AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋಪಿನ ಪೌಡರ್ ಬಳಸಿ 2.3 ಕೋಟಿ ಲೀಟರ್ ನಕಲಿ ಹಾಲು ತಯಾರಿ; ಮಹಾರಾಷ್ಟ್ರದಲ್ಲಿ ಬಯಲಾಯ್ತು ಹಗರಣ

ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ ಸಂಸ್ಥೆಯು (FDA) ಇತ್ತೀಚೆಗೆ ಅತ್ಯಂತ ಆಘಾತಕಾರಿ ಹಾಲಿನ ಕಲಬೆರಕೆ ದಂಧೆಯನ್ನು ಪತ್ತೆಹಚ್ಚಿದೆ. ಕೇವಲ ಕಳೆದ 6 ತಿಂಗಳ ಅವಧಿಯಲ್ಲಿ ಬರೋಬ್ಬರಿ 2.3 ಕೋಟಿ ಲೀಟರ್‌ಗಿಂತಲೂ ಹೆಚ್ಚು ನಕಲಿ ಹಾಲನ್ನು ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಮಾರಾಟ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತನಿಖಾಧಿಕಾರಿಗಳ ಪ್ರಕಾರ, ಅಸಲಿ ಹಾಲಿನಂತೆಯೇ ಬಿಳಿ ಬಣ್ಣ ಮತ್ತು ಫ್ಯಾಟ್​ ಬರುವಂತೆ ಮಾಡಲು ಆರೋಪಿಗಳು ನಿರ್ಮಾ ಡಿಟರ್ಜೆಂಟ್ ಪೌಡರ್, ಪಾಮ್ ಆಯಿಲ್, ಕಡಿಮೆ ಗುಣಮಟ್ಟದ ರಾಸಾಯನಿಕಗಳು, ಕಳಪೆ ಗುಣಮಟ್ಟದ ಹಾಲಿನ ಪುಡಿ ಬಳಸುತ್ತಿದ್ದರು ಎಂಬ ಆಘಾತಕಾರಿ ಸಂಗತಿ ಬಯಲಾಗಿದೆ.

ಸೋಪಿನ ಪೌಡರ್ ಬಳಸಿ 2.3 ಕೋಟಿ ಲೀಟರ್ ನಕಲಿ ಹಾಲು ತಯಾರಿ; ಮಹಾರಾಷ್ಟ್ರದಲ್ಲಿ ಬಯಲಾಯ್ತು ಹಗರಣ
Fake Milk Seized In MaharashtraImage Credit source: x
ಸುಷ್ಮಾ ಚಕ್ರೆ
|

Updated on:Jul 14, 2026 | 5:24 PM

Share

ಮುಖ್ಯಾಂಶಗಳು

  • ಮಹಾರಾಷ್ಟ್ರದಲ್ಲಿ ಕೃತಕ ಹಾಲಿನ ಮಾಫಿಯಾ
  • ಬರೋಬ್ಬರಿ 2.3 ಕೋಟಿ ಲೀಟರ್ ನಕಲಿ ಹಾಲು ತಯಾರಿ
  • ಆಹಾರ ಕಲಬೆರಕೆಯ ದೊಡ್ಡ ಹಗರಣ ಬಯಲು

ಮುಂಬೈ, ಜುಲೈ 14: ಮಹಾರಾಷ್ಟ್ರದ (Maharashtra) ಧಾರಾಶಿವ್ ಜಿಲ್ಲೆಯಲ್ಲಿ ಬೃಹತ್ ಪ್ರಮಾಣದ ಕೃತಕ ಅಥವಾ ನಕಲಿ ಹಾಲಿನ ಜಾಲವನ್ನು ಪೊಲೀಸರು ಹಾಗೂ ಆಹಾರ ಮತ್ತು ಔಷಧ ಆಡಳಿತ ಸಂಸ್ಥೆ (FDA) ಪತ್ತೆಹಚ್ಚಿದೆ. ಕಳೆದ 6 ತಿಂಗಳಲ್ಲಿ ಬರೋಬ್ಬರಿ 2.3 ಕೋಟಿ ಲೀಟರ್‌ಗೂ ಹೆಚ್ಚು ಕೃತಕ ಹಾಲನ್ನು ಇಡೀ ರಾಜ್ಯಾದ್ಯಂತ ಸರಬರಾಜು ಮಾಡಲಾಗಿದೆ ಎಂಬ ಆಘಾತಕಾರಿ ಮಾಹಿತಿ ತನಿಖೆಯಿಂದ ಹೊರಬಿದ್ದಿದೆ. ಧಾರಾಶಿವ್ ಜಿಲ್ಲೆಯ ಭೂಮ್ ತಾಲೂಕಿನಲ್ಲಿ ಅಧಿಕಾರಿಗಳು ನಡೆಸಿದ ದಾಳಿಯ ವೇಳೆ ವಶಪಡಿಸಿಕೊಂಡ ದಾಖಲೆಗಳು ಮತ್ತು ವಸ್ತುಗಳು ತನಿಖಾಧಿಕಾರಿಗಳನ್ನೇ ಬೆಚ್ಚಿಬೀಳಿಸಿವೆ. ಆರೋಪಿಗಳು ಅಸಲಿ ಹಾಲಿನಂತೆಯೇ ಕಾಣುವಂತೆ ಮಾಡಲು ಮತ್ತು ಹಾಲಿನಲ್ಲಿ ಕೊಬ್ಬಿನಾಂಶ ಹೆಚ್ಚಿಸಲು ಕೆಲವು ಅಪಾಯಕಾರಿ ವಸ್ತುಗಳನ್ನು ಬಳಸುತ್ತಿದ್ದರು.

ಅವುಗಳೆಂದರೆ, ನಿರ್ಮಾ ಡಿಟರ್ಜೆಂಟ್ ಪೌಡರ್ (ಬಟ್ಟೆ ಒಗೆಯುವ ಸೋಪಿನ ಪುಡಿ), ಪಾಮ್ ಆಯಿಲ್, ಕಡಿಮೆ ಗುಣಮಟ್ಟದ ರಾಸಾಯನಿಕ ಪುಡಿ, ಕಳಪೆ ಗುಣಮಟ್ಟದ ಹಾಲಿನ ಪುಡಿ. ಕೇವಲ ಕಳೆದ 6 ತಿಂಗಳಲ್ಲಿ ಸುಮಾರು 2,30,470 ಕೆಜಿ ಕಳಪೆ ಹಾಲಿನ ಪುಡಿಯನ್ನು ಬಳಸಿ, ಸುಮಾರು 9.21 ಕೋಟಿ ರೂಪಾಯಿ ಮೌಲ್ಯದ 23,04,070 ಲೀಟರ್ ನಕಲಿ ಹಾಲನ್ನು ಇವರು ಉತ್ಪಾದಿಸಿದ್ದರು.

ದಾಳಿಯ ವೇಳೆ ಪತ್ತೆಯಾದ ದಾಖಲೆಗಳ ಆಧಾರದ ಮೇಲೆ ಅಧಿಕಾರಿಗಳ ಪ್ರಕಾರ, ಕಳೆದ 6 ತಿಂಗಳಲ್ಲಿ ಈ ನಕಲಿ ಹಾಲು ತಯಾರಿಗೆ ಸುಮಾರು 2.3 ಲಕ್ಷ ಕೆಜಿ ಕಳಪೆ ಗುಣಮಟ್ಟದ ಹಾಲಿನ ಪುಡಿಯನ್ನು ಬಳಸಲಾಗಿದೆ. ಈ ಪುಡಿ ಮತ್ತು ರಾಸಾಯನಿಕಗಳ ಸಹಾಯದಿಂದ ಸುಮಾರು 23.04 ಲಕ್ಷ ಲೀಟರ್ ಕೃತಕ ಹಾಲನ್ನು ನೇರವಾಗಿ ಉತ್ಪಾದಿಸಲಾಗಿದೆ. ಈ ನಕಲಿ ಹಾಲಿನ ಅಂದಾಜು ಮಾರುಕಟ್ಟೆ ಮೌಲ್ಯ ಬರೋಬ್ಬರಿ 9.21 ಕೋಟಿ ರೂಪಾಯಿಗಳಿಗಿಂತಲೂ ಅಧಿಕ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರಿಗೆ ಬರುತ್ತಿದ್ದ ಕಳಪೆ ಹಾಲು: ಗಡಿಯಲ್ಲಿ ಎಫ್‌ಎಸ್‌ಎಸ್‌ಎಐ ಭರ್ಜರಿ ಕಾರ್ಯಾಚರಣೆ, 30 ಕ್ಕೂ ಹೆಚ್ಚು ವಾಹನಗಳು ಜಪ್ತಿ!

ಮಾರುಕಟ್ಟೆಗೆ 2.3 ಕೋಟಿ ಲೀಟರ್ ಹಾಲು ತಲುಪಿದ್ದು ಹೇಗೆ?:

ಆರೋಪಿಗಳು ಕೃತಕ ಹಾಲನ್ನು ನೇರವಾಗಿ ಮಾರಾಟ ಮಾಡುತ್ತಿರಲಿಲ್ಲ. ಬದಲಿಗೆ, ಡೈರಿಗಳಿಗೆ ಸರಬರಾಜು ಮಾಡುವ ಮುನ್ನ ಪ್ರತಿ 100 ಲೀಟರ್ ಅಸಲಿ ಹಾಲಿಗೆ 10 ಲೀಟರ್ ಕೃತಕ ಹಾಲನ್ನು (ಶೇ. 10ರಷ್ಟು ಅನುಪಾತದಲ್ಲಿ) ಮಿಶ್ರಣ ಮಾಡುತ್ತಿದ್ದರು. ಹೀಗೆ ಅಸಲಿ ಹಾಲಿನೊಂದಿಗೆ ಈ ಕೃತಕ ಹಾಲನ್ನು ಬೆರೆಸಿದ್ದರಿಂದ, ಒಟ್ಟು ಕಲಬೆರಕೆ ಹಾಲಿನ ಪ್ರಮಾಣ 2.3 ಕೋಟಿ ಲೀಟರ್‌ಗಿಂತಲೂ ಅಧಿಕವಾಗಿ ಗ್ರಾಹಕರ ಮನೆಗಳನ್ನು ತಲುಪಿದೆ.

ಆರೋಗ್ಯಕ್ಕೆ ಭೀಕರ ಅಪಾಯ:

ಬಟ್ಟೆ ಒಗೆಯುವ ಸೋಪಿನ ಪೌಡರ್ ಮತ್ತು ರಾಸಾಯನಿಕಗಳು ಮನುಷ್ಯನ ದೇಹವನ್ನು ಸೇರಿದರೆ ಕಿಡ್ನಿ, ಲಿವರ್ ಮತ್ತು ಜೀರ್ಣಾಂಗ ವ್ಯವಸ್ಥೆಗೆ ತೀವ್ರ ಹಾನಿಯಾಗುತ್ತದೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ಅದರಲ್ಲೂ ಮಕ್ಕಳು, ಗರ್ಭಿಣಿಯರು ಮತ್ತು ವೃದ್ಧರ ಆರೋಗ್ಯದ ಮೇಲೆ ಇದು ಅತ್ಯಂತ ಗಂಭೀರ ಪರಿಣಾಮ ಬೀರುತ್ತದೆ. ಸಾರ್ವಜನಿಕರ ಆರೋಗ್ಯದೊಂದಿಗೆ ಆಟವಾಡುವ ಇಂತಹ ಜಾಲಗಳ ವಿರುದ್ಧ ಮಹಾರಾಷ್ಟ್ರ ಎಫ್‌ಡಿಎ ಕಠಿಣ ಕಾನೂನು ಕ್ರಮ ಕೈಗೊಂಡಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಏಳು ಜನರ ವಿರುದ್ಧ ಕಠಿಣ ಕಾನೂನು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆದರೆ, ಎಫ್‌ಐಆರ್ ದಾಖಲಾಗಿ ವಾರ ಕಳೆದರೂ ಎಲ್ಲಾ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ವಿಶೇಷ ತನಿಖಾ ತಂಡವನ್ನು (SIT) ರಚಿಸಿದ್ದಾರೆ. ಭಾರತೀಯ ಆಹಾರ ಸುರಕ್ಷತಾ ಕಾಯ್ದೆಯಡಿ, ಜೀವಕ್ಕೆ ಕುತ್ತು ತರುವಂತಹ ಆಹಾರ ಕಲಬೆರಕೆ ದಂಧೆಯಲ್ಲಿ ತೊಡಗಿ ಅಪರಾಧ ಸಾಬೀತಾದರೆ, ಗರಿಷ್ಠ 10 ಲಕ್ಷ ರೂ. ದಂಡ ಮತ್ತು ಜೀವಾವಧಿ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.

ಇದನ್ನೂ ಓದಿ: ಎಂಇಎಸ್‌ಗೆ ಕಾನೂನು ನೆರವು: ಮಹಾರಾಷ್ಟ್ರ ಸರ್ಕಾರದ ನಿರ್ಧಾರಕ್ಕೆ ಪ್ರಿಯಾಂಕ್ ಖರ್ಗೆ ಕಿಡಿ

ಯಾರು ಈ ಐಎಎಸ್ ಅಧಿಕಾರಿ?:

ಮಹಾರಾಷ್ಟ್ರದಲ್ಲಿ ಸದ್ಯ ಆಹಾರ ಮತ್ತು ಔಷಧ ಆಡಳಿತ ಸಂಸ್ಥೆಯ (FDA) ವತಿಯಿಂದ ಹಾಲು ಕಲಬೆರಕೆ ಮತ್ತು ನಿಯಮ ಉಲ್ಲಂಘಿಸುವವರ ವಿರುದ್ಧ ಅತ್ಯಂತ ಕಠಿಣ ಕಾರ್ಯಾಚರಣೆ ನಡೆಯುತ್ತಿದೆ. ಈ ಬೃಹತ್ ಆಂದೋಲನದ ನೇತೃತ್ವವನ್ನು ಮಹಾರಾಷ್ಟ್ರದ ದಕ್ಷ ಐಎಎಸ್ ಅಧಿಕಾರಿ ತುಕಾರಾಮ್ ಮುಂಢೆ ವಹಿಸಿಕೊಂಡಿದ್ದಾರೆ. ಮೇ 25ರಂದು ಐಎಎಸ್ ಅಧಿಕಾರಿ ತುಕಾರಾಮ್ ಮುಂಢೆ ಅವರು ಮಹಾರಾಷ್ಟ್ರದ ಎಫ್‌ಡಿಎ (FDA) ಕಮಿಷನರ್ ಆಗಿ ಅಧಿಕಾರ ವಹಿಸಿಕೊಂಡರು. ಅವರು ಅಧಿಕಾರ ವಹಿಸಿಕೊಂಡ ಮೊದಲ ದಿನದಿಂದಲೇ ಆಹಾರ ಕಲಬೆರಕೆಯ ವಿರುದ್ಧ ಕಠಿಣ ಕಾರ್ಯಾಚರಣೆ ಆರಂಭವಾಯಿತು. ಡೈರಿಗಳು, ಸಾಗಣೆದಾರರು, ವಿತರಕರು, ಸಗಟು ವ್ಯಾಪಾರಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳು ಸೇರಿದಂತೆ ಇಡೀ ಹಾಲಿನ ಸರಬರಾಜು ಜಾಲದಾದ್ಯಂತ ಆಹಾರ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಅವರು ಆದೇಶ ಹೊರಡಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:05 pm, Tue, 14 July 26

Follow Us