ಶ್ರೀನಗರ: ಉಗ್ರ ಸಂಘಟನೆಗಳಿಗೆ ಹಣಕಾಸಿನ ನೆರವು ನೀಡುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಷ್ಟ್ರೀಯ ತನಿಖಾ ದಳ (NIA) ಜಮ್ಮು-ಕಾಶ್ಮೀರದ ಹಲವು ಕಡೆಗಳಲ್ಲಿ ದಾಳಿ ನಡೆಸಿದೆ. ಶ್ರೀನಗರ, ಅನಂತ್ನಾಗ್, ಬಾರಾಮುಲ್ಲಾ ಜಿಲ್ಲೆಗಳ ಹಲವು ಪ್ರದೇಶಗಳಲ್ಲಿ ತನಿಖಾ ಸಂಸ್ಥೆ ರೇಡ್ ಮಾಡಿದ್ದಾಗಿ ವರದಿಯಾಗಿದೆ.
ಈ ರೇಡ್ ವೇಳೆ ಐಸಿಸ್ ಉಗ್ರಸಂಘಟನೆಯೊಂದಿಗೆ ಸಂಪರ್ಕ ಹೊಂದಿದ ಐವರನ್ನು ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಅವರಲ್ಲಿ ಕೆಲವರನ್ನು ತಮ್ಮ ವಶಕ್ಕೆ ತೆಗೆದುಕೊಂಡು ವಿಚಾರಣೆ ಪ್ರಾರಂಭಿಸಿದ್ದಾರೆ. ಇಂದು ಜಮ್ಮು-ಕಾಶ್ಮೀರ ಆಡಳಿತ ಒಟ್ಟು 11 ಮಂದಿ ತನ್ನ ಉದ್ಯೋಗಿಗಳನ್ನು ವಜಾಗೊಳಿಸಿದ್ದು, ಅದರಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಮತ್ತು ಮೋಸ್ಟ್ ವಾಂಟೆಡ್ ಉಗ್ರ ಸೈಯದ್ ಸಲಾಹುದ್ದೀನ್ರ ಪುತ್ರನೂ ಸೇರಿದ್ದಾನೆ ಎನ್ನಲಾಗಿದೆ. ಈತ ಉಗ್ರಸಂಘಟನೆಗಳಿಗಾಗಿ ಕೆಲಸ ಮಾಡಿದ್ದಾನೆಂದು ಆರೋಪಿಸಲಾಗಿದೆ.
ಮೂವರು ಉಗ್ರರ ಹತ್ಯೆ
ಇಂದು ಲಷ್ಕರ್ ಇ ತೊಯ್ಬಾ(LeT) ಉಗ್ರ ಸಂಘಟನೆಯ ಮೂವರು ಭಯೋತ್ಪಾದಕರನ್ನು ಜಮ್ಮು-ಕಾಶ್ಮೀರ ಪೊಲೀಸರು ಅನಂತ್ನಾಗ್ನಲ್ಲಿ ಹತ್ಯೆ ಮಾಡಿದ್ದಾರೆ. ಅನಂತ್ನಾಗ್ನ ಕವಾರಿಗಾಮ್ ರಾಣಿಪೋರಾ ಪ್ರದೇಶದಲ್ಲಿ ಉಗ್ರರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಹತ್ಯೆಯಾದ ಉಗ್ರರನ್ನು ಆರಿಫ್ ಹಜಾಮ್, ಬಸಿತ್ ರಶೀದ್ ಗನೈ ಮತ್ತು ಔಡ್ಸೂ ತೆಲ್ವಾನಿ ಅಕ್ಬಲ್ ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ಲಷ್ಕರ್ ಇ ತೊಯ್ಬಾಕ್ಕೆ ಸೇರಿದವರೇ ಆಗಿದ್ದರು ಎಂದು ಪೊಲೀಸರು ಖಚಿತ ಪಡಿಸಿದ್ದಾರೆ. ಜಮ್ಮು-ಕಾಶ್ಮೀರ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ನಡೆದ ಹಲವು ದಾಳಿಗಳಲ್ಲಿ ಇವರು ಪಾಲ್ಗೊಂಡಿದ್ದರು. ರಕ್ಷಣಾ ಅಧಿಕಾರಿಗಳು, ನಾಗರಿಕರನ್ನು ಹತ್ಯೆ ಮಾಡಿದವರಾಗಿದ್ದಾರೆ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ನೆಟ್ವರ್ಕ್ ಸಿಗದೇ ವಿದ್ಯಾರ್ಥಿಗಳ ಪರದಾಟ; ಸರ್ಕಾರದ ವಿರುದ್ಧ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಆಕ್ರೋಶ
Art With Heart : ಆನ್ಲೈನ್ ತರಗತಿಗಳಿಗೆಂದೇ ವೈಜ್ಞಾನಿಕ ರಂಗಪಠ್ಯ ರೂಪಿಸಿದ ‘ರಂಗರಥ‘
NIA conducts raids at multiple locations in Jammu And Kashmir