ಇಸ್ರೇಲ್ ಸ್ವಾತಂತ್ರ್ಯ ದಿನಾಚರಣೆಗೆ ಪ್ರಧಾನಿ ಮೋದಿಗೆ ನೆತನ್ಯಾಹು ಆಹ್ವಾನ; ಪೈಲಟ್ ಸ್ಮಿತ್ ಮಚ್ಚರ್ ಜೊತೆ ಆಗಮಿಸಲು ಮನವಿ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಇಂದು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ಇಸ್ರೇಲ್‌ನ ಸ್ವಾತಂತ್ರ್ಯ ದಿನಾಚರಣೆಯ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಿದ್ದಾರೆ. ಇದೇ ವೇಳೆ, ಇಸ್ರೇಲ್‌ನ ಈ ಸ್ವಾತಂತ್ರ್ಯ ದಿನಾಚರಣೆಯ ದೀಪ (ಟಾರ್ಚ್) ಬೆಳಗುವ ಸಮಾರಂಭದಲ್ಲಿ ಇಸ್ರೇಲ್‌ನಿಂದ 'ವೀರ' ಪ್ರಶಸ್ತಿ ಪಡೆದಿರುವ ಭಾರತೀಯ ಪೈಲಟ್ ಸ್ಮಿತ್ ಮಚ್ಚರ್ ಅವರನ್ನೂ ಕರೆದುಕೊಂಡು ಬರಬೇಕೆಂದು ಆಹ್ವಾನ ನೀಡಿದ್ದಾರೆ. ಕಾಕ್‌ಪಿಟ್‌ನಲ್ಲಿ ಸಾಹಸ ಮೆರೆದು ದೊಡ್ಡ ದುರಂತ ತಪ್ಪಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚರ್ ಅವರ ಧೈರ್ಯವನ್ನು ನೆತನ್ಯಾಹು ಕೊಂಡಾಡಿದ್ದರು.

ಇಸ್ರೇಲ್ ಸ್ವಾತಂತ್ರ್ಯ ದಿನಾಚರಣೆಗೆ ಪ್ರಧಾನಿ ಮೋದಿಗೆ ನೆತನ್ಯಾಹು ಆಹ್ವಾನ; ಪೈಲಟ್ ಸ್ಮಿತ್ ಮಚ್ಚರ್ ಜೊತೆ ಆಗಮಿಸಲು ಮನವಿ
ನೆತನ್ಯಾಹು- ಪ್ರಧಾನಿ ಮೋದಿ-ಸ್ಮಿತ್ ಮಚ್ಚರ್
Image Credit source: AP

Updated on: Oct 22, 2026 | 8:00 PM

ಟೆಲ್ ಅವಿವ್, ಅಕ್ಟೋಬರ್ 22: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಇಂದು (ಗುರುವಾರ) ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಈ ವೇಳೆ ಅವರು ಇಸ್ರೇಲ್‌ನ ಸ್ವಾತಂತ್ರ್ಯ ದಿನಾಚರಣೆಯ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಿದ್ದಾರೆ. ಕಾಕ್‌ಪಿಟ್‌ನಲ್ಲಿ ಸಾಹಸ ಮೆರೆದ ಧೀರ ಭಾರತೀಯ ಪೈಲಟ್ ಸ್ಮಿತ್ ಮಚ್ಚರ್ ಅವರೊಂದಿಗೆ ಸೇರಿ ಇಸ್ರೇಲ್ ಸ್ವಾತಂತ್ರ್ಯ ದಿನದ ದೀಪ ಬೆಳಗುವಂತೆಯೂ ಕೋರಿದ್ದಾರೆ.

ನೆತನ್ಯಾಹು ಅವರು ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದು, “ನನ್ನ ಸ್ನೇಹಿತರಾದ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿದೆ. ಇಸ್ರೇಲ್‌ನ ಸ್ವಾತಂತ್ರ್ಯ ದಿನಾಚರಣೆಯಂದು ಧೀರ ಭಾರತೀಯ ಪೈಲಟ್ ಜೊತೆಗೂಡಿ ಬಂದು ದೀಪ (ಟಾರ್ಚ್) ಬೆಳಗಲು ಅವರನ್ನು ಆಹ್ವಾನಿಸಿದ್ದೇನೆ. ಇಸ್ರೇಲ್ ಮತ್ತು ಭಾರತವು ನೆಲದ ಮೇಲೆ ಮಾತ್ರವಲ್ಲದೆ ಆಕಾಶದಲ್ಲಿಯೂ ಒಟ್ಟಾಗಿ ಭಯೋತ್ಪಾದನೆಯ ವಿರುದ್ಧ ಹೋರಾಡುತ್ತಿವೆ ಎಂದು ಪ್ರಧಾನಿ ಮೋದಿ ಧನ್ಯವಾದ ಅರ್ಪಿಸಿ ತಿಳಿಸಿದ್ದಾರೆ. ನಮ್ಮಿಬ್ಬರ ನಡುವಿನ ದೀರ್ಘಕಾಲೀನ ಬಾಂಧವ್ಯವನ್ನು ಅವರು ಶ್ಲಾಘಿಸಿದ್ದಾರೆ” ಎಂದು ಹೇಳಿದ್ದಾರೆ.


ಇದನ್ನೂ ಓದಿ: ಫ್ಲೈದುಬೈ ವಿಮಾನದಲ್ಲಿ ಸಾವಿನ ದವಡೆಯಿಂದ 174 ಮಂದಿಯನ್ನು ಪಾರು ಮಾಡಿದ ಪೈಲಟ್ ಸ್ಮಿತ್ ಮಚ್ಚರ್​ಗೆ ಇಸ್ರೇಲ್​ನ ಪ್ರತಿಷ್ಠಿತ ಪ್ರಶಸ್ತಿ

ಪ್ರಧಾನಿ ಮೋದಿ ಕೂಡ ಇಸ್ರೇಲ್ ಪ್ರಧಾನಿಯಿಂದ ಕರೆ ಬಂದಿದ್ದನ್ನು ದೃಢಪಡಿಸಿದ್ದಾರೆ. “ನಮ್ಮ ದ್ವಿಪಕ್ಷೀಯ ಬಾಂಧವ್ಯದ ಪ್ರಗತಿಯನ್ನು ನಾವು ಪರಾಮರ್ಶಿಸಿದೆವು. ನಮ್ಮ ಪಾಲುದಾರಿಕೆಯನ್ನು ಇನ್ನಷ್ಟು ಬಲಪಡಿಸುವ ಬದ್ಧತೆಯನ್ನು ಪುನರುಚ್ಚರಿಸಿದೆವು. ಪಶ್ಚಿಮ ಏಷ್ಯಾದ ಇತ್ತೀಚಿನ ಬೆಳವಣಿಗೆಗಳ ಕುರಿತು ಅಭಿಪ್ರಾಯ ವಿನಿಮಯ ಮಾಡಿಕೊಂಡಿದ್ದೇವೆ. ಆ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಮರುಸ್ಥಾಪಿಸುವ ತುರ್ತು ಅಗತ್ಯವನ್ನು ಒತ್ತಿಹೇಳಿದ್ದೇವೆ” ಎಂದು ಮೋದಿ ತಿಳಿಸಿದ್ದಾರೆ.


ಪ್ರಧಾನಿ ಮೋದಿಯವರ ಇಸ್ರೇಲ್ ಪ್ರವಾಸದ ಹಿನ್ನೆಲೆ:

ಪ್ರಧಾನಿ ಮೋದಿ ಫೆಬ್ರವರಿ 25ರಿಂದ 26ರವರೆಗೆ ಇಸ್ರೇಲ್‌ಗೆ ಅಧಿಕೃತ ಭೇಟಿ ನೀಡಿದ್ದರು. ಆ ಸಮಯದಲ್ಲಿ ಇಬ್ಬರೂ ನಾಯಕರು ತಮ್ಮ ಕಾರ್ಯತಂತ್ರದ ಪಾಲುದಾರಿಕೆಯನ್ನು ‘ಶಾಂತಿ, ನಾವೀನ್ಯತೆ ಮತ್ತು ಸಮೃದ್ಧಿಗಾಗಿ ವಿಶೇಷ ಕಾರ್ಯತಂತ್ರದ ಪಾಲುದಾರಿಕೆ’ ಎಂಬ ಹೊಸ ಹಂತಕ್ಕೆ ಏರಿಸಲು ನಿರ್ಧರಿಸಿದ್ದರು. ಮಧ್ಯಪ್ರಾಚ್ಯದಲ್ಲಿ ಶಾಂತಿ ಮತ್ತು ಸ್ಥಿರತೆಯು ಭಾರತದ ಭದ್ರತಾ ಹಿತಾಸಕ್ತಿಗಳೊಂದಿಗೆ ಬೆಸೆದುಕೊಂಡಿದೆ ಎಂದು ಆ ಸಂದರ್ಭದಲ್ಲಿ ಮೋದಿ ಹೇಳಿದ್ದರು.

ಇದನ್ನೂ ಓದಿ: ಫ್ಲೈದುಬೈ ದಾಳಿಯನ್ನು ‘ಭಯೋತ್ಪಾದನಾ ಕೃತ್ಯ’ ಎಂದು ಘೋಷಿಸಿದ ಯುಎಇ; ಸ್ಮಿತ್ ಮಚ್ಚರ್ ಸಾಹಸಕ್ಕೆ ವಿಶ್ವಾದ್ಯಂತ ಪ್ರಶಂಸೆ

ಪೈಲಟ್ ಸ್ಮಿತ್ ಮಚ್ಚರ್ ಸಾಹಸ:

ಕಳೆದ ತಿಂಗಳು ದುಬೈನಿಂದ ಟೆಲ್ ಅವಿವ್‌ಗೆ ತೆರಳುತ್ತಿದ್ದ ‘ಫ್ಲೈದುಬೈ’ ವಿಮಾನ FZ1073ನಲ್ಲಿ ಕೋ-ಪೈಲಟ್ ವಿಮಾನವನ್ನು ಪತನಗೊಳಿಸಲು ಯತ್ನಿಸಿದಾಗ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಗಂಭೀರವಾಗಿ ಗಾಯಗೊಂಡರೂ ಸಹ ಹಲ್ಲೆಯನ್ನು ತಡೆದು ವಿಮಾನದಲ್ಲಿದ್ದ 174 ಪ್ರಯಾಣಿಕರನ್ನು ರಕ್ಷಿಸಿದ್ದರು. ಈ ಸಾಹಸಕ್ಕಾಗಿ ಪ್ರಧಾನಿ ನೆತನ್ಯಾಹು ಅವರು ಸ್ಮಿತ್ ಮಚ್ಚರ್ ಅವರನ್ನು “ಇಡೀ ಜಗತ್ತಿನ ರಿಯಲ್ ಹೀರೊ” ಎಂದು ಕರೆದು ಶ್ಲಾಘಿಸಿದ್ದರು. ಇದೀಗ ಸ್ಮಿತ್ ಮಚ್ಚರ್ ಅವರಿಗೂ ನೆತನ್ಯಾಹು ಅವರಿಂದ ವಿಶೇಷ ಆಹ್ವಾನ ಸಿಕ್ಕಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 7:57 pm, Thu, 22 October 26

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us