ಯುವಕರನ್ನು ಐಸಿಸ್ ಉಗ್ರಗಾಮಿ ಸಂಘಟನೆಗೆ ಸೆಳೆಯಲು ಸಂಚು: ಸೂತ್ರಧಾರನನ್ನು ಬಂಧಿಸಿದ ಎನ್​ಐಎ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Oct 20, 2022 | 12:43 PM

ಐಸಿಸ್ ಪರವಾಗಿ ಭಾರತೀಯ ಯುವಕರನ್ನು ಇಸ್ಲಾಂ ಮೂಲಭೂತವಾದಕ್ಕೆ ಆಕರ್ಷಿಸುವ ಹಾಗೂ ಉಗ್ರಗಾಮಿ ಸಂಘಟನೆಗೆ ಭರ್ತಿ ಮಾಡಿಕೊಳ್ಳುವ ಕೆಲಸ ಮಾಡುತ್ತಿದ್ದ ಎಂಬ ಅಂಶವು NIA ತನಿಖೆಯ ವೇಳೆ ಬೆಳಕಿಗೆ ಬಂದಿದೆ.

ಯುವಕರನ್ನು ಐಸಿಸ್ ಉಗ್ರಗಾಮಿ ಸಂಘಟನೆಗೆ ಸೆಳೆಯಲು ಸಂಚು: ಸೂತ್ರಧಾರನನ್ನು ಬಂಧಿಸಿದ ಎನ್​ಐಎ
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ರಾಷ್ಟ್ರೀಯ ತನಿಖಾ ದಳದ (National Investigation Agency – NIA) ಅಧಿಕಾರಿಗಳು ವಾರಣಾಸಿ, ಉತ್ತರ ಪ್ರದೇಶ ಮತ್ತು ದೆಹಲಿಯ ವಿವಿಧೆಡೆ ದಾಳಿ ನಡೆಸಿ ಐಸಿಸ್ (ISIS) ಸಂಘಟನೆಯೊಂದಿಗೆ ನಂಟು ಹೊಂದಿದ್ದ ತೀವ್ರವಾದಿಯನ್ನು ಬಂಧಿಸಲಾಗಿದೆ. ‘ವಾಯ್ಸ್​ ಆಫ್ ಹಿಂದ್’ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರತಾ ಏಜೆನ್ಸಿಗಳು ತನಿಖೆ ಚುರುಕುಗೊಳಿಸಿದ್ದು ಅದರ ಭಾಗವಾಗಿಯೇ ಈ ಬಂಧನ ನಡೆದಿದೆ ಎಂದು ತಿಳಿದುಬಂದಿದೆ.

ಈ ಸಂಬಂಧ ಎನ್​ಐಎ ಅಧಿಕಾರಿಗಳು ಬಾಸಿತ್ ಕಲಾಂ ಸಿದ್ದಕಿ (Kalam Siddiqui) ಎಂಬಾತನನ್ನು ಐಸಿಸ್ ಜೊತೆಗೂಡಿ ಸಂಚು ನಡೆಸಿದ ಆರೋಪದ ಮೇಲೆ ಬಂಧಿಸಿದ್ದಾರೆ. ವಾರಣಾಸಿ ಮೂಲದ ಸಿದ್ದಕಿ, ಐಸಿಸ್ ಪರವಾಗಿ ಭಾರತೀಯ ಯುವಕರನ್ನು ಇಸ್ಲಾಂ ಮೂಲಭೂತವಾದಕ್ಕೆ ಆಕರ್ಷಿಸುವ ಹಾಗೂ ಉಗ್ರಗಾಮಿ ಸಂಘಟನೆಗೆ ಭರ್ತಿ ಮಾಡಿಕೊಳ್ಳುವ ಕೆಲಸ ಮಾಡುತ್ತಿದ್ದ ಎಂಬ ಅಂಶವು ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಹೀಗೆ ಉಗ್ರಗಾಮಿ ಸಂಘಟನೆಗಳಿಗೆ ಸೇರಿಕೊಂಡ ಯುವಕರು ಹಿಂಸಾಕೃತ್ಯಗಳನ್ನು ನಡೆಸುವ ಮೂಲಕ ಭಾರತದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಸಂಘರ್ಷಕ್ಕೆ ಇಳಿಯುತ್ತಿದ್ದರು. ಸಮಾಜದಲ್ಲಿ ಭಯೋತ್ಪಾದನೆ ಚಟುವಟಿಕೆ ಹೆಚ್ಚಿಸಲು ಪ್ರಯತ್ನಿಸುತ್ತಿದ್ದರು ಎಂಬ ಅಂಶ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಭಾರತದ ವಿರುದ್ಧ ಉಗ್ರಗಾಮಿ ಚಟುವಟಿಕೆ ನಡೆಸಲು ಆನ್​ಲೈನ್​ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಬಗ್ಗೆಯೂ ಹೊಸ ಕಾರ್ಯತಂತ್ರವನ್ನು ಉಗ್ರರು ರೂಪಿಸಿದ್ದರು. ಇದಕ್ಕಾಗಿ ‘ವಾಯ್ಸ್​ ಆಫ್ ಖೊರಾಸನ್’ ಆನ್​ಲೈನ್ ಪತ್ರಿಕೆಯನ್ನು ಬಳಸಿಕೊಳ್ಳಲಾಗುತ್ತಿತ್ತು. ಎನ್​ಐಎ ಈ ಸಂಬಂಧ ‘ವಾಯ್ಸ್​ ಆಫ್ ಹಿಂದ್’ ಸಂಚು ಭೇದಿಸಿದ ನಂತರ 6 ಮಂದಿಯನ್ನು ಬಂಧಿಸಲಾಯಿತು.

ಶೋಧ ಕಾರ್ಯಾಚರಣೆ ವೇಳೆ ಎನ್​ಐಎ ಅಧಿಕಾರಿಗಳು ಉಗ್ರಗಾಮಿ ಕೃತ್ಯಕ್ಕೆ ಬಳಸುತ್ತಿದ್ದ ಹಲವು ವಸ್ತುಗಳು, ಹಸ್ತಪ್ರತಿಗಳು, ಸುಧಾರಿತ ಸ್ಫೋಟಕಗಳು, ಮೊಬೈಲ್ ಫೋನ್​ಗಳು, ಲ್ಯಾಪ್​ಟಾಪ್​ಗಳು, ಪೆನ್​ಡ್ರೈವ್​ಗಳನ್ನು ವಶಪಡಿಸಿಕೊಂಡಿದ್ದಾರೆ. ಕಳೆದ ಜೂನ್ ತಿಂಗಳಲ್ಲಿ ಎನ್​ಐಎ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿತ್ತು.