ದೆಹಲಿ: ಕ್ರೂಸ್ ರೇವ್ ಪಾರ್ಟಿ ಪ್ರಕರಣದ ತನಿಖೆಯನ್ನು ಮಾದಕ ವಸ್ತು ನಿಯಂತ್ರಣ ದಳದ (Narcotics Control Bureau – NCB) ಮುಂಬೈ ವಲಯದ ಮುಖ್ಯಸ್ಥರಾದ ಸಮೀರ್ ವಾಂಖೆಡೆಯೇ ಮುಂದುವರಿಸಲಿದ್ದಾರೆ ಎಂದು ಎನ್ಸಿಬಿಯ ಮಹಾನಿರ್ದೇಶಕ ಜ್ಞಾನೇಶ್ವರ ಸಿಂಗ್ ಬುಧವಾರ ಸ್ಪಷ್ಟಪಡಿಸಿದ್ದಾರೆ. ವಾಂಖಡೆ ಅಕ್ರಮ ನಡೆಸಿದ್ದಾರೆ ಎಂಬ ಬಗ್ಗೆ ಗಮನಾರ್ಹ ಮತ್ತು ವಿಶ್ವಾಸಾರ್ಹ ದಾಖಲೆಗಳು ಲಭ್ಯವಾಗುವವರೆಗೂ ಈ ಪ್ರಕರಣದ ತನಿಖೆಯನ್ನು ಅವರೇ ನಿರ್ವಹಿಸಲಿದ್ದಾರೆ ಎಂದು ಎನ್‌ಸಿಬಿ ತಿಳಿಸಿದೆ.
ವಾಂಖಡೆ ವಿರುದ್ಧ ಕೇಳಿ ಬಂದಿರುವ ಆರೋಪಗಳ ಬಗ್ಗೆ ತನಿಖೆ ನಡೆಸಲು ಎನ್‌ಸಿಬಿ ಜಾಗೃತ ದಳದ ಐವರು ಸದಸ್ಯರ ತಂಡ ಮುಂಬೈಗೆ ಬುಧವಾರ ತಲುಪಿದ್ದು, ಎನ್ಸಿಬಿಯ ಮುಂಬೈ ಕಚೇರಿಯಿಂದ ಹಲವು ದಾಖಲೆಗಳು ಮತ್ತು ರೆಕಾರ್ಡಿಂಗ್ಗಳನ್ನು ಸಂಗ್ರಹಿಸಿದೆ. ವಾಂಖೆಡೆ ಅವರ ಹೇಳಿಕೆಯನ್ನೂ ದಾಖಲಿಸಿಕೊಳ್ಳಲಾಗಿದೆ. ಇದೊಂದು ಸೂಕ್ಷ್ಮ ವಿಚಾರವಾಗಿದ್ದು ಎಲ್ಲ ವಿಚಾರಗಳನ್ನೂ ಮಾಧ್ಯಮಗಳೊಂದಿಗೆ ಹಂಚಿಕೊಳ್ಳಲು ಆಗುವುದಿಲ್ಲ ಎಂದು ಜ್ಞಾನೇಶ್ವರ ಸಿಂಗ್ ಹೇಳಿದ್ದಾರೆ.
ಮಾದಕ ವಸ್ತು ದಾಸ್ತಾನು, ಸೇವನೆಗೆ ಸಂಬಂಧಿಸಿದಂತೆ ಖ್ಯಾನ ನಟ ಶಾರೂಖ್ ಖಾನ್ ಮಗ ಆರ್ಯನ್ ಖಾನ್ ವಿರುದ್ಧ ನಡೆಯುತ್ತಿರುವ ವಿಚಾರಣೆ ಇಡೀ ದೇಶದ ಗಮನ ಸೆಳೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನಿಂದ ಖಾಲಿ ಹಾಳೆಯ ಮೇಲೆ ಸಹಿ ಹಾಕಿಸಿಕೊಳ್ಳಲಾಯಿತು ಎಂದು ಪ್ರಭಾಕರ್ ಸೈಲ್ ಎನ್ನುವವರು ಆರೋಪ ಮಾಡಿದ್ದರು. ಎನ್ಸಿಬಿಯ ಕೆಲ ಅಧಿಕಾರಿಗಳು ₹ 25 ಕೋಟಿ ಲಂಚ ಪಡೆಯಲು ಬೇಡಿಕೆಯಿಟ್ಟಿದ್ದರು. ಇದರಲ್ಲಿ ಒಂದಿಷ್ಟು ಮೊತ್ತವನ್ನು ವಾಂಖೆಡೆ ಪಡೆದುಕೊಳ್ಳಲು ಉದ್ದೇಶಿಸಿದ್ದರು. ಅವರು ಪರಸ್ಪರ ಮಾತಾಡಿಕೊಳ್ಳುತ್ತಿದ್ದಾಗ ಈ ವಿಚಾರ ನನ್ನ ಕಿವಿಗೆ ಬಿದ್ದಿತ್ತು ಎಂದು ಪ್ರಭಾಕರ್ ಸೈಲ್ ಹೇಳಿದ್ದರು.
ತನಿಖಾ ತಂಡದ ಪ್ರತಿಕ್ರಿಯೆ
ಹೈಪ್ರೊಫೈಲ್ ಡ್ರಗ್ಸ್ ಪಾರ್ಟಿ ಮೇಲೆ ಎನ್‌ಸಿಬಿ ದಾಳಿ ಪ್ರಕರಣದ ತನಿಖಾಧಿಕಾರಿ ಸಮೀರ್ ವಾಂಖೆಡೆ ವಿರುದ್ಧ ಕೇಳಿ ಬಂದಿರುವ ಆರೋಪಗಳ ಬಗ್ಗೆ ವಾಂಖೆಡೆ ಹೇಳಿಕೆ ಪಡೆದಿದ್ದೇವೆ ಎಂದು ಎನ್‌ಸಿಬಿ ಜಾಗೃತ ದಳದ ಅಧಿಕಾರಿಗಳು ತಿಳಿಸಿದ್ದಾರೆ. ಸುದೀರ್ಘ ನಾಲ್ಕು ಗಂಟೆಗಳ ಕಾಲ ಹೇಳಿಕೆ ದಾಖಲಿಸಿದ್ದೇವೆ. ವಿಚಾರಣೆ ವೇಳೆ ಸಮೀರ್ ಹಲವಾರು ಮಾಹಿತಿ ಬಿಚ್ಚಿಟ್ಟಿದ್ದಾರೆ. ಅಗತ್ಯಬಿದ್ದರೆ ಸಮೀರ್ರನ್ನು ಮತ್ತೆ ವಿಚಾರಣೆಗೆ ಕರೆಯಲಾಗುತ್ತದೆ ಎಂದು ಎನ್‌ಸಿಬಿ ಡಿಡಿಜಿ ಜ್ಞಾನೇಶ್ವರ ಸಿಂಗ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Ananya Pandey: ಆರ್ಯನ್ ಖಾನ್ ಬಂಧನ ಪ್ರಕರಣ; ಎನ್‌ಸಿಬಿ ವಿಚಾರಣೆ ವೇಳೆ ಭಯಗೊಂಡು ಕಣ್ಣೀರಿಟ್ಟಿದ್ದ ಅನನ್ಯಾ ಪಾಂಡೆ
ಇದನ್ನೂ ಓದಿ: ಸಮೀರ್ ವಾಂಖೆಡೆ ವಾಟ್ಸಪ್ ಚಾಟ್ ಪರಿಶೀಲಿಸಿದರೆ ನಕಲಿ ಎನ್‌ಸಿಬಿ ಕೇಸ್ ಪತ್ತೆಯಾಗುತ್ತದೆ: ನವಾಬ್ ಮಲ್ಲಿಕ್
Published On - 8:21 pm, Wed, 27 October 21