ದೆಹಲಿ: 2022ರಲ್ಲಿ ಉತ್ತರಪ್ರದೇಶ, ಉತ್ತರಾಖಂಡ್, ಪಂಜಾಬ್, ಗೋವಾ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಬೆನ್ನಲ್ಲೇ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಪಕ್ಷದಲ್ಲಿನ ಸ್ಥಿರತೆ ಕಾಪಾಡುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಇಂದು ದೆಹಲಿಯ ಎಐಸಿಸಿ ಪ್ರಧಾನ ಕಚೇರಿಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳು, ರಾಜ್ಯಗಳ ಅಧ್ಯಕ್ಷರು ಮತ್ತು ಇತರ ಹಿರಿಯ ನಾಯಕರೊಂದಿಗೆ ಸಭೆ ನಡೆಸಿದ ಸೋನಿಯಾ ಗಾಂಧಿ, ಬಿಜೆಪಿ ಮತ್ತು ಆರ್ಎಸ್ಎಸ್ (BJP And RSS) ವಿರುದ್ಧ ಹೋರಾಡಲು ಪಕ್ಷದಲ್ಲಿ ಶಿಸ್ತು ಮತ್ತು ಏಕತೆ ತುಂಬ ಮುಖ್ಯ ಎಂದು ಹೇಳಿದರು. ಬಿಜೆಪಿ ಮತ್ತು ಆರ್ಎಸ್ಎಸ್ನ ಕುಟಿಲತೆಯ ವಿರುದ್ಧ ಸೈದ್ಧಾಂತಿಕವಾಗಿ ಹೋರಾಟ ಮಾಡಬೇಕು. ಅವರು ಹೇಳುತ್ತಿರುವುದು ಸುಳ್ಳು ಎಂಬುದನ್ನು ಜನರಿಗೆ ತೋರಿಸಿಕೊಡಬೇಕು. ಇದನ್ನೆಲ್ಲ ನಾವು ದೃಢವಿಶ್ವಾಸದಿಂದ ಮಾಡಬೇಕು ಎಂದು ಹೇಳಿದರು.
ಈ ದೇಶ ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಎಐಸಿಸಿ ಪ್ರತಿದಿನ ಬಹಳ ಮುಖ್ಯವಾದ ಮತ್ತು ವಿವರವಾದ ಪ್ರಕಟಣೆಗಳನ್ನು ಬಿಡುಗಡೆ ಮಾಡುತ್ತಿದೆ. ಆದರೆ ಅವು ಜಿಲ್ಲಾ ಮತ್ತು ಬ್ಲಾಕ್ ಮಟ್ಟದ ಕಾರ್ಯಕರ್ತರಿಗೆ ತಲುಪುತ್ತಿದೆ ಎಂಬ ಬಗ್ಗೆ ನನಗೆ ನಂಬಿಕೆಯಿಲ್ಲ. ಹಾಗೇ, ಕಾಂಗ್ರೆಸ್ ನೀತಿಯ ಕುರಿತಂತೆ ನಮ್ಮ ರಾಜ್ಯಮಟ್ಟದ ನಾಯಕರಲ್ಲೂ ಸ್ಪಷ್ಟತೆ ಮತ್ತು ಒಗ್ಗಟ್ಟಿನ ಕೊರತೆಯಿದೆ ಎಂಬುದನ್ನು ನಾನು ಕಂಡುಕೊಂಡಿದ್ದೇನೆ ಎಂದೂ ಸೋನಿಯಾ ಗಾಂಧಿ ಹೇಳಿದರು. ನಮ್ಮ ಪಕ್ಷದ ಬಲವರ್ಧನೆ ಪ್ರತಿಯೊಬ್ಬರ ಆದ್ಯತೆಯಾಗಬೇಕು. ನಿಮ್ಮ ವೈಯಕ್ತಿಕ ಮಹತ್ವಾಕಾಂಕ್ಷೆಗಳನ್ನೂ ಮೀರಿ ಪಕ್ಷದ ಸಂಘಟನೆ ಕಡೆಗೆ ಗಮನಹರಿಸಿ. ಹೀಗೆ ಮಾಡಿದಾಗಲೇ ವೈಯಕ್ತಿಕ ಮತ್ತು ಸಾಮೂಹಿಕ ಯಶಸ್ಸು ಗಳಿಸಲು ಸಾಧ್ಯ ಎಂದು ಹೇಳಿದರು.
ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ನಮ್ಮ ಸಂಸ್ಥೆಗಳನ್ನು ನಾಶ ಮಾಡಲು ಯತ್ನಿಸುತ್ತಿದೆ. ಸಂವಿಧಾನದ ಮೂಲ ಮೌಲ್ಯಗಳನ್ನು ದುರ್ಬಲಗೊಳಿಸಲು ಯತ್ನಿಸುತ್ತಿದೆ ಎಂದು ಸೋನಿಯಾ ಗಾಂಧಿ ಇಂದಿನ ಸಭೆಯಲ್ಲಿ ಹೇಳಿದರು. ಹಾಗೇ, ಈ ಕೇಂದ್ರ ಸರ್ಕಾರದ ಕೆಟ್ಟ ನೀತಿಯಿಂದ ಅನೇಕರು ಸಂತ್ರಸ್ತರಾಗುತ್ತಿದ್ದಾರೆ. ಇದರ ವಿರುದ್ಧ ಕಾಂಗ್ರೆಸ್ ಹೋರಾಟವನ್ನು ದ್ವಿಗುಣಗೊಳಿಸಬೇಕು ಎಂದೂ ಹೇಳಿದರು.
ಇದನ್ನೂ ಓದಿ: ಜಮೀರ್ ಪುತ್ರ ಝೈದ್ ಖಾನ್ ಹೊಸ ದಾಖಲೆ; ಭಾರಿ ಮೊತ್ತಕ್ಕೆ ಲಹರಿ, ಟಿ-ಸಿರೀಸ್ ಪಾಲಾಯ್ತು ‘ಬನಾರಸ್’ ಆಡಿಯೋ
Published On - 1:22 pm, Tue, 26 October 21