ವಾಹನಗಳ ಕರ್ಕಶ ಹಾರ್ನ್ ಸಹಿಸಿಕೊಳ್ಳದ ನಿತಿನ್ ಗಡ್ಕರಿಯಿಂದ ಹೊಸ ಪ್ಲ್ಯಾನ್; ಶೀಘ್ರವೇ ತಬಲಾ, ಕೊಳಲು, ಪಿಟೀಲು ನಾದದ ಹಾರ್ನ್
ವಾಹನಗಳ ತಯಾರಕರು ಹಾರ್ನ್ಗಳನ್ನು ಇಡುವಾಗಲೇ ಅದರಲ್ಲಿ ಭಾರತೀಯ ಸಂಗೀತ ವಾದ್ಯಗಳ ಶಬ್ದವನ್ನು ಅಳವಡಿಸಬೇಕು ಎಂದು ಸೂಚನೆ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.
ವಾಹನ ದಟ್ಟಣೆಯಿಂದ ಬರೀ ವಾಯುಮಾಲಿನ್ಯವಷ್ಟೇ ಅಲ್ಲ, ಶಬ್ದಮಾಲಿನ್ಯವೂ ಆಗುತ್ತದೆ. ಅದರಲ್ಲೂ ವಾಹನಗಳ ಕರ್ಕಶ ಹಾರ್ನ್ನಿಂದ ಆಗುವ ಕೆಟ್ಟ ಕಿರಿಕಿರಿಯಂತೂ ಹೇಳತೀರದ್ದು. ಆದರೆ ಈಗ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ (Nitin Gadkari) ಇದಕ್ಕೊಂದು ಪರಿಹಾರ ಸೂಚಿಸುವ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಹಾಗೇ, ಹೊಸದಾದ..ವಿನೂತನ ಕಾಯ್ದೆ ಜಾರಿ ಮಾಡುವ ಬಗ್ಗೆಯೂ ತಿಳಿಸಿದ್ದಾರೆ. ಈ ನೂತನ ನಿಯಮವೇನಾದರೂ ಜಾರಿಯಾದರೆ, ದೇಶದಲ್ಲಿ ವಾಹನಗಳ ಹಾರ್ನ್ (Vehicle Horn) ನಿಂದ ತಬಲಾ, ಕೊಳಲು, ಪಿಟೀಲು, ತಾಳ ಇತ್ಯಾದಿ ಭಾರತೀಯ ಸಂಗೀತ ಸಾಧನಗಳ ನಾದ ಕೇಳಿಬರಲಿದೆ..!
ವಾಹನಗಳ ತಯಾರಕರು ಹಾರ್ನ್ಗಳನ್ನು ಇಡುವಾಗಲೇ ಅದರಲ್ಲಿ ಭಾರತೀಯ ಸಂಗೀತ ವಾದ್ಯಗಳ ಶಬ್ದವನ್ನು ಅಳವಡಿಸಬೇಕು ಎಂದು ಸೂಚನೆ ನೀಡುವ ಸಂಬಂಧ ಹೊಸ ಕಾಯ್ದೆ ಜಾರಿಗೊಳಿಸಲು ಕೇಂದ್ರ ಸಾರಿಗೆ ಇಲಾಖೆ ಮುಂದಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ನಿತಿನ್ ಗಡ್ಕರಿ ತಿಳಿಸಿದ್ದಾರೆ. ನಾನು ನಾಗ್ಪುರದ ಕಟ್ಟಡವೊಂದರ 11ನೇ ಫ್ಲೋರ್ನಲ್ಲಿ ವಾಸವಾಗಿದ್ದೇನೆ. ಪ್ರತಿ ಮುಂಜಾನೆ ಒಂದು ಗಂಟೆ ಪ್ರಾಣಾಯಾಮ ಮಾಡುತ್ತೇನೆ. ಆದರೆ ಅಂಥ ಮುಂಜಾನೆಯ ಮೌನದ ಹೊತ್ತಲ್ಲೂ ವಾಹನಗಳ ಕರ್ಕಶ ಹಾರ್ನ್ಗಳು ನನ್ನನ್ನು ಡಿಸ್ಟರ್ಬ್ ಮಾಡುತ್ತವೆ. ಈ ಗಲಾಟೆಯನ್ನು ಪ್ರತಿದಿನ ಕೇಳಿ ಸಾಕಾಗಿದೆ. ಹಾಗೇ ನನ್ನಲ್ಲಿ ಒಂದು ಯೋಚನೆಯೂ ಬಂದಿದೆ..ವಾಹನಗಳ ಹಾರ್ನ್ಗಳು ಸರಿಯಾಗಿ, ಇಂಪಾಗಿ ಇರಬೇಕು. ಅದರಂತೆ ಭಾರತೀಯ ಸಂಗೀತ ವಾದ್ಯಗಳ ಧ್ವನಿಯನ್ನು ವಾಹನಗಳ ಹಾರ್ನ್ನಲ್ಲಿ ಅಳವಡಿಸಬೇಕು ಎಂದೆನಿಸಿದೆ. ಎಲ್ಲವೂ ಸರಿ ಎನ್ನಿಸಿದರೆ ಮುಂದೆ ವಾಹನಗಳು ಹಾರ್ನ್ ಹಾಕಿದಾಗ, ಅದರಿಂದ ತಬಲಾ, ಕೊಳಲು, ಪಿಟೀಲಿನ ಇಂಪು ನಾದ ಕೇಳಿಬರಲಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.
ಗತಿಶಕ್ತಿ ಯೋಜನೆಯಿಂದ ಅನುಕೂಲ ಇನ್ನು ಸೆಪ್ಟೆಂಬರ್ 2ರಂದು ಮಾಧ್ಯಮಗಳೊಂದಿಗೆ ಮಾತನಾಡಿದ್ದ ನಿತಿನ್ ಗಡ್ಕರಿ 100 ಲಕ್ಷ ಕೋಟಿ ರೂಪಾಯಿ ವೆಚ್ಚದ ಗತಿಶಕ್ತಿ ಯೋಜನೆ ಬಗ್ಗೆ ಮಾಹಿತಿ ನೀಡಿದ್ದರು. ಈ ಯೋಜನೆ ರಾಷ್ಟ್ರೀಯ ಮೂಲಸೌಕರ್ಯ ಪೈಪ್ಲೈನ್ ಕಾರ್ಯಕ್ರಮಕ್ಕೆ ಒಂದು ಚೌಕಟ್ಟು ಒದಗಿಸುತ್ತದೆ. ಹಾಗೇ ಲಾಜಿಸ್ಟಿಕ್ ವೆಚ್ಚವನ್ನು ಕಡಿಮೆ ಮಾಡಿ, ಪೂರೈಕೆ ಸರಪಳಿಯನ್ನು ಅಭಿವೃದ್ಧಿಗೊಳಿಸುತ್ತದೆ. ಈ ಮೂಲಕ ಭಾರತೀಯ ಉತ್ಪನ್ನಗಳು ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚು ಸ್ಪರ್ಧೆ ಒಡ್ಡುವಂತೆ ಮಾಡುತ್ತದೆ ಎಂದು ಹೇಳಿದ್ದರು.
ಇದನ್ನೂ ಓದಿ: Afghanistan: ಶಿಕ್ಷಣ ಮತ್ತು ಉದ್ಯೋಗದ ಹಕ್ಕು ಪಡೆಯಲು ಆಫ್ಘನ್ ಮಹಿಳೆಯರಿಂದ ಬೀದಿಗಿಳಿದು ಹೋರಾಟ
Ban Online Gambling: ರಾಜ್ಯದಲ್ಲಿ ಆನ್ಲೈನ್ ಗ್ಯಾಂಬ್ಲಿಂಗ್ ನಿಷೇಧ; ಎಷ್ಟರ ಮಟ್ಟಿಗೆ ಪರಿಣಾಮಕಾರಿ?