ENG vs WI: ಕಳೆದ 4 ಪಂದ್ಯಗಳಲ್ಲಿ 3ನೇ ಏಕದಿನ ಶತಕ ಸಿಡಿಸಿದ ವಿಂಡೀಸ್ ಬ್ಯಾಟರ್
Casey Carter's Century: ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿಯಲ್ಲಿ ವೆಸ್ಟ್ ಇಂಡೀಸ್ ಆಟಗಾರ ಕೀಸಿ ಕಾರ್ಟರ್ ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಗಮನ ಸೆಳೆದಿದೆ. ಕಳೆದ ನಾಲ್ಕು ಏಕದಿನ ಪಂದ್ಯಗಳಲ್ಲಿ ಅವರು ಮೂರು ಶತಕಗಳನ್ನು ಬಾರಿಸಿದ್ದಾರೆ. ಇದೀಗ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿಯೂ ಅವರು ಶತಕ ಗಳಿಸಿ ತಮ್ಮ ಅಸಾಧಾರಣ ಫಾರ್ಮ್ ಅನ್ನು ಮುಂದುವರಿಸಿದ್ದಾರೆ. ಇದು ಅವರ ಏಕದಿನ ವೃತ್ತಿಜೀವನದ ನಾಲ್ಕನೇ ಶತಕವಾಗಿದೆ.

ಪ್ರಸ್ತುತ ಇಂಗ್ಲೆಂಡ್ನಲ್ಲಿ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ (ENG vs WI) ನಡುವೆ 3 ಪಂದ್ಯಗಳ ಏಕದಿನ ಸರಣಿ ನಡೆಯುತ್ತಿದೆ. ಈ ಸರಣಿಯ ಎರಡನೇ ಪಂದ್ಯ ಜೂನ್ 1 ರಂದು ಸೋಫಿಯಾ ಗಾರ್ಡನ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆಯಿತು. ಈ ಸರಣಿಯಲ್ಲಿ ಇಲ್ಲಿಯವರೆಗೆ ಯಾವುದೇ ಆಟಗಾರ ಹೆಚ್ಚು ಪ್ರಭಾವ ಬೀರಿದ್ದರೆ, ಅದು ವೆಸ್ಟ್ ಇಂಡೀಸ್‌ನ ಆಕ್ರಮಣಕಾರಿ ಬ್ಯಾಟ್ಸ್‌ಮನ್ ಕೀಸಿ ಕಾರ್ಟಿ (Keacy Carty). ಈ ಆಟಗಾರ ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿಯೂ ಶತಕದ ಇನ್ನಿಂಗ್ಸ್ ಆಡಿದ್ದಾರೆ. ಕೀಸಿ ಕಾರ್ಟಿ ಕಳೆದ 4 ಏಕದಿನ ಪಂದ್ಯಗಳಲ್ಲಿ ಬರೋಬ್ಬರಿ 3 ಶತಕಗಳನ್ನು ಬಾರಿಸಿದ್ದಾರೆ.
ಐಪಿಎಲ್ 2025 ರ ಪ್ಲೇಆಫ್ ಸುತ್ತಿನ ಆರಂಭದೊಂದಿಗೆ, ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿಯೂ ಪ್ರಾರಂಭವಾಯಿತು. ಈ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ 400 ರನ್ ಗಳಿಸುವ ಮೂಲಕ ದೊಡ್ಡ ಅಂತರದಿಂದ ಗೆದ್ದಿತ್ತು. ಆದರೆ ಎರಡನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವು ಬಲಿಷ್ಠ ಪುನರಾಗಮನ ಮಾಡಿದಲ್ಲದೆ ಈ ಬಾರಿ ಮೊದಲು ಬ್ಯಾಟಿಂಗ್ ಮಾಡಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತು.
ವೃತ್ತಿಜೀವನದ ನಾಲ್ಕನೇ ಶತಕ
ಎರಡನೇ ಓವರ್‌ನಲ್ಲಿ ಮೊದಲ ವಿಕೆಟ್ ಪತನದ ನಂತರ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ 28 ವರ್ಷದ ಕಾರ್ಟಿ ತಮ್ಮ ಅದ್ಭುತ ಫಾರ್ಮ್ ಅನ್ನು ಈ ಪಂದ್ಯದಲ್ಲಿಯೂ ಮುಂದುವರಿಸಿದರು. ಈ ಬಲಗೈ ಬ್ಯಾಟ್ಸ್‌ಮನ್ ಮೊದಲು ಬ್ರಾಂಡನ್ ಕಿಂಗ್ ಮತ್ತು ನಂತರ ನಾಯಕ ಶೈ ಹೋಪ್ ಅವರೊಂದಿಗೆ ನಿರ್ಣಾಯಕ ಜೊತೆಯಾಟ ರೂಪಿಸಿದರು. ಈ ಸಮಯದಲ್ಲಿ, ಅವರು 102 ಎಸೆತಗಳಲ್ಲಿ ತಮ್ಮ ಅದ್ಭುತ ಶತಕವನ್ನು ಪೂರ್ಣಗೊಳಿಸಿದರು. ಇದು ಕಾರ್ಟಿ ಅವರ ಏಕದಿನ ವೃತ್ತಿಜೀವನದ ನಾಲ್ಕನೇ ಶತಕವಾಗಿದೆ. ಅಂತಿಮವಾಗಿ ಅವರು 13 ಬೌಂಡರಿಗಳ ಸಹಿತ 103 ರನ್‌ಗಳ ಇನ್ನಿಂಗ್ಸ್ ಆಡಿ ಪೆವಿಲಿಯನ್ ಸೇರಿಕೊಂಡರು.
ಸತತ ಎರಡು ಶತಕ
ಕಳೆದ ಪಂದ್ಯದಲ್ಲಿ ಕೇವಲ 22 ರನ್ ಗಳಿಸಿದ್ದ ಕಾರ್ಟಿ, ಈ ಪಂದ್ಯದಲ್ಲಿ ಅಮೋಘ ಶತಕ ಗಳಿಸಿದರು. ವಾಸ್ತವವಾಗಿ ಕಳೆದ 4 ಪಂದ್ಯಗಳಲ್ಲಿ ಇದು ಕಾರ್ಟಿ ಅವರ ಮೂರನೇ ಶತಕವಾಗಿದೆ. ಈ ಸರಣಿಗೂ ಮೊದಲು, ಕಾರ್ಟಿ ಐರ್ಲೆಂಡ್ ವಿರುದ್ಧ ಸತತ ಎರಡು ಶತಕಗಳನ್ನು ಬಾರಿಸಿದ್ದರು. ಏಕದಿನ ಪಂದ್ಯಗಳಲ್ಲಿ ಅವರು ಇಲ್ಲಿಯವರೆಗೆ ಆಡಿರುವ 35 ಪಂದ್ಯಗಳಲ್ಲಿ 48.14 ಸರಾಸರಿಯೊಂದಿಗೆ 1300 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರು 3 ಶತಕಗಳು ಮತ್ತು 5 ಅರ್ಧಶತಕಗಳನ್ನು ಗಳಿಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:14 pm, Sun, 1 June 25
