ನಿತಿನ್ ಗಡ್ಕರಿ ತಮ್ಮ ಯೂಟ್ಯೂಬ್ ಚಾನಲ್​ನಿಂದ 4 ಲಕ್ಷ ರೂ. ಹೇಗೆ ಸಂಪಾದಿಸುತ್ತಾರೆ? ಏನಿದೆ ಅದರಲ್ಲಿ?

| Updated By: ganapathi bhat

Updated on: Sep 19, 2021 | 4:26 PM

Nitin Gadkari: ನಿತಿನ್ ಗಡ್ಕರಿ ನಾಗ್ಪುರ ಅಥವಾ ದೆಹಲಿಯ ತಮ್ಮ ಮನೆಯಿಂದಲೇ ದಿನವೊಂದಕ್ಕೆ ಐದರಿಂದ ಏಳು ವೆಬಿನಾರ್​ಗಳನ್ನು ನೀಡಿದ್ದೂ ಇದೆ. ಹಾಗೂ ಕೊರೊನಾ ಬಳಿಕ ಇದುವರೆಗೆ ಸುಮಾರು 1,500 ವಿಡಿಯೋ ಕಾನ್ಫರೆನ್ಸ್​ಗಳಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.

ನಿತಿನ್ ಗಡ್ಕರಿ ತಮ್ಮ ಯೂಟ್ಯೂಬ್ ಚಾನಲ್​ನಿಂದ 4 ಲಕ್ಷ ರೂ. ಹೇಗೆ ಸಂಪಾದಿಸುತ್ತಾರೆ? ಏನಿದೆ ಅದರಲ್ಲಿ?
ನಿತಿನ್​ ಗಡ್ಕರಿ
Follow us on

ಯೂಟ್ಯೂಬ್​​ನಿಂದ ನಾನು ತಿಂಗಳಿಗೆ 4 ಲಕ್ಷ ರೂಪಾಯಿ ಸಂಪಾದಿಸುತ್ತೇನೆ ಎಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಇತ್ತೀಚೆಗಷ್ಟೇ ಹೇಳಿ ಸುದ್ದಿ ಆಗಿದ್ದರು. ಕೊವಿಡ್ ಸಮಯದಲ್ಲಿ ತಮ್ಮ ಸಮಯವನ್ನು ಹೇಗೆ ಬಳಸಿಕೊಂಡರು ಎಂಬುದನ್ನು ಅವರು ಹಂಚಿಕೊಂಡಿದ್ದರು. ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ಪ್ರಗತಿ ಪರಿಶೀಲಿಸಲು ಹೋದಾಗ, ಹರಿಯಾಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ನಿತಿನ್ ಗಡ್ಕರಿ ಕೊರೊನಾ ಸಮಯದಲ್ಲಿ ಕಳೆದ ದಿನಗಳನ್ನು ಮೆಲುಕು ಹಾಕಿದ್ದರು. ಈ ವೇಳೆ, ಕೊವಿಡ್- 19 ಸಮಯದಲ್ಲಿ, ವಿಡಿಯೋ ಕಾನ್ಫರೆನ್ಸ್ ಮೂಲಕ ಉಪನ್ಯಾಸ ನೀಡುತ್ತಿದ್ದ ಹಾಗೂ ಅದನ್ನು ಯೂಟ್ಯೂಬ್​ನಲ್ಲಿ ಹಂಚಿಕೊಳ್ಳುತ್ತಿದ್ದ ವಿಚಾರವನ್ನು ಹೇಳಿಕೊಂಡಿದ್ದರು.

ಬಿಜೆಪಿಯ ಹಿರಿಯ ನಾಯಕ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿಯ ಸಹಾಯಕ ಅಧಿಕಾರಿಯೊಬ್ಬರು ಈ ಬಗ್ಗೆ ಪಿಟಿಐಗೆ ಪ್ರತಿಕ್ರಿಯೆ ನೀಡಿದ್ದಾರೆ. ಯಾವತ್ತೂ ಅವರು ಉಲ್ಲೇಖಿಸಿದಷ್ಟು ಹಣ ಯೂಟ್ಯೂಬ್​ನಿಂದ ಸಿಗದೇ ಇರಬಹುದು. ಆದರೆ, ಅವರಿಗೆ ದೊಡ್ಡ ಮಟ್ಟದ ಯೂಟ್ಯೂಬ್ ಫಾಲೋವರ್ಸ್ ಇದ್ದಾರೆ. ಯಾವತ್ತೂ ಅವರ ಹೊಸ ವಿಡಿಯೋಗಾಗಿ ಕಾಯುತ್ತಿರುವ ಜನರಿದ್ದಾರೆ ಎಂದು ತಿಳಿಸಿದ್ದಾರೆ.

ಹಾಗೂ ಯೂಟ್ಯೂಬ್ ಚಾನಲ್​ನಲ್ಲಿ ಬಹಳಷ್ಟು ವಿಡಿಯೋಗಳಿವೆ. ಸಹಾಯಕರು ತಿಳಿಸುವಂತೆ, ನಿತಿನ್ ಗಡ್ಕರಿ ನಾಗ್ಪುರ ಅಥವಾ ದೆಹಲಿಯ ತಮ್ಮ ಮನೆಯಿಂದಲೇ ದಿನವೊಂದಕ್ಕೆ ಐದರಿಂದ ಏಳು ವೆಬಿನಾರ್​ಗಳನ್ನು ನೀಡಿದ್ದೂ ಇದೆ. ಹಾಗೂ ಕೊರೊನಾ ಬಳಿಕ ಇದುವರೆಗೆ ಸುಮಾರು 1,500 ವಿಡಿಯೋ ಕಾನ್ಫರೆನ್ಸ್​ಗಳಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.

ಲಾಕ್​ಡೌನ್ ಆರಂಭವಾದ ಬಳಿಕ ಯೂಟ್ಯೂಬ್ ಚಾನಲ್ ಹೆಚ್ಚು ಸಕ್ರಿಯ
ಕೊರೊನಾ ಲಾಕ್​ಡೌನ್ ಶುರುವಾದ ಬಳಿಕ ನಿತಿನ್ ಗಡ್ಕರಿ ಬಹುತೇಕ ಕಾರ್ಯಕ್ರಮಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿದರು. 2020 ರ ಏಪ್ರಿಲ್ 2 ರಿಂದ ಆರಂಭಗೊಂಡು ಈವರೆಗೆ ಸುಮಾರು 1,500 ಅಂತಹ ಕಾರ್ಯಕ್ರಮಗಳಲ್ಲಿ ನಿತಿನ್ ಗಡ್ಕರಿ ಭಾಗವಹಿಸಿದ್ದಾರೆ. ಆ ಮೂಲಕ, ಭಾರತದ ಹಾಗೂ ವಿದೇಶದಲ್ಲಿನ ಕೋಟ್ಯಾಂತರ ಮಂದಿಯನ್ನು ಅವರು ತಲುಪಿದ್ದಾರೆ.

ನಿತಿನ್ ಗಡ್ಕರಿ, ಟ್ವಿಟರ್​ನಲ್ಲಿ 92 ಲಕ್ಷ ಹಿಂಬಾಲಕರನ್ನು ಹೊಂದಿದ್ದಾರೆ. ಫೇಸ್ಬುಕ್​ನಲ್ಲಿ 16 ಲಕ್ಷ, ಇನ್​ಸ್ಟಾಗ್ರಾಂನಲ್ಲಿ 13 ಲಕ್ಷ, ಹಾಗೂ ಯೂಟ್ಯೂಬ್​ನಲ್ಲಿ 2 ಲಕ್ಷ ಹಿಂಬಾಲಕರಿದ್ದಾರೆ, ಯೂಟ್ಯೂಬ್​ನಲ್ಲಿ ಕಂಟೆಂಟ್ ಮಾನಿಟೈಸೇಷನ್ ಮಾಡಿರುವುದು ಬಹಳಷ್ಟು ಹಣ ಸಂಪಾದಿಸಲು ಅವರಿಗೆ ನೆರವಾಗಿದೆ.

ಗಡ್ಕರಿ ಯೂಟ್ಯೂಬ್ ಚಾನಲ್​ನಲ್ಲಿ ಏನೆಲ್ಲಾ ಇದೆ?
ಊಟ, ತಿಂಡಿ, ಆಹಾರದ ವಿಚಾರದಲ್ಲಿ ಕೂಡ ಅತಿ ಆಸಕ್ತರಾಗಿರುವ ನಿತಿನ್ ಗಡ್ಕರಿ ಲಾಕ್​ಡೌ್ನ್ ಅವಧಿಯಲ್ಲಿ ಮನೆಯಲ್ಲಿ ಅಡುಗೆ ಮಾಡುವುದನ್ನು ಕೂಡ ಆರಂಭಿಸಿದ್ದಾರೆ. ಅವರು ಎಷ್ಟು ಆಸಕ್ತಿಯಿಂದ ಅಡುಗೆ ಕೆಲಸ ಮಾಡುತ್ತಾರೋ ಅಷ್ಟೇ ಆಸಕ್ತಿ ಗಂಭೀರ ವಿಷಯಗಳನ್ನು ಹೇಳುವಾಗಲೂ ಇರುತ್ತದೆ. ಸಂಪೂರ್ಣ ಪ್ರೀತಿ ಇಟ್ಟು ಮಾಡುವ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ ಎಂದು ಸಹಾಯಕರು ವಿವರಿಸುತ್ತಾರೆ.

ನಿತಿನ್ ಗಡ್ಕರಿ ಯೂಟ್ಯೂಬ್ ಚಾನಲ್ 2015 ರಲ್ಲಿ ಆರಂಭವಾದದ್ದಾಗಿದೆ. ಹಾಗೂ ಕೊರೊನಾ ಸಾಂಕ್ರಾಮಿಕ, ಲಾಕ್​ಡೌನ್ ಅವಧಿಯಲ್ಲಿ ಹೆಚ್ಚು ಸಕ್ರಿಯವಾಯಿತು. ಯೂಟ್ಯೂಬ್ ಚಾನಲ್​ನಲ್ಲಿ ನಿತಿನ್ ಗಡ್ಕರಿ ಅವರ ಎಲ್ಲಾ ಭಾಷಣಗಳು, ಪತ್ರಿಕಾ ಗೋಷ್ಠಿಗಳು, ಮಾಧ್ಯಮ ಹೇಳಿಕೆಗಳು ಇವೆ. ಗಡ್ಕರಿ ಅವರನ್ನು ಅಂತಾರಾಷ್ಟ್ರೀಯ ಸಂಘಟನೆಗಳು, ವಿಶ್ವವಿದ್ಯಾಲಯಗಳು ಭಾಷಣಕ್ಕೆ ಆಹ್ವಾನಿಸಿವೆ. ಆ ಎಲ್ಲಾ ವಿಡಿಯೋಗಳು ಯೂಟ್ಯೂಬ್​ನಲ್ಲಿ ಇದೆ.

ಗಡ್ಕರಿ ಭಾಷಣಗಳನ್ನು ಆಧರಿಸಿ ಹೊಸ ಪುಸ್ತಕ
ನಾಗ್ಪುರ್ ಮೂಲದ ಪತ್ರಕರ್ತರಾದ ರಾಹುಲ್ ಪಾಂಡೆ ಹಾಗೂ ಸರಿತಾ ಕೌಶಿಕ್ ಎಂಬವರು, ನಿತಿನ್ ಗಡ್ಕರಿ ನೀಡಿದ ಸುಮಾರು 500 ವೆಬಿನಾರ್​ಗಳನ್ನು ಪರಿಗಣಿಸಿ ‘ಅನ್​​ಮಾಸ್ಕಿಂಗ್ ಇಂಡಿಯಾ’ ಎಂಬ ಪುಸ್ತಕ ಹೊರತರಲಿದ್ದಾರೆ. ನಿತಿನ್ ಗಡ್ಕರಿ ಆತ್ಮನಿರ್ಭರ್ ಭಾರತ್ ಪರಿಕಲ್ಪನೆಯಲ್ಲಿ ನೀಡಿದ ಉತ್ತಮ ಯೋಚನೆಗಳ ಸಂಕಲನವಾಗಿ ಪುಸ್ತಕ ಹೊರಬರಲಿದೆ ಎಂದು ಅವರು ಹೇಳಿದ್ದಾರೆ.

ಗಡ್ಕರಿ ಭಾಷಣಗಳು ಕೇವಲ ಒಂದು ವಿಚಾರಕ್ಕೆ ಸೀಮಿತವಾಗಿಲ್ಲ. ಮೈಕ್ರೋ, ಸಣ್ಣ, ಹಾಗೂ ಮಧ್ಯಮ ಕೈಗಾರಿಕೆಯಿಂದ, ಕೃಷಿ, ಅರಣ್ಯ, ಸಾರಿಗೆ ಕುರಿತಾಗಿ ಅವರು ಮಾತನಾಡಿದ್ದಾರೆ. ನಿತಿನ್ ಗಡ್ಕರಿ ಬಿಲ್ಡರ್​ಗಳು ಅಥವಾ ರಿಯಲ್ ಎಸ್ಟೇಟ್ ಉದ್ಯಮಿಗಳೊಂದಿಗೆ ಮಾತ್ರ ಮಾತನಾಡಿಲ್ಲ. ಬದಲಾಗಿ, ಬುಡಕಟ್ಟು ಜನಾಂಗದವರ ಜೊತೆಗೂ ಮಾತನಾಡಿದ್ದಾರೆ.

ಇದನ್ನೂ ಓದಿ: YouTube: ಯೂಟ್ಯೂಬ್​ನಿಂದ ನಾನು ತಿಂಗಳಿಗೆ 4 ಲಕ್ಷ ರೂಪಾಯಿ ಸಂಪಾದಿಸ್ತೇನೆ – ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ

ಇದನ್ನೂ ಓದಿ: ವಾಹನಗಳ ಕರ್ಕಶ ಹಾರ್ನ್​ ಸಹಿಸಿಕೊಳ್ಳದ ನಿತಿನ್​ ಗಡ್ಕರಿಯಿಂದ ಹೊಸ ಪ್ಲ್ಯಾನ್​; ಶೀಘ್ರವೇ ತಬಲಾ, ಕೊಳಲು, ಪಿಟೀಲು ನಾದದ ಹಾರ್ನ್​