ದೆಹಲಿ: ಇಡೀ ದೇಶವನ್ನೇ ಬೆಚ್ಚಿಬೀಳಿಸಿದ.. ರಾಷ್ಟ್ರ ರಾಜಧಾನಿ ದಿಲ್ಲಿಯನ್ನೇ ನಡುಗಿಸಿದ್ದ ನಿರ್ಭಯಾ ಗ್ಯಾಂಗ್ರೇಪ್ ನಡೆದು ಏಳು ವರ್ಷಗಳೇ ಉರುಳಿವೆ. ಆದ್ರೂ ಆಕೆಯ ಮೇಲೆ ಮೃಗಗಳಂತೆ ಎರಗಿ, ರಣಹದ್ದುಗಳಂತೆ ಕಿತ್ತು ತಿಂದ ನರ ರಾಕ್ಷಸರು ಇನ್ನೂ ಜೀವಂತವಾಗಿದ್ದಾರೆ. ಮರಣ ಶಾಸನದಿಂದ ತಪ್ಪಿಸಿಕೊಳ್ಳಲು ನಾನಾ ಪ್ರಯತ್ನ ಮಾಡುತ್ತಿದ್ದಾರೆ.
ದಿಲ್ಲಿ ಕೋರ್ಟ್ಗೆ ಹೊಸ ಅರ್ಜಿ ಸಲ್ಲಿಸಿದ ಮತ್ತೊಬ್ಬ ಅತ್ಯಾಚಾರಿ:
ಹೌದು, ಮರಣದಂಡನೆ ಶಿಕ್ಷೆ ಮರುಪರಿಶೀಲನೆ ಕೋರಿ ಅತ್ಯಾಚಾರಿ ಅಕ್ಷಯ್ ಕುಮಾರ್ ಸಿಂಗ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಅರ್ಜಿಯನ್ನ ವಜಾಗೊಳಿಸಿ ಮರಣದಂಡನೆ ಶಿಕ್ಷೆಯನ್ನ ಎತ್ತಿ ಹಿಡಿದಿದೆ. ಅಲ್ಲಿಗೆ ನಿರ್ಭಯಾ ಅತ್ಯಾಚಾರಿಗಳ ನೇಣು ಕುಣಿಕೆ ಮತ್ತಷ್ಟು ಬಿಗಿಯಾಯ್ತು ಅಂತ ಇಡೀ ದೇಶ ನೆಮ್ಮದಿಯ ನಿಟ್ಟುಸಿರು ಬಿಟ್ಟಿತ್ತು. ಆದ್ರೀಗ ಮತ್ತೊಬ್ಬ ಅತ್ಯಾಚಾರಿ ದಿಲ್ಲಿ ಹೈಕೋರ್ಟ್ಗೆ ಹೊಸ ಅರ್ಜಿಯೊಂದನ್ನ ಸಲ್ಲಿಸಿ ಎಲ್ಲರಿಗೂ ಶಾಕ್ ನೀಡಿದ್ದಾನೆ.
ಅರ್ಜಿಯಲ್ಲಿ ಮಹತ್ವದ ವಿಚಾರವೊಂದನ್ನ ಉಲ್ಲೇಖಿಸಿರೋ ಪವನ್ ಕುಮಾರ್ ಗುಪ್ತಾ, ಗಲ್ಲು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಮಾಸ್ಟರ್ ಪ್ಲಾನ್ ರೂಪಿಸಿದ್ದಾನೆ. ಹಾಗಿದ್ರೆ ಪವನ್ ಗುಪ್ತ ಪ್ಲಾನ್ ಏನು..? ಆತ ಸಲ್ಲಿಸಿದ ಹೊಸ ಅರ್ಜಿಯಲ್ಲಿ ಏನಿದೆ ಎನ್ನುವುದಾದರೆ…
ಅತ್ಯಾಚಾರಿ ಪವನ್ ಅರ್ಜಿಯಲ್ಲಿ ಏನಿದೆ..?
ಅತ್ಯಾಚಾರ ಕೃತ್ಯ ಎಸಗುವ ವೇಳೆ ನಾನು ಅಪ್ರಾಪ್ತನಾಗಿದ್ದೆ ಅಂತ ಅರ್ಜಿಯಲ್ಲಿ ಉಲ್ಲೇಖಿಸಿರೋ ಪವನ್ ಗುಪ್ತ, 2012ರಲ್ಲಿ ತನಿಖಾಧಿಕಾರಿಗಳು ನನ್ನ ಅಪ್ರಾಪ್ತತೆ ಪರೀಕ್ಷೆಯನ್ನೇ ನಡೆಸಿರಲಿಲ್ಲ ಅಂತ ಹೇಳಿದ್ದಾನೆ. ಹೀಗಾಗಿ ಯಾವುದೇ ಸಮಯದಲ್ಲಾದರೂ ಅರ್ಜಿಯನ್ನ ಸಲ್ಲಿಸಲು ಬಾಲಾಪರಾಧ ಕಾಯ್ದೆಯ ಅಡಿಯಲ್ಲಿ ಅವಕಾಶ ಇದೆ ಅಂತ ಉಲ್ಲೇಸಿದ್ದಾನೆ.
ಈ ಮೂಲಕ ಬಾಲಾಪರಾಧಿ ಎಂಬ ವಿನಾಯಿತಿ ಪಡೆದು ಮರಣದಂಡನೆಯಿಂದ ಪಾರಾಗಲು ಸಂಚು ಹೂಡಿದ್ದಾನೆ. ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟ್ ಪೀಠದಲ್ಲಿ ಇಂದು ಅರ್ಜಿಯ ವಿಚಾರಣೆ ನಡೆಯಲಿದ್ದು ಭಾರಿ ಕುತೂಹಲ ಮೂಡಿಸಿದೆ.
Published On - 7:49 am, Thu, 19 December 19