ನವಜೋತ್ ಸಿಂಗ್ ಸಿಧುವನ್ನು ಮಾತುಕತೆಗೆ ಆಹ್ವಾನಿಸಿದ ಪಂಜಾಬ್ ಸಿಎಂ ಚರಣ್​​ಜಿತ್ ಸಿಂಗ್ ಚನ್ನಿ

| Updated By: ರಶ್ಮಿ ಕಲ್ಲಕಟ್ಟ

Updated on: Sep 30, 2021 | 1:10 PM

Navjot Singh Sidhu: ಮುಖ್ಯಮಂತ್ರಿಯವರು ನನ್ನನ್ನು ಮಾತುಕತೆಗೆ ಆಹ್ವಾನಿಸಿದ್ದಾರೆ. ಇಂದು ಮಧ್ಯಾಹ್ನ 3:00 ಗಂಟೆಗೆ ಚಂಡೀಗಢ ಪಂಜಾಬ್ ಭವನ ತಲುಪಿ ಪ್ರತಿಕ್ರಿಯಿಸುವೆ, ಅವರು ಯಾವುದೇ ಚರ್ಚೆಗೆ ಸ್ವಾಗತ ಎಂದಿದ್ದಾರೆ ಎಂದು ಸಿಧು ಟ್ವೀಟ್ ಮಾಡಿದ್ದಾರೆ.

ನವಜೋತ್ ಸಿಂಗ್ ಸಿಧುವನ್ನು ಮಾತುಕತೆಗೆ ಆಹ್ವಾನಿಸಿದ ಪಂಜಾಬ್ ಸಿಎಂ ಚರಣ್​​ಜಿತ್ ಸಿಂಗ್ ಚನ್ನಿ
ನವಜೋತ್ ಸಿಂಗ್ ಸಿಧು
Follow us on

ಚಂಡೀಗಢ: ಪಂಜಾಬ್‌ ಮುಖ್ಯಮಂತ್ರಿ ಚರಣ್​​ಜಿ​ತ್ ಸಿಂಗ್ ಚನ್ನಿ (Charanjit Singh Channi) ತಮ್ಮನ್ನು ಮಾತುಕತೆಗೆ ಆಹ್ವಾನಿಸಿದ್ದಾರೆ ಎಂದು ನವಜೋತ್ ಸಿಂಗ್ ಸಿಧು (Navjot Singh Sidhu) ಗುರುವಾರ ಟ್ವೀಟ್ ಮಾಡಿದ್ದಾರೆ. ಚನ್ನಿ ಕ್ಯಾಬಿನೆಟ್‌ನಲ್ಲಿ ಕೆಲವು ನೇಮಕಾತಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಸಿಧು ಪಂಜಾಬ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. “ಮುಖ್ಯಮಂತ್ರಿಯವರು ನನ್ನನ್ನು ಮಾತುಕತೆಗೆ ಆಹ್ವಾನಿಸಿದ್ದಾರೆ. ಇಂದು ಮಧ್ಯಾಹ್ನ 3:00 ಗಂಟೆಗೆ ಚಂಡೀಗಢ ಪಂಜಾಬ್ ಭವನ ತಲುಪಿ ಪ್ರತಿಕ್ರಿಯಿಸುವೆ, ಅವರು ಯಾವುದೇ ಚರ್ಚೆಗೆ ಸ್ವಾಗತ ಎಂದಿದ್ದಾರೆ ಎಂದು ಸಿಧು ಟ್ವೀಟ್ ಮಾಡಿದ್ದಾರೆ.

ಪೊಲೀಸ್ ಮಹಾನಿರ್ದೇಶಕರು ಮತ್ತು ರಾಜ್ಯದ ಅಡ್ವೋಕೇಟ್ ಜನರಲ್ ನೇಮಕಾತಿಗಳ ಕುರಿತು ಪ್ರಶ್ನೆಗಳನ್ನು ಎತ್ತುವ ಮೂಲಕ ಸಿಧು ವಿಡಿಯೊ ಸಂದೇಶದಲ್ಲಿ ಅತೃಪ್ತಿ ವ್ಯಕ್ತಪಡಿಸಿದ್ದರು. ನನ್ನ ಉದ್ದೇಶ ಯಾವಾಗಲೂ ಜನರ ಜೀವನವನ್ನು ಸುಧಾರಿಸುವುದು ಮತ್ತು “ಬದಲಾವಣೆ ಮಾಡುವುದು” ಎಂದು ಸಿಧು ಹೇಳಿದ್ದಾರೆ.
“ನನ್ನ ಹೋರಾಟವು ಪಂಜಾಬ್‌ನ ಸಮಸ್ಯೆಗಳು ಮತ್ತು ಅಜೆಂಡಾಕ್ಕಾಗಿ ಆಗಿದೆ” ಎಂದು ಅವರು ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡ ನಾಲ್ಕು ನಿಮಿಷಗಳ ವಿಡಿಯೊ ಕ್ಲಿಪ್‌ನಲ್ಲಿ ಹೇಳಿದರು.


ಫರೀದ್‌ಕೋಟ್‌ನಲ್ಲಿ 2015 ರ ಧಾರ್ಮಿಕ ಪಠ್ಯವನ್ನು ಅಪವಿತ್ರಗೊಳಿಸಿದ ಪ್ರಕರಣ ಉಲ್ಲೇಖಿಸಿದ ಸಿಧು, ಆರು ವರ್ಷಗಳ ಹಿಂದೆ ಬಾದಲ್‌ಗಳಿಗೆ ಕ್ಲೀನ್ ಚಿಟ್ ನೀಡಿದವರಿಗೆ ನ್ಯಾಯ ಒದಗಿಸುವ ಜವಾಬ್ದಾರಿಯನ್ನು ನೀಡಲಾಗಿದೆ ಎಂದು ಸಿಧು  ಹೇಳಿದರು. ಡಿಜಿಪಿ ಇಕ್ಬಾಲ್ ಪ್ರೀತ್ ಸಿಂಗ್ ಸಹೋತಾ 2015 ರಲ್ಲಿ ಅಕಾಲಿ ಸರ್ಕಾರದಿಂದ ರಚಿಸಲ್ಪಟ್ಟ ವಿಶೇಷ ತನಿಖಾ ತಂಡದ ಮುಖ್ಯಸ್ಥರಾಗಿದ್ದರು. ಅದೇ ವೇಳೆ ಪಂಜಾಬ್‌ನ ಹೊಸ ಅಡ್ವೋಕೇಟ್ ಜನರಲ್ ಆಗಿ ಹಿರಿಯ ವಕೀಲ ಎಪಿಎಸ್ ಡಿಯೋಲ್ ಅವರ ನೇಮಕವನ್ನು ಸಿಧು ಪ್ರಶ್ನಿಸಿದರು. ” ಜಾಮೀನುಗಳನ್ನು ಹೊದ್ದು ಸುರಕ್ಷಿತರಾಗಿರುವವರನ್ನು ನೋಡಿದಾಗ ನನ್ನ ಮನಸ್ಸು ಚಡಪಡಿಸುತ್ತದೆ, ಅವರು ಅಡ್ವೋಕೇಟ್ ಜನರಲ್ ಆಗಿದ್ದಾರೆ. ಇಲ್ಲಿ ಅಜೆಂಡಾ ಏನು? ” ಸಿಧು ಪ್ರಶ್ನಿಸಿದ್ದಾರೆ.

ಬುಧವಾರ ಚನ್ನಿ ಅವರು ಸಿಧು ಅವರನ್ನು ಸಂಪರ್ಕಿಸಿದ ಬೆನ್ನಲ್ಲೇ ಮಾತುಕತೆಗೆ ಆಹ್ವಾನ ನೀಡಲಾಗಿದೆ. ಹೊಸದಾಗಿ ನೇಮಕಗೊಂಡ ಮುಖ್ಯಮಂತ್ರಿ ಚನ್ನಿ ಅವರು ಪಕ್ಷವೇ ಎಲ್ಲದಕ್ಕಿಂತ ಮೇಲೆ ಮತ್ತು ಸರ್ಕಾರವು ಅದರ ಸಿದ್ಧಾಂತವನ್ನು ಅನುಸರಿಸುತ್ತದೆ ಎಂದು ಹೇಳಿದರು.

“ನಾನು ಇಂದು ಸಿಧು ಸಾಹಬ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದೇನೆ. ಪಕ್ಷವು ಸರ್ವೋಚ್ಚವಾಗಿದೆ ಮತ್ತು ಸರ್ಕಾರವು ಪಕ್ಷದ ಸಿದ್ಧಾಂತವನ್ನು ಸ್ವೀಕರಿಸುತ್ತದೆ ಮತ್ತು ಅದನ್ನು ಅನುಸರಿಸುತ್ತದೆ. ನೀವು ಬಂದು ಕುಳಿತು ಮಾತನಾಡಿ ಎಂದು ನಾನು ಸಿಧು ಅವರಿಗೆ ಹೇಳಿದ್ದೇನೆ ಎಂದು ಎಂದು ಚನ್ನಿ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.

ರಾಜೀನಾಮೆ ನೀಡಿದಾಗಿನಿಂದ ಸಿಧು ಅವರ ಮನೆ ಬಿಟ್ಟು ಹೊರಬಂದಿಲ್ಲ. ಸಿಧು ಅವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಹಠಾತ್ ರಾಜೀನಾಮೆ ನೀಡಿರುವುದು 10 ದಿನಗಳ ಹಿಂದೆ ಪಂಜಾಬ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಚನ್ನಿಗೆ ಮೊದಲ ದೊಡ್ಡ ರಾಜಕೀಯ ಬಿಕ್ಕಟ್ಟಾಗಿದೆ. ಪಂಜಾಬ್‌ನ ಕಾಂಗ್ರೆಸ್ ಘಟಕದ ಮುಖ್ಯಸ್ಥರಾಗಿ ನೇಮಕಗೊಂಡ 72 ದಿನಗಳ ನಂತರ ಸಿಧು ರಾಜೀನಾಮೆ ನೀಡಿದ್ದು ಪಂಜಾಬ್‌ನಲ್ಲಿ ಪಕ್ಷವನ್ನು ಹೊಸ ಬಿಕ್ಕಟ್ಟಿಗೆ ತಳ್ಳಿದ್ದಾರೆ. ಇದೇ ಹೊತ್ತಲ್ಲಿ ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ದೆಹಲಿಯಲ್ಲಿ ಅಮಿತ್ ಶಾ ಮತ್ತು ಅಜಿತ್ ದೋವಲ್ ಅವರನ್ನು ಭೇಟಿ ಮಾಡಿದ್ದು ಮತ್ತಷ್ಟು ಊಹಾಪೋಹಗಳಿಗೆ ಎಡೆಮಾಡಿದೆ.

ಇದನ್ನೂ ಓದಿ: Amarinder Singh ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್​​ರನ್ನು ಭೇಟಿ ಮಾಡಿದ ಅಮರಿಂದರ್ ಸಿಂಗ್

ಇದನ್ನೂ ಓದಿ: ಚಿರತೆಯ ದಾಳಿಯಿಂದ ತಪ್ಪಿಸಿಕೊಳ್ಳಲು ವಾಕಿಂಗ್ ಸ್ಟಿಕ್​ನೊಂದಿಗೆ ಹೋರಾಡಿದ ಮಹಿಳೆ; ಭಯಾನಕ ದೃಶ್ಯವಿದು