ದೆಹಲಿ: ಪಂಜಾಬ್‌ನಲ್ಲಿ ವಿಧಾನಸಭಾ ಚುನಾವಣೆಗೆ (Punjab Assembly Election) ತಿಂಗಳುಗಳು ಬಾಕಿ ಇರುವಂತೆಯೇ ಸ್ಟಾರ್ ಕ್ರಿಕೆಟಿಗ ಹರ್ಭಜನ್ ಸಿಂಗ್ (Harbhajan Singh) ಅವರು ಪಿಸಿಸಿ ಮುಖ್ಯಸ್ಥ ನವಜೋತ್ ಸಿಂಗ್ ಸಿಧು(Navjot Singh Sidhu) ಅವರನ್ನು ಭೇಟಿ ಮಾಡಿ ಕಾಂಗ್ರೆಸ್ (Congress) ಸೇರುವ ಸಾಧ್ಯತೆಯ ಬಗ್ಗೆ ಸುಳಿವು ನೀಡಿದ್ದಾರೆ. ಹರ್ಭಜನ್ ಸಿಂಗ್ ಜತೆ ಇರುವ ಫೋಟೊ ಟ್ವೀಟ್ ಮಾಡಿದ ಸಿಧು, ಚಿತ್ರವು ಸಾಧ್ಯತೆಗಳಿಂದ ತುಂಬಿದೆ, ಶೈನಿಂಗ್ ಸ್ಟಾರ್ ಭಜ್ಜಿಯೊಂದಿಗೆ ಎಂದು ಶೀರ್ಷಿಕೆ ನೀಡಿದ್ದಾರೆ. ಮುಂದಿನ ವರ್ಷ ಪಂಜಾಬ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಈ ಭೇಟಿ ನಡೆದಿದೆ. ಚುನಾವಣೆಗೂ ಮುನ್ನ ಕ್ರಿಕೆಟಿಗ ಕಾಂಗ್ರೆಸ್ ಪಕ್ಷಕ್ಕೆ ಸೇರಬಹುದು ಎಂದು ರಾಜಕೀಯ ತಜ್ಞರು ಊಹಿಸಿದ್ದಾರೆ. ಆದರೆ, ಈ ಬಗ್ಗೆ ಕಾಂಗ್ರೆಸ್ ಅಥವಾ ಹರ್ಭಜನ್ ಸಿಂಗ್ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಹರ್ಭಜನ್ ಅವರು ಡಿಸೆಂಬರ್ 11 ರಂದು ಬಿಜೆಪಿ ಸೇರುತ್ತಿದ್ದಾರೆ ಎಂಬ ವದಂತಿ ನಿರಾಕರಿಸಿದ ಕೆಲವು ದಿನಗಳ ನಂತರ ಸಿಧು ಅವರನ್ನು ಭೇಟಿ ಮಾಡಿದ್ದಾರೆ. ಭಜ್ಜಿ ಬಿಜೆಪಿಗೆ ಸೇರಲಿದ್ದಾರೆ ಎಂಬ ವರದಿಗೆ ಪ್ರತಿಕ್ರಿಯಿಸಿದ ಹರ್ಭಜನ್ ಅದನ್ನು “ಸುಳ್ಳು ಸುದ್ದಿ” ಎಂದಿದ್ದರು.
2019 ರ ಲೋಕಸಭಾ ಚುನಾವಣೆಯ ನಂತರದಿಂದಲೇ ಭಜ್ಜಿ ರಾಜಕೀಯಕ್ಕೆ ಬರಲಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ. ಬುಧವಾರ ರಾಜ್ಯ ಚುನಾವಣೆಗಾಗಿ ರಚಿಸಲಾಗಿರುವ ಪಂಜಾಬ್ ಕಾಂಗ್ರೆಸ್ ಪ್ರಚಾರ ಸಮಿತಿಯ ಮೊದಲ ಸಭೆಗೂ ಮುನ್ನ ಈ ಬೆಳವಣಿಗೆ ನಡೆದಿದೆ. ಪಂಜಾಬ್ ಕಾಂಗ್ರೆಸ್‌ನ ಮಾಜಿ ಮುಖ್ಯಸ್ಥ ಸುನಿಲ್ ಜಾಖರ್ ಅವರನ್ನು ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
Picture loaded with possibilities …. With Bhajji the shining star pic.twitter.com/5TWhPzFpNl
— Navjot Singh Sidhu (@sherryontopp) December 15, 2021
ಮತ್ತೊಂದೆಡೆ ಸಿಎಂ ಕುರ್ಚಿಯಿಂದ ಕೆಳಗಿಳಿದ ಕೆಲವೇ ದಿನಗಳಲ್ಲಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ವಿಧಾನಸಭಾ ಚುನಾವಣೆಗೆ ಬಿಜೆಪಿಯೊಂದಿಗೆ ಕೈಜೋಡಿಸಲು ಸಿದ್ಧರಾಗಿದ್ದಾರೆ. ತಮ್ಮ ಪಕ್ಷವಾದ ಪಂಜಾಬ್ ಲೋಕ ಕಾಂಗ್ರೆಸ್‌ನ ಧ್ಯೇಯವೆಂದರೆ ರಾಜ್ಯದಲ್ಲಿ ಕಾಂಗ್ರೆಸ್ ಅನ್ನು ಸೋಲಿಸುವುದು ಮಾತ್ರವಲ್ಲ ಮುಂದಿನ ಸರ್ಕಾರವನ್ನು ರಚಿಸುವುದು ಕೂಡಾ ಎಂದು ಅಮರಿಂದರ್ ಸಿಂಗ್ ಹೇಳಿದ್ದಾರೆ.