ನಾಗಾಲ್ಯಾಂಡ್ನಲ್ಲಿ ಸೇನಾ ದಾಳಿಗೆ 14 ಮಂದಿ ನಾಗರಿಕರು ಮೃತಪಟ್ಟಿದ್ದಾರೆ. ದಂಗೆಕೋರರು ಎಂದು ತಪ್ಪಾಗಿ ಭಾವಿಸಿ ಮಿಲಿಟರಿ ನಡೆಸಿದ ಕಾರ್ಯಾಚರಣೆಯಲ್ಲಿ ಮುಗ್ಧ ಕೂಲಿ ಕಾರ್ಮಿಕರ ಜೀವ ಬಲಿಯಾಗಿದೆ. ಅದರ ಬೆನ್ನಲ್ಲೇ ಇದೀಗ ನಾಗಾಲ್ಯಾಂಡ್ನ ದಂಗೆಕೋರರ ಗುಂಪು ಪ್ರಕಟಣೆಯೊಂದನ್ನು ಹೊರಡಿಸಿದ್ದು, ಚೆಲ್ಲಿದ ಮುಗ್ಧ ಜನರ ರಕ್ತಕ್ಕೆ ತಕ್ಕ ಪ್ರತೀಕಾರ ತೀರಿಸಲಾಗುವುದು. ಈ ಕೆಲಸ ಶೀಘ್ರವೇ ಆಗಬಹುದು ಅಥವಾ ಸ್ವಲ್ಪ ತಡವಾಗಿ ಆಗಬಹುದು. ಆದರೆ ಅಂಥದ್ದೊಂದು ಪ್ರತೀಕಾರದ ಕ್ರಮವನ್ನು ನಾವು ಶುರು ಮಾಡಿದಾಗ ಖಂಡಿತ ಜನರಿಗೆ ಅರ್ಥವಾಗುತ್ತದೆ ಎಂದು ಹೇಳಿದೆ.
ನಾಗಾಲ್ಯಾಂಡ್ ನ ಮೋನ್ ಜಿಲ್ಲೆಯಲ್ಲಿ ಒಬ್ಬ ಯೋಧ ಸೇರಿ ಒಟ್ಟು 15 ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಶನಿವಾರ ಸಂಜೆ ಓಟಿಂಗ್ ಗ್ರಾಮದ ಕೂಲಿಕಾರ್ಮಿಕರು ಪಿಕ್ಅಪ್ ವಾಹನದ ಮೂಲಕ ಕೆಲಸದಿಂದ ಮರಳಿ ಗ್ರಾಮಕ್ಕೆ ಬರುತ್ತಿದ್ದ ವೇಳೆ, ಇವರನ್ನು ಬಂಡುಕೋರರು ಎಂದು ತಪ್ಪು ತಿಳಿದ ಸೇನೆ ಗುಂಡಿನ ದಾಳಿ ನಡೆಸಿತ್ತು. ಇದರಲ್ಲಿ 14 ಮಂದಿ ಮೃತಪಟ್ಟಿದ್ದಾರೆ. ಘಟನೆಯಿಂದ ಸಿಟ್ಟಾದ ಸ್ಥಳೀಯರು ಭದ್ರತಾ ಪಡೆಯ ವಾಹನಗಳಿಗೆ ಬೆಂಕಿ ಹಚ್ಚಿ, ದಾಳಿ ಮಾಡಿದ ಪರಿಣಾಮ ಯೋಧನೊಬ್ಬ ಕೂಡ ಮೃತಪಟ್ಟಿದ್ದಾರೆ. ಈ ಪ್ರದೇಶದಲ್ಲಿ ಬಂಡುಕೋರರು ಅಡಗಿದ್ದು, ದಾಳಿಗೆ ಹೊಂಚುಹಾಕಿದ್ದಾರೆ ಎಂದು ಗುಪ್ತಚರ ಇಲಾಖೆ ನೀಡಿದ ಮಾಹಿತಿ ಮೇರೆಗೆ ಸೇನೆ ಕಾರ್ಯಾಚರಣೆ ನಡೆಸಿತ್ತು. ಆದರೆ ಅದು ದೊಡ್ಡಮಟ್ಟದಲ್ಲಿ ಎಡವಟ್ಟಾಗಿತ್ತು.
ಇದೀಗ ನ್ಯಾಷನಲ್ ಸೋಷಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್ ಎಂಬ ದಂಗೆಕೋರರ ಗುಂಪು ಹೇಳಿಕೆ ಬಿಡುಗಡೆ ಮಾಡಿದೆ. ಭಾರತೀಯ ಸೇನೆಯಲ್ಲಿರುವ ಕೆಲವು ಹಿಂಸಾತ್ಮಕ ಆಕ್ರಮಣಕಾರರ ಯಾವುದೇ ಕಾರ್ಯಾಚರಣೆ ನಡೆಸದಂತೆ ನಮ್ಮ ಗುಂಪು ನಿರ್ಬಂಧ ವಿಧಿಸಿಕೊಂಡಿದೆ. ಇಲ್ಲಿನ ಜನರು ಶಾಂತಿ ಬಯಸುತ್ತಿದ್ದಾರೆ. ಹೀಗಾಗಿ ಅದು ಕದಡಬಾರದು ಎಂಬ ಕಾರಣಕ್ಕೆ ನಾವು ಆಕ್ರಮಣ ಮಾಡುತ್ತಿಲ್ಲ. ಆದರೆ ನಾಚಿಕೆಯಿಲ್ಲದ ಆಕ್ರಮಣಕಾರರಿಂದ ನಮ್ಮ ಜನರು ಪಡೆದಿದ್ದಾದರೂ ಏನು? ಇನ್ನೇನೂ ಇಲ್ಲ, ಹಿಂಸಾತ್ಮಕ ಅತ್ಯಾಚಾರ, ಹತ್ಯೆಯಂತ ಅವರ ಕೃತ್ಯಗಳಿಗೆ ನಮ್ಮ ಜನರು ನಲುಗಿಹೋಗುತ್ತಿದ್ದಾರೆ ಎಂದು ಭಾರತೀಯ ಸೇನೆ ವಿರುದ್ಧ ಕಿಡಿ ಕಾರಿದೆ. ಹಾಗೇ, ಮೃತರ ಕುಟುಂಬಕ್ಕೆ ಸಾಂತ್ವನವನ್ನೂ ಸೂಚಿಸಿದೆ.
ಇದನ್ನೂ ಓದಿ: Shocking News: ಮನೆಯಲ್ಲಿದ್ದ ಹಾವುಗಳನ್ನು ಓಡಿಸಲು ಹೋಗಿ 13 ಕೋಟಿ ಮೌಲ್ಯದ ಬಂಗಲೆಯನ್ನೇ ಸುಟ್ಟ ಆಸಾಮಿ!