ಪಂಜಾಬ್ ಮುಖ್ಯಮಂತ್ರಿ ಚರಣಜಿತ್​ ಸಿಂಗ್ ಛನ್ನಿ ಸೋದರಳಿಯನ ಅರೆಸ್ಟ್ ಮಾಡಿದ ಇ.ಡಿ.; ಇಂದು ಸಿಬಿಐ ಕೋರ್ಟ್​ನಲ್ಲಿ ವಿಚಾರಣೆ

| Updated By: Lakshmi Hegde

Updated on: Feb 07, 2022 | 4:20 PM

ಪಂಜಾಬ್​ನಲ್ಲಿ ವಿಧಾನಸಭೆ ಚುನಾವಣೆ ಫೆ.20ರಂದು ನಡೆಯಲಿದ್ದು, 117 ವಿಧಾನಸಭಾ ಕ್ಷೇತ್ರಗಳಿಗೆ ಅಂದು ಮತದಾನ ನಡೆಯಲಿದೆ. ಹೀಗೆ ಚುನಾವಣೆ ಕೆಲವೇ ದಿನಗಳ ಬಾಕಿ ಇರುವಾಗ ಇ.ಡಿ.ದಾಳಿ ನಡೆದಿದ್ದರ ಬಗ್ಗೆ ಛನ್ನಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಂಜಾಬ್ ಮುಖ್ಯಮಂತ್ರಿ ಚರಣಜಿತ್​ ಸಿಂಗ್ ಛನ್ನಿ ಸೋದರಳಿಯನ ಅರೆಸ್ಟ್ ಮಾಡಿದ ಇ.ಡಿ.; ಇಂದು ಸಿಬಿಐ ಕೋರ್ಟ್​ನಲ್ಲಿ ವಿಚಾರಣೆ
ಇ.ಡಿ.
Follow us on

ಪಂಜಾಬ್​ ಮುಖ್ಯಮಂತ್ರಿ ಚರಣಜಿತ್​ ಸಿಂಗ್​ ಛನ್ನಿ(Punjab Chief Minister Charanjit Singh Channi) ಸೋದರಳಿಯ ಭೂಪೇಂದ್ರ ಸಿಂಗ್​​ರನ್ನು ಇ.ಡಿ. (ED)ಬಂಧಿಸಿದೆ. ಅಕ್ರಮ ಮರಳು ಗಣಿಗಾರಿಕೆ ಸಂಬಂಧಿತ ಕೇಸ್​​ನಲ್ಲಿ ಭೂಪೇಂದ್ರ ಸಿಂಗ್​ ಮನೆ, ವಿವಿಧ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿತ್ತು. ನಿನ್ನೆ ಸಂಜೆ ಅವರನ್ನು ಬಂಧಿಸಿದ್ದು, ಇಂದು ಸಿಬಿಐ ಕೋರ್ಟ್​ಗೆ ಹಾಜರುಪಡಿಸಲಿದೆ. ಪಂಜಾಬ್ ವಿಧಾನಸಭೆ ಚುನಾವಣೆ ಕೆಲವೇ ದಿನಗಳು ಬಾಕಿ ಇರುವಾಗ ಇಂಥದ್ದೊಂದು ಬೆಳವಣಿಗೆ ತುಂಬ ಮಹತ್ವದ್ದೆನಿಸಿದೆ. ಅಕ್ರಮ ಮರಳು ಗಣಿಗಾರಿಕೆ ಪ್ರಕರಣದಡಿ ಇ.ಡಿ. ಕಳೆದ ತಿಂಗಳು ಪಂಜಾಬ್​ನ ವಿವಿಧೆಡೆ ರೇಡ್​ ಮಾಡಿ, ಸುಮಾರು 10 ಕೋಟಿ ರೂಪಾಯಿಗಳನ್ನು ಜಪ್ತಿ ಮಾಡಿದ್ದು, ಅದರಲ್ಲಿ 8 ಕೋಟಿ ರೂಪಾಯಿ ಭೂಪಿಂದರ್​ ಸಿಂಗ್​​ರಿಗೆ ಸೇರಿದ್ದಾಗಿದೆ.

ಪಂಜಾಬ್​ನಲ್ಲಿ ಅಕ್ರಮ ಮರಳು ಗಣಿಗಾರಿಕೆ ಸಂಬಂಧಪಟ್ಟು 2018ರ ಮಾರ್ಚ್​ 7ರಂದು ಪೊಲೀಸರು ಎಫ್​ಐಆರ್​ ದಾಖಲಿಸಿದ್ದರು. ಆ ಎಫ್​ಐಆರ್ ಆಧಾರದ ಮೇಲೆ ಜನವರಿಯಲ್ಲಿ ಛನ್ನಿ ಸೋದರಳಿಯ ಭೂಪಿಂದರ್ ಸಿಂಗ್ ಹನಿಯವರಿಗೆ ಸೇರಿದ 10 ಸ್ಥಳಗಳ  ಮೇಲೆ ಇ.ಡಿ.ದಾಳಿ ನಡೆದಿತ್ತು. ಈ ಕೇಸ್​​ನಲ್ಲಿ ಅಕ್ರಮ ಹಣ ವರ್ಗಾವಣೆ ನಡೆದಿರುವ ಬಗ್ಗೆಯೂ ಕೇಸ್​ ದಾಖಲಿಸಿಕೊಂಡಿರುವ ಇ.ಡಿ. ಇದೀಗ ಭೂಪಿಂದರ್ ಸಿಂಗ್​ರನ್ನು ಬಂಧಿಸಿದೆ.  ದಾಳಿ ನಡೆಸಿದ ಸಂದರ್ಭದಲ್ಲಿ ಸಿಕ್ಕ ದಾಖಲೆಗಳು ದೋಷಪೂರಿತವಾಗಿವೆ. ಅಕ್ರಮವಾಗಿ ಆಸ್ತಿ ವರ್ಗಾವಣೆಯಾಗಿದ್ದು ಬೆಳಕಿಗೆ ಬಂದಿದೆ. ಈ ಆಸ್ತಿ ವಹಿವಾಟಿಗೆ ಸಂಬಂಧಪಟ್ಟಂತೆ ಮೊಬೈಲ್​ ಫೋನ್​, 21 ಲಕ್ಷ ರೂ.ಗೂ ಅಧಿಕ ಮೌಲ್ಯದ ಚಿನ್ನ, 12 ಲಕ್ಷ ರೂ.ಮೌಲ್ಯದ ರೊಲೆಕ್ಸ್​ ವಾಚ್​​ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇ.ಡಿ. ಅಧಿಕಾರಿಗಳು ತಿಳಿಸಿದ್ದಾರೆ.

ಭೂಪಿಂದರ್ ಸಿಂಗ್​, ಕುಮಾರ್​ ಮತ್ತು ಕುದ್ರಾತ್​ ದೀಪ್ ಸಿಂಗ್​ ಎಂಬುವರು ಸೇರಿ 2018ರಲ್ಲಿ ಪ್ರೊವೈಡರ್​ ಓವರ್​ಸೀಸ್​ ಕನ್ಸಲ್ಟನ್ಸಿ ಲಿಮಿಟೆಡ್​ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಅದರಲ್ಲಿ ತಲಾ ಶೇ.33.33 ಶೇರು ಹೊಂದಿದ್ದರೆ. 2019-20ರ ಸಾಲಿನಲ್ಲಿ ಈ ಸಂಸ್ಥೆ 18.77 ಲಕ್ಷ ರೂಪಾಯಿ ವಹಿವಾಟು ನಡೆಸಿದೆ ಎಂದೂ ಇ.ಡಿ. ಮಾಹಿತಿ ನೀಡಿದೆ.  ಜನವರಿ 18ರಂದು ನಡೆಸಿದ ರೈಡ್​​ನಲ್ಲಿ ಭೂಪಿಂದರ್ ಸಿಂಗ್ ಮತ್ತು ಅವರ ಪಾರ್ಟ್​​ನರ್​ ಸಂದೀಪ್​ ಕುಮಾರ್​ರಿಂದ ಒಟ್ಟು 10 ಕೋಟಿ ರೂಪಾಯಿ ಜಪ್ತಿ ಮಾಡಿದ್ದರೂ ಅದರಲ್ಲಿ 8 ಕೋಟಿ ರೂಪಾಯಿ ಭೂಪಿಂದರ್ ಸಿಂಗ್​ರಿಗೆ ಸೇರಿದ್ದೇ ಆಗಿದೆ.

ಪಂಜಾಬ್​ನಲ್ಲಿ ವಿಧಾನಸಭೆ ಚುನಾವಣೆ ಫೆ.20ರಂದು ನಡೆಯಲಿದ್ದು, 117 ವಿಧಾನಸಭಾ ಕ್ಷೇತ್ರಗಳಿಗೆ ಅಂದು ಮತದಾನ ನಡೆಯಲಿದೆ. ಹೀಗೆ ಚುನಾವಣೆ ಕೆಲವೇ ದಿನಗಳ ಬಾಕಿ ಇರುವಾಗ ಇ.ಡಿ.ದಾಳಿ ನಡೆದಿದ್ದರ ಬಗ್ಗೆ ಛನ್ನಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಂಜಾಬ್​ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ನನ್ನನ್ನು ಟ್ರ್ಯಾಪ್​ ಮಾಡಲು ಕೇಂದ್ರಸರ್ಕಾರ ಪಿತೂರಿ ನಡೆಸುತ್ತಿದೆ ಎಂದು ಈ ಹಿಂದೆಯೇ ಆರೋಪಿಸಿದ್ದಾರೆ.   ಜನವರಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಪಂಜಾಬ್​ಗೆ ಬಂದಿದ್ದಾಗ ಅವರಿಗೆ ಫಿರೋಜ್​ಪುರಕ್ಕೆ ಭೇಟಿ ನೀಡಲು ಸಾಧ್ಯವಾಗಲಿಲ್ಲ. ಆ ಬಗ್ಗೆ ಸೇಡು ತೀರಿಸಿಕೊಳ್ಳಲು ಕೇಂದ್ರ ಸರ್ಕಾರ ಇ.ಡಿ.ದಾಳಿ ನಡೆಸಿದೆ. ಈ ಮೂಲಕ ಬಿಜೆಪಿ ದ್ವೇಷದ ರಾಜಕಾರಣ ನಡೆಸುತ್ತಿದೆ ಎಂದು ಆರೋಪಿಸಿದ್ದರು.

ಇದನ್ನೂ ಓದಿ: ಚಲಿಸುವ ಬಸ್​ ಹತ್ತಲು ಹೋಗಿ ಕೆಳಗೆ ಬಿದ್ದ ವಿದ್ಯಾರ್ಥಿ; ಮುಂದೆ ಆಗಿದ್ದೇನು? ನೀವೇ ನೋಡಿ

Published On - 8:49 am, Fri, 4 February 22