ನ್ಯಾಷನಲ್ ಹೆರಾಲ್ಡ್ ( National Herald)ಪತ್ರಿಕೆಯ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ರಾಹುಲ್ ಗಾಂಧಿ (Rahul Gandhi) ಇಂದು ಮೂರನೇ ದಿನ ಇಡಿ ವಿಚಾರಣೆಯನ್ನು ಎದುರಿಸುತ್ತಿದ್ದಾರೆ. ಅತ್ತ ವಿಚಾರಣೆ ನಡೆಯುತ್ತಿದ್ದರೆ, ಇತ್ತ ಜಾರಿ ನಿರ್ದೇಶನಾಲಯ ಕಚೇರಿ ಎದುರು ಟಯರ್ಗೆ ಬೆಂಕಿ ಹಾಕಿ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ.
ಇದುವರೆಗೆ 80 ಪ್ರಶ್ನೆಗಳಿಗೆ ರಾಹುಲ್ ಗಾಂಧಿ ಉತ್ತರ ನೀಡಿದ್ದಾರೆ, ಆದರೆ ಉತ್ತರ ನೀಡಿದ ಬಳಿಕ ಕೆಲ ಉತ್ತರಗಳ ತಿದ್ದುಪಡಿ ಮಾಡಲು ರಾಹುಲ್ ಗಾಂಧಿ ಮುಂದಾದರು ಎಂದು ಮೂಲಗಳು ತಿಳಿಸಿವೆ. ಬುಧವಾರ ಬೆಳಗ್ಗೆ 11.30ಗಂಟೆ ಸುಮಾರಿಗೆ ರಾಹುಲ್ ಗಾಂಧಿ ನವದೆಹಲಿಯಲ್ಲಿರುವ ಜಾರಿ ನಿರ್ದೇಶನಾಲಯದ ಪ್ರಧಾನ ಕಚೇರಿಗೆ ಆಗಮಿಸಿದ್ದು ವಿಚಾರಣೆ ನಡೆಯುತ್ತಿದೆ.
ಭಾರತೀಯ ಯೂಥ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿವಿ ಅವರು ಪಕ್ಷದ ಪ್ರಧಾನ ಕವಚೇರಿ ಎದುರು ಪ್ರತಿಭಟನೆ ಮಾಡುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಬೂಟು ಕಾಲಿನಲ್ಲಿ ತಮ್ಮನ್ನು ಒದ್ದಿದ್ದರು ಎಂದು ಆರೋಪಿಸಿದ್ದಾರೆ. ಎಐಸಿಸಿ ಪ್ರಧಾನ ಕಚೇರಿಯೊಳಗೆ ತೆರಳಲು ಅವಕಾಶ ದೊರೆಯದ ಕಾರಣ ಕಾಂಗ್ರೆಸ್ ಸಂಸದರು ಮಹಾತ್ಮ ಗಾಂಧಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ರಾಹುಲ್ ಗಾಂಧಿ ಅವರ ವಿಚಾರಣೆ ಮೂರನೇ ದಿನಕ್ಕೆ ಕಾಲಿಟ್ಟಿದೆ. ಈಗಲೂ ಗಂಟೆಗಟ್ಟಲೆ ವಿಚಾರಣೆ ನಡೆಸುತ್ತಿರುವುದು ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಮಾತನಾಡಿ, ನಾವು ಭಯೋತ್ಪಾದಕರಲ್ಲ, ನಮ್ಮ ನಿರ್ವಹಣೆಗೆ ಪೊಲೀಸರ ಅಗತ್ಯವೇನಿದೆ, ನಮ್ಮನ್ನು ಕಂಡರೆ ಭಯ ಏಕೆ ಎಂದು ಪ್ರಶ್ನಿಸಿದ್ದಾರೆ.
ಶಾಸಕ ಪ್ರಿಯಾಂಕ್ ಖರ್ಗೆ ಮಾತನಾಡಿ, ರಾಹುಲ್ ಗಾಂಧಿಯನ್ನು ಕಾನೂನಿನ ಅಡಿ ಬಂಧನ ಮಾಡುತ್ತಾರೆ ಎಂದು ಹೇಳಬೇಕು. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಯಾವ ಕೇಸ್ನಲ್ಲಿ ವಿಚಾರಣೆ ಮಾಡುತ್ತಿದ್ದಾರೆ ಎಂದು ಬಿಜೆಪಿ ಹಾಗೂ ಇಡಿಯವರಿಗೂ ಗೊತ್ತಿಲ್ಲ. ಅವರು 90 ಕೋಟಿ ರೂ. ಸಾಲವನ್ನು ನ್ಯಾಷನಲ್ ಹೆರಾಲ್ಡ್ಗೆ ಕೊಟ್ಟಿದ್ದಾರೆ ಎಂದು ಹೇಳುತ್ತಿದ್ದಾರೆ, ಕೊಡಬಾರದು ಎಂಬ ನಿಯಮ ಎಲ್ಲಾದರೂ ಇದೆಯೇ ಎಂದು ಪ್ರಶ್ನಿಸಿದರು.
90 ಕೋಟಿಯಲ್ಲಿ 60 ಕೋಟಿ ಸಂಬಳ ಎಂದು ಕೊಟ್ಟಿದ್ದಾರೆ, ಇನ್ನುಳಿದ ಹಣವನ್ನು ಪ್ರಿಂಟಿಂಗ್ ವೆಚ್ಚ, ಇನ್ಫ್ರಾಸ್ಟ್ರಕ್ಚರ್ ಸುಲುವಾಗಿ ಕೊಟ್ಟಿದ್ದಾರೆ. ರಾಹುಲ್ ಗಾಂಧಿಗೆ ಟಾರ್ಚರ್ ಕೊಡಬೇಕೆಂದೇ ಈ ವಿಚಾರಣೆ ನಡೆಸಲಾಗುತ್ತಿದೆ ಎಂದು ದೂರಿದರು.
ಎಲೆಕ್ಷನ್ ಬಂದಾಗ ರಾಬರ್ಟ್ ವಾದ್ರಾ , ಪ್ರಿಯಾಂಕಾ ಗಾಂಧಿ ವಾದ್ರಾ , ರಾಹುಲ್ ಗಾಂಧಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕರೆದು ವಿಚಾರಣೆ ಮಾಡುತ್ತಾರೆ ಎಂದರು.
ದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ