ನಾರ್ವೇಜಿಯನ್ ನೊಬೆಲ್ ಸಮಿತಿಯ ಉಪ ನಾಯಕ ಅಸ್ಲೆ ಟೋಜೆ (Asle Toje), ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ನೊಬೆಲ್ ಶಾಂತಿ ಪ್ರಶಸ್ತಿಯ (Nobel Peace Prize) ಪ್ರಮುಖ ಸ್ಪರ್ಧಿ ಎಂದು ಹೇಳುವ ಮಾಧ್ಯಮ ವರದಿಗಳನ್ನು ಗುರುವಾರ ತಳ್ಳಿಹಾಕಿದ್ದಾರೆ. ಭಾರತಕ್ಕೆ ಭೇಟಿ ನೀಡಿರುವ ಟೋಜೆ, ಪ್ರಧಾನಿ ನರೇಂದ್ರ ಮೋದಿ ನೊಬೆಲ್ ಶಾಂತಿ ಪ್ರಶಸ್ತಿಗೆ ಪ್ರಮುಖ ಸ್ಪರ್ಧಿ ಎಂದು ಹೇಳಿರುವುದಾಗಿ ಮಾಧ್ಯಮಗಳ ವರದಿ ಮತ್ತು ಟ್ವೀಟ್ ವೈರಲ್ ಆದ ಬೆನ್ನಲ್ಲೇ ಆವರು ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ. ವೈರಲ್ ಆಗಿರುವ ಟ್ವೀಟ್ ನ್ನು ಟೋಜೆ ನಕಲಿ ಸುದ್ದಿ ಎಂದು ತಳ್ಳಿ ಹಾಕಿದ್ದಾರೆ. ಎಎನ್ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಟೋಜೆ, ನಾನು ಗೌರವಾನ್ವಿತ ಸಮಿತಿಯ ಉಪ ನಾಯಕನಾಗಿ ಭಾರತಕ್ಕೆ ಬಂದಿಲ್ಲ, ಆದರೆ ಇಂಟರ್ ನ್ಯಾಷನಲ್ ಪೀಸ್ ಆಂಡ್ ಅಂಡರ್ಸ್ಟ್ಯಾಂಡಿಗ್ ನಿರ್ದೇಶಕರಾಗಿ ಮತ್ತು ಇಂಡಿಯಾ ಸೆಂಟರ್ ಫೌಂಡೇಶನ್ (ICF) ನ ಸ್ನೇಹಿತನಾಗಿ ಭಾರತದಲ್ಲಿದ್ದೇನೆ ಎಂದಿದ್ದಾರೆ.”ನಕಲಿ ಸುದ್ದಿ ಟ್ವೀಟ್ನ್ನು ನಕಲಿ ಸುದ್ದಿ ಎಂದು ಪರಿಗಣಿಸಬೇಕು” ಎಂದು ಅವರು ಒತ್ತಿ ಹೇಳಿದರು.
ಇಂಡಿಯಾ ಸೆಂಟರ್ ಫೌಂಡೇಶನ್ (ICF) ದೆಹಲಿ ಮೂಲದ ಲಾಭೋದ್ದೇಶವಿಲ್ಲದ ಸಂಸ್ಥೆಯಾಗಿದೆ.
ನಿಮ್ಮ ರಾಜಕೀಯ ಮತ್ತು ಅಭಿವೃದ್ಧಿಯ ಬಗ್ಗೆ ಮಾತನಾಡಲು ನಾನು ಭಾರತದಲ್ಲಿ ಇದ್ದೇನೆ. ನಾನು ನೊಬೆಲ್ ಸಮಿತಿಯ ಉಪನಾಯಕ. ನಕಲಿ ಸುದ್ದಿ ಟ್ವೀಟ್ ಆಗಿದ್ದು ನಾವು ಅದನ್ನು ನಕಲಿ ಸುದ್ದಿ ಎಂದು ಪರಿಗಣಿಸಬೇಕು. ಅದು ಫೇಕ್ ಎಂದಿದ್ದಾರೆ ಅಸ್ಲೆ ಟೋಜೆ. ನಾವು ಅದನ್ನು ಚರ್ಚಿಸಬಾರದು ಅಥವಾ ಅದನ್ನು ಮತ್ತಷ್ಟು ಸುದ್ದಿಯಲ್ಲಿರುವಂತೆ ಮಾಡಬಾರದು. ಆ ಟ್ವೀಟ್‌ನಲ್ಲಿ ಹೇಳಿದ್ದನ್ನು ನಾನು ಹೇಳಿಲ್ಲ. ಅದನ್ನು ನಾನು ಸ್ಪಷ್ಟವಾಗಿ ನಿರಾಕರಿಸುತ್ತೇನೆ ಎಂದಿದ್ದಾರೆ.
Why has @ANI not tweeted this statement by Asle Toje? ? pic.twitter.com/C3c6pUBdeI
— Mohammed Zubair (@zoo_bear) March 16, 2023
ಆದಾಗ್ಯೂ ‘ಇದು ಯುದ್ಧದ ಯುಗವಲ್ಲ’ ಎಂದು ಮೋದಿ ರಷ್ಯಾ ಅಧ್ಯಕ್ಷ ಪುಟಿನ್ ಅವರಿಗೆ ಹೇಳಿದ್ದನ್ನು ಟೋಜೆ ಶ್ಲಾಘಿಸಿದ್ದಾರೆ.’ಇದು ಯುದ್ಧದ ಯುಗವಲ್ಲ’ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆ ಭರವಸೆಯ ಅಭಿವ್ಯಕ್ತಿಯಾಗಿದೆ. ಇಂದು ನಾವು ವಿಶ್ವ ವಿವಾದಗಳನ್ನು ಹೀಗೆಯೇ ಪರಿಹರಿಸಬಾರದು ಎಂಬ ಸಂಕೇತವನ್ನು ಭಾರತ ನೀಡಿದೆ. ಪ್ರಧಾನಿ ಮೋದಿ ಅವರ ಹಿಂದೆ ವಿಶ್ವದ ಜನಸಂಖ್ಯೆಯ ಬಹುಪಾಲು ಜನರಿದ್ದಾರೆ ಎಂದು ಟೋಜೆ ಹೇಳಿರುವುದಾಗಿ ಎಎನ್ಐ ಉಲ್ಲೇಖಿಸಿದೆ.
ಇದನ್ನೂ ಓದಿ:ವಿಶ್ವಸಂಸ್ಥೆಯಲ್ಲಿ ಪರಿಸರ ಸಂರಕ್ಷಣೆ ಮಹತ್ವ ಸಾರಿದ ರಿಷಬ್ ಶೆಟ್ಟಿ: ಭಾಷಣ ಇಲ್ಲಿದೆ
ಭಾರತೀಯ ಸುದ್ದಿ ವಾಹಿನಿಗಳು ಟೋಜೆ ಮಾತನ್ನು ತಪ್ಪಾಗಿ ಉಲ್ಲೇಖಿಸಿವೆ ಎಂದು ಐಸಿಎಫ್ ಅಧ್ಯಕ್ಷ ವಿಭವ್ ಕೆ. ಉಪಾಧ್ಯಾಯ ಹೇಳಿದ್ದಾರೆ ಎಂದು ದಿ ಪ್ರಿಂಟ್ ವರದಿ ಮಾಡಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ