ಭವ್ಯ ಭವಿಷ್ಯದ ನಿರ್ಮಾಣಕ್ಕೆ ಸಂಶೋಧನೆ ಅತ್ಯಗತ್ಯ, ಭಾರತೀಯ ಬ್ರಾಂಡ್ ಸೃಷ್ಟಿಗೆ ಒತ್ತು: ಪ್ರಧಾನಿ ನರೇಂದ್ರ ಮೋದಿ

ಸಮಾವೇಶದಲ್ಲಿ ಮೇಕ್ ಇನ್ ಇಂಡಿಯಾ ಕುರಿತು ಮಾತನಾಡಿದ ಪ್ರಧಾನಿ, ಭಾರತೀಯ ಉತ್ಪನ್ನಗಳಿಗೆ ಜಾಗತಿಕ ಬೇಡಿಕೆ ಇದ್ದರೆ ಸಾಲದು, ಜೊತೆಗೆ ಜಾಗತಿಕ ವಲಯದಲ್ಲಿ ಅವುಗಳಿಗೆ ಮನ್ನಣೆಯೂ ಸಿಗಬೇಕು ಎಂದು ಹೇಳಿದರು.

ಭವ್ಯ ಭವಿಷ್ಯದ ನಿರ್ಮಾಣಕ್ಕೆ ಸಂಶೋಧನೆ ಅತ್ಯಗತ್ಯ, ಭಾರತೀಯ ಬ್ರಾಂಡ್ ಸೃಷ್ಟಿಗೆ ಒತ್ತು: ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
Follow us
TV9 Web
| Updated By: ganapathi bhat

Updated on:Apr 06, 2022 | 11:01 PM

ದೆಹಲಿ: ಸಂಶೋಧನೆಯಿಂದ  ಭವಿಷ್ಯದಲ್ಲಾಗುವ ಉಪಯೋಗಗಳ ಬಗ್ಗೆ ಮೊದಲೇ ಹೇಳಲಾಗುವುದಿಲ್ಲ. ಆದರೆ, ಸಂಶೋಧನೆಯು ಎಂದಿಗೂ ನಿರುಪಯುಕ್ತವಾಗುವುದಿಲ್ಲ. ನೂತನ ಆವಿಷ್ಕಾರ ನಡೆಸುತ್ತಿರುವ ಜಗತ್ತಿನ 50 ದೇಶಗಳ ಪಟ್ಟಿಯಲ್ಲಿ ಭಾರತವೂ ಒಂದಾಗಿದೆ. ಕೈಗಾರಿಕೆ ಹಾಗೂ ಇತರ ಸಂಸ್ಥೆಗಳೊಂದಿಗೆ ಸಹಕಾರ ನೀಡುವ ಕ್ರಮವು ದೇಶದಲ್ಲಿ ಬಲಗೊಳ್ಳುತ್ತಿದೆ. ಇದರಿಂದ ಹೊಸ ಆವಿಷ್ಕಾರಗಳನ್ನು ಸಾಧಿಸಲು ಸಾಧ್ಯವಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಮಾಪನಶಾಸ್ತ್ರ ಸಮಾವೇಶದ ಉದ್ಘಾಟನಾ ಕಾರ್ಯಕ್ರಮದಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮಾತನಾಡಿದರು. ರಾಷ್ಟ್ರೀಯ ಪರಮಾಣು ಕಾಲಮಾನ ಹಾಗೂ ಭಾರತೀಯ ನಿರ್ದೇಶಕ ದ್ರವ್ಯವನ್ನು ಪ್ರಧಾನಿ ನರೇಂದ್ರ ಮೋದಿ ದೇಶಕ್ಕೆ ಅರ್ಪಿಸಿದರು. ರಾಷ್ಟ್ರೀಯ ಪರಿಸರ ಮಾನದಂಡ ಪ್ರಯೋಗಾಲಯದ ಶಂಕುಸ್ಥಾಪನೆ ನೆರವೇರಿಸಿದರು.

ಸಮಾವೇಶದಲ್ಲಿ ಮೇಕ್ ಇನ್ ಇಂಡಿಯಾ ಕುರಿತು ಮಾತನಾಡಿದ ಪ್ರಧಾನಿ, ಭಾರತೀಯ ಉತ್ಪನ್ನಗಳಿಗೆ ಜಾಗತಿಕ ಬೇಡಿಕೆ ಇದ್ದರೆ ಸಾಲದು, ಜೊತೆಗೆ ಜಾಗತಿಕ ವಲಯದಲ್ಲಿ ಅವುಗಳಿಗೆ ಮನ್ನಣೆಯೂ ಸಿಗಬೇಕು ಎಂದು ಹೇಳಿದರು. ಭಾರತೀಯ ಉತ್ಪನ್ನಗಳ ಗುಣಮಟ್ಟದಿಂದ ನಾವು ವಿಶ್ವದಲ್ಲಿ ಭಾರತೀಯ ಬ್ರಾಂಡ್ ಸೃಷ್ಟಿಸಬೇಕು ಎಂದು ತಿಳಿಸಿದರು.

ಲಸಿಕೆಯನ್ನು ರಫ್ತು ಮಾಡುತ್ತೇವೆ ಕೊವಿಡ್-19 ಲಸಿಕೆಯ ಕುರಿತು ಪ್ರಧಾನಿ ಮಾತನಾಡಿದರು. ಭಾರತದಲ್ಲೇ ಕೊರೊನಾ ವ್ಯಾಕ್ಸಿನ್ ಉತ್ಪಾದನೆ ಆಗುತ್ತಿದೆ. ಮುಂದಿನ ದಿನಗಳಲ್ಲಿ ಲಸಿಕೆಯನ್ನು ರಫ್ತು ಕೂಡ ಮಾಡಲಿದೆ. ಭಾರತವು ಈವರೆಗೆ ವಿದೇಶಗಳ ಮೇಲೆ ಅವಲಂಬಿತವಾಗಿತ್ತು . ವಿದೇಶಿ ಉತ್ಪನ್ನಗಳ ಆಮದು ಹೆಚ್ಚಾಗಿತ್ತು. ಆದರೆ, ಈಗ ಕಾಲ ಬದಲಾಗಿದೆ. ಆಮದು ಕಡಿಮೆಯಾಗಿದೆ. ಭಾರತೀಯ ಉತ್ಪನ್ನಗಳ ರಫ್ತು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ಅಭಿಮಾನ ವ್ಯಕ್ತಪಡಿಸಿದರು. ಭಾರತ ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿ ಹೊಂದುತ್ತಿರುವ ದೇಶ. ಹಲವು ವಿಚಾರಗಳಲ್ಲಿ ಜಾಗತಿಕ ನಾಯಕನಾಗಿ ಬೆಳೆಯುತ್ತಿದೆ. ಇಡೀ ಜಗತ್ತಿಗೆ ಭಾರತ ಮಾದರಿ ರಾಷ್ಟ್ರವಾಗುತ್ತಿದೆ ಎಂದು ತಿಳಿಸಿದರು.

ಏನಿದು ಭಾರತೀಯ ನಿರ್ದೇಶಕ ದ್ರವ್ಯ? ರಾಷ್ಟ್ರೀಯ ಪರಮಾಣು ಕಾಲಮಾನವು ಭಾರತದ ಪ್ರಮಾಣಿತ ಸಮಯವನ್ನು (Standard Time) 2.8 ನ್ಯಾನೋ ಸೆಕೆಂಡುಗಳ ನಿಖರತೆಯಲ್ಲಿ ನೀಡುತ್ತದೆ. ಭಾರತೀಯ ನಿರ್ದೇಶಕ ದ್ರವ್ಯವು, ಪ್ರಯೋಗಾಲಯಗಳ ಪರೀಕ್ಷೆ ಹಾಗೂ ಅಳವಡಿಕೆಯ ಗುಣಮಟ್ಟದ ಬಗ್ಗೆ ಅಂತಾರಾಷ್ಟ್ರೀಯ ಮಾನದಂಡಗಳಿಗೆ ಸಮಾನವಾಗಿ ಭರವಸೆ ನೀಡುವಲ್ಲಿ ಕಾರ್ಯನಿರ್ವಹಿಸಲಿದೆ. ರಾಷ್ಟ್ರೀಯ ಪರಿಸರ ಮಾನದಂಡ ಪ್ರಯೋಗಾಲಯದ ಮೂಲಕ ದೇಶವು, ವಾತಾವರಣದ ಗಾಳಿ ಹಾಗೂ ಕೈಗಾರಿಕೆಯಿಂದ ಹೊರಸೂಸುವ ವಾಯುವಿನ ಗುಣಮಟ್ಟ ಪರೀಕ್ಷೆಯಲ್ಲಿ ಸ್ವಾವಲಂಬಿಯಾಗಲಿದೆ.

ದೇಶದ ಅಭಿವೃದ್ಧಿಗೆ ಮಾಪನಶಾಸ್ತ್ರ ಎಂಬ ಮುಖ್ಯ ವಿಷಯದ ಬಗ್ಗೆ ನಡೆಯುತ್ತಿರುವ ವಿಜ್ಞಾನ ಮತ್ತು ಕೈಗಾರಿಕಾ ಸಂಶೋಧನಾ ಸಮಿತಿ ಹಾಗೂ ರಾಷ್ಟ್ರೀಯ ಫಿಸಿಕಲ್ ಪ್ರಯೋಗಾಲಯ, ರಾಷ್ಟ್ರೀಯ ಮಾಪನಶಾಸ್ತ್ರ ಸಮಾವೇಶ ಆಯೋಜಿಸಿದೆ. ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

ಕೊರೊನಾ ಲಸಿಕೆಯನ್ನು ದೇಶಾದ್ಯಂತ ಹಂಚುತ್ತೇವೆ: ಪ್ರಧಾನಿ ನರೇಂದ್ರ ಮೋದಿ ಅಭಯ ಹಸ್ತ

Published On - 1:14 pm, Mon, 4 January 21