕ್ಕೆ 5 ಮಕ್ಕಳು ಸೇರಿ 6 ಜನ ಬಲಿ
ಪ್ರಾತಿನಿಧಿಕ ಚಿತ್ರ
Follow us on

ಮಥುರಾ: ಭಾರತದಲ್ಲಿ ಕೊವಿಡ್ ಕೇಸುಗಳು ಹೆಚ್ಚಾಗುತ್ತಲೇ ಇದೆ. ಇದರ ಜೊತೆಗೆ ಕೊರೊನಾ ರೂಪಾಂತರಿ ಕೂಡ ಆತಂಕ ಮೂಡಿಸಿದೆ. ಸೆಪ್ಟೆಂಬರ್ ಅಂತ್ಯ ಅಥವಾ ಅಕ್ಟೋಬರ್​ನಲ್ಲಿ ಕೊರೊನಾ ಮೂರನೇ ಅಲೆ ಶುರುವಾಗಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಈ ಕೊವಿಡ್ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಲ್ಲಿ ಕಾಣಿಸಿಕೊಂಡಿರುವ ನಿಗೂಢ ಜ್ವರ ಭಾರೀ ಆತಂಕ ಮೂಡಿಸಿದೆ. ಉತ್ತರ ಪ್ರದೇಶದ ಮಥುರಾದಲ್ಲಿ ನಿಗೂಢ ಜ್ವರಕ್ಕೆ ಕಳೆದೊಂದು ವಾರದಿಂದ 5 ಮಕ್ಕಳು ಸೇರಿ 6 ಮಂದಿ ಬಲಿಯಾಗಿದ್ದಾರೆ.

ಒಂದೇ ವಾರದಲ್ಲಿ 5 ಮಕ್ಕಳನ್ನು ಬಲಿ ಪಡೆದಿರುವ ನಿಗೂಢ ಜ್ವರ ಉತ್ತರ ಪ್ರದೇಶದಲ್ಲಿ ಆತಂಕ ಮೂಡಿಸಿದೆ. ಈಗಾಗಲೇ ಭಾರತಕ್ಕೆ ಕೊರೊನಾ 3ನೇ ಅಲೆ ಕಾಲಿಟ್ಟಿದೆಯಾ? ಎಂಬ ಅನುಮಾನಕ್ಕೂ ಇದು ಕಾರಣವಾಗಿದೆ. ಈ ನಿಗೂಢ ಜ್ವರದಿಂದ ಮಥುರಾ, ಆಗ್ರಾ ಹಾಗೂ ರಾಜಸ್ಥಾನದ ಭರತ್​ಪುರದಲ್ಲಿ 80ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಜ್ವರದ ಹಿನ್ನೆಲೆ ಮತ್ತು ಕಾರಣ ಇನ್ನೂ ಪತ್ತೆಯಾಗಿಲ್ಲ.

ವಿಪರೀತ ಜ್ವರದಿಂದ ಆಸ್ಪತ್ರೆಗೆ ದಾಖಲಾಗಿದ್ದ 1ರಿಂದ 9 ವರ್ಷದೊಳಗಿನ 5 ಮಕ್ಕಳು ಸಾವನ್ನಪ್ಪಿದ್ದಾರೆ. ಇವರೆಲ್ಲರೂ ಒಂದೇ ಗ್ರಾಮದವರಾಗಿದ್ದಾರೆ ಎಂಬುದು ಗಮನಿಸಬೇಕಾದ ವಿಷಯ. ಈ ಗ್ರಾಮದಲ್ಲಿ ಇನ್ನೂ ಹಲವರಿಗೆ ಜ್ವರ ಕಾಣಿಸಿಕೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೆ ದಾಖಲಾಗಿರುವ ರೋಗಿಗಳಿಂದ ಮಲೇರಿಯಾ, ಡೆಂಗ್ಯು, ಕೊವಿಡ್ ಸ್ಯಾಂಪಲ್​ಗಳನ್ನು ಪಡೆಯಲಾಗಿದ್ದು, ಅವರ ಸಂಬಂಧಿಕರಿಗೂ ವೈದ್ಯಕೀಯ ತಪಾಸಣೆ ನಡೆಸಲಾಗಿದೆ.

ಈ ಜ್ವರದಿಂದ ಸಾವನ್ನಪ್ಪಿರುವುದಕ್ಕೆ ನಿಖರವಾದ ಕಾರಣವೇನು? ಇದು ಯಾವ ಜ್ವರ? ಎಂಬುದು ಇನ್ನೂ ಖಚಿತವಾಗಿಲ್ಲ. ಇನ್ನು, ಮಕ್ಕಳಿಗೆ ಕೊರೊನಾ ಭೀತಿ ಹೆಚ್ಚಾಗಿರುವುದರಿಂದ ಕೊವಿಡ್ ಮೂರನೇ ಅಲೆ ಬರುವುದರೊಳಗೆ ಮಕ್ಕಳಿಗೆ ಕೊರೊನಾ ಲಸಿಕೆ ಹಾಕಲು ಪ್ರಯತ್ನಿಸಲಾಗುತ್ತಿದೆ. ಭಾರತ್ ಬಯೋಟೆಕ್​ನ ಕೊವ್ಯಾಕ್ಸಿನ್ ಲಸಿಕೆಯನ್ನು ಮಕ್ಕಳಿಗೆ ನೀಡುವ ಬಗ್ಗೆ ಪ್ರಯೋಗಗಳು ನಡೆಯುತ್ತಿವೆ. ಸೆಪ್ಟೆಂಬರ್ ಅಂತ್ಯ ಅಥವಾ ಅಕ್ಟೋಬರ್ ಮೊದಲ ವಾರದಲ್ಲಿ ಮಕ್ಕಳಿಗೆ ಕೊವ್ಯಾಕ್ಸಿನ್ ಲಸಿಕೆ ಲಭ್ಯವಾಗಲಿದೆ. ನಡುವೆ ಇತರೆ ಆರೋಗ್ಯ ಸಮಸ್ಯೆಗಳಿರುವ 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಆದ್ಯತೆಯ ಮೇರೆಗೆ ಮೊದಲು ಕೊವಿಡ್ ಲಸಿಕೆ ನೀಡಲಾಗುವುದು

ಈಗಾಗಲೇ ಭಾರತ ಮೂಲದ ಜೈಡಸ್ ಕ್ಯಾಡಿಲಾ ಕಂಪನಿಯು ಜೈಕೋವ್-ಡಿ ಎಂಬ ಕೊರೊನಾ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದು, ಈ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ. ಜೈಕೋವ್-ಡಿ ಲಸಿಕೆಯನ್ನು 12 ವರ್ಷ ಮೇಲ್ಪಟ್ಟ ಮಕ್ಕಳಿಗೂ ನೀಡಬಹುದು. ಸೆಪ್ಟೆಂಬರ್ ಅಂತ್ಯ ಅಥವಾ ಅಕ್ಟೋಬರ್​ನಲ್ಲಿ ಈ ಲಸಿಕೆ ಲಭ್ಯವಾಗಲಿದೆ. ಸೆಪ್ಟೆಂಬರ್​ನಿಂದ ಮಕ್ಕಳಿಗೆ ಕೋವಿಡ್ ಲಸಿಕೆ ಸಿಗುವ ಸಾಧ್ಯತೆ ಇದೆ. ಇದು ಭಾರತದಲ್ಲಿ ಲಭ್ಯವಾಗುತ್ತಿರುವ 6ನೇ ಕೊವಿಡ್ ಲಸಿಕೆಯಾಗಿದೆ.

12 ವರ್ಷ ಮೇಲ್ಪಟ್ಟವರಿಗೆ ಮಾತ್ರವಲ್ಲದೆ 2ರಿಂದ 18 ವರ್ಷದೊಳಗಿನವರಿಗೆ ಲಸಿಕೆ ಹಾಕುವ ಪ್ರಯೋಗಗಳು ಕೂಡ ನಡೆಯುತ್ತಿವೆ. 2ರಿಂದ 18 ವರ್ಷ ವಯಸ್ಸಿನವರಿಗೆ 2ರಿಂದ 3 ಹಂತದ ಕ್ಲಿನಿಕಲ್ ಪ್ರಯೋಗಗಳು ನಡೆಯುತ್ತಿವೆ. ಈ ಲಸಿಕಾ ಪ್ರಯೋಗದ ಫಲಿತಾಂಶಗಳು ಶೀಘ್ರದಲ್ಲೇ ಲಭ್ಯವಾಗುತ್ತವೆ. ಬಹುಶಃ ಸೆಪ್ಟೆಂಬರ್ ಅಥವಾ ಸೆಪ್ಟೆಂಬರ್ ನಂತರ ಮಕ್ಕಳಿಗೆ ಕೊವಿಡ್ ಲಸಿಕೆ ನೀಡಬಹುದು.

ಇದನ್ನೂ ಓದಿ: Covid Vaccine: 12 ವರ್ಷ ಮೇಲ್ಪಟ್ಟವರಿಗೆ ಶೀಘ್ರದಲ್ಲೇ ಕೊವಿಡ್ ಲಸಿಕೆ; ಆರೋಗ್ಯ ಸಮಸ್ಯೆ ಇರುವ ಮಕ್ಕಳಿಗೆ ಮೊದಲ ಆದ್ಯತೆ

ZyCov-D Vaccine: ಅಕ್ಟೋಬರ್ ಬಳಿಕ ಭಾರತದಲ್ಲಿ ಪ್ರತಿ ತಿಂಗಳಿಗೆ 1 ಕೋಟಿ ಡೋಸ್ ಜೈಕೋವ್-ಡಿ ಲಸಿಕೆ ಲಭ್ಯ

(Mysterious Fever Kills 6 Including 5 Children 80 Patients Hospitalized in Uttar Pradesh Mathura)