ಪ್ರಚಾರದ ಬೆಳಕಿಲ್ಲದೆ ಅರಳಿದ್ದ ನಾನಾ-ಅಜಿತ್ ಬಾಂಧವ್ಯ: ಗೆಳೆಯ ಅಜಿತ್ ಅಗಲಿದ ಎಂಟೇ ತಿಂಗಳಿಗೆ ಇಹಲೋಕ ತ್ಯಜಿಸಿದ ನಾನಾ ಪಾಟೇಕರ್
ನಟ ನಾನಾ ಪಾಟೇಕರ್ ಮತ್ತು ರಾಜಕಾರಣಿ ಅಜಿತ್ ಪವಾರ್ ಅವರ 50 ವರ್ಷಗಳ ಅಪರೂಪದ, ಖಾಸಗಿ ಸ್ನೇಹವನ್ನು ಮಹಾರಾಷ್ಟ್ರ ಈಗ ಸ್ಮರಿಸುತ್ತಿದೆ. ಇಬ್ಬರೂ ದಿಗ್ಗಜರು 8 ತಿಂಗಳ ಅಂತರದಲ್ಲಿ ನಿಧನರಾಗಿದ್ದು, ಅವರ ಪ್ರಚಾರರಹಿತ ಬಾಂಧವ್ಯ ಇಡೀ ರಾಜ್ಯದ ಕಣ್ಣಂಚಲ್ಲಿ ನೀರು ತಂದಿದೆ. ಖ್ಯಾತಿಯ ಶಿಖರ ತಲುಪುವ ಮೊದಲೇ ಚಿಗುರಿದ್ದ ಈ ಸಂಬಂಧ, ಸಾರ್ವಜನಿಕ ಪ್ರದರ್ಶನವಿಲ್ಲದೆ ಬದುಕಿನ ಕೊನೆಯವರೆಗೂ ಉಳಿದಿತ್ತು.

ಪುಣೆ, ಅಕ್ಟೋಬರ್ 08: ಒಬ್ಬರು ಭಾರತೀಯ ಚಿತ್ರರಂಗದ ಅಪ್ರತಿಮ ನಟನೆಯ ದಂತಕಥೆ, ಮತ್ತೊಬ್ಬರು ಮಹಾರಾಷ್ಟ್ರ ರಾಜಕೀಯದ ಪ್ರಭಾವಿ ನಾಯಕ ಹಾಗೂ ಮಾಜಿ ಉಪಮುಖ್ಯಮಂತ್ರಿ. ಸುಮಾರು ಐದು ದಶಕಗಳ ಕಾಲ ಸಾರ್ವಜನಿಕ ಪ್ರಚಾರದ ಬೆಳಕಿನಿಂದ ದೂರವಾಗಿ, ಅತ್ಯಂತ ಖಾಸಗಿಯಾಗಿ ಉಳಿದಿದ್ದ ನಾನಾ ಪಾಟೇಕರ್ ಮತ್ತು ಅಜಿತ್ ಪವಾರ್ ಅವರ ಅಪರೂಪದ ಸ್ನೇಹ ಇದೀಗ ಇಬ್ಬರ ನಿಧನದ ಬಳಿಕ ಇಡೀ ಮಹಾರಾಷ್ಟ್ರದ ಜನರ ಕಣ್ಣಂಚಲ್ಲಿ ಈರು ತಂದಿದೆ.
ಹಿರಿಯ ನಟ ನಾನಾ ಪಾಟೇಕರ್ ಅವರ ನಿಧನದೊಂದಿಗೆ ಮಹಾರಾಷ್ಟ್ರದ ಎರಡು ವಿಭಿನ್ನ ಕ್ಷೇತ್ರಗಳ ದಿಗ್ಗಜರ ನಡುವಿನ ಸುಮಾರು ಐದು ದಶಕಗಳ ಸ್ನೇಹ ಮತ್ತೊಮ್ಮೆ ಚರ್ಚೆಗೆ ಬಂದಿದೆ. ನಟನಾಗಿ ದೊಡ್ಡ ಹೆಸರು ಮಾಡುವ ಮೊದಲೇ ನಾನಾ ಪಾಟೇಕರ್ ಮತ್ತು ರಾಜಕೀಯದಲ್ಲಿ ಎತ್ತರಕ್ಕೇರುವ ಮೊದಲೇ ಅಜಿತ್ ಪವಾರ್ ಸ್ನೇಹಿತರಾಗಿದ್ದರು. ಅಜಿತ್ ಪವಾರ್ ಜನವರಿ 28ರಂದು ನಿಧನರಾಗಿದ್ದರು. ಇದೀಗ ಅಕ್ಟೋಬರ್ 8ರಂದು ನಾನಾ ಪಾಟೇಕರ್ ಕೂಡ 75ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಗೋವಾದಲ್ಲಿ ಕಾರ್ಡಿಯಾಕ್ ಅರೆಸ್ಟ್‌ನಿಂದ ಅವರು ಮೃತಪಟ್ಟಿರುವುದನ್ನು ಆಸ್ಪತ್ರೆ ಮೂಲಗಳು ದೃಢಪಡಿಸಿವೆ.
ಖ್ಯಾತಿಯ ಶಿಖರ ತಲುಪುವ ಮೊದಲೇ ಚಿಗುರಿದ್ದ ಗೆಳೆತನ ಬಾರಾಮತಿಯಲ್ಲಿ ಮೊದಲ ಭೇಟಿ:
ನಾನಾ ಪಾಟೇಕರ್ ನಟನಾಗಿ ಪ್ರಸಿದ್ಧಿ ಪಡೆಯುವ ಮುನ್ನ ಹಾಗೂ ಅಜಿತ್ ಪವಾರ್ ರಾಜಕೀಯದ ಉನ್ನತ ಗದ್ದುಗೆ ಏರುವ ಮೊದಲೇ ಇಬ್ಬರ ಸ್ನೇಹ ಆರಂಭವಾಗಿತ್ತು. ಆಗ ಅಜಿತ್ ಪವಾರ್‌ಗೆ ಕೇವಲ 18-19 ವರ್ಷ, ತಳಮಟ್ಟದ ಸಾಮಾನ್ಯ ಕಾರ್ಯಕರ್ತರಾಗಿದ್ದರು; ನಾನಾ ಅವರಿಗೆ 25 ವರ್ಷ.
ಇದನ್ನೂ ಓದಿ: ಕನ್ನಡ ಸಿನಿಮಾ, ‘ಮೀಟೂ’ ಗಲಾಟೆ, ಸಮಾಜಸೇವೆ: ನಾನಾ ಪಾಟೇಕರ್ ‘ಕ್ರಾಂತಿಕಾರಿ’ ಜೀವನ ಪಥ
‘ತಮ್ಮನಂತಿದ್ದ ಗೆಳೆಯ’:
ಬಾರಾಮತಿಗೆ ಭೇಟಿ ನೀಡಿದಾಗಲೆಲ್ಲಾ ಅಜಿತ್ ತಮ್ಮ ಎಲ್ಲಾ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಿದ್ದರು ಎಂದು ನಾನಾ ಸ್ಮರಿಸಿದ್ದರು. “ಅವರು ಕೇವಲ ಸ್ನೇಹಿತನಷ್ಟೇ ಅಲ್ಲ, ನನ್ನ ಸ್ವಂತ ಕಿರಿಯ ಸಹೋದರನಂತೆ ಇದ್ದರು. ಸಾಮಾನ್ಯ ಕಾರ್ಯಕರ್ತನಿಂದ ಡಿಸಿಎಂ ಹುದ್ದೆವರೆಗಿನ ಅವರ ಪಯಣ ಅದ್ಭುತವಾಗಿತ್ತು” ಎಂದು ಪಾಟೇಕರ್ ಹೇಳಿದ್ದರು.
ಪ್ರಚಾರ ಬಯಸದ ಸರಳತೆ:
“ಒಬ್ಬ ವ್ಯಕ್ತಿ ದೊಡ್ಡ ಸ್ಥಾನಕ್ಕೇರಿದಾಗ ಅಥವಾ ತೀರಿಕೊಂಡಾಗ ಜನರು ಅವರ ಸ್ನೇಹದ ಬಗ್ಗೆ ಡಂಗುರ ಸಾರುತ್ತಾರೆ. ಆದರೆ ಗೆಳೆತನ ಎಂದರೆ ಸಾರ್ವಜನಿಕವಾಗಿ ಪ್ರದರ್ಶಿಸುವ ವಸ್ತುವಲ್ಲ” ಎಂಬುದು ಸರಳ ಜೀವನ ನಡೆಸುತ್ತಿದ್ದ ನಾನಾ ಅವರ ಖಚಿತ ನಿಲುವಾಗಿತ್ತು.
ಪವಾರ್ ಅಗಲಿಕೆಯ ನಂತರ ನಾನಾ ಅನುಭವಿಸಿದ್ದ ತೀವ್ರ ದುಃಖ ಸಂತಾಪ ಸಭೆಯಲ್ಲಿ ಕಣ್ಣೀರು:
ಅಜಿತ್ ಪವಾರ್ ಅವರ ನಿಧನದ ಬಳಿಕ ನಡೆದ ಸಂತಾಪ ಸಭೆಯಲ್ಲಿ ಪಾಟೇಕರ್ ತೀವ್ರ ದುಃಖಿತರಾಗಿದ್ದರು. ಮಾತೇ ಹೊರಡದೆ ನಾಯಕನ ಭಾವಚಿತ್ರಕ್ಕೆ ಕೈಮುಗಿದು ಮೌನವಾಗಿ ವೇದಿಕೆಯಿಂದ ನಿರ್ಗಮಿಸಿದ್ದರು. ಅಪಘಾತದ ಒಂದು ತಿಂಗಳ ಬಳಿಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಮತ್ತು ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದರು. “ನಾವು ಗೆಳೆಯನನ್ನು ಕಳೆದುಕೊಂಡಿದ್ದೇವೆ, ಆದರೆ ಅವರ ಕುಟುಂಬದ ಮೇಲಿರುವ ದುಃಖ ಬೆಟ್ಟದಷ್ಟಿದೆ” ಎಂದು ಭಾವುಕರಾಗಿದ್ದರು.
ಫಾರ್ಮ್‌ಹೌಸ್‌ನ ಅಪರೂಪದ ಕ್ಷಣಗಳು:
ಪವಾರ್ ನಿಧನದ ಬೆನ್ನಲ್ಲೇ ನಾನಾ ಪಾಟೇಕರ್ ಅವರ ಪುತ್ರ ಮಲ್ಹಾರ್, ಪುಣೆ ಬಳಿಯ ತಮ್ಮ ತೋಟದ ಮನೆಯಲ್ಲಿ ಅಜಿತ್ ಪವಾರ್ ತಮ್ಮ ಕುಟುಂಬದೊಂದಿಗೆ ಅತ್ಯಂತ ಸರಳವಾಗಿ ಕಳೆದಿದ್ದ ಖಾಸಗಿ ಛಾಯಾಚಿತ್ರಗಳನ್ನು ಹಂಚಿಕೊಂಡು, “ಅವರು ನಮ್ಮ ಕುಟುಂಬದ ಸದಸ್ಯರೇ ಆಗಿದ್ದರು” ಎಂದು ಬರೆದುಕೊಂಡಿದ್ದರು. ಪರಸ್ಪರರನ್ನು ಅಪಾರವಾಗಿ ಗೌರವಿಸುತ್ತಿದ್ದ ಇಬ್ಬರೂ ಹಳೆಯ ಸ್ನೇಹಿತರು ಇಂದು ಇಹಲೋಕದಲ್ಲಿಲ್ಲ. ಯಾವುದೇ ರಾಜಕೀಯ ಲೆಕ್ಕಾಚಾರಗಳಿಲ್ಲದ, ಕ್ಯಾಮೆರಾಗಳ ಹಂಗಿಲ್ಲದ, ಬೆಟ್ಟಗಳ ಮಡಿಲಲ್ಲಿ ಶುರುವಾಗಿದ್ದ ಈ 50 ವರ್ಷಗಳ ನಿಸ್ವಾರ್ಥ ಗೆಳೆತನ ಮಹಾರಾಷ್ಟ್ರದ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯಲಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:32 pm, Thu, 8 October 26




