AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್‌ಸ್ಟಾಗ್ರಾಮ್ ಗೆಳೆಯನಿಂದ ಪಿಯುಸಿ ಬಾಲಕಿ ಮೇಲೆ ಅತ್ಯಾಚಾರ; ಆನ್‌ಲೈನ್ ಫುಡ್ ಆರ್ಡರ್​ನಿಂದ ಸಿಕ್ಕಿಬಿದ್ದ ಆರೋಪಿ

ನಾಗ್ಪುರದ ಹಿರಿಯ ಅಧಿಕಾರಿಯೊಬ್ಬರ ಮಗಳಾಗಿರುವ 12ನೇ ತರಗತಿಯ ಬಾಲಕಿಯ ಜೊತೆ ಇನ್‌ಸ್ಟಾಗ್ರಾಮ್‌ನಲ್ಲಿ ಫ್ರೆಂಡ್​​ಶಿಪ್ ಮಾಡಿದ್ದ 20 ವರ್ಷದ ಯುವಕನೊಬ್ಬ ಆಕೆಯನ್ನು ಅಪಹರಿಸಿ, ಅತ್ಯಾಚಾರ ಎಸಗಿ, ಎರಡು ದಿನಗಳ ಕಾಲ ಚಿತ್ರಹಿಂಸೆ ನೀಡಿದ್ದ ಘಟನೆ ನಡೆದಿದೆ. ಸಂತ್ರಸ್ತ ಬಾಲಕಿ ಇನ್‌ಸ್ಟಾಗ್ರಾಮ್, ಸ್ನ್ಯಾಪ್‌ಚಾಟ್ ಹಾಗೂ ಕೆಲವು ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಆರೋಪಿಯೊಂದಿಗೆ ಸಂಪರ್ಕದಲ್ಲಿದ್ದಳು. ಆ ಯುವಕನ ತಾಯಿ ಪ್ರಸಿದ್ಧ ವೈದ್ಯರಾಗಿದ್ದು, ಪೊಲೀಸರು ಆ ಬಾಲಕಿಯನ್ನು ರಕ್ಷಿಸಲು ನೆರವಾಗಿದ್ದು ಆತ ಮಾಡಿದ ಆ ಒಂದು ತಪ್ಪು.

ಇನ್‌ಸ್ಟಾಗ್ರಾಮ್ ಗೆಳೆಯನಿಂದ ಪಿಯುಸಿ ಬಾಲಕಿ ಮೇಲೆ ಅತ್ಯಾಚಾರ; ಆನ್‌ಲೈನ್ ಫುಡ್ ಆರ್ಡರ್​ನಿಂದ ಸಿಕ್ಕಿಬಿದ್ದ ಆರೋಪಿ
Representative ImageImage Credit source: PTI
ಸುಷ್ಮಾ ಚಕ್ರೆ
|

Updated on: Aug 06, 2026 | 6:29 PM

Share

ನಾಗ್ಪುರ, ಆಗಸ್ಟ್ 6: ಸಾಮಾಜಿಕ ಜಾಲತಾಣದಲ್ಲಿ ಕಾಣುವುದಿಲ್ಲವೂ ನಿಜ ಎನ್ನಲಾಗದು. ಇನ್​ಸ್ಟಾಗ್ರಾಂನಲ್ಲಿ 20 ವರ್ಷದ ಯುವಕನೊಂದಿಗೆ ಫ್ರೆಂಡ್​ ಆಗಿದ್ದ 12ನೇ ತರಗತಿಯ ಬಾಲಕಿ ಫ್ರೆಂಡ್‌ಶಿಪ್ ದಿನ (Friendship Day) ಆತನಿಗೆ ಸಿಗುವುದಾಗಿ ತಿಳಿಸಿದ್ದಳು. ಆದರೆ, ಅದೇ ದಿನ ಆತ ಆಕೆಯನ್ನು ಕಿಡ್ನಾಪ್ ಮಾಡಿ, ಅತ್ಯಾಚಾರವೆಸಗಿ, 2 ದಿನ ರಹಸ್ಯವಾದ ಸ್ಥಳದಲ್ಲಿ ಬಚ್ಚಿಟ್ಟು ಚಿತ್ರಹಿಂಸೆ ನೀಡಿದ್ದ. ಹಿರಿಯ ಅಧಿಕಾರಿಯ ಮಗಳಾದ ಆಕೆ ಮನೆಯಲ್ಲಿ ತನ್ನ ಸ್ನೇಹಿತೆಯೊಂದಿಗೆ ಮಾಲ್‌ಗೆ ಹೋಗುತ್ತಿರುವುದಾಗಿ ಪೋಷಕರಿಗೆ ತಿಳಿಸಿ ಮನೆಯಿಂದ ತೆರಳಿದ್ದಳು. ಆದರೆ, ಆಕೆ ರಾತ್ರಿಯಾದರೂ ಮನೆಗೆ ಹಿಂತಿರುಗದಿದ್ದಾಗ ಕುಟುಂಬಸ್ಥರು ಫೋನ್ ಮಾಡಿದರೂ ಆಕೆಯ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಆ ಬಾಲಕಿ ಯಾವುದೇ ಸ್ನೇಹಿತರನ್ನು ಭೇಟಿಯಾಗಿಲ್ಲ ಎಂಬುದು ತಿಳಿದುಬಂದ ನಂತರ, ಗಾಬರಿಯಿಂದ ಕುಟುಂಬಸ್ಥರು ಪೊಲೀಸ್ ದೂರು ದಾಖಲಿಸಿದ್ದರು.

ಪೊಲೀಸರು ಬಾಲಕಿಯ ಕಾಲ್ ಡಿಟೇಲ್ಸ್ ಮತ್ತು ಸೋಶಿಯಲ್ ಮೀಡಿಯಾ ಖಾತೆಗಳನ್ನು ಪರಿಶೀಲಿಸಿದಾಗ ಆರೋಪಿಯ ಮೇಲೆ ಶಂಕೆ ವ್ಯಕ್ತವಾಯಿತು.

ಆರೋಪಿಯನ್ನು ಪೊಲೀಸರು ಪತ್ತೆಹಚ್ಚಿದ್ದು ಹೇಗೆ?:

ತನಿಖೆಯ ವೇಳೆ ಆರೋಪಿಯನ್ನು ಮಹಾರಾಷ್ಟ್ರದ ಠಾಣೆ ನಿವಾಸಿ ನಿರ್ಭಯ್ ಅಲಿಯಾಸ್ ಆಕಾಶ್ ಮಾಧವ್ ಪಖರೆ ಎಂದು ಗುರುತಿಸಲಾಗಿದೆ. ಈತ ಬಿಬಿಎ ವ್ಯಾಸಂಗ ಮಾಡುತ್ತಿದ್ದು, ನಾಗಪುರದಲ್ಲಿ ಬಾಡಿಗೆ ಫ್ಲಾಟ್‌ ಒಂದರಲ್ಲಿ ವಾಸಿಸುತ್ತಿದ್ದ. ಈತನ ತಾಯಿ ಪ್ರಸಿದ್ಧ ವೈದ್ಯೆಯಾಗಿದ್ದಾರೆ. ಈತನ ಸಂಬಂಧಿಯೊಬ್ಬರು ಹಿರಿಯ ಐಪಿಎಸ್ ಅಧಿಕಾರಿ ಎನ್ನಲಾಗಿದೆ. ಪೊಲೀಸರು ಆತನ ಮೊಬೈಲ್ ಸಂಖ್ಯೆಯನ್ನು ಪಡೆದು ಆತನ ಕುಟುಂಬವನ್ನು ಸಂಪರ್ಕಿಸಿದರು. ಪೊಲೀಸ್ ತಂಡವೊಂದು ಆರೋಪಿಯ ಮನೆಗೆ ತೆರಳಿ, ಆತನ ತಾಯಿಗೆ ಮಗನಿಗೆ ಕರೆ ಮಾಡುವಂತೆ ಸೂಚಿಸಿತು.

ಇದನ್ನೂ ಓದಿ: 2013ರ ಅತ್ಯಾಚಾರ ಪ್ರಕರಣ; ತೆಹಲ್ಕಾ ಮಾಜಿ ಸಂಪಾದಕ ತರುಣ್ ತೇಜ್‌ಪಾಲ್‌ಗೆ 10 ವರ್ಷ ಜೈಲು ಶಿಕ್ಷೆ

ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ತಾಯಿಯೊಂದಿಗೆ ಮಾತನಾಡುತ್ತಿದ್ದಾರೆ ಎಂಬುದು ತಿಳಿಯುತ್ತಿದ್ದಂತೆ ಆತ ಗಾಬರಿಗೊಂಡು, ತಾನು ಸೇಫ್ ಆಗಿದ್ದೇನೆ ಎಂದು ಪೋಷಕರಿಗೆ ತಿಳಿಸುವಂತೆ ಬಾಲಕಿಯ ಮೇಲೆ ಒತ್ತಡ ಹೇರಿದನು. ಆಕೆ ಕಾಲ್ ಮಾಡಿದಾಗ ಅದರ ಲೊಕೇಷನ್ ಎಲ್ಲಿದೆ ಎಂಬುದು ಪೊಲೀಸರಿಗೆ ಗೊತ್ತಾಯಿತು. ಇದಾದ ಸ್ವಲ್ಪ ಸಮಯದ ನಂತರ ಆರೋಪಿಯು ಆನ್‌ಲೈನ್‌ನಲ್ಲಿ ಫುಡ್ ಆರ್ಡರ್ ಮಾಡಿರುವುದು ಪೊಲೀಸರಿಗೆ ಗೊತ್ತಾಯಿತು. ತಕ್ಷಣ ಪೊಲೀಸರು ಆ ಡೆಲಿವರಿ ಬಾಯ್ ಜೊತೆ ತೆರಳಿ ಆರೋಪಿ ಹಾಗೂ ಕಿಡ್ನಾಪ್ ಆದ ಬಾಲಕಿ ಇದ್ದ ಸ್ಥಳವನ್ನು ಪತ್ತೆಹಚ್ಚಿದರು.

ಮಂಚಕ್ಕೆ ಕಟ್ಟಿಹಾಕಿ ಚಾಕುವಿನಿಂದ ಇರಿತ:

ಆ ಬಾಲಕಿಯನ್ನು ಬಚ್ಚಿಟ್ಟಿದ್ದ ರೂಂನ ಬಾಗಿಲನ್ನು ಪೊಲೀಸರು ಮುರಿದು ಒಳನುಗ್ಗಿದಾಗ, ಆಕೆಯನ್ನು ಬೆತ್ತಲೆಯಾಗಿ ಮಂಚಕ್ಕೆ ಕಟ್ಟಿಹಾಕಲಾಗಿತ್ತು. ಆಕೆಯ ಮೈತುಂಬ ಗಾಯಗಳಾಗಿತ್ತು. ಆರೋಪಿ ಯುವಕ ಕೈಯಲ್ಲಿ ಚಾಕು ಹಿಡಿದುಕೊಂಡಿದ್ದ. ಬಾಲಕಿಯ ದೇಹದಾದ್ಯಂತ ಹಲವು ಚಾಕು ಇರಿತದ ಗಾಯಗಳಾಗಿದ್ದವು. ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿದರು. ಪೊಲೀಸರು ತಲುಪುವುದು ಸ್ವಲ್ಪ ತಡವಾಗಿದ್ದರೂ ಆರೋಪಿಯು ಬಾಲಕಿಯನ್ನು ಕೊಲ್ಲುವ ಸಾಧ್ಯತೆಯಿತ್ತು.

ಇದನ್ನೂ ಓದಿ: ‘ಡಾಕ್ಟರ್ ಆಗಲು ನಾಲಾಯಕ್’; 4 ವರ್ಷದ ಬಾಲಕಿಯ ಅತ್ಯಾಚಾರ ಪ್ರಕರಣದಲ್ಲಿ ಆಸ್ಪತ್ರೆಗೆ ಸುಪ್ರೀಂ ಕೋರ್ಟ್ ಛೀಮಾರಿ

ಆ ಬಾಲಕಿಯ ಮೇಲೆ 2 ದಿನಗಳ ಕಾಲ ಆತ ಲೈಂಗಿಕ ಹಾಗೂ ದೈಹಿಕ ದೌರ್ಜನ್ಯ ಎಸಗಿದ್ದ. ಆಕೆಯ ಕೈ ತುಂಡಾಗಿತ್ತು. ಘಟನಾ ಸ್ಥಳದಲ್ಲಿ ತೀಕ್ಷ್ಣವಾದ ಚಾಕು ಪತ್ತೆಯಾಗಿದ್ದು, ಆರೋಪಿಯು ಆಕೆಯನ್ನು ಕೊಲ್ಲಲು ಸಿದ್ಧತೆ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯು ಆ ಬಾಲಕಿಯ ಅಶ್ಲೀಲ ಚಿತ್ರಗಳನ್ನು ತೆಗೆದುಕೊಂಡು, ಅವುಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದ. ಅಲ್ಲದೆ ಆಕೆಯ ಇಡೀ ಕುಟುಂಬವನ್ನು ಕೊಲ್ಲುವುದಾಗಿಯೂ ಹೆದರಿಸಿದ್ದ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಆದರೆ, ಪೊಲೀಸರು ತನ್ನ ಮೇಲೆ ಅನುಮಾನಗೊಂಡು ಮನೆಗೆ ಹೋಗಿ ವಿಚಾರಿಸಿದ್ದು ತಿಳಿಯುತ್ತಿದ್ದಂತೆ ಆತ ಆಕೆಯನ್ನು ಕೊಲ್ಲಲು ನಿರ್ಧರಿಸಿದ್ದ ಎನ್ನಲಾಗಿದೆ.

ಆದರೆ, ಆರೋಪಿಯ ಪರ ವಕೀಲರು, ‘ಇಬ್ಬರ ನಡುವೆ ಪ್ರೇಮಸಂಬಂಧವಿತ್ತು. ಆ ಬಾಲಕಿಯೇ ತನ್ನ ಕೈಯನ್ನು ಕತ್ತರಿಸಿಕೊಂಡಿದ್ದಾಳೆ. ಆಕೆ ತನ್ನ ಸ್ವಂತ ಇಷ್ಟದಿಂದ ಆತನ ಜೊತೆ ಬಂದಿದ್ದಳು’ ಎಂದು ವಾದಿಸಿದ್ದು, ಅಪಹರಣದ ಆರೋಪವನ್ನು ನಿರಾಕರಿಸಿದ್ದಾರೆ. ಆರೋಪಿಯು ಪ್ರಸ್ತುತ ಪೊಲೀಸ್ ವಶದಲ್ಲಿದ್ದು, ತನಗೆ ಮಲಗಲು ಆರಾಮದಾಯಕ ಹಾಸಿಗೆ ಮತ್ತು ಸೊಳ್ಳೆ ನಿವಾರಕ ಬೇಕು ಎಂದು ಬೇಡಿಕೆಯಿಡುತ್ತಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿರುವ ಸಂತ್ರಸ್ತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮತ್ತು ಕೌನ್ಸೆಲಿಂಗ್ ಪಡೆಯುತ್ತಿದ್ದಾಳೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us