ಗಡಿ ಬಿಕ್ಕಟ್ಟು ವಿಚಾರ: ಭಾರತ-ಚೀನಾ ನಡುವೆ 16 ಗಂಟೆಗಳ ಮಾತುಕತೆ

ಜ.25ರಂದು ಬೆಳಗ್ಗೆ 10.30ಕ್ಕೆ ಆರಂಭವಾದ ಮಾತುಕತೆಯು ರಾತ್ರಿ 2.30ರ ವರೆಗೆ ನಡೆದಿತ್ತು. 16 ಗಂಟೆಗಳ ಕಾಲ ನಡೆದ ಉಭಯ ದೇಶಗಳ ಸಭೆಯಲ್ಲಿ ಪೂರ್ವ ಲಡಾಖ್ ಭಾಗದಲ್ಲಿ ನಿಯೋಜಿಸಿರುವ ಸೇನೆಯನ್ನು ಹಿಂಪಡೆಯುವ ಕುರಿತು ಚರ್ಚೆ ನಡೆಸಲಾಯಿತು

ಗಡಿ ಬಿಕ್ಕಟ್ಟು ವಿಚಾರ: ಭಾರತ-ಚೀನಾ ನಡುವೆ 16 ಗಂಟೆಗಳ ಮಾತುಕತೆ
ಪ್ರಾತಿನಿಧಿಕ ಚಿತ್ರ
Updated By: ganapathi bhat

Updated on: Apr 06, 2022 | 8:42 PM

ದೆಹಲಿ: ಪೂರ್ವ ಲಡಾಖ್ ಭಾಗದಲ್ಲಿ ಉದ್ಭವಿಸಿರುವ ಸಂಘರ್ಷ ಪರಿಸ್ಥಿತಿಯನ್ನು ತಿಳಿಗೊಳಿಸುವ ಉದ್ದೇಶದಿಂದ ನಡೆದ ಭಾರತ ಚೀನಾ ಸೇನಾ ಕಮಾಂಡರ್ ಮಟ್ಟದ 9ನೇ ಸುತ್ತಿನ ಮಾತುಕತೆ ತಡರಾತ್ರಿ 2.30 ಸುಮಾರಿಗೆ ಮುಕ್ತಾಯವಾಗಿದೆ.

ನಿನ್ನೆ ಬೆಳಗ್ಗೆ 10.30ಕ್ಕೆ ಆರಂಭವಾದ ಮಾತುಕತೆಯು ರಾತ್ರಿ 2.30ರ ವರೆಗೆ ನಡೆದಿತ್ತು. 16 ಗಂಟೆಗಳ ಕಾಲ ನಡೆದ ಉಭಯ ದೇಶಗಳ ಸಭೆಯಲ್ಲಿ ಪೂರ್ವ ಲಡಾಖ್ ಭಾಗದಲ್ಲಿ ನಿಯೋಜಿಸಿರುವ ಸೇನೆಯನ್ನು ಹಿಂಪಡೆಯುವ ಕುರಿತು ಚರ್ಚೆ ನಡೆಸಲಾಯಿತು ಎಂದು ಮೂಲಗಳು ಮಾಹಿತಿ ನೀಡಿವೆ.

ಚೀನಾ ಭೂಭಾಗದ ವಾಸ್ತವ ನಿಯಂತ್ರಣ ರೇಖೆ (LAC) ಸಮೀಪದ ಮೋಲ್ಡೋ ಗಡಿಭಾಗದಲ್ಲಿ ಸಭೆ ನಡೆದಿತ್ತು. ಮಾತುಕತೆಯ ಫಲಿತಾಂಶಗಳ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಗಡಿ ವಿಚಾರವಾಗಿ ಸಂಘರ್ಷ ಪರಿಸ್ಥಿತಿ ನಿರ್ಮಾಣವಾದ ಬಳಿಕ, ನಿನ್ನೆಯ ಮಾತುಕತೆಗೂ ಮೊದಲು 8 ಸುತ್ತಿನ ಮಾತುಕತೆ ನಡೆದಿತ್ತು. ಎಂಟನೇ ಸುತ್ತಿನ ಮಾತುಕತೆ ಕಳೆದ ವರ್ಷ ನವೆಂಬರ್ 6ರಂದು ನಡೆದಿತ್ತು.

7ನೇ ಸುತ್ತಿನ ಮಾತುಕತೆಯು, ಕಳೆದ ವರ್ಷ ಅಕ್ಟೋಬರ್ 12ರಂದು ನಡೆದಿತ್ತು. ಪಾಂಗಾಂಗ್ ಸರೋವರದ ದಕ್ಷಿಣ ಭಾಗದಿಂದ ಭಾರತದ ಸೈನಿಕರು ಕೂಡಲೇ ಹಿಂದೆ ಸರಿಯಬೇಕು ಎಂದು ಚೀನಾ ಅಂದು ಒತ್ತಾಯಿಸಿತ್ತು. ಪಾಂಗಾಂಗ್ ಸರೋವರ ಸೇರಿದಂತೆ, ಭಾರತ-ಚೀನಾ ಸಂಘರ್ಷಕ್ಕೆ ಕಾರಣವಾಗಿರುವ ಇತರ ಸ್ಥಳಗಳಿಂದ ಸೈನಿಕರನ್ನು ಹಿಂಪಡೆಯುವ ಪ್ರಕ್ರಿಯೆ ಎರಡೂ ದೇಶಗಳಿಂದ ಏಕಕಾಲಕ್ಕೆ ನಡೆಯಬೇಕು ಎಂದು ಸ್ಪಷ್ಟಪಡಿಸಿತ್ತು.

ಹಲವು ಸುತ್ತಿನ ಮಾತುಕತೆಗಳು ವಿಫಲವಾದ ಬಳಿಕ, ಉಭಯ ದೇಶಗಳ ಒಟ್ಟು 1 ಲಕ್ಷ ಸೈನಿಕರನ್ನು ತಮ್ಮ ವಿವಿಧ ಗಡಿ ಭಾಗದಲ್ಲಿ ನಿಯೋಜಿಸಿತ್ತು. ಭಾರತವೂ 50 ಸಾವಿರ ಸೈನಿಕರನ್ನು ಸೂಕ್ತ ಸ್ಥಳಗಳಲ್ಲಿ ನಿಯೋಜನೆ ಮಾಡಿ ಯುದ್ಧಸನ್ನದ್ಧತೆಯ ಸಂದೇಶ ರವಾನಿಸಿತ್ತು.

ಗಡಿ ನುಸುಳಲು ಯತ್ನಿಸಿದ ಚೀನಾ ಯೋಧರನ್ನು ಹಿಮ್ಮೆಟ್ಟಿಸಿದ ಭಾರತೀಯ ಸೇನೆ; ಸಿಕ್ಕಿಂ ನಾಥುಲಾದಲ್ಲಿ ಘಟನೆ

Published On - 1:13 pm, Mon, 25 January 21