Ban Online Gambling: ರಾಜ್ಯದಲ್ಲಿ ಆನ್ಲೈನ್​ ಗ್ಯಾಂಬ್ಲಿಂಗ್ ನಿಷೇಧ; ಎಷ್ಟರ ಮಟ್ಟಿಗೆ ಪರಿಣಾಮಕಾರಿ?

ಸದ್ಯ ಕರ್ನಾಟಕ ರಾಜ್ಯ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡು ನಿಷೇಧ ಹೇರಲು ಹೊರಟಿದೆ ಎನ್ನುವುದೇನೋ ಶ್ಲಾಘನೀಯ. ಆದರೆ, ಈ ನಿಷೇಧ ಎಷ್ಟು ಪರಿಣಾಮಕಾರಿ ಎನ್ನುವುದು ಪ್ರಶ್ನೆ.

Ban Online Gambling: ರಾಜ್ಯದಲ್ಲಿ ಆನ್ಲೈನ್​ ಗ್ಯಾಂಬ್ಲಿಂಗ್ ನಿಷೇಧ; ಎಷ್ಟರ ಮಟ್ಟಿಗೆ ಪರಿಣಾಮಕಾರಿ?
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Skanda

Updated on:Sep 04, 2021 | 3:39 PM

ಕರ್ನಾಟಕದಲ್ಲಿ ಆನ್‌ಲೈನ್ ಗ್ಯಾಂಬ್ಲಿಂಗ್ ನಿಷೇಧಕ್ಕೆ ರಾಜ್ಯ ಸರ್ಕಾರ ತೀರ್ಮಾನ ತೆಗೆದುಕೊಂಡಿದೆ. ಇದಕ್ಕೆ ಸಂಬಂಧಪಟ್ಟಂತೆ ಮುಂದಿನ ಅಧಿವೇಶನದ ವೇಳೆ ರಾಜ್ಯ ಸರ್ಕಾರವು ಸದನದಲ್ಲಿ ತಿದ್ದುಪಡಿ ಕಾಯ್ದೆ ಮಂಡಿಸಲಿದೆ ಎಂದು ಸಚಿವ ಸಂಪುಟ ಸಭೆ ಬಳಿಕ ಸಚಿವ ಕಾನೂನು, ಸಂಸದೀಯ ವ್ಯವಹಾರ ಸಚಿವ ಮಾಧುಸ್ವಾಮಿ ಹೇಳಿದ್ದಾರೆ. ಆ ಮೂಲಕ ಕೆಲ ವರ್ಷಗಳಿಂದ ಭಾರೀ ಚರ್ಚೆಗೆ ಒಳಗಾಗಿರುವ ಆನ್ಲೈನ್​ ಗ್ಯಾಂಬ್ಲಿಂಗ್​​ಗೆ ಕಡಿವಾಣ ಹಾಕಲು ತೀರ್ಮಾನಿಸಿದ್ದಾರೆ. ಆದರೆ, ಒಕ್ಕೂಟ ವ್ಯವಸ್ಥೆಯನ್ನು ಹೊಂದಿರುವ ಭಾರತದಲ್ಲಿ ಒಂದು ರಾಜ್ಯ ಇಂತಹ ಕಠಿಣ ನಿಲುವನ್ನು ತೆಗೆದುಕೊಂಡ ಕೂಡಲೇ ಅದನ್ನು ಮಟ್ಟ ಹಾಕುವುದು ವಾಸ್ತವವಾಗಿ ಸಾಧ್ಯವೇ? ಬರೀ ಕರ್ನಾಟಕದಲ್ಲಿ ಆನ್ಲೈನ್​ ಗ್ಯಾಂಬ್ಲಿಂಗ್​ ನಿಷೇಧಿಸುವುದು ಎಷ್ಟರ ಮಟ್ಟಿಗೆ ಪರಿಣಾಮಕಾರಿ ಎಂಬ ಪ್ರಶ್ನೆಗಳು ಇದೇ ಹೊತ್ತಿನಲ್ಲಿ ಎದ್ದಿವೆ.

ಹಾಗೆ ನೋಡಿದರೆ ಜೂಜು ಇಂದು ನಿನ್ನೆಯದಲ್ಲ. ಅದರ ಸ್ವರೂಪ ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಬಂದಿದೆ. ಆದರೆ, ಹಿಂದೆ ನಡೆಯುತ್ತಿದ್ದ ಲಾಟರಿ, ಜೂಜಿಗೂ ಇಂದಿನ ಆನ್ಲೈನ್​ ಗ್ಯಾಂಬ್ಲಿಂಗ್ ಮೋಜಿಗೂ ಬಹುದೊಡ್ಡ ವ್ಯತ್ಯಾಸವೆಂದರೆ ಆನ್ಲೈನ್​ ಗ್ಯಾಂಬ್ಲಿಂಗ್​ ಎಲ್ಲರ ಮನೆಯನ್ನೂ ನಿರಾಯಾಸವಾಗಿ ಹೊಕ್ಕಿದೆ. ಸ್ಮಾರ್ಟ್​ಫೋನ್​ ಕೈಯಲ್ಲಿದ್ದರೆ ಯಾರು ಯಾವ ದೇಶದ ಜೂಜಾಟದಲ್ಲಿ ಬೇಕಾದರೂ ಭಾಗಿಯಾಗುವ ಅವಕಾಶ ಇದೆ. ಈ ಅವಕಾಶವೇ ಇಂದಿನ ಯುವ ಪೀಳಿಗೆಯನ್ನು ಆನ್ಲೈನ್​ ಗ್ಯಾಂಬ್ಲಿಂಗ್ ತನ್ನ ಕಪಿಮುಷ್ಠಿಗೆ ತೆಗೆದುಕೊಳ್ಳುವುದಕ್ಕೆ ಸಹಕಾರಿಯಾಗಿರುವುದು.

ನಮ್ಮ ರಾಜ್ಯದಲ್ಲಿ ಲಾಟರಿ ಇತಿಹಾಸ ಮತ್ತದರ ನಿಷೇಧ ಈಗಲೂ ಪಕ್ಕದ ಕೇರಳದಲ್ಲಿರುವಂತೆ, ಕಾಗದ ಲಾಟರಿ (paper lottery) ನಮ್ಮಲ್ಲೂ ಇತ್ತು. ಆದರೆ ಅದರಿಂದ ಅಷ್ಟೇನು ಆದಾಯ ಸರಕಾರಕ್ಕೆ ಬರುತ್ತಿರಲಿಲ್ಲ. ಎಸ್​.ಎಮ್​. ಕೃಷ್ಣ ಮುಖ್ಯಮಂತ್ರಿ ಆಗಿದ್ದಾಗ ಕಂಪ್ಯೂಟರ್​ ಮೂಲಕ ಆಡುವ ಒಂದಂಕಿ  ಲಾಟರಿ ಬಂತು. ಆದರೆ, ಬಹಳ ಬೇಗ ಅದಕ್ಕೆ ಕರ್ನಾಟಕದಲ್ಲಿ ತೀವ್ರ ವಿರೋಧ ಬಂತು. ಕೊನೆಗೆ ಸರಕಾರ ಅದರಿಂದ ಬಂದ ಆದಾಯದಿಂದ ಮಧ್ಯಾಹ್ನದ ಬಿಸಿಯೂಟ ನಡೆಸುತ್ತೇನೆ ಎಂದು ಹೇಳಿ ಕೈ ತೊಳೆದುಕೊಂಡಿತು. ಆದರೆ, ಜನ ಆ ಲಾಟರಿ ನಡೆಯಲು ಬಿಡಲಿಲ್ಲ.

ಆ ನಂತರ ಸಕ್ರಮವಾಗಿದ್ದ ಪೇಪರ್​  ಲಾಟರಿ ವ್ಯವಹಾರವನ್ನು ಕರ್ನಾಟಕ ರಾಜ್ಯ ಸರ್ಕಾರ 2006ರಲ್ಲಿ ನಿಷೇಧಿಸಿತು. ಅದಕ್ಕೂ ಮುನ್ನ ಕರ್ನಾಟಕ ರಾಜ್ಯ ನಡೆಸುತ್ತಿದ್ದ ರಾಜಲಕ್ಷ್ಮಿ ಮತ್ತು ರಾಜನರ್ತಕಿ ಎಂಬ ಎರಡು ಬಗೆಯ ಲಾಟರಿಗಳು ರಾಜ್ಯದ ಬಹುತೇಕ ಬಡ ಮತ್ತು ಮಧ್ಯಮ ವರ್ಗದ ಜನರನ್ನು ಆಕರ್ಷಿಸಿ ಜೇಬು ಬರಿದು ಮಾಡಿಸುತ್ತಿತ್ತು. ಅದರಿಂದಾಗಿ ಬೀದಿಗೆ ಬಿದ್ದವರು ಅಸಂಖ್ಯಾತ ಬಡವರು ಎನ್ನುವುದರಲ್ಲಿ ಎರಡು ಮಾತಿಲ್ಲ. ಬೆಳಗ್ಗೆ 11 ಗಂಟೆಗೆ ಅಡ್ಡೆಗೆ ಹೋಗಿ ಕುಳಿತರೆ ಸಂಜೆ ಸೂರ್ಯ ಮುಳುಗುವ ತನಕವೂ ಲಾಟರಿಯಲ್ಲಿ ತಲ್ಲೀನರಾಗಿರುತ್ತಿದ್ದ ಮಂದಿ ದುಡ್ಡು ಮಾಡುವ ಆಸೆ ಕಾಣುತ್ತಲ್ಲೇ ಮಣ್ಣಿಗೆ ಬಿದ್ದಿದ್ದರು. ಅಂತೆಯೇ, ಲಾಟರಿ ನಿಷೇಧದ ನಂತರವೂ ಅಕ್ರಮವಾಗಿಯೇ ಮುಂದುವರೆದ ಒಂದಂಕಿ ಲಾಟರಿ ಎಷ್ಟೋ ಮನೆಗಳ ಖುಷಿಯನ್ನು ಶಾಶ್ವತವಾಗಿ ಅಳಿಸಿಹಾಕಿದ ಅಪಖ್ಯಾತಿಯನ್ನು ಹೊಂದಿದೆ.

ಈ ಹಿಂದಿನ ಲಾಟರಿಗಿಂತ ಈಗ ಆನ್ಲೈನ್​ ಗ್ಯಾಂಬ್ಲಿಂಗ್​​ ಸದ್ದಿಲ್ಲದೇ ಎಲ್ಲರ ಮನೆಗೂ ಕಾಲಿಟ್ಟು ಬದುಕನ್ನು ದುರ್ಬರಗೊಳಿಸುತ್ತಿದೆ. ಹಿಂದೆ ನಡೆಯುತ್ತಿದ್ದ ಜೂಜಾಟಗಳಿಗಿಂತಲೂ ಇದು ಅಪಾಯಕಾರಿ ಎನ್ನಲು ಮುಖ್ಯ ಕಾರಣ ಇದರ ಗೌಪ್ಯತೆ. ಈಗಂತೂ ಮಕ್ಕಳಿಗೆ ಆನ್​ಲೈನ್​ ಕ್ಲಾಸ್​ ನೆಪದಲ್ಲಿ ಮೊಬೈಲ್​ ಅನಿವಾರ್ಯವಾಗಿ ಹೋಗಿರುವುದರಿಂದ ಅದರಲ್ಲಿ ಏನೇನಿದೆ? ಅವರು ಪಾಠ ಕೇಳುವ ಹೊರತಾಗಿ ಏನೇನು ಮಾಡುತ್ತಾರೆ? ಎಂದು ನಿಗಾ ವಹಿಸುವುದು ಮೊದಲಿಗಿಂತಲೂ ಕಷ್ಟವಾಗಿದೆ.

ಇದೇ ಸಂದರ್ಭದಲ್ಲಿ ಅನಾಯಸವಾಗಿ ಕೈಗೆ ಸಿಗುತ್ತಿರುವ ಆನ್​ಲೈನ್​ ಗ್ಯಾಂಬ್ಲಿಂಗ್​ ಯುವ ಸಮುದಾಯವನ್ನು ಮೋಡಿ ಮಾಡಿ ಅವರನ್ನು ದಾಸರನ್ನಾಗಿಸಿಕೊಳ್ಳುತ್ತಿದೆ. ಆನ್ಲೈನ್​ ಮೂಲಕವೇ ವ್ಯವಹಾರವೂ ನಡೆಯುವುದರಿಂದ ಇಲ್ಲಿ ಹೋಗಿದ್ದು, ಬಂದಿದ್ದು ಯಾವುದೂ ಕಣ್ಣಿಗೆ ಕಾಣುವುದಿಲ್ಲ. ಇಂತಹ ಆನ್ಲೈನ್​ ಗ್ಯಾಂಬ್ಲಿಂಗ್​ನಿಂದ ಬ್ಯಾಂಕ್​ ಅಕೌಂಟ್​ ಖಾಲಿ ಮಾಡಿಕೊಂಡವರ, ಜೀವ ಕಳೆದುಕೊಂಡವರ ದಾರುಣ ಕತೆಗಳೂ ಸಾಕಷ್ಟಿವೆ. ಹೀಗಾಗಿಯೇ ಇದಕ್ಕೆ ನಿಷೇಧ ಹೇರಬೇಕು ಎಂಬ ಕೂಗು ಬಲವಾಗಿದ್ದು.

ಆನ್ಲೈನ್​ ಗ್ಯಾಂಬ್ಲಿಂಗ್ ವ್ಯಾಪ್ತಿ ದೊಡ್ಡದಿದೆ ಕೆಲ ತಿಂಗಳ ಹಿಂದೆ ಆನ್ಲೈನ್ ಗ್ಯಾಂಬ್ಲಿಂಗ್ ನಿಷೇಧಿಸುವ ಬಗ್ಗೆ ರಾಜ್ಯದಲ್ಲಿ ಸುದ್ದಿಯಾದಾಗ ಪ್ರತಿಕ್ರಿಯಿಸಿದ್ದ ಪೊಲೀಸ್ ಅಧಿಕಾರಿ ಸಂದೀಪ್ ಪಾಟೀಲ್, ಆನ್ಲೈನ್ ಗ್ಯಾಂಬ್ಲಿಂಗ್ ಸಾಧಾರಣ ಗ್ಯಾಂಬ್ಲಿಂಗ್​ ಪ್ರಕರಣಗಳಿಗಿಂತಲೂ ಗಂಭೀರವಾಗಿವೆ. ಏಕಕಾಲಕ್ಕೆ ವಿಶ್ವದ ನಾನಾ ದೇಶದವರು ಒಂದೆಡೆ ಸೇರಿ ತಮ್ಮ ಹೆಸರನ್ನು ಸಹ ಬಹಿರಂಗಪಡಿಸದೇ ಆಡುವ ಅವಕಾಶ ಇರುವುದರಿಂದ ಇದನ್ನು ಸಂಪೂರ್ಣವಾಗಿ ಮಟ್ಟ ಹಾಕುವುದಕ್ಕೆ ಜಾಗತಿಕ ಮಟ್ಟದಲ್ಲಿಯೇ ಕಾನೂನು ರೂಪಿಸಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದರು. ಈ ಆನ್ಲೈನ್ ಗ್ಯಾಂಬ್ಲಿಂಗ್​ಗಳು ಪರೋಕ್ಷವಾಗಿ ಇತರ ಮೋಸದ ವಹಿವಾಟುಗಳಿಗೂ ದಾರಿ ಮಾಡಿಕೊಡುತ್ತವೆ ಹೀಗಾಗಿ ಅವುಗಳಿಂದ ದೂರ ಉಳಿಯುವುದು ಒಳಿತು ಎಂದಿದ್ದರು.

ಬಿಟ್ ಕಾಯಿನ್​ ವ್ಯವಹಾರದಿಂದ ಹಿಡಿದು ಮಾಮೂಲಿ ಬ್ಯಾಂಕ್ ಖಾತೆಗಳಿಂದ ಹಣ ಎಗರಿಸುವ ಸೈಬರ್ ಅಪರಾಧಗಳಿಗೂ ಆನ್ಲೈನ್ ಗ್ಯಾಂಬ್ಲಿಂಗ್​ ಒಂದು ಮಾರ್ಗ ಎಂಬ ಅಭಿಪ್ರಾಯ ಅದರ ವ್ಯಾಪ್ತಿ ಬಹಳ ದೊಡ್ಡದಿದೆ ಎನ್ನುವುದಕ್ಕೆ ಒಂದು ಸಾಕ್ಷಿ. ಆನ್ಲೈನ್ ಗ್ಯಾಂಬ್ಲಿಂಗ್​ ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮ ಬೀರುವುದರ ಜತೆಜತೆಗೆ ಮಾನಸಿಕ ಆರೋಗ್ಯವನ್ನೂ ಹದಗೆಡಿಸುತ್ತಿರುವುದು ಇನ್ನೊಂದು ಗಂಭೀರ ಸಮಸ್ಯೆ.

ಒಂಟಿತನ, ಕೆಲಸದ ಒತ್ತಡದಿಂದ ಮುಕ್ತಿ ಪಡೆಯಲು ಕೆಲವರು ಆನ್ಲೈನ್ ಗೇಮ್, ಗ್ಯಾಂಬ್ಲಿಂಗ್​ಗಳ ಮೊರೆ ಹೋಗುತ್ತಾರೆ. ಆನ್ಲೈನ್ ಗೇಮ್​ ಆಡಲು ಶುರುಮಾಡುವವರು ಕ್ರಮೆಣ ಅವುಗಳ ದಾಸರಾಗುವುದರಿಂದ ಅದು ಅವರ ದೈನಂದಿನ ಬದುಕಿನ ಮೇಲೆಯೂ ಪರಿಣಾಮ ಬೀರುತ್ತದೆ. ಆಟದಲ್ಲಿ ಹಣ ವ್ಯಯಿಸುವುದರಿಂದ ಮಾನಸಿಕ ಒತ್ತಡಕ್ಕೂ ಹಾದಿಯಾಗುತ್ತಿದೆ. ಹಣಕ್ಕಾಗಿ ಅಪರಾಧ ಚಟುವಟಿಕೆಗಳನ್ನು ಮಾಡಲೂ ಪ್ರೇರೇಪಿಸುತ್ತದೆ. ನಿದ್ರಾಹೀನತೆ, ಅನಾವಶ್ಯಕ ಸಿಟ್ಟು, ಮಾನಸಿಕ ತೊಳಲಾಟಗಳಿಗೆ ಕಾರಣವಾಗುತ್ತಿದೆ ಎಂದು ನಿಮ್ಹಾನ್ಸ್ ಆಸ್ಪತ್ರೆಯ ಮನೋರೋಗ ತಜ್ಞ ಡಾ.ಶ್ರೀಹರಿ ಈ ಹಿಂದೆ ಎಚ್ಚರಿಸಿದ್ದರು.

ಹೆಬ್ಬಾಗಿಲು ಮುಚ್ಚಿ ಕಳ್ಳಗಿಂಡಿ ತೆರೆದಂತೆ ಆಗುವುದಿಲ್ಲವೇ? ಸದ್ಯ ಕರ್ನಾಟಕ ರಾಜ್ಯ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡು ನಿಷೇಧ ಹೇರಲು ಹೊರಟಿದೆ ಎನ್ನುವುದೇನೋ ಶ್ಲಾಘನೀಯ. ಆದರೆ, ಈ ನಿಷೇಧ ಎಷ್ಟು ಪರಿಣಾಮಕಾರಿ ಎನ್ನುವುದು ಪ್ರಶ್ನೆ. ಏಕೆಂದರೆ, ಭಾರತದಲ್ಲಿ ಆನ್ಲೈನ್​ಗೆ ಸಂಬಂಧಿಸಿದ ಬಹುತೇಕ ನಿಯಮಾವಳಿಗಳು ಇಡೀ ದೇಶಕ್ಕೆ ಅನ್ವಯವಾಗುವಂತೆ ಇವೆಯೇ ಹೊರತು ರಾಜ್ಯಕ್ಕೊಂದರಂತೆ ಇಲ್ಲ. ಹೀಗಿರುವಾಗ ಆನ್ಲೈನ್​ ಗ್ಯಾಂಬ್ಲಿಂಗ್​ ನಿಷೇಧಿಸಬೇಕೆಂದರೆ ಇದು ರಾಷ್ಟ್ರ ಮಟ್ಟದಲ್ಲಿ ಆದರೆ ಸೂಕ್ತವೇ ಹೊರತು ರಾಜ್ಯಗಳ ಆದೇಶ ಕವಡೆ ಕಾಸಿನ ಕಿಮ್ಮತ್ತಿಲ್ಲ ಎನ್ನುವಂತಾಗುವ ಸಾಧ್ಯತೆಯೇ ಅಧಿಕ. ಕೇವಲ ಒಂದು ರಾಜ್ಯಕ್ಕೆ ಮಾತ್ರ ಸೀಮಿತವಾದಂತೆ ಯಾವುದೇ ವೆಬ್​ಸೈಟ್​ ನಿಷೇಧಿಸುವುದು ಸುಲಭದ ಮಾತಲ್ಲ. ಸರ್ಕಾರಗಳ ನಿಷೇಧದ ನಂತರವೂ ಆ ಗೇಮ್​ಗಳನ್ನು ಮೊಬೈಲ್​ನಲ್ಲಿ ಉಪಯೋಗಿಸುವುದು ಸಾಧ್ಯ ಎಂಬ ವಾದವಿದೆ. ಇದೇ ಕಾರಣಕ್ಕಾಗಿ ಈಗ ಜನರ ಮನಸ್ಸಿನಲ್ಲಿ ಕರ್ನಾಟಕ ರಾಜ್ಯ ಮಾತ್ರ ಆನ್ಲೈನ್​ ಗ್ಯಾಂಬ್ಲಿಂಗ್​ ನಿಷೇಧಿಸಿದರೆ ಹೆಬ್ಬಾಗಿಲು ಮುಚ್ಚಿ ಕಳ್ಳಗಿಂಡಿಯನ್ನು ತೆರೆದಿಟ್ಟಂತೆಯೇ ಆಗುವುದಿಲ್ಲವೇ ಎಂಬ ಪ್ರಶ್ನೆ ಮೂಡಿದೆ.

ಕಳೆದ 2020ರ ಡಿಸೆಂಬರ್​ ತಿಂಗಳಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಆನ್ ಲೈನ್ ಜೂಜು, ಫ್ಯಾಂಟಸಿ ಕ್ರೀಡೆ ಮತ್ತಿತರ ಜಾಹೀರಾತುಗಳಿಗೆ ಸಂಬಂಧಿಸಿದಂತೆ ಸಲಹಾ ಸೂಚನೆಗಳನ್ನು ಬಿಡುಗಡೆ ಮಾಡಿತ್ತು. ಭಾರತೀಯ ಜಾಹೀರಾತು ಮಾನದಂಡ ಮಂಡಳಿ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಸಚಿವಾಲಯ ಎಲ್ಲ ಪ್ರಸಾರಕರಿಗೆ ಸೂಚನೆ ನೀಡಿತ್ತು. ಕಾನೂನು ಅಥವಾ ನಿಯಮಗಳಲ್ಲಿ ನಿಷೇಧಿಸಲಾದ ಎಲ್ಲ ಬಗೆಯ ಜಾಹೀರಾತುಗಳನ್ನು ಯಾವುದೇ ಕಾರಣಕ್ಕೂ ಉತ್ತೇಜಿಸಬಾರದು ಎಂದು ಸಚಿವಾಲಯ ಸೂಚನೆ ನೀಡಿದ್ದು, ಅವುಗಳು ಇಂತಿವೆ:

ONLINE GAMBLING

ಆನ್​ಲೈನ್​ ಜೂಜು, ಆಟಗಳಿಗೆ ಸಂಬಂಧಿಸಿದಂತೆ ಜಾಹೀರಾತು ನೀಡುವ ಮುನ್ನ ಪಾಲಿಸಬೇಕಾದ ನಿಯಮಗಳು

ONLINE GAMBLING

ಆನ್​ಲೈನ್​ ಜೂಜು, ಆಟಗಳಿಗೆ ಸಂಬಂಧಿಸಿದಂತೆ ಜಾಹೀರಾತು ನೀಡುವ ಮುನ್ನ ಪಾಲಿಸಬೇಕಾದ ನಿಯಮಗಳು

ಇದನ್ನೂ ಓದಿ: ಆನ್‌ಲೈನ್ ಗ್ಯಾಂಬ್ಲಿಂಗ್ ಗೇಮ್‌ ನಿಷೇಧಕ್ಕೆ ಕರ್ನಾಟಕ ಸರ್ಕಾರ ತೀರ್ಮಾನ: ಸಂಪುಟ ಸಭೆ ಬಳಿಕ ಸಚಿವ ಮಾಧುಸ್ವಾಮಿ ಪ್ರಕಟ

ತಮಿಳುನಾಡು ಬಳಿಕ, ಆಂಧ್ರದಲ್ಲೂ ಆನ್​ಲೈನ್ ಗ್ಯಾಂಬ್ಲಿಂಗ್ ಬಂದ್​! ಕರ್ನಾಟಕದಲ್ಲಿ ಯಾವಾಗ?

Published On - 3:37 pm, Sat, 4 September 21