ನಂದನ್ ನಿಲೇಕಣಿ ನೇತೃತ್ವದ ಕಾರ್ಯಪಡೆಯಿಂದ ಪರೀಕ್ಷಾ ಪದ್ಧತಿ ಸುಧಾರಣೆಗೆ ಜನರಿಂದ ಸಲಹೆಗಳ ಆಹ್ವಾನ

ಭಾರತದ ಉನ್ನತ ಸ್ಪರ್ಧಾತ್ಮಕ ಮತ್ತು ಸಾರ್ವಜನಿಕ ಪರೀಕ್ಷಾ ವ್ಯವಸ್ಥೆಯನ್ನು ಬಲಪಡಿಸಲು ಹಾಗೂ ಪಾರದರ್ಶಕತೆ ತರಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಈ ನಿಟ್ಟಿನಲ್ಲಿ ರಚಿಸಲಾಗಿರುವ ನಂದನ್ ನಿಲೇಕಣಿ ನೇತೃತ್ವದ ಉನ್ನತ ಮಟ್ಟದ ಕಾರ್ಯಪಡೆಗೆ (HPTF) ಸಲಹೆಗಳನ್ನು ನೀಡುವಂತೆ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ಆಹ್ವಾನಿಸಿದೆ. ಪರೀಕ್ಷೆಗಳ ಸುರಕ್ಷತೆ, ಪ್ರಶ್ನೆಪತ್ರಿಕೆ ವಿನ್ಯಾಸ, ಕಂಪ್ಯೂಟರ್ ಆಧಾರಿತ ಪರೀಕ್ಷಾ ವಿಧಾನ ಹಾಗೂ ಅಕ್ರಮ ತಡೆಗಟ್ಟುವ ಕುರಿತು ಸಾರ್ವಜನಿಕರು ತಮ್ಮ ಸಲಹೆಗಳನ್ನು ಹಂಚಿಕೊಳ್ಳಬಹುದು.

ನಂದನ್ ನಿಲೇಕಣಿ ನೇತೃತ್ವದ ಕಾರ್ಯಪಡೆಯಿಂದ ಪರೀಕ್ಷಾ ಪದ್ಧತಿ ಸುಧಾರಣೆಗೆ ಜನರಿಂದ ಸಲಹೆಗಳ ಆಹ್ವಾನ
Nandan Nilekani
Image Credit source: x

Updated on: Aug 28, 2026 | 8:39 PM

ನವದೆಹಲಿ, ಆಗಸ್ಟ್ 28: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ (NEET Paper Leak) ಹಗರಣದ ಬಳಿಕ ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ (Nandan Nilekani) ನೇತೃತ್ವದ ಉನ್ನತ ಮಟ್ಟದ ಕಾರ್ಯಪಡೆಯನ್ನು ಕೇಂದ್ರ ಸರ್ಕಾರ ರಚಿಸಿತ್ತು. ಇದೀಗ ಈ ಕಾರ್ಯಪಡೆ ಭಾರತದ ಸಾರ್ವಜನಿಕ ಪರೀಕ್ಷಾ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಹಾಗೂ ತಜ್ಞರಿಂದ ಸಲಹೆ ಮತ್ತು ಅಭಿಪ್ರಾಯಗಳನ್ನು ಆಹ್ವಾನಿಸಿದೆ. ಸಾರ್ವಜನಿಕರು ಕೂಡ ಪರೀಕ್ಷಾ ಸುಧಾರಣೆಗೆ ಸಲಹೆಗಳನ್ನು ನೀಡಬಹುದು.

ಜುಲೈ ತಿಂಗಳಲ್ಲಿ ನಡೆದ ನೀಟ್-ಯುಜಿ (NEET-UG 2026) ಪ್ರಶ್ನೆಪತ್ರಿಕೆ ಸೋರಿಕೆ ವಿವಾದ, ನಂತರದ ಪ್ರತಿಭಟನೆಗಳು ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಮತ್ತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯಲ್ಲಿ (NTA) ಬದಲಾವಣೆಗಳು ನಡೆದ ಹಿನ್ನೆಲೆಯಲ್ಲಿ ಈ ಮಹತ್ವದ ಕ್ರಮ ಕೈಗೊಳ್ಳಲಾಗಿದೆ. ಈಗಿರುವ ಪರೀಕ್ಷಾ ವ್ಯವಸ್ಥೆಯನ್ನು ಪರಿಶೀಲಿಸಿ ಪರೀಕ್ಷೆಗಳ ವಿನ್ಯಾಸ, ನಿರ್ವಹಣೆ ಮತ್ತು ಸುರಕ್ಷತೆಯ ಕುರಿತು ಸಮಗ್ರ ಬದಲಾವಣೆಗಳನ್ನು ಶಿಫಾರಸು ಮಾಡಲು ಈ ಉನ್ನತ ಮಟ್ಟದ ಕಾರ್ಯಪಡೆಗೆ ಕೇಂದ್ರ ಸರ್ಕಾರ ಸೂಚಿಸಿದೆ.

ಯಾರು ಸಲಹೆ ನೀಡಬಹುದು?:

ವಿದ್ಯಾರ್ಥಿಗಳು, ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳು, ಪೋಷಕರು, ಶಿಕ್ಷಕರು, ಶೈಕ್ಷಣಿಕ ಸಂಸ್ಥೆಗಳು, ಪರೀಕ್ಷಾ ನಡೆಸುವ ಸಂಸ್ಥೆಗಳು, ತಂತ್ರಜ್ಞಾನ ವೃತ್ತಿಪರರು, ವಿಷಯ ತಜ್ಞರು ಮತ್ತು ಸಿವಿಲ್ ಸೊಸೈಟಿ ಸಂಸ್ಥೆಗಳು ಸೇರಿದಂತೆ ಎಲ್ಲಾ ಆಸಕ್ತರು ಹಾಗೂ ಅನುಭವಿಗಳು ಪರೀಕ್ಷಾ ಸುಧಾರಣೆಗೆ ತಮ್ಮ ಸಲಹೆಗಳನ್ನು ನೀಡಬಹುದು.

ಇದನ್ನೂ ಓದಿ: ಪರೀಕ್ಷಾ ವ್ಯವಸ್ಥೆ ಸುಧಾರಿಸಲು ನಂದನ್ ನಿಲೇಕಣಿ ಅಧ್ಯಕ್ಷತೆಯಲ್ಲಿ ಟ್ಯಾಸ್ಕ್ ಫೋರ್ಸ್ ರಚನೆ

ಪರೀಕ್ಷಾ ಅಕ್ರಮಗಳನ್ನು ತಡೆಯುವುದು, ಪತ್ತೆ ಹಚ್ಚುವುದು ಮತ್ತು ತಡೆಗಟ್ಟುವ ಕ್ರಮಗಳ ಬಗ್ಗೆ ಸಲಹೆ ನೀಡಬಹುದು. ಕಂಪ್ಯೂಟರ್ ಆಧಾರಿತ ಪರೀಕ್ಷೆಗಳನ್ನು (CBT) ಹೆಚ್ಚು ಸುರಕ್ಷಿತ ಮತ್ತು ಸುಲಭಗೊಳಿಸಲು ಹಾಗೂ ತಂತ್ರಜ್ಞಾನದ ಬಳಕೆಯನ್ನು ಹೆಚ್ಚಿಸಲು ಸಲಹೆ ನೀಡಬಹುದು. ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳ ಮೇಲಿನ ಒತ್ತಡ ಕಡಿಮೆ ಮಾಡುವುದು, ದೂರುಗಳ ಪರಿಹಾರ ಮತ್ತು ಪಾರದರ್ಶಕ ಸಂವಹನ ವ್ಯವಸ್ಥೆ ಕಲ್ಪಿಸುವುದರ ಕುರಿತು ಸಲಹೆ ನೀಡಬಹುದು.

ಇದನ್ನೂ ಓದಿ: ದೇಶದ ಪರೀಕ್ಷಾ ವ್ಯವಸ್ಥೆಯ ಸುಧಾರಣೆಗೆ ಸಮಿತಿ: ಕಾರ್ಯಪಡೆ ಮುನ್ನಡೆಸಲು ನೇಮಕಗೊಂಡ ನಂದನ್ ನಿಲೇಕಣಿ ಯಾರು?

ಸಲಹೆಗಳನ್ನು ಸಲ್ಲಿಸುವುದು ಹೇಗೆ?:

ನಂದನ್ ನಿಲೇಕಣಿ ನೇತೃತ್ವದ ಕಾರ್ಯಪಡೆ ನೀಡಿರುವ ಮಾಹಿತಿಯಂತೆ ಸಾರ್ವಜನಿಕರು ತಮ್ಮ ಸಲಹೆಗಳನ್ನು ಸೆಪ್ಟೆಂಬರ್ 13ರವರೆಗೆ ಸಲ್ಲಿಸಬಹುದು. ಇಂಗ್ಲಿಷ್, ಹಿಂದಿ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲೂ ಸಲಹೆಗಳನ್ನು ನೀಡಲು ಅವಕಾಶ ಕಲ್ಪಿಸಲಾಗಿದೆ.

ಸಲಹೆ ನೀಡಲು ವೆಬ್​ಸೈಟ್: https://examreforms-taskforce.dopt.gov.in

ಉಚಿತ ಕರೆ ಸಂಖ್ಯೆ (Toll-free): 1800-180-4747

ವಾಟ್ಸಾಪ್ (WhatsApp): +91 78270 42830 ಗೆ hptf” ಎಂದು ಮೆಸೇಜ್ ಕಳುಹಿಸಬಹುದು.

ಇಮೇಲ್: ExamReformsTaskforce@dopt.gov.inಗೆ ಇಮೇಲ್ ಸಂದೇಶ ಕಳುಹಿಸುವ ಮೂಲಕ ನಿಮ್ಮ ಸಲಹೆಗಳನ್ನು ನೀಡಬಹುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us