ಮುಂಬೈ: ನಟ ಸುಶಾಂತ್ ಸಿಂಗ್ ಸಾವಿನೊಂದಿಗೆ ತಳುಕು ಹಾಕಿಕೊಂಡಿರುವ ಡ್ರಗ್ಸ್ ಕೇಸ್ಗೆ ಸಂಬಂಧಪಟ್ಟಂತೆ ಎನ್ಸಿಬಿ ಮುಂಬೈನ ಐಷಾರಾಮಿ ಪ್ರದೇಶವಾದ ಅಂಧೇರಿ ಪಶ್ಚಿಮದಲ್ಲಿ ದಾಳಿ ನಡೆಸಿದ್ದು, ಸುಮಾರು 2.5 ಕೋಟಿ ರೂ.ಮೌಲ್ಯದ 5 ಕೆಜಿ ಹಶೀಶ್ ಸೇರಿ ಹಲವು ವಿಧದ ಡ್ರಗ್ಸ್ ವಶಪಡಿಸಿಕೊಂಡಿದೆ.
ಸುಶಾಂತ್ ಸಿಂಗ್ ಮೃತಪಟ್ಟ ಬಳಿಕ ವಿವಿಧ ಆಯಾಮಗಳಲ್ಲಿ ತನಿಖೆ ಶುರುವಾಗಿತ್ತು. ಡ್ರಗ್ಸ್ ಲಿಂಕ್ಗೆ ಸಂಬಂಧಪಟ್ಟಂತೆ ತನಿಖೆ ಕೈಗೊಂಡಿದ್ದ ಎನ್ಸಿಬಿ, ಹಲವು ಕಡೆಗಳಲ್ಲಿ ಈಗಾಗಲೇ ದಾಳಿ ನಡೆಸಿದೆ. ಈ ಬಾರಿ ಅಂಧೇರಿ ಪಶ್ಚಿಮದಲ್ಲಿ ರೇಡ್ ಮಾಡಿದ್ದ ಎನ್ಸಿಬಿ, ನಾಪತ್ತೆಯಾಗಿದ್ದ ಡ್ರಗ್ಸ್ ಪೆಡ್ಲರ್ ರೆಗೆಲ್ ಮಹಾಕಾಲ್ ಎಂಬಾತನನ್ನು ಬಂಧಿಸಿದೆ. ಹಶಿಶ್ ಜತೆಗೆ ಸ್ವಲ್ಪ ಪ್ರಮಾಣದಲ್ಲಿ ಎಂಡಿಎಂಎ ಮತ್ತು ಒಪಿಯಾಡ್ಗಳನ್ನೂ ವಶಪಡಿಸಿಕೊಂಡಿದೆ.
2 ದಿನ NCB ಕಸ್ಟಡಿಗೆ
ರೆಗೆಲ್ ಮಹಾಕಾಲ್ನನ್ನು ಕೋರ್ಟ್ಗೆ ಹಾಜರುಪಡಿಸಲಾಗಿತ್ತು. ಆತನನ್ನು ಎರಡು ದಿನಗಳ ಎನ್ಸಿಬಿ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶ ನೀಡಿದೆ. ಆದರೆ ಈತ ರಿಯಾ ಚಕ್ರವರ್ತಿ ಮತ್ತು ಶೌವಿಕ್ನೊಂದಿಗೆ ಸಂಪರ್ಕದಲ್ಲಿದ್ದ ಬಗ್ಗೆ ಯಾವುದೇ ಮಾಹಿತಿಯನ್ನೂ ನಾವು ನೀಡುವುದಿಲ್ಲ ಎಂದು ಎನ್ಸಿಬಿಯ ವಲಯ ನಿರ್ದೇಶಕ ಸಮೀರ್ ವಾಂಖೆಡೆ ತಿಳಿಸಿದ್ದಾರೆ.
ಬಂಧಿತ ರೆಗೆಲ್ ಮಹಾಕಾಲಾ ಇನ್ನೋರ್ವ ಆರೋಪಿ ಅನುಜ್ ಕೇಶ್ವಾನಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ. ಅನುಜ್ ಕೇಶ್ವಾನಿ, ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ಮತ್ತು ಸುಶಾಂತ್ಸಿಂಗ್ ರಜಪೂತ್ಗೆ ಡ್ರಗ್ಸ್ ನೀಡುತ್ತಿದ್ದ ಆರೋಪದಡಿ ಸೆಪ್ಟೆಂಬರ್ನಲ್ಲಿಯೇ ಬಂಧಿತನಾಗಿದ್ದಾನೆ. ಇನ್ನು ರಿಯಾ ಮತ್ತು ಆಕೆಯ ಸಹೋದರ್ ಶೌವಿಕ್ರನ್ನು ಕೂಡ ಎನ್ಸಿಬಿ ಬಂಧಿಸಿತ್ತು. ಅವರು ಇತ್ತೀಚೆಗಷ್ಟೇ ಜಾಮೀನು ಪಡೆದು ಹೊರಬಂದಿದ್ದಾರೆ.
ಬಾಲಿವುಡ್ ಡ್ರಗ್ಸ್ ಲಿಂಕ್ ಸಂಬಂಧಪಟ್ಟಂತೆ ಎನ್ಸಿಬಿ ಹಲವರನ್ನು ವಿಚಾರಣೆಗೆ ಒಳಪಡಿಸಿದೆ..ಬಂಧಿಸಿದೆ. ಈಗ ಬಂಧಿತನಾಗಿರುವ ರೆಗೆಲ್ ಕೂಡ ಬಾಲಿವುಡ್ನ ಹಲವು ಗಣ್ಯರೊಂದಿಗೆ ಸಂಪರ್ಕದಲ್ಲಿದ್ದ ಎಂದು ತನಿಖಾ ದಳದ ಮೂಲಗಳು ತಿಳಿಸಿವೆ. ಈತನಿಂದಾಗಿ ಇನ್ನಷ್ಟು ಜನರ ಸತ್ಯ ಹೊರಬೀಳುವ ಸಾಧ್ಯತೆ ಹೆಚ್ಚಾಗಿದೆ.