ಸ್ಫೋಟಕ್ಕೂ ಮುನ್ನ ಮುಖಕ್ಕೆ ಮಾಸ್ಕ್ ಧರಿಸಿ ಟೋಲ್ ಪ್ಲಾಜಾದಲ್ಲಿ ಕಾಣಿಸಿಕೊಂಡಿದ್ದ ಐ20 ಕಾರು ಚಾಲಕ

ಇದೀಗ ಸಿಕ್ಕಿರುವ ಹೊಸ ಸಿಸಿಟಿವಿ ದೃಶ್ಯಗಳಲ್ಲಿ ದೆಹಲಿಯ ಆತ್ಮಹತ್ಯಾ ಬಾಂಬರ್ ಮುಖಕ್ಕೆ ಮಾಸ್ಕ್ ಧರಿಸಿ ಟೋಲ್ ಪ್ಲಾಜಾದಲ್ಲಿ ನಿಂತಿರುವುದು ಕಂಡುಬಂದಿದೆ. ಕಪ್ಪು ಮಾಸ್ಕ್ ಧರಿಸಿ HR26CE7674 ನಂಬರ್ ಪ್ಲೇಟ್ ಹೊಂದಿರುವ ಹುಂಡೈ i20 ಅನ್ನು ಚಾಲನೆ ಮಾಡುತ್ತಿರುವ ವ್ಯಕ್ತಿಯ ದೃಶ್ಯಾವಳಿಗಳು ಟೋಲ್ ಪ್ಲಾಜಾದ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಇದೀಗ ತನಿಖೆಯಲ್ಲಿ ಆ ಚಾಲಕ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಮೂಲದ ವೈದ್ಯ ಉಮರ್ ಉನ್ ನಬಿ ಎಂದು ತಿಳಿದುಬಂದಿದೆ.ಭಾನುವಾರ ಫರಿದಾಬಾದ್‌ನಲ್ಲಿ ಬೃಹತ್ ಸ್ಫೋಟಕಗಳ ಸಂಗ್ರಹವನ್ನು ವಶಪಡಿಸಿಕೊಂಡ ಭಯೋತ್ಪಾದಕ ಮಾಡ್ಯೂಲ್‌ಗೂ ಈ ವೈದ್ಯನಿಗೂ ಸಂಬಂಧವಿರುವ ಅನುಮಾನ ವ್ಯಕ್ತವಾಗಿದೆ.

ಸ್ಫೋಟಕ್ಕೂ ಮುನ್ನ ಮುಖಕ್ಕೆ ಮಾಸ್ಕ್ ಧರಿಸಿ ಟೋಲ್ ಪ್ಲಾಜಾದಲ್ಲಿ ಕಾಣಿಸಿಕೊಂಡಿದ್ದ ಐ20 ಕಾರು ಚಾಲಕ
Delhi Car Blast

Updated on: Nov 11, 2025 | 6:03 PM

ನವದೆಹಲಿ, ನವೆಂಬರ್ 11: ದೆಹಲಿಯ ಕೆಂಪು ಕೋಟೆ ಬಳಿ ನಡೆದ ಬಾಂಬ್ ದಾಳಿಯಲ್ಲಿ ಬಳಸಲಾದ ಹುಂಡೈ ಐ20 ಕಾರಿನ ಬಗ್ಗೆ ತನಿಖಾಧಿಕಾರಿಗಳು ಹಲವು ಕುತೂಹಲಕಾರಿ ವಿಷಯಗಳನ್ನು ಪತ್ತೆಹಚ್ಚಿದ್ದಾರೆ. ಈ ಕಾರು ಸ್ಫೋಟಕ್ಕೂ (Delhi Car Blast) ಕೆಲವು ಗಂಟೆಗಳ ಮೊದಲು ಬದರ್ಪುರ್ ಟೋಲ್ ಪ್ಲಾಜಾದ ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದ್ದು, ಅದರೊಳಗೆ ಕುಳಿತಿದ್ದ ಚಾಲಕ ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದಾನೆ. ಕೈಯನ್ನು ಮಾತ್ರ ಹೊರಗೆ ಹಾಕಿರುವ ಆತ ಅದಾದ ನಂತರವೂ ಯಾವ ಕ್ಯಾಮೆರಾಗೂ ಮುಖ ತೋರಿಸಿಲ್ಲ. ಹೀಗಾಗಿ, ಆತ ಪ್ಲಾನ್ ಮಾಡಿಯೇ ತನ್ನ ಗುರುತು ಸಿಗದಂತೆ ಎಚ್ಚರ ವಹಿಸಿರುವುದು ದೃಢಪಟ್ಟಿದೆ. ಕಾರು ಚಲಾಯಿಸುತ್ತಿದ್ದಾತ ಆತ್ಮಹತ್ಯಾ ಬಾಂಬರ್ ಡಾ. ಉಮರ್ ಮೊಹಮ್ಮದ್ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದು, ಆತ ಕೂಡ ಬಾಂಬ್ ಸ್ಫೋಟದ ವೇಳೆ ಸಾವನ್ನಪ್ಪಿದ್ದಾನೆ.

ಸೋಮವಾರ ಬೆಳಿಗ್ಗೆ 8.13ರ ಸಿಸಿಟಿವಿ ದೃಶ್ಯಗಳಲ್ಲಿ ಮೊಹಮ್ಮದ್ ಮಾಸ್ಕ್ ಧರಿಸಿ ಹರಿಯಾಣ ಮತ್ತು ದೆಹಲಿಯ ಗಡಿಯಲ್ಲಿರುವ ಟೋಲ್ ಪ್ಲಾಜಾದಲ್ಲಿ ರಶೀದಿ ಪಡೆಯುತ್ತಿರುವುದನ್ನು ಕಾಣಬಹುದು. ಆ ಕಾರು ಬೆಳಿಗ್ಗೆ 7.30ರ ಸುಮಾರಿಗೆ ಫರಿದಾಬಾದ್‌ನ ಏಷ್ಯನ್ ಆಸ್ಪತ್ರೆ ಬಳಿ ಕಾಣಿಸಿಕೊಂಡಿದ್ದು, ಬೆಳಿಗ್ಗೆ 8.13ರ ಸುಮಾರಿಗೆ ಬದರ್ಪುರ್ ಟೋಲ್ ಪ್ಲಾಜಾ ದಾಟಿ 8.20ರ ಸುಮಾರಿಗೆ ಓಖ್ಲಾದಲ್ಲಿತ್ತು ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ದೆಹಲಿ ಸ್ಫೋಟ: ಐ20 ಕಾರಿನ ಬಗ್ಗೆ ಶಾಕಿಂಗ್ ಮಾಹಿತಿ ಬಯಲು, ಕೆಂಪುಕೋಟೆ ಬಳಿ ಬಂದಿದ್ಹೇಗೆ?

ಕೆಂಪು ಕೋಟೆ ಬಳಿಯ ಪಾರ್ಕಿಂಗ್ ಸ್ಥಳದಲ್ಲಿ ಮಧ್ಯಾಹ್ನ 3.19ರ ವೇಳೆಗೆ ನಿಲ್ಲಿಸಿ ಸಂಜೆ 6.30ರ ಸುಮಾರಿಗೆ ಹೊರಟಿತ್ತು. ಈ ಸಮಯದಲ್ಲಿ ಮೊಹಮ್ಮದ್ ಒಂದು ನಿಮಿಷವೂ ಕಾರನ್ನು ಬಿಟ್ಟು ಕೆಳಗೆ ಇಳಿದಿರಲಿಲ್ಲ. ಬಹುಶಃ ಕಾರಿನೊಳಗಿನ ಸ್ಫೋಟಕಗಳು ಪತ್ತೆಯಾಗುತ್ತವೆ ಎಂಬ ಭಯದಿಂದ ಆತ ಕಾರಿನಲ್ಲೇ ಕುಳಿತಿರಬಹುದು.

ಅದಾದ ಕೇವಲ 22 ನಿಮಿಷಗಳ ನಂತರ ಐ20 ಕಾರು ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿಯ ನೇತಾಜಿ ಸುಭಾಷ್ ಮಾರ್ಗದಲ್ಲಿ ನಿಧಾನವಾಗಿ ಚಲಿಸುತ್ತಿತ್ತು. ಒಂದು ಬದಿಯಲ್ಲಿ ಕೆಂಪು ಕೋಟೆ ಮತ್ತು ಇನ್ನೊಂದು ಬದಿಯಲ್ಲಿ ಜನದಟ್ಟಣೆಯ ಚಾಂದನಿ ಚೌಕ್ ಮಾರುಕಟ್ಟೆ ಇತ್ತು. ಆಗ ಟ್ರಾಫಿಕ್ ಸಿಗ್ನಲ್ ಬಳಿ ಅದು ಸ್ಫೋಟಗೊಂಡಿತು. ಇದರಿಂದ ಐ20 ಬಳಿ ಇದ್ದ 6 ಕಾರುಗಳು ಮತ್ತು 2 ಇ-ರಿಕ್ಷಾಗಳು ಸೇರಿದಂತೆ 9 ವಾಹನಗಳು ಬೆಂಕಿಗೆ ಆಹುತಿಯಾದವು. ಪಾದಚಾರಿಗಳು, ಕಾರಿನಲ್ಲಿದ್ದ ಪ್ರಯಾಣಿಕರು ಸೇರಿದಂತೆ 10 ಜನರು ಮೃತಪಟ್ಟರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ