ಟಿವಿ9 ಕನ್ನಡ ಡಿಜಿಟಲ್ ಲೈವ್ ಬ್ಲಾಗ್ | 04-01-2021
LIVE NEWS & UPDATES
-
ಮಂಡ್ಯದಲ್ಲಿ ನಾನು ಸೋತ್ತಿದ್ರೂ ಅಲ್ಲಿನ ಜನ ನಮ್ಮನ್ನು ಕೈಬಿಟ್ಟಿಲ್ಲ- ನಿಖಿಲ್ ಕುಮಾರಸ್ವಾಮಿ
ಮಂಡ್ಯದಲ್ಲಿ ನಾನು ಸೋತ್ತಿದ್ರೂ ಅಲ್ಲಿನ ಜನ ನಮ್ಮನ್ನು ಕೈಬಿಟ್ಟಿಲ್ಲ ಎಂದು ನಟ ಹಾಗೂ ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ಜೆಡಿಎಸ್ ಪಕ್ಷದ ಯುವ ಘಟಕದ ಸಭೆಯಲ್ಲಿ ನಿಖಿಲ್ ಈ ಹೇಳಿಕೆ ನೀಡಿದ್ದಾರೆ. ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ ಗಮನದಲ್ಲಿಟ್ಟುಕೊಂಡು ಅವರು ಈ ಮಾತನ್ನು ಹೇಳಿದ್ದಾರೆ.
-
ಕೊಚ್ಚಿ-ಮಂಗಳೂರು ನೈಸರ್ಗಿಕ ಅನಿಲ ಕೊಳವೆ ನಾಳೆ ಲೋಕಾರ್ಪಣೆ
08:04 pm ಕೊಚ್ಚಿ-ಮಂಗಳೂರು ನೈಸರ್ಗಿಕ ಅನಿಲ ಕೊಳವೆ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಲೋಕಾರ್ಪಣೆ ಮಾಡಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಇದನ್ನು ಉದ್ಘಾಟನೆ ಮಾಡಲಿದ್ದಾರೆ.
-
PMC ಬ್ಯಾಂಕ್ ಪ್ರಕರಣದಲ್ಲಿ ಶಿವಸೇನಾ ನಾಯಕನ ಪತ್ನಿ ವಿಚಾರಣೆ
ಪಂಜಾಬ್ ಆ್ಯಂಡ್ ಮಹಾರಾಷ್ಟ್ರ ಬ್ಯಾಂಕ್ ಹಗರಣದಲ್ಲಿ ಶಿವಸೇನಾ ನಾಯಕ ಸಂಜಯ್ ರಾವತ್ ಪತ್ನಿ ವರ್ಷಾ ರಾವತ್ ಅವರನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಇಂದು ಪ್ರಶ್ನೆ ಮಾಡಿದ್ದಾರೆ.
ಚೆನ್ನೈ ಲಕ್ಸುರಿ ಹೋಟೆಲ್ನ 20 ಸಿಬ್ಬಂದಿಗೆ ಕೊರೊನಾ!
07:07 pm ಚೆನ್ನೈನ ಲೀಲಾ ಪ್ಯಾಲೇಸ್ ಹೋಟೆಲ್ನಲ್ಲಿರುವ 20 ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ಈ ಮೊದಲು ಐಟಿಸಿ ಗ್ರ್ಯಾಂಡ್ ಸಿಬ್ಬಂದಿಗೆ ಕೊರೊನಾ ವೈರಸ್ ಕಾಣಿಸಿಕೊಂಡಿತ್ತು.
ಕೊವಾಕ್ಸಿನ್ ಲಸಿಕೆ ಶೇಕಡಾ 200ರಷ್ಟು ಸುರಕ್ಷಿತವಾಗಿದೆ- ಸಿಎಂಡಿ ಕೃಷ್ಣ ಎಲ್ಲ
06:42 pm ಕೊವಾಕ್ಸಿನ್ ಲಸಿಕೆ ಶೇಕಡಾ 200ರಷ್ಟು ಸುರಕ್ಷಿತವಾಗಿದೆ ಎಂದು ಭಾರತ್ ಬಯೋಟೆಕ್ ಸಿಎಂಡಿ ಕೃಷ್ಣ ಎಲ್ಲ ತಿಳಿಸಿದ್ದಾರೆ. ಇಂದು ಸುದ್ದಿಗೋಷ್ಠಿ ನಡೆಸಿ ಅವರು ಈ ಮಾಹಿತಿ ನೀಡಿದ್ದಾರೆ. ಆಸ್ಟ್ರಾಜೆನಿಕ್ ಲಸಿಕೆಯಲ್ಲಿ ಪ್ಯಾರಸೆಟಮಲ್ ಇದೆ ಇದರಿಂದ ಅಡ್ಡಪರಿಣಾಮಗಳು ಹೆಚ್ಚಿವೆ ಎಂದು ಅವರು ತಿಳಿಸಿದ್ದಾರೆ.
ಮುಂದಿನ ಸಭೆಯಲ್ಲಿ ತೀರ್ಮಾನವಾಗುವ ನಿರೀಕ್ಷೆಯಿದೆ : ಸಚಿವ ನರೇಂದ್ರ ಸಿಂಗ್ ತೋಮರ್
6:57 pm ಇಂದಿನ ಚರ್ಚೆಯನ್ನು ಗಮನಿಸಿದರೆ ನಮ್ಮ ಮುಂದಿನ ಸಭೆಯಲ್ಲಿ ಅರ್ಥಪೂರ್ಣ ಚರ್ಚೆಯನ್ನು ನಡೆಸುತ್ತೇವೆ. ಜೊತೆಗೆ ಒಳ್ಳೆಯ ತೀರ್ಮಾನಕ್ಕೆ ಬರುತ್ತೇವೆ ಎಂಬ ನಿರೀಕ್ಷೆಯಲ್ಲಿದ್ದೇನೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ತಿಳಿಸಿದ್ದಾರೆ.
ಸರ್ಕಾರದಿಂದ ಹಣ ಪಡೆದಿಲ್ಲ: ಭಾರತ್ ಬಯೋಟೆಕ್
6:20 pm ಕೆಲವು ಸಂಸ್ಥೆಗಳು ಎರಡು ಲಸಿಕೆ ಅಭಿವೃದ್ಧಿಪಡಿಸಿಲ್ಲ. ಆದರೂ ಅಂತಹ ಸಂಸ್ಥೆಗಳನ್ನು ಹೊಗಳುವ ಕೆಲಸವಾಗುತ್ತಿದ್ದೆ. ಆದರೆ ನಾವು 16 ವಿವಿಧ ಲಸಿಕೆ ಅಭಿವೃದ್ಧಿ ಪಡಿಸಿದ್ದರು ನಮಗೆ ಒಳ್ಳೆಯ ಮಾತಿಲ್ಲ. ಯಾರು ಬೇಕಾದರೂ ಬಂದು ಮಾತನಾಡಬಹುದು. ನಮ್ಮ ಕಂಪನಿ ಸರ್ಕಾರದಿಂದ ಯಾವುದೇ ಹಣ ಪಡೆದಿಲ್ಲ. ಪ್ರಯೋಗಗಳನ್ನು ಸ್ವಂತ ಖರ್ಚಿನಲ್ಲಿಯೇ ನಡೆಸಿದ್ದೇವೆ ಎಂದು ಭಾರತ್ ಬಯೋಟೆಕ್ ಕಂಪನಿ ತಿಳಿಸಿದೆ.
ಪ್ರಯೋಗದಲ್ಲಿ ದೋಷವಿದ್ದರೆ ಕಂಪನಿ ಮುಚ್ಚುತ್ತೇವೆ: ಭಾರತ್ ಬಯೋಟೆಕ್
6:12 pm ನಮ್ಮ ವಿರುದ್ಧ ಸುಖಾಸುಮ್ಮನೆ ಆರೋಪ ಮಾಡಿದರೆ ಸಹಿಸಲ್ಲ. ಭಾರತಕ್ಕೆ ಒಳಿತು ಮಾಡಬೇಕು ಎಂದು ಕೊಂಡಿದ್ದೇವೆ. ಕೆಲವು ಕಂಪನಿಗಳು ಲಸಿಕೆಯನ್ನು ನೀರಿಗೆ ಹೋಲಿಸಿವೆ. ಇದು ನನಗೆ ಸಾಕಷ್ಟು ನೋವು ತಂದಿದೆ. ಸ್ವಾರ್ಥದಿಂದ ಕೆಲವರು ಟೀಕೆ ಮಾಡಿದ್ದಾರೆ. ಪ್ರಯೋಗದಲ್ಲಿ ದೋಷವಿದ್ದರೆ ಕಂಪನಿ ಮುಚ್ಚುತ್ತೇವೆ ಎಂದು ಭಾರತ್ ಬಯೋಟೆಕ್ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಎಲ್ಲ ತಿಳಿಸಿದ್ದಾರೆ.
ವಿಧಾನ ಪರಿಷತ್ ಗದ್ದಲಕ್ಕೆ ಸದನ ಸಮಿತಿ ರಚನೆ
6:05 pm ಡಿಸೆಂಬರ್ 15 ರಂದು ವಿಧಾನ ಪರಿಷತ್ನಲ್ಲಿ ನಡೆದ ಅಹಿತಕರ ಘಟನೆ ಬಗ್ಗೆ ವರದಿ ನೀಡಲು ಸದನ ಸಮಿತಿ ರಚನೆಯಾಗಿದೆ. 20 ದಿನಗಳಲ್ಲಿ ವರದಿ ಸಲ್ಲಿಸುವಂತೆ ಸದನ ಸಮಿತಿಗೆ ಸೂಚನೆ ನೀಡಿದ್ದು, ಎಂಎಲ್ಸಿ ಮರಿತಿಬ್ಬೇಗೌಡರನ್ನು ಸದನ ಸಮಿತಿಯ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಹೆಚ್.ವಿಶ್ವನಾಥ್, ಎಸ್.ವಿ. ಸಂಕನೂರ್, ಆರ್.ಬಿ. ತಿಮ್ಮಾಪುರ ಹಾಗೂ ಬಿ.ಕೆ.ಹರಿಪ್ರಸಾದ್ ಸಮಿತಿಗೆ ಸದಸ್ಯರಾಗಿ ನೇಮಿಸಿಲಾಗಿದೆ.
ರೈತ ಸಂಘಟನೆಗಳು- ಕೇಂದ್ರ ಸರ್ಕಾರದ ಸಭೆ ವಿಫಲ
5:58 pm ದೆಹಲಿಯ ವಿಜ್ಞಾನ ಭವನದಲ್ಲಿ ಕೃಷಿ ಕಾಯ್ದೆ ಕುರಿತು ನಡೆಸಿದ 7ನೇ ಸುತ್ತಿನ ಸಭೆ ಮತ್ತೆ ವಿಫಲವಾಗಿದೆ. ಜನವರಿ 8 ರಂದು ಮತ್ತೆ ಸಂಧಾನ ಸಭೆ ನಡೆಸುವ ಸಾಧ್ಯತೆ ಹೆಚ್ಚಿದೆ.
ಯಾರಿಗಿಂತ ಕಡಿಮೆಯಿಲ್ಲ ಎಂದ ಭಾರತ್ ಬಯೋಟೆಕ್
5:47 pm ಅಮೇರಿಕಾದಲ್ಲಿ ಉತ್ಪಾದಿಸಲಾಗುವ ತಂತ್ರಜ್ಞಾನ ನಮ್ಮಲ್ಲಿದೆ. ಪ್ರಪಂಚದ ಯಾವುದೇ ಲಸಿಕಾ ಸಂಸ್ಥೆಗಳಿಗಿಂತ ನಾವು ಕಡಿಮೆ ಇಲ್ಲ. ಫೈಝರ್ಗಿಂತ ನಾವು ಹಿಂದಿಲ್ಲ. ಎಲ್ಲಾ ದಾಖಲೆಗಳನ್ನು ಪಾರದರ್ಶಕವಾಗಿ ತಜ್ಞರ ಸಮಿತಿ ಮುಂದೆ ಇಟ್ಟಿದ್ದೇವೆ. ಜೊತೆಗೆ ಐದು ಲೇಖನಗಳನ್ನು ಪ್ರಕಟಿಸಿದ್ದೇವೆ ಎಂದು ಭಾರತ್ ಬಯೋಟೆಕ್ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಎಲ್ಲಾ ಅಭಿಪ್ರಾಯಪಟ್ಟಿದ್ದಾರೆ.
ಲಸಿಕಾ ಕ್ಷೇತ್ರದಲ್ಲಿ ನಮ್ಮ ಕಂಪನಿಗೆ ಅನುಭವವಿದೆ: ಕೃಷ್ಣ ಎಲ್ಲಾ
5:42 pm ನಾವು ಈವರೆಗೆ 16 ಲಸಿಕೆಗಳನ್ನು ಅಭಿವೃದ್ಧಿ ಮಾಡಿದ್ದೇವೆ. 123 ದೇಶಗಳನ್ನು ನಾವು ತಲುಪಿದ್ದೇವೆ. ಆದರೆ ಭಾರತದಲ್ಲಿ ಮಾತ್ರ ಲಸಿಕೆ ಪ್ರಯೋಗ ಮಾಡಿಲ್ಲ. ಲಸಿಕೆ ಕ್ಷೇತ್ರದಲ್ಲಿ ನಮ್ಮ ಕಂಪನಿಗೆ ಹೆಚ್ಚು ಅನುಭವ ಇದೆ ಎಂದು ಭಾರತ್ ಬಯೋಟೆಕ್ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಎಲ್ಲಾ ತಿಳಿಸಿದರು.
ಭಾರತ್ ಬಯೋಟೆಕ್ನಿಂದ ಸುದ್ದಿಗೋಷ್ಠಿ ಆರಂಭ
5:36 pm ಲಸಿಕೆ ಅಭಿವೃದ್ಧಿಪಡಿಸಿದ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿ, ಪ್ರಯೋಗದಲ್ಲಿ ಭಾಗಿಯಾಗಿದ್ದ ಆರೋಗ್ಯ ಕಾರ್ಯಕರ್ತರಿಗೆ ಭಾರತ್ ಬಯೋಟೆಕ್ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಎಲ್ಲಾ ಧನ್ಯವಾದ ತಿಳಿಸಿದರು.
ಜೂಜು ಅಡ್ಡೆ ಮೇಲೆ ಡಿವೈಎಸ್ಪಿ ದಾಳಿ: 10 ಮಂದಿ ಅರೆಸ್ಟ್
5:26 pm ಸುರಪುರ ಡಿವೈಎಸ್ಪಿ ವೆಂಕಟೇಶ್ ಉಗಿಬಂಡಿ ನೇತೃತ್ವದಲ್ಲಿ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹುಂಡೇಕಲ್ ಬಳಿಯ ಜೂಜು ಅಡ್ಡೆ ಮೇಲೆ ದಾಳಿ ನಡೆಸಿದ್ದು, 1.5 ಲಕ್ಷ ರೂ. ಹಣ ಜಪ್ತಿ ಮಾಡಿದ್ದಾರೆ. ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾಸನ ಜಿಲ್ಲೆಗೆ ಬಿಜೆಪಿ ಸರ್ಕಾರ ಅನ್ಯಾಯ ಮಾಡುತ್ತಿದೆ: ಕೆ.ಎಂ. ಶಿವಲಿಂಗೇಗೌಡ
5:19 pm ಹಿಂದೆ ಇದ್ದಂತಹ ಸರ್ಕಾರಗಳು ಭದ್ರ ಮೇಲ್ದಂಡೆಯಿಂದ ನೀರು ಕೊಡಲು ಒಪ್ಪಿದ್ದವು. ವಿಶ್ವೇಶ್ವರಯ್ಯ ಜಲ ನಿಗಮದಲ್ಲಿ ಭದ್ರ ಮೇಲ್ದಂಡೆ ಯೋಜನೆಯಲ್ಲಿ ಅರಸೀಕರೆಗೆ ನೀರು ಒದಗಿಸಲು ಒಪ್ಪಲಾಗಿತ್ತು. ಸದನದಲ್ಲೂ ಕೂಡ ಈ ಬಗ್ಗೆ ನನಗೆ ಸಚಿವರು ಭರವಸೆ ನೀಡಿದ್ದರು. ಕುಮಾರಸ್ವಾಮಿ ಸರ್ಕಾರದಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲು ಮುಂದಾಗಿದ್ದೆವು. ಈಗಿನ ಬಿಜೆಪಿ ಸರ್ಕಾರ ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಆದರೆ ಯೋಜನೆಯ ದಿಕ್ಕು ತಪ್ಪಿಸಿ ಅನುಮೋದನೆ ನೀಡುವ ಮೂಲಕ ನೀರಾವರಿ ಯೋಜನೆಯಲ್ಲಿ ಹಾಸನ ಜಿಲ್ಲೆಗೆ ಬಿಜೆಪಿ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ಅರಸೀಕೆರೆ ಜೆಡಿಎಸ್ ಶಾಸಕ ಕೆ.ಎಂ ಶಿವಲಿಂಗೇಗೌಡ ತಿಳಿಸಿದ್ದಾರೆ.
ನಾಲ್ವರು ಶಾಲಾ ಮಕ್ಕಳಿಗೆ ಸೋಂಕು ದೃಢ
5:09 pm ವಿಜಯಪುರದಲ್ಲಿ 2021ರ ಜನವರಿ 1 ರಿಂದ 3ರ ವರೆಗೆ ಒಟ್ಟು 1.224 ವಿದ್ಯಾರ್ಥಿಗಳ ಕೊರೊನಾ ಟೆಸ್ಟ್ ಮಾಡಲಾಗಿದ್ದು, 4 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಅದೇ ರೀತಿ 545 ಶಿಕ್ಷಕರು, ಉಪನ್ಯಾಸಕರ ಕೊರೊನಾ ಟೆಸ್ಟ್ ಮಾಡಲಾಗಿತ್ತು. ಆದರೆ ಯಾವುದೇ ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ. ಪಾಸಿಟಿವ್ ದೃಢವಾದ ವಿದ್ಯಾರ್ಥಿಗಳನ್ನು ಹೋಂ ಐಸೋಲೇಟ್ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾಕ್ಟರ್ ಮಹೇಂದ್ರ ಕಾಪಸೆ ತಿಳಿಸಿದ್ದಾರೆ.
ವರುಣನ ಅಬ್ಬರಕ್ಕೆ ಜನರ ಪರದಾಟ
4:59 pm ಬೆಳಗಾವಿ ಜಿಲ್ಲೆಯ ಕೆಲವೆಡೆ ಮಳೆ ಜೋರಾಗಿದ್ದು, ಬೈಲಹೊಂಗಲ ತಾಲೂಕಿನ ಸಂಪಗಾಂವ ಗ್ರಾಮದಲ್ಲಿ ವರುಣನ ಅಬ್ಬರಕ್ಕೆ ಜನರು ಪರದಾಟ ಪಡುತ್ತಿದ್ದಾರೆ.
ಪಕ್ಷಾತೀತವಾಗಿ ಹೋರಾಡುತ್ತೇವೆ ಎಂದ ಕೆ.ಎಸ್. ಈಶ್ವರಪ್ಪ
4:52 pm ಹಿಂದೆಯೇ ಎಸ್ಟಿ ಮೀಸಲಾತಿ ನೀಡಿದ್ದರೆ ನಾವು ಡಾಕ್ಟರ್, ಇಂಜಿನಿಯರ್ ಆಗಿರುತ್ತಿದ್ದೆವು. ಕುರುಬ ಸಮಾಜದಲ್ಲಿ ಬಡತನವಿದೆ. ಪಕ್ಷಾತೀತವಾಗಿ ಎಸ್ಟಿ ಮೀಸಲಾತಿಗಾಗಿ ಹೋರಾಡುತ್ತೇವೆ. ಚುನಾವಣೆ ಬಂದಾಗ ನಾನು ಸಿದ್ದರಾಮಯ್ಯ ಬಾಯಿಗೆ ಬಂದಾಗ ಬೈಯ್ದಾಡಿಕೊಳ್ಳುತ್ತೇವೆ. ಸ್ವಾಮಿಗಳು ಹೇಳುವವರೆಗೂ ನಾವು ಹೋರಾಟ ನಡೆಸುತ್ತೇವೆ. ವಾಲ್ಮೀಕಿ, ಕೋಲಿ ಸಮಾಜ ಸೇರಿದಂತೆ ಅರ್ಹತೆ ಇರುವವರೆಗೆ ಎಸ್ಟಿ ಮೀಸಲಾತಿ ಕೊಡಿ ಎಂದು ಕುರುಬ ಎಸ್ಟಿ ಮೀಸಲಾತಿ ಸಮಾವೇಶದಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.
ಕಾರಾಗೃಹದಿಂದ ಕೈದಿ ಪರಾರಿ
4:40 pm ಕಲಬುರಗಿ ಜಿಲ್ಲಾ ಕೇಂದ್ರ ಕಾರಾಗೃಹದಿಂದ ಹೊರಗೆ ಕೃಷಿ ಕೆಲಸಕ್ಕೆ ಕಳುಹಿಸಿದ್ದಾಗ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ರಮೇಶ್ ವಡ್ಡರ್ ಪರಾರಿಯಾಗಿದ್ದಾನೆ. ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ರಾಷ್ಟ್ರೀಯ ರಜಾ ದಿನವೆಂದು ಘೋಷಿಸಲು ಕೇಂದ್ರಕ್ಕೆ ಪತ್ರ
4:33 pm ಸ್ವಾತಂತ್ರ್ಯದ ನಂತರ ನೇತಾಜಿ ಸುಭಾಷ್ ಚಂದ್ರ ಬೋಸ್‌ಗೆ ಏನನ್ನೂ ಸಮರ್ಪಿಸಿಲ್ಲ. ಹೀಗಾಗಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ದಿನವಾದ ಜನವರಿ 23 ರಂದು ರಾಷ್ಟ್ರೀಯ ರಜಾ ದಿನವೆಂದು ಘೋಷಿಸಲು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಇದು ನನ್ನ ಬೇಡಿಕೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
ಕಾಡಿನಿಂದ ನಾಡಿಗೆ ಬಂದ ಆನೆಗಳು
4:27 pm ಮೈಸೂರಿನ ಪಿರಿಯಾಪಟ್ಟಣ ತಾಲೂಕಿನ ಚಿಕ್ಕ ಕಮರವಳ್ಳಿ ಗ್ರಾಮದಲ್ಲಿ 4 ಆನೆಗಳು ಬೀಡುಬಿಟ್ಟಿದ್ದು, ಅವುಗಳನ್ನು ನೋಡಲು ಜನರು ಮುಗಿಬಿದ್ದಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿಯಿಂದ ಆನೆಗಳನ್ನು ಕಾಡಿಗೆ ಕಳುಹಿಸಲು ಕಾರ್ಯಾಚರಣೆ ನಡೆಯುತ್ತಿದೆ.
ಬಿಜೆಪಿ ಶಾಸಕರ ಜೊತೆ ಮುಂದುವರೆದ ಸಿಎಂ ಬಿಎಸ್‌ವೈ ಸಭೆ
4:13 pm ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಹುಬ್ಬಳ್ಳಿ-ಧಾರವಾಡ ಜಿಲ್ಲೆಗಳ ಒಟ್ಟು 35 ಶಾಸಕರ ಜೊತೆ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನಡೆಯುತ್ತಿರುವ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರ ಸಭೆ ಮುಂದುವರೆದಿದೆ.
ಭಾರತದಲ್ಲಿ ಹೊಸ ಪ್ರಭೇದದ 38 ಕೇಸ್ ಪತ್ತೆ
4:07 pm ಭಾರತದಲ್ಲಿಂದು ಹೊಸ ಪ್ರಭೇದದ 38 ಕೇಸ್ ಪತ್ತೆಯಾಗಿದ್ದು, ಕೇಂದ್ರ ಆರೋಗ್ಯ ಸಚಿವಾಲಯದಿಂದ ಮಾಹಿತಿ ತಿಳಿದಿದೆ. ಬೆಂಗಳೂರಿನಿಂದ 10 ಕೇಸ್ ಹಾಗೂ ದೆಹಲಿಯಲ್ಲಿ 19, ಕೊಲ್ಕತ್ತಾದಲ್ಲಿ 1, ಪುಣೆಯಲ್ಲಿ 5, ಹೈದರಾಬಾದ್ನಲ್ಲಿ 3 ಪ್ರಕರಣಗಳು ಪತ್ತೆಯಾಗಿದೆ.
ಪೊಲೀಸ್ ಭದ್ರತೆ ನೀಡಲು ಗೃಹ ಸಚಿವರಿಗೆ ಮನವಿ
3:58 pm ಫೆಬ್ರವರಿ 7 ರಂದು ನಡೆಯಲಿರುವ ಎಸ್.ಟಿ ಮೀಸಲಾತಿ ಹೋರಾಟ ಸಮಾವೇಶಕ್ಕೆ ಲಕ್ಷಾಂತರ ಜನರು ಭಾಗಿಯಾಗುವ ನಿರೀಕ್ಷೆಯಿದ್ದು, ಪೊಲೀಸ್ ಭದ್ರತೆ ನೀಡುವಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿರವರಿಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಮನವಿ ಅರ್ಪಿಸಿದ್ದಾರೆ.
ಕೋಳಿ ಸಾಕಾಣಿಕೆ ರೈತರಿಂದ ಪ್ರತಿಭಟನೆ
3:44 pm ಕಾರ್ಪೋರೆಟ್ ಕಂಪನಿಗಳಿಂದ ಹಾಗೂ ಕೆಲವು ಖಾಸಗಿ ಕಂಪನಿಗಳಿಂದಾದ ವಂಚನೆಯನ್ನು ವಿರೋಧಿಸಿ ಕೋಳಿ ಸಾಗಾಣಿಕೆಯ ರೈತರು ಬೆಂಗಳೂರಿನ ಹೆಬ್ಬಾಳದ ಪಶುಪಾಲನೆ ಭವನದ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಕಂಪನಿಗಳು ರೈತರನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ರೈತರ ಶ್ರಮಕ್ಕೆ ತಕ್ಕಂತೆ ಹಣವನ್ನು ನೀಡುತ್ತಿಲ್ಲ. ಹೀಗಿದ್ದು, ಕಂಪನಿಗಳ ವಿರುದ್ಧ ಸರ್ಕಾರ ಕೂಡಾ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ, ಪಶು ಸಂಗೋಪನಾ ಇಲಾಖೆಯಿಂದ ಬರುವ ಸೇವೆಗಳನ್ನು ನೇರವಾಗಿ ರೈತರಿಗೆ ಕೊಡದೇ ಕೋಳಿ ಉದ್ಯಮ ಮಾಡುವ ಖಾಸಗಿ ಕಂಪನಿಗಳಿಗೆ ನೀಡುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬ್ರಿಟನ್ನಲ್ಲಿ ಕೊರೊನಾ ಲಸಿಕೆ ನೀಡಿಕೆ ಆರಂಭ
3:32 pm ಬ್ರಿಟನ್ನಲ್ಲಿ ಆಕ್ಸ್‌ಫರ್ಡ್ ವಿವಿ ಮತ್ತು ಅಸ್ಟ್ರಾಜನಿಕ್ ಕಂಪನಿಯ ಲಸಿಕೆ ನೀಡಿಕೆ ಆರಂಭಿಸಿದ್ದು, ಇಂಗ್ಲೆಂಡ್ನ ಆಸ್ಪತ್ರೆಯಲ್ಲಿ 82 ವರ್ಷದ ಬ್ರಿಯಾನ್ ಪಿಂಕರ್ಗೆ ಮೊದಲು ಕೊರೊನಾ ಲಸಿಕೆ ನೀಡಲಾಗಿದೆ.
ಕಾಡು ಬಿಟ್ಟು ನಾಡಿಗೆ ಬಂದ ಒಂಟಿ ಸಲಗ
3:27 pm ಕೊಡಗಿನ ಸೋಮವಾರಪೇಟೆ ತಾಲೂಕಿನ ಕಣಿವೆ ಗ್ರಾಮದ ನದಿ ದಡದಲ್ಲಿ ರಾಜರೋಷವಾಗಿ ಓಡಾಡಿದ ಆನೆಯನ್ನು ಕಂಡ ಸ್ಥಳೀಯರು ಆತಂಕಗೊಂಡಿದ್ದು, ಕಾಡಿಗಟ್ಟುವಂತೆ ಅರಣ್ಯ ಇಲಾಖೆಗೆ ಒತ್ತಾಯಿಸುತ್ತಿದ್ದಾರೆ.
ಸ್ಕೂಲ್ ಮುಂದೆ ಜಮಾಯಿಸಿದ ಪೋಷಕರು
3:22 pm ಮಕ್ಕಳು ಶಾಲಾ ಶುಲ್ಕ ಕಟ್ಟದ ಕಾರಣ ಯಶವಂತಪುರದ ನ್ಯಾಷನಲ್ ಪಬ್ಲಿಕ್ ಸ್ಕೂಲ್, ಸುಮಾರು 500 ಮಕ್ಕಳ ಆನ್ಲೈನ್ ಕ್ಲಾಸ್ ಐಡಿಯನ್ನು ಬ್ಲಾಕ್ ಮಾಡಿದೆ. ಅಲ್ಲದೇ ಸೆಕೆಂಡ್ ಇನ್ಸ್ಟಾಲ್ ಕಟ್ಟಿ ಅಂತಾ ಶಾಲೆ ಮಂಡಳಿ ಒತ್ತಡ ಹಾಕಿದೆ. ಈ ಕಾರಣ ಶೇ.50ರಷ್ಟು ಫೀಸ್ ಮಾತ್ರ ತೆಗೆದುಕೊಳ್ಳಿ ಎಂದು ಪೋಷಕರು ಬೇಡಿಕೆ ಇಟ್ಟಿದ್ದಾರೆ.
ಮೃತಪಟ್ಟ ರೈತರಿಗೆ ಮೌನಾಚರಣೆ
3:07 pm ಪ್ರತಿಭಟನೆಯ ಸಂದರ್ಭದಲ್ಲಿ ಮೃತಪಟ್ಟ ರೈತರಿಗೆ ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ತೋಮರ್, ಪಿಯೂಷ್ ಗೋಯಲ್ ಮತ್ತು ಸೋಮ್ ಪ್ರಕಾಶ್ ಸೇರಿದಂತೆ ಸರ್ಕಾರಿ ಅಧಿಕಾರಿಗಳು ಮತ್ತು ರೈತರ ಪ್ರತಿನಿಧಿಗಳು ಎರಡು ನಿಮಿಷಗಳ ಕಾಲ ಮೌನಾಚರಣೆ ಮಾಡಿದರು.
ದೇಶ ಮತ್ತು ರಾಜ್ಯದ ಬಗ್ಗೆ ವಿಚಾರಿಸಿದ್ದಾರೆ: ಬಸವರಾಜ್ ಬೊಮ್ಮಾಯಿ
3:01 pm ಸದಾನಂದ ಗೌಡರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಸ್ವಲ್ಪ ದಿನ ರೆಸ್ಟ್ ಮಾಡುವಂತೆ ವೈದ್ಯರು ತಿಳಿಸಿದ್ದಾರಷ್ಟೆ. ನಮ್ಮ ಜೊತೆ 10-15 ನಿಮಿಷ ಚೆನ್ನಾಗಿ ಮಾತನಾಡಿದ ಜೊತೆಗೆ ದೇಶ ಹಾಗೂ ರಾಜ್ಯದ ಬಗ್ಗೆ ವಿಚಾರಿಸಿದರು ಎಂದು ಆರೋಗ್ಯ ವಿಚಾರಿಸಿದ ಬಳಿಕ ಬಸವರಾಜ್ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ಸರ್ಕಾರಕ್ಕೆ ಬುದ್ದಿ, ತಲೆ ಎರಡೂ ಇಲ್ಲ: ವಾಟಾಳ್ ನಾಗರಾಜ್
2:50 pm ರಾಜ್ಯ ಸರ್ಕಾರ ಗ್ರಾಮ ಪಂಚಾಯತಿ ಸದಸ್ಯರನ್ನು ಪೌರಕಾರ್ಮಿಕರಿಗಿಂತ ಕೀಳಾಗಿ ನೋಡಲಾಗುತ್ತಿದೆ. ಬಿಜೆಪಿಯಲ್ಲಿ ಎಲ್ಲರೂ ದಿಕ್ಕು ತಪ್ಪು ಹೋಗಿದ್ದಾರೆ. ಯಡಿಯೂರಪ್ಪರವರ ಸರ್ಕಾರ, ಅತಿ ಹೀನಾಯಗೊಂಡ ಸರ್ಕಾರ. ಯಡಿಯೂರಪ್ಪ ಹುಚ್ಚಾಸ್ಪತ್ರೆಯ ಸ್ಪೆಷಲ್ ವಾರ್ಡ್ನಲ್ಲಿ ಇರಬೇಕಾಗಿತ್ತು. ಈ ಸರ್ಕಾರಕ್ಕೆ ಬುದ್ದಿ ಮತ್ತು ತಲೆ ಎರಡೂ ಇಲ್ಲ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ರಾಮನಗರದಲ್ಲಿ ಹೇಳಿಕೆ ನೀಡಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದ ಶಾಸಕರಿಗೆ ಭರವಸೆ ನೀಡಿದ ಸಿಎಂ
2:43 pm ಕಲ್ಯಾಣ ಕರ್ನಾಟಕ ಭಾಗದ ಶಾಸಕರ ಜೊತೆ ನಡೆಸಿದ ಸಭೆಯಲ್ಲಿ ರಸ್ತೆ ಮತ್ತು ಕುಡಿಯುವ ನೀರು ಕಾಮಗಾರಿಗೆ ಅನುದಾನಕ್ಕೆ ಒತ್ತಾಯಿಸಿದ ಶಾಸಕರಿಗೆ ರಾಜ್ಯದಲ್ಲಿ ಈಗಷ್ಟೇ ಆರ್ಥಿಕ ಸ್ಥಿತಿಗತಿ ಉತ್ತಮಗೊಳ್ಳುತ್ತಿದೆ. ಆರ್ಥಿಕ ಪರಿಸ್ಥಿತಿಯನ್ನು ನೋಡಿಕೊಂಡು ಅನುದಾನವನ್ನು ಬಿಡುಗಡೆ ಮಾಡುತ್ತೇವೆಂದು ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ಸೌರವ್ ಗಂಗೂಲಿಯನ್ನು ಭೇಟಿ ಮಾಡಿದ ಅನುರಾಗ್ ಠಾಕೂರ್
2:08 pm ಬಿಸಿಸಿಐ ಅಧ್ಯಕ್ಷ ಮತ್ತು ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿಯನ್ನು ದಾಖಲಿಸಿರುವ ವುಡ್ಲ್ಯಾಂಡ್ಸ್ ಆಸ್ಪತ್ರೆಗೆ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್ ಆಗಮಿಸಿದ್ದಾರೆ.
ರೈತ ಸಂಘಟನೆಗಳು – ಕೇಂದ್ರ ಸರ್ಕಾರದ ಸಭೆ ಆರಂಭ
2:22 pm ರೈತ ಸಂಘಟನೆಗಳು ಮತ್ತು ಕೇಂದ್ರ ಸರ್ಕಾರದ ನಡುವೆ ಮಾತುಕತೆ ಆರಂಭವಾಗಿದ್ದು, ದೆಹಲಿಯ ವಿಜ್ಞಾನ ಭವನದಲ್ಲಿ ಚರ್ಚೆ ನಡೆಯುತ್ತಿದೆ. ಕೃಷಿ ತಿದ್ದುಪಡಿ ಕಾಯ್ದೆ ರದ್ದತಿಗೆ ರೈತರು ಪಟ್ಟು ಹಿಡಿದ ಕಾರಣ ಕೇಂದ್ರದ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಸಮ್ಮುಖದಲ್ಲಿ ಏಳನೇ ಸುತ್ತಿನ ಮಾತುಕತೆ ನಡೆಯುತ್ತಿದೆ.
ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿದ ಕರುನಾಡ ಚಕ್ರವರ್ತಿ
2:35 pm ಬೆಂಗಳೂರಿನ ಗಾಳಿ ಆಂಜನೇಯ ದೇವಸ್ಥಾನಕ್ಕೆ ಕಿಚ್ಚ ಸುದೀಪ್ ಭೇಟಿ ನೀಡಿದ್ದಾರೆ. ಸುದೀಪ್ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಾಡದೇವಿಯ ದರ್ಶನ ಪಡೆದ ನಂತರ ಬೆಂಗಳೂರಿನ ಆಂಜನೇಯನ ದರ್ಶನ ಪಡೆದಿದ್ದಾರೆ.
ಸದಾನಂದ ಗೌಡರ ಆರೋಗ್ಯ ವಿಚಾರಿಸಲು ತೆರಳಿದ ಸಚಿವರ ಟೀಮ್
2:29 pm ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರ ಆರೋಗ್ಯ ಏರುಪೇರಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಆರೋಗ್ಯ ವಿಚಾರಿಸಲು ಸಚಿವರಾದ ಬಸವರಾಜ ಬೊಮ್ಮಾಯಿ, ಬಿ.ಸಿ.ಪಾಟೀಲ್, ಭೈರತಿ ಬಸವರಾಜ್, ಎಸ್.ಟಿ.ಸೋಮಶೇಖರ್ ಡಾ.ಕೆ.ಸುಧಾಕರ್, ಕೆ.ಗೋಪಾಲಯ್ಯ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ನಕಲಿ ಐಡಿಗಳನ್ನು ಜಪ್ತಿ ಮಾಡಿದ ಪೊಲೀಸರು
1:31 pm ಸರ್ಕಾರಿ ನಕಲಿ ಮುದ್ರೆ ಬಳಸಿ ಐಡಿಗಳನ್ನು ತಯಾರಿಸುತ್ತಿದ್ದ ಕಮಲೇಶ್ ಮತ್ತು ಆತನ ತಂಡದಿಂದ ಪೊಲೀಸರು, ಹೆಸರು ವಿಳಾಸವಿಲ್ಲದ 28.000 ನಕಲಿ ಚುನಾವಣಾ ಗುರುತಿನ ಚೀಟಿ, ನಕಲಿ ಆಧಾರ್ ಕಾರ್ಡ್ಗಳು, 9.000 ಪಾನ್ ಕಾರ್ಡ್ಗಳು, 12.200 ಆರ್‌ಸಿ ಕಾರ್ಡ್ಗಳು, 2 ಪ್ರಿಂಟರ್ ಹಾಗೂ ಕಂಪ್ಯೂಟರ್ ಜಪ್ತಿ ಮಾಡಿದ್ದಾರೆ.
ಬೆಂಗಳೂರು to ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ರೈಲು ಸಂಚಾರದ ವೇಳಾಪಟ್ಟಿ ಇಲ್ಲಿದೆ
ಬೆಂಗಳೂರಿನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರೈಲು ಸಂಚಾರ ಆರಂಭವಾಗಲಿದೆ..
ಹನಿ ಟ್ರ್ಯಾಪ್ ದಂಧೆಗಿಳಿದಿದ್ದ ಟೀಚರಮ್ಮ ಬಣ್ಣ ಬಯಲು
1: 18 pm ಡಿ.22ರಂದು ಸಂತ್ರಸ್ತ ಯುವಕ ಅತ್ಯಾಚಾರವೆಸಗಿ ವಿಡಿಯೋ ಚಿತ್ರೀಕರಿಸಿದ್ದಾನೆ ಎಂದು ಆರೋಪಿಸಿ ಇಂದಿರಾನಗರ ಠಾಣೆಗೆ ದೂರು ನೀಡಿದ್ದ ಕವಿತಾ ಎಂಬುವವಳ ಅಸಲಿ ಬಣ್ಣವನ್ನು ಪೊಲೀಸರು ಬಿಚ್ಚಿಟ್ಟಿದ್ದಾರೆ. ಮ್ಯಾಟ್ರಿಮೋನಿಯಲ್ಲಿ ಅವಿವಾಹಿತ ಹಾಗೂ ವಿಚ್ಛೇದಿತ ಪುರುಷರನ್ನು ಪರಿಚಯಿಸಿಕೊಂಡು ಹಣಕ್ಕಾಗಿ ಡಿಮ್ಯಾಂಡ್ ಮಾಡುತ್ತಿದ್ದ ಮಾಜಿ ಟೀಚರ್ ಕವಿತಾಳ ಬಣ್ಣ ಬಯಲಾಗಿದ್ದು, ಇಂದಿರಾನಗರ ಠಾಣಾ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ.
ಕೊರೊನಾ ಹಿನ್ನೆಲೆ ಖಾಸಗಿ ಶಾಲೆ ಬಂದ್
1:04 pm ಚಿಕ್ಕಮಗಳೂರಿನ ಕಳಸ ಪಟ್ಟಣದ JME ಖಾಸಗಿ ಶಾಲೆಯ ಶಿಕ್ಷಕರಿಬ್ಬರಿಗೆ ಕೊರೊನಾ ಸೋಂಕು ದೃಢವಾದ ಹಿನ್ನೆಲೆ ಜನವರಿ 8ರ ವರೆಗೆ ಶಾಲೆಗಳನ್ನು ಬಂದ್ ಮಾಡಲು ಆಡಳಿತ ಮಂಡಳಿ ನಿರ್ಧರಿಸಿದೆ.
ಎಲ್ಲಾ ಸಮಸ್ಯೆಗಳ ಕುರಿತು ಚರ್ಚಿಸಲಾಗುತ್ತದೆ: ನರೇಂದ್ರ ಸಿಂಗ್ ತೋಮರ್
12:59 pm ಇಂದಿನ ಸಭೆಯಲ್ಲಿ ರೈತರ ಎಲ್ಲಾ ಸಮಸ್ಯೆಗಳ ಕುರಿತು ಚರ್ಚೆ ನಡೆಸಲಾಗುತ್ತದೆ ಎಂದು 7 ಸುತ್ತಿನ ಸಭೆಗೆ ಆಗಮಿಸಿದ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಪ್ರತಿಕ್ರಿಯಿಸಿದ್ದಾರೆ.
ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿದ ಡಿಕೆಶಿ
12:53 pm ಈ ವರ್ಷ ಹೋರಾಟದ ಮತ್ತು ಸಂಘಟನೆ ವರ್ಷ ಎಂದು ಘೋಷಣೆ ಮಾಡಿದ್ದೇವೆ. ನಗರದಲ್ಲಿರುವ ಸಮಸ್ಯೆ ಮುಂದಿಟ್ಟುಕೊಂಡು ಪ್ರತೀ ಕ್ಷೇತ್ರದಲ್ಲಿ ಹೋರಾಟ ಮಾಡುತ್ತೇವೆ. ಮೊದಲು 150 ಕ್ಷೇತ್ರದಲ್ಲಿ ಹೋರಾಟ ಮಾಡುವ ಗುರಿ ಇದೆ. ಜನರ ಬಳಿ ಹೋಗಿ ಸಮಸ್ಯೆ ಆಲಿಸುತ್ತೇವೆ. ಬೆಂಗಳೂರು ನಗರದಲ್ಲಿರುವ ಜ್ವಲಂತ ಸಮಸ್ಯೆಗಳ ಆಲಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮೈಸೂರು ಬ್ಯಾಂಕ್ ವೃತ್ತದಲ್ಲಿ ಭಾರತ್ ಮಾತಾ ಕೀ ಜೈ ಅಂತ ಘೋಷಣೆ ಕೂಗುತ್ತಿದ್ದಾರೆ.
ಸರ್ಕಾರದ ನಕಲಿ ಮುದ್ರೆ ಬಳಸಿ ID ಗಳನ್ನು ತಯಾರಿಸುತ್ತಿದ್ದ ತಂಡದ ಮೇಲೆ ಸಿಸಿಬಿ ಪೊಲೀಸರ ದಾಳಿ
12:43 pm ಕನಕಪುರ ರಸ್ತೆಯ ಹೆರಿಟೇಜ್ ಅಪಾರ್ಟ್‌ಮೆಂಟ್‌ನಲ್ಲಿ ಸರ್ಕಾರದ ನಕಲಿ ಮುದ್ರೆ ಬಳಸಿ ಆಧಾರ್ ಕಾರ್ಡ್, ಪಾನ್ ಕಾರ್ಡ್, ಚಾಲನಾ ಪರವಾನಗಿ, ಆರ್‌ಸಿ ಕಾರ್ಡ್, ಚುನಾವಣಾ ಗುರುತಿನ ಚೀಟಿಗಳನ್ನು ತಯಾರಿಸಿ ಜನರಿಗೆ ನೀಡುತ್ತಿದ್ದ ಕಮಲೇಶ್ ಮತ್ತು ಆತನ ತಂಡದ ಮೇಲೆ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಸಿಎಫ್ಐ ಕಾರ್ಯದರ್ಶಿ ಬಂಧನಕ್ಕೆ ಖಂಡನೆ
12:27 pm ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (CFI) ಸಂಘಟನೆ ಕಾರ್ಯದರ್ಶಿಯನ್ನು ಬಂಧಸಿದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸಿಎಫ್ಐ, ಬೆಂಗಳೂರಿನ ಶಾಂತಿನಗರದ ಇಡಿ ಕಚೇರಿ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆಯಲ್ಲಿ ಯುವತಿಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸಿಎಫ್ಐ ನಾಯಕ ರೌಫ್ ಬಿಡುಗಡೆ ಮಾಡುವಂತೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಘೋಷಣೆ ಕೇಳಿಬರುತ್ತಿದೆ.
ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದ ಸರ್ವೇಯರ್
12:19 pm ಮೈಸೂರು ತಾಲೂಕು ಕಚೇರಿಯಲ್ಲಿ ಸರ್ವೇಯರ್ ಹನುಮಂತರಾಯಪ್ಪ ಜಮೀನು ಸರ್ವೆಗಾಗಿ 8 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದರು. ಇದೇ ವೇಳೆಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಎಸಿಬಿ ಎಸ್ ಪಿ ಡಾ.ಸುಮ್ ಡಿ ಪನೇಕರ್ ಮಾರ್ಗದರ್ಶನದಲ್ಲಿ ಡಿಎಸ್ಪಿ ಎಚ್.ಪರಶುರಾಮಪ್ಪ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.
ಟ್ರ್ಯಾಕ್ಟರ್ ಮೆರವಣಿಗೆ ಆಯೋಜಿಸುತ್ತೇವೆ: ಸುಖ್ವಿಂದರ್. ಎಸ್.ಸಬ್ರಾ
11:26 am ಇಂದು ನಡೆಯಲಿರುವ 7ನೇ ಸುತ್ತಿನ ಸಭೆಯಲ್ಲಿ ಬೇಡಿಕೆಗಳು ಈಡೇರದಿದ್ದರೆ ಜನವರಿ 6 ಮತ್ತು 26ರಂದು ಟ್ರ್ಯಾಕ್ಟರ್ ಮೆರವಣಿಗೆ ಆಯೋಜಿಸುತ್ತೇವೆ ಎಂದು ಕಿಸಾನ್ ಮಜ್ದೂರ್ ಸಂಘರ್ಷ್ ಸಮಿತಿಯ ಜಂಟಿ ಕಾರ್ಯದರ್ಶಿ ಸುಖ್ವಿಂದರ್. ಎಸ್.ಸಬ್ರಾ ತಿಳಿಸಿದ್ದಾರೆ.
ಹಾವೇರಿ ಜಿಲ್ಲೆಯಲ್ಲಿ ಎರಡು ಶಾಲೆಗಳು ಬಂದ್
11:53 am ಶಾಲೆ ಆರಂಭವಾದ ನಂತರ ಇಬ್ಬರು ಶಿಕ್ಷಕರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ 2 ಶಾಲೆಗಳನ್ನು ಬಂದ್ ಮಾಡಲಾಗಿದೆ. ಶಾಲೆಗೆ ಬಂದಿದ್ದ 23 ಮಕ್ಕಳಿಗೆ ಕೊರೊನಾ ಪರೀಕ್ಷೆಗೆ ಸೂಚಿಸಲಾಗಿದೆ. ಜೊತೆಗೆ ಕೊರೊನಾ ಸೋಂಕಿತ ಶಿಕ್ಷಕರನ್ನು ಹೋಮ್ ಐಸೋಲೇಷನ್ಗೆ ಒಳಪಡಿಸಲಾಗಿದೆ ಎಂದು ಡಿಡಿಪಿಐ ಅಂದಾನಪ್ಪ ವಡಗೇರಿ ಮಾಹಿತಿ ನೀಡಿದ್ದಾರೆ.
ಶಾಸಕರ ಜೊತೆ ಸಭೆ ನಡೆಸಲಿರುವ ಬಿ.ಎಸ್.ಯಡಿಯೂರಪ್ಪ
12:00 pm ಶಾಸಕರ ಜತೆ ಸಭೆ ನಡೆಸುವ ಹಿನ್ನೆಲೆ ಬೆಂಗಳೂರಿನ ಖಾಸಗಿ ಹೋಟೆಲ್‌ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಆಗಮಿಸಿದ್ದಾರೆ. ಡಿಸಿಎಂ ಗೋವಿಂದ ಕಾರಜೋಳ, ಡಿಸಿಎಂ ಲಕ್ಷ್ಮಣ ಸವದಿ, ಸಚಿವ ಶ್ರೀರಾಮುಲು, ಶಾಸಕರಾದ ರಾಜುಗೌಡ, ಹಾಲಪ್ಪ ಆಚಾರ್, ರೇಣುಕಾಚಾರ್ಯ ಕೂಡಾ ಆಗಮಿಸಿದ್ದಾರೆ.
ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ ಕೈ ಧರಣಿ
12:06 pm ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ವಿರುದ್ಧ ಕಾಂಗ್ರೆಸ್ ಮುಖಂಡರು ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಸ್ಥಳಕ್ಕೆ ರಾಮಲಿಂಗಾರೆಡ್ಡಿ, ಬಿ.ಕೆ.ಹರಿಪ್ರಸಾದ್, ರಿಜ್ವಾನ್, ಮಾಜಿ ಮೇಯರ್ ಮಂಜುನಾಥ ರೆಡ್ಡಿ, ಪದ್ಮಾವತಿ , ರಾಮಚಂದ್ರಪ್ಪ ಆಗಮಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೂಡ ಕೆಲವೇ ಕ್ಷಣದಲ್ಲಿ ಭಾಗಿಯಾಗುವ ಸಾಧ್ಯತೆಯಿದೆ.
ಮೈಸೂರಿಗೆ ಭೇಟಿ ನೀಡಿ ಮಾನವೀಯತೆ ಮೆರೆದ ಮಾಣಿಕ್ಯ
11:50 am ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ್ದ ನಟ ಸುದೀಪ್ನನ್ನು ಭೇಟಿಯಾಗಲು ಅಂಗವಿಕಲ ಅಭಿಮಾನಿಯೊಬ್ಬ ಬಂದಿದ್ದನ್ನು ಕಂಡ ಕಿಚ್ಚ ದಾರಿಯಲ್ಲಿ ಕಾರನ್ನು ನಿಲ್ಲಿಸಿ ಅಭಿಮಾನಿ ರಾಘವ್ ಬಳಿ ಹೋಗಿ ಮಾತನಾಡಿದರು. ಅಲ್ಲದೇ ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದ ರಾಘವ್ ಅವರ ಕೃತಕ ಕಾಲು ಜೋಡಣೆಗಾಗಿ ಸ್ಥಳದಲ್ಲೇ ಸಹಾಯ ಹಸ್ತ ಚಾಚಿದರು.
ರೈತರ ಸಾವಿಗೆ ಕೇಂದ್ರ ಸರ್ಕಾರ ಉತ್ತರಿಸಬೇಕು: ರಾಕೇಶ್ ಟಿಕೈಟ್
11:41 am ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ 60 ರೈತರು ಪ್ರಾಣ ಕಳೆದುಕೊಂಡಿದ್ದಾರೆ. ಪ್ರತಿಭಟನೆಯಲ್ಲಿ 16 ಗಂಟೆಗೊಬ್ಬ ರೈತ ಸಾಯುತ್ತಿದ್ದಾನೆ. ಇವರ ಸಾವಿಗೆ ಕೇಂದ್ರ ಸರ್ಕಾರ ಉತ್ತರಿಸಬೇಕೆಂದು ಭಾರತೀಯ ಕಿಸಾನ್ ಯೂನಿಯನ್ ವಕ್ತಾರ ರಾಕೇಶ್ ಟಿಕೈಟ್ ಒತ್ತಾಯಿಸಿದ್ದಾರೆ.
ಕೊರೊನಾ ಲಸಿಕೆ ತಯಾರಿಸುವಲ್ಲಿ ಭಾರತ ಯಶಸ್ಸು ಗಳಿಸಿದೆ: ಪ್ರಧಾನಿ ಮೋದಿ
11:34 am ಎರಡು ಕೊರೊನಾ ಲಸಿಕೆ ತಯಾರಿಸುವ ಮೂಲಕ ಭಾರತೀಯ ವಿಜ್ಞಾನಿಗಳು ಅಪಾರ ಕೊಡುಗೆ ನೀಡಿದ್ದಾರೆ. ಹೊಸ ವರ್ಷ ಹಲವು ಅವಕಾಶಗಳನ್ನು ಹೊತ್ತು ತಂದಿದೆ. ಭಾರತದ ಎದುರು ಈಗ ಹೊಸ ಗುರಿ ಮತ್ತು ಸವಾಲುಗಳಿವೆ. ದೇಶದಾದ್ಯಂತ ವ್ಯಾಕ್ಸಿನ್ ಹಂಚುತ್ತೇವೆ. ಭಾರತ ಮುಂದಿನ ದಿನಗಳಲ್ಲಿ ವ್ಯಾಕ್ಸಿನ್ ರಫ್ತು ಮಾಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
ಹರಿಯಾಣ ಮುಖ್ಯಮಂತ್ರಿ ವಿರುದ್ಧ ಆಮ್ ಆದ್ಮಿ ಪಕ್ಷದ ಮುಖಂಡ ರಾಘವ್ ಚಡ್ಡಾ ಕಿಡಿ
11:24 am ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ , ಜೆನರಲ್ ಡೈಯರ್ ರೀತಿ ರೈತರ ಮೇಲೆ ಗುಂಡು ಹಾರಿಸಲು ಅವಕಾಶ ನೀಡುತ್ತಿದ್ದಾರೆ ಮತ್ತು ರೈತರ ವಿರುದ್ಧ ಅಶ್ರುವಾಯು ಬಳಸುತ್ತಿದ್ದಾರೆ. ದೇಶದ ರೈತರು ನಮ್ಮ ಶತ್ರುಗಳೇ? ಅವರು ಚೀನಾ ಅಥವಾ ಪಾಕಿಸ್ತಾನದ ಸೇನಾ ಸಿಬ್ಬಂದಿಯೇ? ಇದು ನಾಚಿಕೆಗೇಡಿನ ಸಂಗತಿ ಎಂದು ಆಮ್ ಆದ್ಮಿ ಪಕ್ಷದ ಮುಖಂಡ ರಾಘವ್ ಚಡ್ಡಾ ಅಭಿಪ್ರಾಯಪಟ್ಟಿದ್ದಾರೆ.
ವಿನಯ್ ಕುಲಕರ್ಣಿ ಬಿಡುಗಡೆಗಾಗಿ ವಿಶೇಷ ಪೂಜೆ ಸಲ್ಲಿಕೆ
11:08 am ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಕೊಲೆ ಕೇಸ್‌ನಲ್ಲಿ ಜೈಲು ಸೇರಿರುವ ವಿನಯ್ ಕುಲಕರ್ಣಿ ಬಿಡುಗಡೆಯಾಗುವಂತೆ ಧಾರವಾಡದ ಪತ್ರೇಶ್ವರ ಮಠದಲ್ಲಿ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದ್ದರು.
180 ವ್ಯವಸ್ಥಾಪಕ ನಿರ್ದೇಶಕರು ಹಾಗೂ ಲೆಕ್ಕಪರಿಶೋಧಕರ ಬಂಧನ
11:03 am ಕಳೆದ 1.5 ರಿಂದ 2 ತಿಂಗಳ ಅವಧಿಯಲ್ಲಿ, ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಸಂಸ್ಥೆಗಳ 180ರಷ್ಟು ವ್ಯವಸ್ಥಾಪಕ ನಿರ್ದೇಶಕರು ಹಾಗೂ ಲೆಕ್ಕಪರಿಶೋಧಕರನ್ನು ಬಂಧಿಸಲಾಗಿದೆ. ಬಂಧಿತರಿಗೆ ತೆರಿಗೆ ವಂಚನೆ ಪ್ರಕರಣದ ಗಂಭೀರತೆಯ ಕಾರಣದಿಂದ ಜಾಮೀನು ಪಡೆಯಲು ಕೂಡ ಸಾಧ್ಯವಾಗುವುದಿಲ್ಲ ಎಂದು ಕೇಂದ್ರ ಹಣಕಾಸು ಕಾರ್ಯದರ್ಶಿ, ಡಾ. ಅಜಯ್ ಭೂಷಣ್ ಪಾಂಡೆ ತಿಳಿಸಿದ್ದಾರೆ.
ಸಿಎಂ ಬಿಎಸ್‌ವೈ ಭೇಟಿಯಾದ ನಟ ರಮೇಶ್ ಅರವಿಂದ್
11:01 am ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರವರ ಮನೆಗೆ ನಟ ರಮೇಶ್ ಅರವಿಂದ್ ಭೇಟಿ ನೀಡಿ, ಜನವರಿ 16 ರಂದು ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನಡೆಯಲಿರುವ ಮಗಳ ಮದುವೆ ಆರತಕ್ಷತೆ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.
ವನ್ಯಜೀವಿ ಬೇಟೆ ಮಾಡುತ್ತಿದ್ದ ಹಂತಕನ ಮನೆ ಮೇಲೆ ಅರಣ್ಯ ಅಧಿಕಾರಿಗಳ ದಾಳಿ
10:43 am ಕಾಡು ಪ್ರಾಣಿ ಬೇಟೆಯಾಡುತ್ತಿದ್ದ ಬೆಳಗಾವಿಯ ನೆಹರುನಗರದಲ್ಲಿರುವ ಮೆಹಮೂದ್ ಅಲಿಖಾನ್ ಎಂಬುವವನ ಮನೆಯ ಮೇಲೆ ಉಪವಿಭಾಗ ಅರಣ್ಯ ಅಧಿಕಾರಿಗಳು ದಾಳಿ ನಡೆಸಿ, ಚಿಗರಿ ಕೊಂಬು, ಪಾಯಿಂಟ್ 315 ರೈಫಲ್, ಟೆಲಿಸ್ಕೋಪ್, 2 ಚಾಕು, 2 ವಾಕಿಟಾಕಿ, 26 ಸಜೀವ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ದಾಳಿ ವೇಳೆ ಆರೋಪಿ ಪರಾರಿಯಾಗಿದ್ದಾನೆ.
ನಟ ರಜಿನಿಕಾಂತ್ ಭೇಟಿಯಾಗಲಿರುವ ಅಮಿತ್ ಶಾ
10:34 am ಕೇಂದ್ರ ಗೃಹ ಸಚಿವ ಅಮಿತ್ ಶಾ ಜನವರಿ 14ಕ್ಕೆ ಚೆನ್ನೈಗೆ ತೆರಳಲಿದ್ದು, ಈ ವೇಳೆ ಸೂಪರ್ ಸ್ಟಾರ್ ರಜಿನಿಕಾಂತ್ರವರನ್ನು ಭೇಟಿ ನೀಡಿ ಆರೋಗ್ಯ ವಿಚಾರಣೆ ಮಾಡಲಿದ್ದಾರೆ.
ಕೇರಳದಲ್ಲಿ ಕಾಲೇಜುಗಳು ಪುನಾರಂಭ
10:30 am ಇಂದಿನಿಂದ ಕೇರಳದಲ್ಲಿ ಕಾಲೇಜುಗಳು ಪುನಾರಂಭಗೊಂಡಿದ್ದು, ವಿದ್ಯಾರ್ಥಿಗಳು ಉತ್ಸುಕರಾಗಿ ಆಗಮಿಸುತ್ತಿದ್ದಾರೆ. ಮಹಾಮಾರಿ ಕೊರೊನಾ ಸೋಂಕಿನಿಂದ ಮುಚ್ಚಲ್ಪಟ್ಟ ಕಾಲೇಜುಗಳು 9 ತಿಂಗಳ ಬಳಿಕ ಆರಂಭವಾಗಿವೆ.
ಚಾಮುಂಡಿ ಬೆಟ್ಟಕ್ಕೆ ನಟ ಸುದೀಪ್ ಭೇಟಿ
10:18 am ಅಭಿನಯ ಚಕ್ರವರ್ತಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ನಾಡದೇವಿಯ ದರ್ಶನ ಪಡೆದಿದ್ದಾರೆ. ಜೊತೆಗೆ ರಂಗಿತರಂಗ ಚಿತ್ರದ ನಿರ್ದೇಶಕ ಅನೂಪ್ ಭಂಡಾರಿಯವರು ಆಗಮಿಸಿದ್ದರು. ಸುದೀಪ್ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದಿದ್ದ ಅಭಿಮಾನಿಗಳಿಗೆ ಸನ್ನೆ ಮಾಡಿ ದೇವಸ್ಥಾನದಲ್ಲಿ ನಿಶ್ಯಬ್ಧ ಕಾಪಾಡುವಂತೆ ತಿಳಿಸಿದ್ದರು.
ಕಾರ್ಖಾನೆಯಲ್ಲಿ ಅಗ್ನಿ ಅವಘಡ
10:12 am ಮಧ್ಯಪ್ರದೇಶದ ಇಂದೋರ್‌ನ ಶಂಕರ್ ಬಾಗ್ ಪ್ರದೇಶದ ಕಾರ್ಖಾನೆಯಲ್ಲಿ ನಿನ್ನೆ ರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು, ಯಾವುದೇ ಜೀವ ಹಾನಿ ಸಂಭವಿಸಿಲ್ಲ. 15ಕ್ಕೂ ಹೆಚ್ಚು ಅಗ್ನಿಶಾಮಕ ದಳಗಳ ಸಹಾಯದಿಂದ ಬೆಂಕಿಯನ್ನು ನಂದಿಸಲಾಗಿದೆ.
ಚಿರತೆ ದಾಳಿಗೆ ಏಳು ಕುರಿಗಳು ಬಲಿ
10:06 am ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಹಾರೋಗೊಂಡನಹಳ್ಳಿ ಬಳಿ ಚಿರತೆ ದಾಳಿ ನಡೆಸಿದ್ದು, ಏಳು ಕುರಿಗಳು ಸಾವನ್ನಪ್ಪಿವೆ. ಕಳೆದ ಒಂದು ವಾರದಿಂದ ಕಾಣಿಸಿಕೊಳ್ಳುತ್ತಿದ್ದ ಚಿರತೆ ಮಂಜುನಾಥ್ ಎಂಬುವರಿಗೆ ಸೇರಿದ ಕುರಿಗಳನ್ನು ಬಲಿ ತೆಗೆದುಕೊಂಡಿದೆ.
ಸೌರವ್ ಗಂಗೂಲಿ ಚಿಕಿತ್ಸೆ ಕುರಿತು ಚರ್ಚಿಸಲಿರುವ ವೈದ್ಯಕೀಯ ಮಂಡಳಿ
09:59 am ವೈದ್ಯಕೀಯ ಮಂಡಳಿ ಸೌರವ್ ಗಂಗೂಲಿರವರ ಮುಂದಿನ ಚಿಕಿತ್ಸಾ ಯೋಜನೆ ಕುರಿತು ಅವರ ಕುಟುಂಬ ಸದಸ್ಯರೊಂದಿಗೆ ಇಂದು ಬೆಳಿಗ್ಗೆ 11:30ಕ್ಕೆ ಚರ್ಚಿಸಲಿದೆ ಎಂದು ಆಸ್ಪತ್ರೆ ಮೂಲಗಳಿಂದ ತಿಳಿದಿದೆ. ವೈದ್ಯರು ಸೌರವ್ ಗಂಗೂಲಿಯವರ ಆರೋಗ್ಯ ಪರಿಸ್ಥಿತಿಯ ಬಗ್ಗೆ ನಿರಂತರ ಜಾಗರೂಕತೆ ವಹಿಸುವ ಜೊತೆಗೆ ಕಾಲಕಾಲಕ್ಕೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ.
ಕೊರೊನಾ ಭೀತಿ ಮರೆತ ರೈಲು ಪ್ರಯಾಣಿಕರು
09:55 am ಮೈಸೂರಿನಿಂದ ಬೆಂಗಳೂರಿಗೆ ಪ್ಯಾಸೆಂಜರ್ ರೈಲು ಹೊರಟ್ಟಿದ್ದು, ಮಾಸ್ಕ್ ಸರಿಯಾಗಿ ಧರಿಸದೆ ಹಾಗೂ ರೈಲಿನಲ್ಲಿ ದೈಹಿಕ ಅಂತರವಿಲ್ಲದೆ ಜನರು ಕೊರೊನಾ ಭೀತಿ ಮರೆತಿದ್ದಾರೆ. ಸುಮಾರು ಬೆಳಗ್ಗೆ 6.10ಕ್ಕೆ ಹೊರಟ ರೈಲು ಜನಜಂಗುಳಿಯಿಂದ ತುಂಬಿಹೋಗಿದೆ.
11.4 ಡಿಗ್ರಿ ಸೆಲ್ಸಿಯಸ್ ತಾಪಮಾನ: IMD
09:41 am ಇಂದು ಬೆಳಿಗ್ಗೆ 8.30ಕ್ಕೆ ದೆಹಲಿಯ ಸಫ್ದರ್ಜಂಗ್ ವೀಕ್ಷಣಾಲಯದಲ್ಲಿ ಕನಿಷ್ಠ 11.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ ಎಂದು ಭಾರತ ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ.
ರಾಜಸ್ಥಾನದಲ್ಲಿ ಕಾಗೆಗಳಿಗೆ ಹಕ್ಕಿ ಜ್ವರ
09:36 am ರಾಜಸ್ಥಾನದ ಕಾಗೆಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು, ಮನುಷ್ಯರಿಗೂ ಹರಡುವ ಭೀತಿ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ರಾಜಸ್ಥಾನದ ಪಶುಸಂಗೋಪನಾ ಸಚಿವ ಲಾಲ್‌ಚಂದ್ ಕಟಾರಿಯಾ ಅಧಿಕಾರಿಗಳ ತುರ್ತು ಸಭೆ ಕರೆದು ಜನರು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವಂತೆ ಹೈ ಅಲರ್ಟ್ ಘೋಷಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ವಾಹನಗಳ ಸಂಚಾರ ಸ್ಥಗಿತ
09:29 am ಜಮ್ಮು-ಶ್ರೀನಗರ ಹೆದ್ದಾರಿಯ ವಿವಿಧ ಪ್ರದೇಶಗಳಲ್ಲಿ ಹಿಮಪಾತದಿಂದಾಗಿ ಉಧಂಪುರದಿಂದ ಶ್ರೀನಗರಕ್ಕೆ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಆಂಧ್ರ ಮೂಲದ ವ್ಯಕ್ತಿಯನ್ನು ಅಪಹರಿಸಿ ಕೊಲೆಗೆ ಪ್ರಯತ್ನ
09:24 am ಆಂಧ್ರ ಮೂಲದ ವ್ಯಕ್ತಿಯನ್ನು ಅಪಹರಿಸಿ ಕೊಲೆಗೆ ಪ್ರಯತ್ನಿಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನಲ್ಲಿ ತಡರಾತ್ರಿ ನಡೆದಿದೆ. ಬೆಂಗಳೂರಿನ 8ನೇ ಮೈಲಿ ಬಸ್ ನಿಲ್ದಾಣದ ಬಳಿ ನಿಂತಿದ್ದ ಕುಮಾರ್(35) ಎಂಬಾತನ್ನು ದುಷ್ಕರ್ಮಿಗಳು ಕಾರಿನಲ್ಲಿ ಅಪಹರಿಸಿ ಮೂವರಿಂದ ಹಲ್ಲೆ ನಡೆದಿದೆ. ಹಲ್ಲೆ ನಡೆದ ಬಳಿಕ ಪ್ರಜ್ಞೆ ಕಳೆದುಕೊಂಡಿದ್ದ ಕುಮಾರ್ನನ್ನು ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ದುಷ್ಕರ್ಮಿಗಳು ಮುಂದಾದರು. ಆದರೆ ತಕ್ಷಣ ಎಚ್ಚರಗೊಂಡ ಕುಮಾರ್ ಪ್ರಾಣ ಉಳಿಸಿಕೊಂಡಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಪ ಕಾಲುವೆ ನಿರ್ಮಾಣಕ್ಕೆ ಆಗ್ರಹಿಸಿ ರೈತರ ಹೋರಾಟ
09:04 am ರಾಯಚೂರಿನ ನಾರಾಯಣಪುರ ಬಲದಂಡೆ ಕಾಲುವೆಗೆ 5A ಉಪ ಕಾಲುವೆ ನಿರ್ಮಾಣಕ್ಕೆ ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟ 46ನೇ ದಿನಕ್ಕೆ ಬಂದು ತಲುಪಿದೆ. ಮಸ್ಕಿ ತಾಲೂಕಿನ ಪಾಮನಕಲ್ಲೂರ ಗ್ರಾಮದಲ್ಲಿ ರೈತರು ಹೋರಾಟ ನಡೆಸುತ್ತಿದ್ದು, ಸರ್ಕಾರ ಉಪ ಕಾಲುವೆ ನಿರ್ಮಾಣಕ್ಕೆ ಆದೇಶಿಸಬೇಕೆಂದು ರೈತರು ಬಿಗಿಪಟ್ಟು ಹಿಡಿದಿದ್ದಾರೆ.
ನಮ್ಮ ಓದುಗರಿಗೆ ಹೊಸ ವರ್ಷದ ಶುಭ ಹಾರೈಕೆಗಳು. ನಿಮ್ಮ ಓದು ನಮ್ಮ ಹುಮ್ಮಸ್ಸು. ಹೊಸ ಯೋಚನೆಗೆ ತಿದಿಯೊತ್ತುವ ಈ ಸಮಯದಲ್ಲಿ ನಾವು ಟಿವಿ9 ಕನ್ನಡ ಡಿಜಿಟಲ್ Live Blog ಪ್ರಾರಂಭಿಸಿದ್ದೇವೆ. ಸುತ್ತಲಿನ ಗದ್ದಲದಿಂದ ದೂರ ಕುಳಿತು ಕ್ಷಣ ಕ್ಷಣದ ಸುದ್ದಿ ಓದುವ, ನೋಡುವ ಅವಕಾಶ ನಿಮಗೆ. ಹಳ್ಳಿಯಿಂದ ದಿಲ್ಲಿಯೇನು ಇಡೀ ಪ್ರಪಂಚದ ಸುದ್ದಿ ಟಿವಿ9 ಕನ್ನಡ ಡಿಜಿಟಲ್ Live Blog ನಲ್ಲಿ ಪ್ರತಿ ದಿನ ಹರಿದು ಬರಲಿದೆ. ಬನ್ನಿ ಇಂದಿನ ಸುದ್ದಿಯ ಹರಿವನ್ನು ಆನಂದಿಸೋಣ.
Published On - Jan 04,2021 8:57 PM