Opinion: ತಾಲಿಬಾನ್ ರಾಷ್ಟ್ರಕ್ಕೆ ಜಗತ್ತಿನ ಮನ್ನಣೆ; ಮಕ್ಕಳಿಗೆ ತೋರಿಸಲು ಒಳ್ಳೆಯದು-ಕೆಟ್ಟದು ಪರಿಕಲ್ಪನೆಗಳೇ ಇನ್ನಿಲ್ಲ!
ಅಫ್ಘಾನಿಸ್ತಾನದ ಬೆಳವಣಿಗೆ 'ಒಳ್ಳೆಯದು', 'ಕೆಟ್ಟದು' ಎಂಬ ಪರಿಕಲ್ಪನೆಗಳನ್ನೇ ಅಳಿಸಿವೆ. ಯಾವ ಗುಣಲಕ್ಷಣಗಳನ್ನು ಇಷ್ಟು ದಿನ ‘ಕೆಟ್ಟವರ’ ಗುಣಲಕ್ಷಣ ಎಂದು ಹೇಳುತ್ತಿದ್ದೇವೆಯೋ, ಅವೆಲ್ಲವನ್ನೂ ಇನ್ನು ಮುಂದೆ ಒಳ್ಳೆಯವರ ಗುಣಲಕ್ಷಣ ಎಂದು ಹೇಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಇದೇ ಸೆಪ್ಟೆಂಬರ್ 11ಕ್ಕೆ ಅಮೆರಿಕದ ಎರಡು ಗಗನಚುಂಬಿ ಕಟ್ಟಡಗಳ (twin tower) ಮೇಲೆ ಬಿನ್ ಲಾಡೆನ್ನ ಗುಂಪು ಬಾಂಬ್ ಹಾಕಿ ಇಪ್ಪತ್ತು ವರ್ಷ ಆಗುತ್ತದೆ. ಇದನ್ನು ಪಾಶ್ಚಾತ್ಯ ರಾಷ್ಟ್ರಗಳು ‘9/11’ ಎಂದು ಸಂಕ್ಷಿಪ್ತವಾಗಿ ಕರೆಯುತ್ತಾರೆ. ಈ ಸಲ ಸೆಪ್ಟೆಂಬರ್ 11 ರಂದು ನಮ್ಮಲ್ಲಿ ತುಂಬಾ ಜನ ಗಣೇಶೋತ್ಸವದಲ್ಲಿ ಮುಳುಗಿರುತ್ತಾರೆ. ಆದರೆ, ಎರಡು ದಶಕ ಮುಗಿಸುತ್ತಿರುವ ಈ ಕರಾಳ ದಿನವನ್ನು ಅಮೆರಿಕ ಹೇಗೆ ನೆನಪಿಸಿಕೊಳ್ಳುತ್ತದೆ ಎಂಬ ಕುತೂಹಲ ನಮ್ಮಲ್ಲಿ ಯಾರಿಗೂ ಉಳಿದಿಲ್ಲ. ತನ್ನ ದೇಶದ ಮೇಲೆ ದಾಳಿ ಮಾಡಿದ ಭಯೋತ್ಪಾದಕರ ಮೂಲೋತ್ಪಾಟನೆ ಮಾಡುವ ಪಣ ತೊಟ್ಟ ಅಮೆರಿಕ, ಕೊನೆಗೆ ದೇಶವೊಂದನ್ನು ಭಯೋತ್ಪಾದಕ ಸಂಘಟನೆ ಹುಟ್ಟು ಹಾಕಿದ ಇಸ್ಲಾಮಿಕ್ ಸರಕಾರದ ಕೈಗೆ ಕೊಟ್ಟು ಹಿಂತಿರುಗಿದ್ದು ಉಳಿದವರಿಗೆ ಮಾನವೀಯ ಸಮಸ್ಯೆಯಾಗಿ ಕಂಡಿರಬಹುದು. ಭಾರತಕ್ಕೆ ಮಾತ್ರ ಈ ಬೆಳವಣಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅಫ್ಘಾನಿಸ್ತಾನದಲ್ಲಿನ ಬೆಳವಣಿಗೆ ಭಾರತ ದೇಶದ ಸಾರ್ವಭೌಮತ್ವ ಮತ್ತು ಭದ್ರತೆಗೆ ಸವಾಲಾಗುವ ಸಾಧ್ಯತೆ ಕಂಡಿರುವ ಹಿನ್ನೆಲೆಯಲ್ಲಿ, 9/11 ಬಗ್ಗೆ ಅಮೆರಿಕ ಏನು ಹೇಳಬಹುದು, ಭಯೋತ್ಪಾದನೆ ಮೂಲೋತ್ಪಾಟನೆಗೆ ಇನ್ನೇನು ಹೊಸ ದಾರಿ ಹುಡುಕಬಹುದು ಎಂಬ ಕುತೂಹಲ ಭಾರತೀಯ ನಾಗರಿಕರಲ್ಲಿ ಉಳಿದಿಲ್ಲ.
ನಮ್ಮಲ್ಲಿಯ ಭಿನ್ನ ಧ್ವನಿ ಡಕಾಯಿತನಾಗಿದ್ದ ವಾಲ್ಮೀಕಿ ಕೊನೆಗೆ ಕವಿಯಾದ. ಹಾಗೇ ತಾಲಿಬಾನ್ ಕೂಡ ಮುಂದೊಮ್ಮೆ ಬದಲಾಗುತ್ತೆ ಎಂದು ಹೇಳುತ್ತ ವಾಲ್ಮೀಕಿಯನ್ನು ತಾಲಿಬಾನ್ಗೆ ಹೋಲಿಸಿ ವಿವಾದಕ್ಕೆ ಈಡಾದ ಕವಿ ಮುನಾವರ್ ರಾಣಾ. ಆರ್ಎಸ್ಎಸ್ ಮತ್ತು ತಾಲಿಬಾನ್ ನಡುವೆ ಬಹಳ ಸಾಮ್ಯತೆ ಇದೆ ಎಂದು ಹೇಳಿದ ಖ್ಯಾತ ಹಿಂದಿ/ಉರ್ದು ಕವಿ ಜಾವೇದ್ ಅಖ್ತರ್. ಅಫ್ಘಾನಿಸ್ತಾನದಲ್ಲಿ ಇಸ್ಲಾಮಿಕ್ ಸರಕಾರ ಬಂದಿದೆ. ಅದನ್ನು ಸ್ವಾಗತಿಸುತ್ತೇವೆ ಎಂದು ತಾಲಿಬಾನ್ ಸರಕಾರವನ್ನು ಸ್ವಾಗತಿಸಿದ ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ. ಇದಕ್ಕೆ ಸರಿಯಾಗಿ ತಾಲಿಬಾನ್ ಬೆಳವಣಿಗೆಯನ್ನಿಟ್ಟುಕೊಂಡು ಭಾರತದಲ್ಲಿ ಮುಸ್ಲಿಮರನ್ನು ಎಷ್ಟು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತದೆ ಎಂಬ ದೀರ್ಘ ಲೇಖನ ಬರೆದಿರುವ ಇಂಗ್ಲೆಂಡಿನ ಎಡಪಂಥೀಯ ಪತ್ರಿಕೆ ದಿ ಗಾರ್ಡಿಯನ್. ಈ ನಡುವೆ ಕ್ಲಬ್ಹೌಸ್ ಮತ್ತು ವಾಟ್ಸಾಪ್ ಮುಂತಾದ ಸಾಮಾಜಿಕ ಜಾಲತಾಣದಲ್ಲಿ ಭಾರತದ ‘ಬಲಪಂಥೀಯ ತಾಲಿಬಾನ್’ ಕುರಿತಾಗಿ ಚರ್ಚೆ ನಡೆಯುತ್ತಲೇ ಇದೆ.
ಇದು ಹೊಸದಲ್ಲ. ಕಳೆದ ವರ್ಷ ಅಮೆರಿಕದಲ್ಲಿ ಬ್ಲಾಕ್ ಲೈವ್ಸ್ ಮಾಟರ್ಸ್ ಎಂಬ ಚಳುವಳಿ ನಡೆದಿದ್ದ ನೆನಪಿದೆಯಲ್ಲ. ಆಗ ಭಾರತದಲ್ಲಿನ ಕೆಲ ಚಿಂತಕರು ಮುಸ್ಲಿಮರು ಮತ್ತು ದಲಿತರನ್ನು ಅಮೆರಿಕದಲ್ಲಿ ಕಪ್ಪುವರ್ಣಿಯರನ್ನು ನಡೆಸಿಕೊಂಡಂತೆ ನಡೆಸಿಕೊಳ್ಳಲಾಗುತ್ತಿದೆ ಎಂದು ವಾದಿಸಿದ್ದಷ್ಟೇ ಅಲ್ಲ, ಪುರಭವನದ ಬಳಿ ಸೇರಿ ‘ದಲಿತ್ ಲೈವ್ಸ್ ಮಾಟರ್’, ‘ಮುಸ್ಲಿಂ ಲೈವ್ಸ್ ಮಾಟರ್’, ಎಂದು ಧ್ವನಿ ಎತ್ತಿದ್ದನ್ನು ಮರೆಯಲಾಗದು. ಜಗತ್ತಿನ ಮೂಲೆಯಲ್ಲಿ ಯಾವುದೇ ರೀತಿಯ ಅನ್ಯಾಯ ನಡೆಯಲಿ, ಅದನ್ನು ನೋಡಿ ಅಂಥದೇ ಅನ್ಯಾಯ ಅದಕ್ಕೂ ಹೀನವಾಗಿ ನಮ್ಮಲ್ಲಿಯೂ ನಡೆಯುತ್ತಿದೆ ಎಂದು ಹೇಳಿಕೆ ನೀಡುತ್ತ ವಿವಾದಕ್ಕೆ ನಾಂದಿ ಹಾಡುವುದು ಹೊಸದೇನಲ್ಲ. ಇದು ಹೇಗೆ ಎಂದರೆ, ಯಾವುದೋ ರೋಗ ಲಕ್ಷಣದ ಮಾಹಿತಿಯನ್ನು ಗೂಗಲ್ನಲ್ಲಿ ಹುಡುಕುತ್ತಾ ಹೋದಾಗ, ಒಂದು ಹಂತದಲ್ಲಿ ಆ ರೋಗದ ಲಕ್ಷಣ ನಮ್ಮಲ್ಲೂ ಇದೆ ಎಂಬ ಬಲವಾದ ಗುಮಾನಿ ಘನವಾಗಿ ಹುಟ್ಟುತ್ತದೆ. ಅದೇ ಇದು.
ಎಲ್ಲ ವಿಚಾರವನ್ನು ರಾಜಕೀಯ ಸಮೀಕರಣಕ್ಕೆ ಜೋಡಿಸಿ ನರೇಂದ್ರ ಮೋದಿಯನ್ನು ಟೀಕಿಸಿ ಅವರಿಂದಲೇ ಎಲ್ಲವೂ ಆಗುತ್ತಿದೆ ಎಂದು ಕೊನೆಗೆ ನಿರ್ಣಯ ಮಾಡುವ ಪ್ರವೃತ್ತಿಯ ಭಾಗ ಇದು. ಮೋದಿ ಟೀಕಿಸುವ ಹಕ್ಕು ಮತ್ತು ಕರ್ತವ್ಯ ಎಲ್ಲ ಪತ್ರಕರ್ತರಿಗೂ ಇದೆ. ವಿವಾದ ಇರುವುದು ಆ ವಿಚಾರಕ್ಕಾಗಿ ಅಲ್ಲ. ಅದಕ್ಕಿಂತ ಬಹಳ ದೊಡ್ಡ ವಿಚಾರಗಳನ್ನು ಯಾವ ಪತ್ರಕರ್ತನೂ ಅದರಲ್ಲಿಯೂ ವಿದೇಶದ ಪತ್ರಿಕೆ/ಮಾಧ್ಯಮಗಳು ಬರೆಯದೇ ಇರುವುದು. ಆಗಸ್ಟ್ 15 ರಂದು ಕಾಬೂಲ್ ವಶಪಡಿಸಿಕೊಂಡ ನಂತರ ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಇಡೀ ಬೆಳವಣಿಗೆಯನ್ನು ಹೊಸ ದೃಷ್ಟಿಕೋನದಿಂದ ಯಾಕೆ ಮತ್ತು ಹೇಗೆ ನೋಡಬಹುದು ಎಂಬ ಚರ್ಚೆ ಇದು.
1. ಎರಡನೇ ಮಹಾಯುದ್ಧದ ನಂತರ ಇಡೀ ವಿಶ್ವದಲ್ಲಿ ಸೈನ್ಯದ ಜನರಲ್ ಆಗಿರುವವರು ತಮ್ಮ ದೇಶದ ಪ್ರಧಾನಿ/ ಅಧ್ಯಕ್ಷರನ್ನು ಇಳಿದು ತಾವೇ ಅಧಿಕಾರ ಪಡೆದು ಸರಕಾರಕ್ಕೆ ಬಂದವರು ಬಹಳ ಜನರಿರಬಹುದು. ಕಳೆದ 70 ವರ್ಷಗಳಲ್ಲಿ ಭಯೋತ್ಪಾದಕರೆಲ್ಲ ಸೇರಿ ಒಂದು ರಾಷ್ಟ್ರ ಕಬ್ಜಾ ತೆಗೆದುಕೊಂಡಿರುವುದು ಇದೇ ಮೊದಲು. ಭಯೋತ್ಪಾದಕರನ್ನೇ ಸೇರಿಸಿಕೊಂಡು, ಭಯೋತ್ಪಾದಕರೇ ಮಾಡಿದ ಮೊದಲ ಸರಕಾರ ಇದಾಗುತ್ತದೆ. ಒಂದೊಮ್ಮೆ ತಾಲಿಬಾನ್ ಸರಕಾರಕ್ಕೆ ವಿಶ್ವಸಂಸ್ಥೆ ತನ್ನ ಅಧಿಕೃತ ಮುದ್ರೆ ನೀಡಿದರೆ ಇನ್ನು ಮುಂದೆ ಭಯೋತ್ಪಾದನೆಯನ್ನು ಮಾನವ ಜನಾಂಗದ ವಿರುದ್ಧ ಮಾಡುವ ಅಪರಾಧ ಎಂದು ಹೇಳುವಂತೆ ಇಲ್ಲ.
2. ಐಸಿಸ್ನಂತಹ ಭಯೋತ್ಪಾದಕ ಸಂಘಟನೆಗಳು ನಮ್ಮ ದೇಶದಿಂದ ಜನರನ್ನು ಕೈ ಬೀಸಿ ಕರೆಯುತ್ತಿವೆ. ಅವರನ್ನು ಭಯೋತ್ಪಾದನೆಯಲ್ಲಿ ತೊಡಗಿಸುತ್ತಿವೆ. ಅದೇ ಐಸಿಸ್ ಜೊತೆ ಕೈ ಜೋಡಿಸಿರುವ ಪಾಕಿಸ್ತಾನಿ-ಮೂಲದ ತಾಲಿಬಾನ್ ನಾಯಕರೆಲ್ಲ ಈಗ ತಾಲಿಬಾನ್ ಸರಕಾರದ ಒಂದು ಭಾಗ. ಐಸಿಸ್ ಕೆಟ್ಟದು ಎಂಬ ಮಂತ್ರ ಪಠಿಸುವವರು ಇದ್ದಾರೆ. ಆದರೆ ಅದೇ ಐಸಿಸ್ ಜೊತೆ ನೇರ ಸಂಬಂಧ ಇರುವ ತಾಲಿಬಾನ್ ಮಾತ್ರ ‘ಠಂಡಾ ಠಂಡಾ ಕೂಲ್ ಕೂಲ್’ ಅಂತ ಹೇಳಬೇಕೆ? ಇಂತಹವರೆಲ್ಲ ಸೇರಿ ಮಾಡಿದ ಸರಕಾರ ಹೊರ ಜಗತ್ತಿನ ಎದುರಿಗೆ ಶಾಂತಿ ಮಂತ್ರ ಪಠಿಸಿದರೂ, ಭಾರತದ ಮಟ್ಟಿಗೆ ಈ ಗುಂಪು ಒಂದು ರೀತಿಯ ‘ಗ್ಯಾಂಗ್ರಿನ್’ ಇದ್ದಂತೆ. ಇವನ್ನು ನೋಡಿದ ನಮ್ಮ ಮಕ್ಕಳು ಕೇಳದೇ ಇರುತ್ತವೆಯೇ-ನಮ್ಮ ದೇಶಕ್ಕೆ ತುಂಬಾ ತೊಂದರೆ ಕೊಟ್ಟ ಇವರಿಗೇಕೆ ಶಿಕ್ಷೆ ಇಲ್ಲ? ಇವರನ್ನು ಏಕೆ ರಾಷ್ಟ್ರದ ಅತಿಥಿಯಾಗಿ ನಾವು ನೋಡುತ್ತೇವೆ? ಮುಂದೊಂದು ದಿನ ನಮ್ಮ ಮಕ್ಕಳು, ಉನ್ನತ ಮಾನವೀಯ ಮೌಲ್ಯ ಯಾವುದು? ನೈತಿಕತೆ ಯಾವುದು ಎಂದು ಕೇಳಿದರೆ ಏನಂತ ಹೇಳುವುದು? ಇಡೀ ಅಫ್ಘಾನಿಸ್ತಾನದಲ್ಲಿನ ಬೆಳವಣಿಗೆ ನಮ್ಮಲ್ಲಿರುವ, ‘ಒಳ್ಳೆಯದು’, ‘ಕೆಟ್ಟದು’ ಎಂಬ ಪರಿಕಲ್ಪನೆಯನ್ನೇ ಅಳಿಸಿವೆ.
ಯಾವ ಗುಣಲಕ್ಷಣಗಳನ್ನು ಇಷ್ಟು ದಿನ ‘ಕೆಟ್ಟವರ’ ಗುಣಲಕ್ಷಣ ಎಂದು ಹೇಳುತ್ತಿದ್ದೇವೆಯೋ, ಅವೆಲ್ಲವನ್ನೂ ಇನ್ನು ಮುಂದೆ ಒಳ್ಳೆಯವರ ಗುಣಲಕ್ಷಣ ಎಂದು ಹೇಳಬೇಕಾಗಿದೆ. ಹಾಗೆ ಹೇಳಿದರೆ ಮಾತ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಉಳಿಗಾಲ. ಈಗ ಅಮ್ನೆಸ್ಟಿ ಇಂಟರ್ನ್ಯಾಷನಲ್ನಂಥ ಅಂತಾರಾಷ್ಟ್ರೀಯ ಸಂಸ್ಥೆಗಳು ದನಿ ಎತ್ತುತ್ತಿಲ್ಲ ಯಾಕೆ? ಅವೆಲ್ಲ ಎಲ್ಲಿಗೆ ಹೋಗಿರಬಹುದು? ಇದು ನಿಜಕ್ಕೂ ಅಮಾನವೀಯ ಬೆಳವಣಿಗೆ. ಈಗ ಅಮ್ನೆಸ್ಟಿ ಇಂಟರ್ನ್ಯಾಷನಲ್ನಂಥ ಅಂತಾರಾಷ್ಟ್ರೀಯ ಸಂಸ್ಥೆಗಳು ಏನು ಮಾಡುತ್ತಿವೆ? ಎಲ್ಲಿಗೆ ಹೋಗಿರಬಹುದು ಅವೆಲ್ಲ? ಅವು ಯಾಕೆ ದನಿ ಎತ್ತುತ್ತಿಲ್ಲ? ಇದು ಯಾರಿಗೂ ಕಾಡುತ್ತಿಲ್ಲವೇ? ವಿಶ್ವದ ಉಳಿದ ರಾಷ್ಟ್ರಗಳು ಅದರಲ್ಲಿಯೂ NATO ಫೋರ್ಸ್ಸ್ ಕಳಿಸಿರುವ ಪಾಶ್ಚಾತ್ಯ ರಾಷ್ಟ್ರಗಳು ಇದನ್ನು ಒಂದು ಮಾನವೀಯ ಸಮಸ್ಯೆ ಎಂದು ಬಣ್ಣಿಸಿ ನಿಜವಾದ ಸಮಸ್ಯೆಯನ್ನು ಪಕ್ಕಕ್ಕೆ ತಳ್ಳಿವೆ. ಅವರಿಗೆ ಇದು ಮಾನವೀಯ ಸಮಸ್ಯೆಯಾಗಿ ಕಂಡಿರಬಹುದು. ಭಾರತಕ್ಕೆ? ಅಫ್ಘಾನಿಸ್ತಾನದ ಬೆಳವಣಿಗೆ ಮತ್ತು ಅದಕ್ಕೆ ಹೊಂದಿಕೊಂಡು ಭಾರತದ ಒಳಗೆ ಕಾಶ್ಮೀರದಲ್ಲಿ ಆಗುವ ಬೆಳವಣಿಗೆಯನ್ನು ಊಹಿಸಿದರೆ ಲೆಕ್ಕ ಬಗೆ ಹರಿಯುತ್ತೆ-ಇದು ಭಾರತದ ಭದ್ರತೆಗೆ ಬರುತ್ತಿರುವ ಸಂಕಷ್ಟದ ಕಾಲ ಎಂದು.
3. ಈ ಹಿಂದೆ ಮಹಿಳೆಯರನ್ನು ತಾಲಿಬಾನ್ ಹೇಗೆ ನಡೆಸಿಕೊಂಡಿತ್ತು ಎಂಬುದನ್ನು ಎಲ್ಲರಿಗೂ ಗೊತ್ತು. ತಮ್ಮ ಲೈಂಗಿಕ ತೃಷೆ ತೀರಿಸಿಕೊಳ್ಳಲು ಮಹಿಳೆಯರನ್ನು ತಾಲಿಬಾನ್ ತನ್ನ ದಾಸ್ಯದಲ್ಲಿಟ್ಟುಕೊಂಡಿತ್ತು. ಅಫ್ಘಾನಿಸ್ತಾನ ಸಂಸತ್ತಿನ ಮಾಜಿ ಉಪಾಧ್ಯಕ್ಷೆ ಫೈಜಿಯಾ ಕೂಫಿ, ಅಲ್-ಜಜಿರಾ ಟಿವಿಗೆ ಕೊಟ್ಟಿರುವ ಸಂದರ್ಶನದಲ್ಲಿ ಹೇಳುವಂತೆ, ತಾಲಿಬಾನ್ ಹೊರ ಜಗತ್ತಿಗೆ ಹೇಳುವುದೇ ಒಂದು. ಮಾಡುವುದು ಇನ್ನೊಂದು. “ಯಾವ ಕಾರಣಕ್ಕೆ ಅಮೆರಿಕ ಅಫ್ಘಾನಿಸ್ತಾನದ ನೆಲಕ್ಕೆ ಕಾಲಿಟ್ಟಿತ್ತು ಎನ್ನುವುದು ಇನ್ನೂ ಅರ್ಥ ಆಗಿಲ್ಲ. ಯಾರಿಗೂ ಹೇಳಿಯೂ ಅದು ಬಂದಿರಲಿಲ್ಲ. ಅದೇ ರೀತಿ ಈಗ ಯಾಕೆ ಇಲ್ಲಿಂದ ಬಿಟ್ಟು ಹೋದರು? ಅದೂ ಕೂಡ ಗೊತ್ತಾಗಲಿಲ್ಲ. ಐಸಿಸ್ ಇಲ್ಲಿಗೆ ಕಾಲಿಡುತ್ತಿದೆ. ಇಪ್ಪತ್ತು ವರ್ಷದಲ್ಲಿ ನಮ್ಮ ಮಹಿಳೆಯರಿಗೆ ಯಾವ ನ್ಯಾಯವೂ ಸಿಗಲಿಲ್ಲ. ಇದು ನಮಗೆ ಬಹಳ ವಿಷಾದನೀಯ” ಎಂದು ಅಮೆರಿಕದ ಅಫ್ಘಾನಿಸ್ತಾನ್ ನೀತಿಯನ್ನು ಕೂಫಿ ಟೀಕಿಸಿದ್ದರು. ಅಫ್ಘಾನಿಸ್ತಾನದ ಮಹಿಳೆಯರೇ ಟೀಕಿಸುವ ತಾಲಿಬಾನ್ ಅನ್ನು ಅಮೆರಿಕ ಮತ್ತು ಅದರ ಮಿತ್ರ ದೇಶಗಳು (NATO forces) ನಂಬಿದ್ದಾದರೂ ಏಕೆ? ಹೇಗೆ? ಇದಕ್ಕೆ ಉತ್ತರ ಇಲ್ಲ. ಇದರ ದಾರಿ ತಪ್ಪಿಸಲು ಈಗ ಒಂದು ಮಾನವೀಯ ಸಮಸ್ಯೆ ಎಂದು ಬಿಂಬಿಸಲಾಗುತ್ತಿದೆಯೇ?
4. ಬಾಕಿ ದೇಶಗಳಿಗೆ ಅಫ್ಘಾನಿಸ್ತಾನದ ಸಮಸ್ಯೆ ಒಂದು ಮಾನವೀಯ ಸಮಸ್ಯೆ ಎಂಬಂತೆ ಪಾಶ್ಚಾತ್ಯ ದೇಶಗಳು ಬಿಂಬಿಸುತ್ತಿವೆ? ನಿಜವಾಗಿಯೂ? ತಮ್ಮ ದೇಶದ ಸೇನೆ ಅಲ್ಲಿಗೆ ಹೋಗಿ 20 ವರ್ಷ ಮಾಡಿದ್ದೇನು? ಯಾಕೆ ಅಲ್ಲಿ ಭಯೋತ್ಪಾದನೆಯ ಹುಟ್ಟಡಗಿಸಿಲ್ಲ? 20 ವರ್ಷಗಳಲ್ಲಿ ಆ ದೇಶದ ನಾಗರಿಕರಿಗೆ ಪ್ರಜಾಪ್ರಭುತ್ವದ ಹುಚ್ಚು ಹಿಡಿಸಿ, ಮಹಿಳೆಯರಿಗೆ ಸಮಾನ ಹಕ್ಕನ್ನು ಕೊಡಿಸಿ ಬರಬಹುದಿತ್ತಲ್ಲ? ಅದನ್ನು ಮಾಡದೇ ಹಿಂದಿರುಗಿ ಈಗ ಅಲ್ಲೊಂದು ಮಾನವೀಯ ಸಮಸ್ಯೆ ಎದ್ದಿದೆ ಎಂದು ಹೇಳಿದರೆ ಅದು ಎಷ್ಟರಮಟ್ಟಿಗೆ ಸರಿ? ಈಗ ತಿರುಗಿ ಭಾರತದಲ್ಲಿ ತಾಲಿಬಾನ್ ಮೂಲ ಹುಡುಕುತ್ತಿರುವವರ ಬಳಿ ಬರೋಣ. ಸದಾ ನೈತಿಕತೆಯ ವಿಚಾರದಿಂದ ರಾಷ್ಟ್ರ ರಾಜಕೀಯವನ್ನು ವಿಶ್ಲೇಷಿಸುತ್ತಿದ್ದವರು ಈಗ ಎಲ್ಲೂ ಕಾಣುತ್ತಿಲ್ಲ ಏಕೆ? ಬೇರೆ ಯಾವುದಲ್ಲದಿದ್ದರೂ ತಾಲಿಬಾನ್ ಹೇಗೆ ನಮ್ಮ ನೈತಿಕತೆಯ ಕಲ್ಪನೆಗೆ ಪೆಟ್ಟು ಕೊಟ್ಟಿತು ಎಂಬ ಹೊಸ ಅಕಾಡೆಮಿಕ್ ಚರ್ಚೆಯನ್ನಾದರೂ ಶುರು ಮಾಡಬಹುದಿತ್ತು. ಅದನ್ನು ಮಾಡದಿರುವುದರಿಂದ ಅವರ ಬಗೆಗಿದ್ದ ಗೌರವ ಸಾಮಾನ್ಯ ಜನರಿಗೆ ಇನ್ನಷ್ಟು ಕಡಿಮೆ ಆಗುವುದರಲ್ಲಿ ಯಾವ ಸಂಶಯವೂ ಕಾಣುತ್ತಿಲ್ಲ. ಇದೇ ಕಾರಣಕ್ಕೆ ಇರಬಹುದು- ಈ ಬಾರಿ ಅಮೆರಿಕ, ‘9/11’ ನೆನಪನ್ನು ಹೇಗೆ ಜಗತ್ತಿನ ಎದುರಿಡಲು ಬಯಸುತ್ತದೆ ಎಂಬ ವಿಚಾರದ ಬಗ್ಗೆ ಭಾರತೀಯರಿಗೆ ಯಾವ ಕುತೂಹಲವೂ ಉಳಿದಿಲ್ಲ.
(Interim Taliban government in Afghanistan and its threat to India how it destroyed the moral concepts)
ಇದನ್ನೂ ಓದಿ: Afghan Government ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ: ನೂತನ ಅಫ್ಘಾನ್ ಸರ್ಕಾರದ ಬಗ್ಗೆ ಏಳು ಪ್ರಮುಖ ಸಂಗತಿಗಳು
ಇದನ್ನೂ ಓದಿ: ಸಶಸ್ತ್ರಧಾರಿ ತಾಲಿಬಾನ್ ವ್ಯಕ್ತಿಯ ಮುಂದೆ ಧೈರ್ಯದಿಂದ ನಿಂತ ಅಫ್ಘಾನ್ ಮಹಿಳೆ; ಐಕಾನಿಕ್ ಚಿತ್ರಕ್ಕೆ ಶ್ಲಾಘನೆ
Published On - 7:39 pm, Wed, 8 September 21