ಕೆಪಿಎಸ್ಸಿ ಕರ್ಮಕಾಂಡ: ಅಭ್ಯರ್ಥಿಗಳ ಅಂಗಿ ಹರಿಯುವ ಪರೀಕ್ಷಾ ಪದ್ಧತಿ ಬೇಡ, ಭ್ರಷ್ಟಾಚಾರವಿಲ್ಲದ ವ್ಯವಸ್ಥೆ ತನ್ನಿ
ಕೇಂದ್ರ ಲೋಕಸೇವಾ ಆಯೋಗದ ಮಾದರಿಯಲ್ಲಿ ರಚಿತವಾದ ಕರ್ನಾಟಕ ಲೋಕ ಸೇವಾ ಆಯೋಗ ಭ್ರಷ್ಟಾಚಾರದ ಗೂಡಾಗಿದೆ. ಇದನ್ನು ಸರಿ ಮಾಡಬೇಕಾದ ಸರಕಾರ ಕಣ್ಣು ಮುಚ್ಚಿ ಕುಳಿತರೆ ಯುವಕ ಯುವತಿಯರಿಗೆ ಉದ್ಯೋಗ ಸೃಷ್ಟಿ ಹೇಗೆ? ಸರಕಾರ ಈ ಕುರಿತು ದಿಟ್ಟ ನಿರ್ಧಾರವೊಂದನ್ನು ತೆಗೆದುಕೊಂಡರೆ, ಕೆಪಿಎಸ್ಸಿ ಬಗ್ಗೆ ಮತ್ತು ಉದ್ಯೋಗ ಸೃಷ್ಟಿಯ ವಿಚಾರದಲ್ಲಿ ಸರಕಾರ ಪದೇ ಪದೇ ನೀಡುವ ಆಶ್ವಾಸನೆಯಲ್ಲಿ ಜನರಿಗೆ ವಿಶ್ವಾಸ ಉಳಿಯುತ್ತದೆ.
ಕೆಎಎಸ್ ಪರೀಕ್ಷೆಯಲ್ಲಿ ಕರ್ನಾಟಕ ಲೋಕ ಸೇವಾ ಆಯೋಗ (KPSC) ಮಾಡಿದ ಎಡವಟ್ಟು 2024 ರ ಕ್ಯಾಲೆಂಡರನ್ನು ತಿರುವಿ ಹಾಕುವ ಒಂದು ದಿನ ಮುನ್ನ ಹೊರಬಿದ್ದಿದೆ. ವರ್ಷವಿಡೀ ಬರೀ ಭ್ರಷ್ಟಾಚಾರ, ಅಧಿಕಾರದ ದುರುಪಯೋಗದ ಬಗ್ಗೆ ವರದಿಗಳನ್ನು ಓದುತ್ತಾ ಹಿಡಿ ಹಿಡಿ ಶಾಪ ಹಾಕುತ್ತಿರುವ ಜನರಿಗೆ ಇದು ಶಾಕ್ ಎನ್ನಿಸಲಿಲ್ಲ. ಒಂದೊಮ್ಮೆ ಕೆಎಎಸ್ ಪರೀಕ್ಷೆ ಅತ್ಯಂತ ಯಶಸ್ವಿಯಾಗಿ ನಡೆದಿದ್ದರೆ ಜನಕ್ಕೆ ಶಾಕ್ ಆಗುತ್ತಿತ್ತು. ಜನರಿಗೆ ಕೆಪಿಎಸ್ಸಿ ಈ ರೀತಿ ಕೆಲಸ ಮಾಡಲು ಸಾಧ್ಯವೇ ಎಂಬ ಪ್ರಶ್ನೆ ಮೂಡುತ್ತಿತ್ತು.
ಸಿದ್ದರಾಮಯ್ಯ ನೇತೃತ್ವದ ಸರಕಾರ 2023 ರಲ್ಲಿ ಅಧಿಕಾರಕ್ಕೆ ಬಂದಾಗ ಅದರ ಮುಂದೆ ಇದ್ದ ಹಲವಾರು ಸವಾಲುಗಳಲ್ಲಿ ಇದು ಕೂಡ ಒಂದಾಗಿತ್ತು. ಕೆಪಿಎಸ್ಸಿಯನ್ನು ದುರಸ್ತಿ ಮಾಡಿ ಅಲ್ಲಿ ಬೆಳೆದಿರುವ ಕಳೆ ಕಿತ್ತು, ಅಲ್ಲಿ ಬೇರೂರಿರುವ ಹೆಗ್ಗಣಗಳನ್ನು ಓಡಿಸುವುದು; ಹೆಚ್ಚು ಉದ್ಯೋಗ ಸೃಷ್ಟಿ ಮಾಡುವುದು. ಪ್ರಾಯಶಃ, ಈ ಎರಡೂ ಕೆಲಸ ಮಾಡುವಲ್ಲಿ ತೋರಿರುವ ವಿಳಂಬದಿಂದಾಗಿ ಸರಕಾರದ ಪ್ರಾಮಾಣಿಕತೆ ಬಗ್ಗೆ ಜನರಲ್ಲಿ ಗುಮಾನಿ ಮೂಡುವಂತಾಗಿದೆ. ಬಿಜೆಪಿ ಇದ್ದಾಗ ಕೆಪಿಎಸ್ಸಿ ಸರಿ ಇರಲಿಲ್ಲ. ಆಗಲೂ ಇದೇ ಸಮಸ್ಯೆ ಇತ್ತು. ಭ್ರಷ್ಟಾಚಾರ ತಾಂಡವವಾಡುತ್ತಿತ್ತು. ಅದನ್ನು ಸರಿ ಮಾಡುತ್ತೇವೆ ಎಂದು ಬಂದ ಕಾಂಗ್ರೆಸ್ ಮಾಡಿದ್ದೇನು? ಕೆಪಿಎಸ್ಸಿಯಲ್ಲಿ ಪಾರದರ್ಶಕತೆ ತರಲು ಹಲವಾರು ಉಪಕ್ರಮ ತೆಗೆದುಕೊಂಡಿದ್ದ ಐಎಎಸ್ ಅಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರನ್ನು ಕೆಪಿಎಸ್ಸಿ ಕಾರ್ಯದರ್ಶಿ ಸ್ಥಾನದಿಂದ ಎತ್ತಂಗಡಿ ಮಾಡಿ, ಕೆಪಿಎಸ್ಸಿಯಲ್ಲಿ ಇರುವ ಹೆಗ್ಗಣಗಳಿಗೆ ಶ್ರೀರಕ್ಷೆ ನೀಡಿದಂತಾಯಿತು. ಸರಕಾರದ ಈ ಕ್ರಮವನ್ನು ವಿರೋಧಿಸಿ, ಉದ್ಯೋಗಕ್ಕಾಗಿ ಕೆಪಿಎಸ್ಸಿ ಅರ್ಜಿ ಹಾಕಿಕೊಂಡಿದ್ದ ಸಾವಿರಾರು ಯುವಕರು 2024 ಸೆಪ್ಟಂಬರ್ನಲ್ಲಿ ಬೀದಿಗಿಳಿದು ಪ್ರತಿಭಟಿಸಿದ್ದರು. ಓರ್ವ ಐಎಎಸ್ ಅಧಿಕಾರಿಯನ್ನು ಎತ್ತಂಗಡಿ ಮಾಡುವ ಅಧಿಕಾರ ಮುಖ್ಯಮಂತ್ರಿಗೆ ಮಾತ್ರ ಇರುತ್ತದೆ. ಆ ಹಿನ್ನೆಲೆಯಲ್ಲಿ, ಕೆಪಿಎಸ್ಸಿಯ ವಿಫಲತೆಯ ನೈತಿಕ ಹೊಣೆಗಾರಿಕೆಯನ್ನು ಸಿದ್ಧರಾಮಯ್ಯ ಹೊರಲೇಬೇಕು.
ಕೆಇಎ ಮಾಡಿದಂತೆ ಕೆಪಿಎಸ್ಸಿ ಏಕೆ ಕೆಲಸ ಮಾಡಲು ಸಾಧ್ಯವಿಲ್ಲ?
ಹಾಗಾದರೆ, ಕೆಪಿಎಸ್ಸಿ ಸುಧಾರಣೆ ಮಾಡಿ ಉದ್ಯೋಗ ಸೃಷ್ಟಿಗೆ ಹೆಚ್ಚಿನ ಒತ್ತು ಕೊಡಲು ಆಗದೇ? ಈ ನಡುವೆ, ಇನ್ನೊಂದು ಅಂಶವನ್ನು ನಾವು ಗಮನಿಸಬೇಕು. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಎಂಬ ಸರಕಾರದ ಮತ್ತೊಂದು ಸಂಸ್ಥೆ, 2024 ರಲ್ಲಿ 17 ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿದ್ದರ ಮಾಹಿತಿಯನ್ನು ಕೆಇಎಯ ಕಾರ್ಯನಿರ್ವಾಹಕ ನಿರ್ದೇಶಕ ಎಚ್ ಪ್ರಸನ್ನ ಹಂಚಿಕೊಂಡಿದ್ದಾರೆ. ಇಂಜಿನಿಯರಿಂಗ್ ಸೀಟು ಹಂಚಿಕೆಯಲ್ಲಿ ಸೀಟ್ ಬ್ಲಾಕಿಂಗ್ (seat blocking) ವಿಚಾರಕ್ಕಾಗಿ ತನಿಖೆ ನಡೆಯುತ್ತಿದೆ. ಇಂಜಿನಿಯರಿಂಗ್ ಸೀಟು ಹಂಚಿಕೆ ಕೆಇಎ ಕೆಳಗೆ ಬರುತ್ತದೆ. ಹಾಗಾಗಿ ಕೆಇಎ ಬಗ್ಗೆ ಸಂದೇಹ ಮೂಡುವುದು ಸಹಜ. ಆದರೆ ಇಲ್ಲಿಯವರೆಗೆ, ಆ ಸೀಟು ಬ್ಲಾಕಿಂಗ್ ಕೇಸಿನಲ್ಲಿ ಕೆಇಎ ಯ ಉನ್ನತ ಅಧಿಕಾರಿಗಳ ಹೆಸರು ಕೇಳಿ ಬಂದಿಲ್ಲ. ಅಷ್ಟರಮಟ್ಟಿಗೆ ಕೆಇಎ ಬಗ್ಗೆ ಜನರಿಗೆ ವಿಶ್ವಾಸಾರ್ಹತೆ ಇನ್ನೂ ಇದೆ. ಕೆಇಎ ಮಾಡಿದಂತೆ ಕೆಪಿಎಸ್ಸಿ ಕೂಡ ಯಾಕೆ ಕೆಲಸ ಮಾಡಲು ಸಾಧ್ಯವಿಲ್ಲ ಎಂಬ ಪ್ರಶ್ನೆ ಜನರಲ್ಲಿ ಮೂಡುವುದು ಸಹಜವಲ್ಲವೇ?
ಕೆಪಿಎಸ್ಸಿಯಲ್ಲಿ ಸರಕಾರ ನೇಮಿಸುವ ಅಧ್ಯಕ್ಷರು ಮತ್ತು ಸದಸ್ಯರ ಪಾತ್ರದ ಬಗ್ಗೆ ತುಂಬಾ ಜನರಿಗೆ ತಕರಾರಿದೆ. ಆದರೆ, ಕೆಇಎನಲ್ಲಿ ಅಧಿಕಾರಿಗಳನ್ನು ಬಿಟ್ಟರೆ, ಬೇರೆ ಯಾರಿಗೂ ಅಲ್ಲಿ ಅಧಿಕಾರ ಚಲಾಯಿಸಲು ಜಾಗವಿಲ್ಲ. ಕೆಪಿಎಸ್ಸಿ ನಡೆಸುವ ಕೆಎಎಸ್ ಪರೀಕ್ಷೆಯ ಎರಡನೇ ಭಾಗ- ಮೌಖಿಕ ಪರೀಕ್ಷೆಯಲ್ಲಿ ನಡೆಯುತ್ತದೆ ಎನ್ನುವ ಅವ್ಯವಹಾರದ ಬಗ್ಗೆ ತುಂಬಾ ಕುತೂಹಲಕಾರಿಯಾದ ಮೈ ನವಿರೇಳಿಸುವ ವಿವರಗಳಿವೆ, ನೈಜವಾದ ಕೆತಗಳಿವೆ. ಇದನ್ನು ಆ ಉದ್ಯೋಗ ಸೌಧದ ಪ್ರತಿ ಇಟ್ಟಿಗೆಯೂ ಮಾತನಾಡುವುದನ್ನು ಕೇಳಿದ್ದೇವೆ.
ಹಾಗಾದರೆ ಇದಕ್ಕೆ ಕೊನೆ ಇಲ್ಲವೇ? ಯುಪಿಎಸ್ಸಿ ಮಾದರಿಯಲ್ಲಿ ಒಂದು ಕಾನೂನಿನ ಮೂಲಕ ರಚಿತವಾದ ಸಂಸ್ಥೆ ಈ ಕೆಪಿಎಸ್ಸಿ. ಇದನ್ನು ಸರಿ ಮಾಡಬೇಕೆಂದು ಒಂದು ಸಮಿತಿ ಮಾಡಲಾಗಿತ್ತು. ಆ ನಂತರ ಕಳೆದ ವರ್ಷ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಸಭೆಯನ್ನೂ ನಡೆಸಿದ್ದರು. ಐಎಎಸ್ ಅಧಿಕಾರಿಗಳನ್ನು ಆರಿಸಲು ಯುಪಿಎಸ್ಸಿ ಹೇಗೆ ಪರೀಕ್ಷೆ ನಡೆಸುತ್ತದೆಯೋ ಅದೇ ರೀತಿ ನಮ್ಮಲ್ಲೂ ಪರೀಕ್ಷೆ ನಡೆಸಿ ಎಂದು ನಿರ್ದೆಶನ ಕೊಟ್ಟಿದ್ದರು. ಆದರೂ ಕೆಪಿಎಸ್ಸಿಯಲ್ಲಿ ಯಾವ ಬದಲಾವಣೆಯೂ ಆದಂತೆ ಕಾಣುತ್ತಿಲ್ಲ.
ಮುಂದಕ್ಕೆ ಹೋಗದ ತನಿಖೆ
ಕೆಲವು ವರ್ಷಗಳ ಹಿಂದೆ, ಪಕ್ಕದ ತಮಿಳುನಾಡಿನಲ್ಲಿ ಅಲ್ಲಿನ ಸರಕಾರ ‘ತಮಿಳುನಾಡು ಲೋಕ ಸೇವಾ ಆಯೋಗ’ಕ್ಕೆ ನೇಮಿಸಿದ ಸದಸ್ಯರ ಅರ್ಹತೆಯನ್ನು ಪ್ರಶ್ನಿಸಿ ಕೆಲವರು ಅಲ್ಲಿನ ಉಚ್ಛ ನ್ಯಾಯಾಲಯಕ್ಕೆ ಹೋಗಿದ್ದರು. 2016 ರಲ್ಲಿ ತೀರ್ಪು ನೀಡಿದ್ದ ನ್ಯಾಯಾಲಯ 11 ಜನರನ್ನು, ಸಾಂವಿಧಾನಿಕ ವಿಧಿ ವಿಧಾನದ ಮೂಲಕ ಆಯ್ಕೆ ಮಾಡಿಲ್ಲವೆಂದು ಕಿತ್ತು ಹಾಕಿದ ಉದಾಹರಣೆ ನಮ್ಮ ಮುಂದಿದೆ. ಮೂಲಭೂತವಾಗಿ ರಾಜ್ಯ ಲೋಕ ಸೇವಾ ಆಯೋಗಕ್ಕೆ ನೇಮಿಸುವ ಸದಸ್ಯರು ಮತ್ತು ಅಧ್ಯಕ್ಷರುಗಳ ಅರ್ಹತೆ ಬಗ್ಗೆ ತುಂಬಾ ಪ್ರಶ್ನೆಗಳಿವೆ. ಈ ಹಿಂದೆ, ಕೆಪಿಎಸ್ಸಿ ಪರೀಕ್ಷಾ ಅವ್ಯವಹಾರದ ಬಗ್ಗೆ ಸಿಐಡಿ ನಡೆಸಿದ ತನಿಖೆಯಲ್ಲಿ ಅನೇಕ ವಿಚಾರ ಹೊರಬಂದಿವೆ. ಉದ್ಯೋಗಾಕಾಂಕ್ಷಿಗಳು ಹಣ ನೀಡಿರುವ ಬಗ್ಗೆ ಹಲವಾರು ಮಾಹಿತಿ ಇದೆ. ಆದರೆ, ಆ ತನಿಖಾ ವರದಿ ಮುಂದಕ್ಕೆ ಹೋಗಲಿಲ್ಲ. ಯಾಕೆ ಎಂದು ಹೊಸದಾಗಿ ಹೇಳಬೇಕಾಗಿಲ್ಲ ತಾನೆ?
ಇದನ್ನೂ ಓದಿ: ಗೆಜೆಟೆಡ್ ಪ್ರೊಬೇಷನರ್ಸ್ ಪರೀಕ್ಷೆ ಮರು ನಡೆಸಿ: ಕೆಪಿಎಸ್ಸಿಗೆ ಸಿದ್ದರಾಮಯ್ಯ ಆದೇಶ
ಯುವಕರಿಗೆ ಉದ್ಯೋಗ ಕೊಡಲೇಬೇಕೆಂದಿದ್ದರೆ, ಪ್ರಾಯಶಃ ಸರಕಾರ ಮೂರು ಆಯ್ಕೆಗಳನ್ನು ಪರಿಗಣಿಸಬಹುದ; ತಾಂತ್ರಿಕ ಪ್ರಾವೀಣ್ಯತೆ ಮೂಲಕ ಹೊಸ ತರಹದ ಪರೀಕ್ಷಾ ವಿಧಾನವನ್ನು ಅಳವಡಿಸಿಕೊಂಡಿರುವ ಕೆಇಎ ಇರುವಾಗ ಕೆಪಿಎಸ್ಸಿಯನ್ನು ಮುಚ್ಚುವುದು. ಎರಡನೇಯದು- ಕೆಇಎ ಮಾದರಿಯಲ್ಲಿ, ಸದಸ್ಯರು ಮತ್ತು ಅಧ್ಯಕ್ಷರ ಕಾಟ ಇಲ್ಲದ ಹೊಸ ತರಹದ ಕೆಪಿಎಸ್ಸಿ ಹುಟ್ಟು ಹಾಕಲು ಅನುವಾಗುವಂತೆ ಕಾನೂನಿಗೆ ತಿದ್ದುಪಡಿ ತರುವುದು. ಮೂರನೇಯದು-ರಾಜ್ಯ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯನ್ನೊಳಗೊಂಡಂತೆ ಒಂದು ಸಮಿತಿ (Collegium) ರಚಿಸಿ ಸದಸ್ಯರು ಮತ್ತು ಅಧ್ಯಕ್ಷರ ಆಯ್ಕೆ ಮಾಡಲು ಹೊಸ ಕ್ರಮ ತೆಗೆದುಕೊಳ್ಳುವುದು.
ಇದನ್ನೂ ಓದಿ: ಕೆಎಎಸ್ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ನೋಂದಣಿ- ಓಎಂಆರ್ ಶೀಟ್ ನಂಬರ್ ಅದಲು ಬದಲು
ಕೆಪಿಎಸ್ಸಿಯಲ್ಲಿ ಇರುವ ಹೆಗ್ಗಣಗಳಿಗೆ ಯಾವ ಕಡಿವಾಣ ಬಿದ್ದಿಲ್ಲ. ಮೌಖಿಕ ಪರೀಕ್ಷೆಯಲ್ಲಿ ಪ್ರಶ್ನೆ ಕೇಳುವವರ ಸೂಟಿನಲ್ಲಿ ಏನೇನಿದೆ? ಯಾರಿಗೂ ಗೊತ್ತಿಲ್ಲ. ಇದನ್ನು ಮಾಡದೇ ಕೆಪಿಎಸ್ಸಿ ನಡೆಸುವ ಪರೀಕ್ಷೆಗೆ ಬರುವ ಅಭ್ಯರ್ಥಿಗಳ ಉದ್ದ ತೋಳಿನ ಬಟ್ಟೆ ಹರಿದು, ವಾಚು ಬಿಚ್ಚಿಸಿ, ಶೂ ಬಿಚ್ಚಿಸಿ ಪರೀಕ್ಷೆ ನಡೆಸಿದರೆ ಏನು ಬಂತು? ನ್ಯಾಯಾಲಯಗಳು ತಂದಂತೆ, ಕೆಪಿಎಸ್ಸಿ ನಡೆಸುವ ಸಂದರ್ಶನಗಳ ಲೈವ್ ಸ್ಟ್ರೀಮಿಂಗ್ ಮಾಡಿ. ಅಭ್ಯರ್ಥಿಗಳ ಮೊಬೈಲ್ಗಳಿಗೆ ಮೌಖಿಕ ಪರೀಕ್ಷೆಯ ನಂತರ ಕೆಪಿಎಸ್ಸಿ ಕಡೆಯಿಂದ ಯಾವ ಫೋನ್ ಬರದಂತೆ ಏರ್ಪಾಟು ಮಾಡಿ. ಆಗ ಜನ ಖಡಾಖಂಡಿತವಾಗಿ ಮಖ್ಯಮಂತ್ರಿಗಳಿಗೆ ಭೇಷ್ ಎನ್ನುತ್ತಾರೆ.
ಇನ್ನಷ್ಟು ಅಭಿಮತ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:16 pm, Wed, 1 January 25