ನವದೆಹಲಿ, ಜೂನ್ 16: NEET ವಿಷಯದಲ್ಲಿ ಯಾವುದೇ ರೀತಿಯ ಅಕ್ರಮ ಎಸಗುವವರನ್ನು ಬಿಡುವುದಿಲ್ಲ ಎಂದು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ವಾಗ್ದಾನ ನೀಡಿದ್ದಾರೆ. ಇಂದು ಭಾನುವಾರ ಪ್ರತಿಭಟನಾನಿರತ ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಭೇಟಿ ಮಾಡಿದ ನಂತರ ಅವರು, ತಮ್ಮ ಸರ್ಕಾರ ಯಾವುದೇ ಅಕ್ರಮಗಳನ್ನು ಸಹಿಸುವುದಿಲ್ಲ ಎಂದು ಹೇಳಿದ್ದಾರೆ. ಸುಪ್ರೀಂ ಕೋರ್ಟ್‌ನ ಆದೇಶದಂತೆ ಅಭ್ಯರ್ಥಿಗಳ ಹಿತಾಸಕ್ತಿ ಕಾಪಾಡಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಯಾರ ವೃತ್ತಿಯ ಜೊತೆಯೂ ಆಟವಾಡುವುದಿಲ್ಲ ಎಂದು ಅಭ್ಯರ್ಥಿಗಳಿಗೆ ಭರವಸೆ ನೀಡುತ್ತೇನೆ ಎಂದು ಹೇಳಿದ್ದಾರೆ.
‘ಸುಪ್ರೀಂಕೋರ್ಟ್ ಶಿಫಾರಸಿನ ಮೇರೆಗೆ 1,563 ಅಭ್ಯರ್ಥಿಗಳಿಗೆ ಮರುಪರೀಕ್ಷೆ ಕೊಟ್ಟಿದ್ದಾರೆ. ಎರಡು ಸ್ಥಳಗಳಲ್ಲಿ ಕೆಲ ಅಕ್ರಮಗಳು ನಡೆದಿರುವುದು ಬೆಳಕಿಗೆ ಬಂದಿದೆ. ಈ ವಿಚಾರವನ್ನು ಸರ್ಕಾರ ಬಹಳ ಗಂಭೀರವಾಗಿ ತೆಗೆದುಕೊಂಡಿದೆ ಎಂದು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಸ್ಪಷ್ಟಪಡಿಸಲು ಇಚ್ಛಿಸುತ್ತೇನೆ.
‘ಎನ್ಟಿಎಯ (ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ) ದೊಡ್ಡ ಅಧಿಕಾರಿಗಳೂ ದೋಷಿಗಳೆಂದು ಗೊತ್ತಾದಲ್ಲಿ ಅವರನ್ನೂ ಬಿಡುವುದಿಲ್ಲ. ಎನ್ಟಿಎಯಲ್ಲೂ ಸಾಕಷ್ಟು ಸುಧಾರಣೆ ಆಗಬೇಕಿದೆ. ಯಾವ ತಪ್ಪಿತಸ್ಥರೂ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ’ ಶಿಕ್ಷಣ ಸಚಿವರು ಹೇಳಿದರೆಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.
#WATCH | Sambalpur, Odisha: On the NEET issue, Union Education Minister Dharmendra Pradhan says, “On the recommendations of Supreme Court, the order has been given for re-test of 1,563 candidates…Some irregularities have come to light in two places. I assure students and… pic.twitter.com/yrdvdAcn4g
— ANI (@ANI) June 16, 2024
ಮೇ 5ರಂದು ದೇಶಾದ್ಯಂತ 571 ನಗರಗಳಲ್ಲಿ ಮತ್ತು 14 ಅಂತಾರಾಷ್ಟ್ರೀಯ ಕೇಂದ್ರಗಳಲ್ಲಿನ ಒಟ್ಟು 4,750 ಸೆಂಟರ್ಗಳಲ್ಲಿ 24 ಲಕ್ಷ ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆದಿದ್ದರು. ಜೂನ್ 4ರಂದು ರಿಸಲ್ಟ್ ಪ್ರಕಟವಾಗಿದ್ದು 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್ ಕೊಡಲಾಗಿರುವುದು ಬೆಳಕಿಗೆ ಬಂದಿದೆ. ಸಾಕಷ್ಟು ವಿದ್ಯಾರ್ಥಿಗಳು ಎಲ್ಲಾ ವಿಷಯಗಳಲ್ಲೂ ನೂರಕ್ಕೆ ನೂರು ಅಂಕಗಳನ್ನು ಗಳಿಸಿರುವುದು ಸಾಕಷ್ಟು ಜನರ ಹುಬ್ಬೇರುವಂತೆ ಮಾಡಿತ್ತು. ಕೆಲ ನಿರ್ದಿಷ್ಟ ಪರೀಕ್ಷಾ ಕೇಂದ್ರಗಳಲ್ಲಿ ಔಟ್ ಆಫ್ ಔಟ್ ಬಂದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ.
ಇದನ್ನೂ ಓದಿ: ಚೀನಾ ಬೆಳವಣಿಗೆಗೆ ಸಹಾಯವಾಗಿದ್ದ ಮೂರಂಶಗಳು ಭಾರತಕ್ಕೆ ತೊಡಕಾಗಿವೆ: ಸಿಇಎ ಅನಂತನಾಗೇಶ್ವರನ್
ನೀಟ್ ಪರೀಕ್ಷೆ ಬಗ್ಗೆಯೇ ಸಾಕಷ್ಟು ಜನರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ವಿಪಕ್ಷಗಳು ತೀವ್ರ ಟೀಕೆ ಮಾಡುತ್ತಿವೆ. ಸುಪ್ರೀಂ ಕೋರ್ಟ್ನಲ್ಲಿ ಪೆಟಿಶನ್ಗಳು ದಾಖಲಾಗಿವೆ. ಸರ್ವೋಚ್ಚ ನ್ಯಾಯಾಲಯವು 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮರುಪರೀಕ್ಷೆ ನಡೆಸುವಂತೆ ಆದೇಶಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:51 pm, Sun, 16 June 24