ಕಬ್ಬು ಬೆಳೆಗಾರರ ಹೋರಾಟ: ಟನ್ ಕಬ್ಬಿಗೆ 3500 ರೂ. ಕೊಟ್ಟರೆ ಕಾರ್ಖಾನೆಗಳಿಗೆ ನಿಜಕ್ಕೂ ನಷ್ಟವಾಗುತ್ತಾ?
ಕಬ್ಬಿಗೆ ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದೆ. ಟನ್ ಕಬ್ಬಿಗೆ 3500 ರೂ.ಗಳಿಗೆ ರೈತರು ಪಟ್ಟು ಹಿಡಿದು ಕುಳಿತಿದ್ದರೆ, ಸಕ್ಕರೆ ಕಾರ್ಖಾನೆಗಳ ಮಾಲೀಕರು ಮಾತ್ರ ಇದಕ್ಕೆ ಒಲ್ಲೆ ಎನ್ನುತ್ತಿದ್ದಾರೆ. ತಮಗೆ ನಷ್ಟ ಆಗುತ್ತೆಂಬ ಕಾರಣ ನೀಡುತ್ತಿದ್ದಾರೆ. ಅಷ್ಟಕ್ಕೂ ಸದ್ಯದ ಪರಿಸ್ಥಿತಿಯಲ್ಲಿ ನಿಜಕ್ಕೂ ನಷ್ಟ ಆಗುತ್ತಿರುವುದು ಯಾರಿಗೆ? ಕಬ್ಬು ಬೆಳೆದ ರೈತನಿಗೋ? ಅಥವಾ ಕಾರ್ಖಾನೆಗಳ ಮಾಲೀಕರಿಗೋ?

ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಕಬ್ಬು ಬೆಳೆಗಾರರು ರಸ್ತೆಗೆ ಇಳಿದಿದ್ದಾರೆ. ಪ್ರತಿ ಟನ್ ಕಬ್ಬಿಗೆ 3500 ರೂ. ದರ ನಿಗದಿ ಮಾಡಲೇಬೇಕು ಎಂದು ಆಗ್ರಹಿಸಿ ಕಳೆದ ಹಲವು ದಿನಗಳಿಂದ ಪ್ರತಿಭಟನೆ ನಡೆಸೆತ್ತಿದ್ದಾರೆ. ರಾಜ್ಯದಲ್ಲಿನ ಸಕ್ಕರೆ ಕಾರ್ಖಾನೆಗಳು ಈಗಾಗಲೇ ಕಬ್ಬು ಬೆಳೆಗಾರರಿಗೆ ಪ್ರತಿ ಟನ್‌ಗೆ 2700 ರಿಂದ 3200 ರೂ. ವರೆಗೂ ನೀಡುತ್ತಿವೆ. ರಾಜ್ಯದಲ್ಲಿ ಒಟ್ಟು 73 ಸಕ್ಕರೆ ಕಾರ್ಖಾನೆಗಳಿವೆ. ಆ ಪೈಕಿ ಬಹತೇಕ ಸಕ್ಕರೆ ಕಾರ್ಖಾನೆಗಳು ಹಾಲಿ ಮತ್ತು ಮಾಜಿ ಶಾಸಕರುಗಳದ್ದೇ ಆಗಿವೆ.
ಪ್ರತಿಭಟನೆ ನಡೆಸುತ್ತಿರುವ ರೈತರ 3-4 ಬೇಡಿಕೆಗಳಲ್ಲಿ ಪ್ರಮುಖ ಬೇಡಿಕೆ ಟನ್‌ಗೆ 3500 ರೂ. ನೀಡಬೇಕೆಂಬುದು. ಒಂದು ವೇಳೆ ಸಕ್ಕರೆ ಕಾರ್ಖಾನೆ ಮಾಲೀಕರು 3500 ರೂ. ನೀಡಿದರೆ ಅವರಿಗೆ ನಷ್ಟವಾಗಲಿದೆಯೇ? ನಿಜವಾಗಿಯೂ ಇಲ್ಲಿ ನಷ್ಟವಾಗುತ್ತಿರುವುದು ರೈತರಿಗಾ ಅಥವಾ ಕಾರ್ಖಾನೆ ಮಾಲೀಕರಿಗಾ? ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನ ಇದು. ಒಂದು ಎಕರೆಯಲ್ಲಿ ಕಬ್ಬು ಬೆಳೆಯಲು ರೈತರು ಸರಿಸುಮಾರು 30ರಿಂದ 80 ಸಾವಿರ ರೂಪಾಯಿ ಖರ್ಚು ಮಾಡುತ್ತಾರೆ. ಇಷ್ಟು ಖರ್ಚು ಮಾಡಿದ ಮೇಲೆ ಇಳುವರಿ ಚೆನ್ನಾಗಿ ಬರುತ್ತೆ ಎಂಬ ನಿರೀಕ್ಷೆಯಲ್ಲಿ ರೈತರಿತ್ತಾರೆ. ಆದರೆ, ಒಂದು ವೇಳೆ ಕಬ್ಬು ಬೆಳೆ ಪ್ರಕೃತಿ ಆಟಕ್ಕೆ ಸಿಲುಕಿದರಂತೂ ಕಥೆ ಮುಗಿಯಿತು. ಆ ವರ್ಷ ಇಳುವರಿ ಕಡಿಮೆಯಾದಂತೆ ಅಥವಾ ಬೆಳೆ ಮಣ್ಣು ಪಾಲಾದಂತೆ.
ಇದನ್ನೂ ಓದಿ: ತೀವ್ರ ಸ್ವರೂಪ ಪಡೆದ ಕಬ್ಬು ಬೆಳೆಗಾರರ ಪ್ರತಿಭಟನೆ: ಪೊಲೀಸರ ಲಾಠಿ ಚಾರ್ಜ್ ಗೆ ಪ್ರತಿಯಾಗಿ ರೈತರಿಂದ ಕಲ್ಲೇಟು
ಇನ್ನು, ಇಳುವರಿ ಚೆನ್ನಾಗಿ ಬಂದರೂ ಕಟಾವು ಆಗಿ ಕಾರ್ಖಾನೆಯ ಅಂಗಳಕ್ಕೆ ಬಂದಾಗ ಅಲ್ಲಿ ತೂಕದಲ್ಲಿ ಆಗುವ ಮೋಸವೂ ರೈತರಿಗಾಗುವ ನಷ್ಟವೇ. ಮುಂದುವರೆದಂತೆ ಕಬ್ಬು ಕಾರ್ಖಾನೆಯ ಮಷಿನಿನ್ ಬಾಯಿಗೆ ಸಿಲುಕಿ ನಾನಾ ರೂಪವನ್ನು ತಾಳುತ್ತದೆ. ಸಕ್ಕರೆ, ಬೆಲ್ಲ ಮತ್ತು ಉಪ ಉತ್ಪನ್ನಗಳಾದ ಮೋಲಾಸಿಸ್, ಎಥನಾಲ್, ಬಗಾಸ್, ಸ್ಪಿರಿಟ್, ಫಿಲ್ಟರ್ ಕೇಕ್, ಗೊಬ್ಬರ ಮತ್ತು ವಿದ್ಯುತ್ ಅನ್ನು ಕಾರ್ಖಾನೆಗಳು ಉತ್ಪಾದಿಸುತ್ತವೆ. ಆ ಮೂಲಕ ಅವು ಲಾಭ ಪಡೆದುಕೊಳ್ಳುತ್ತವೆ.
ಕಾರ್ಖಾನೆಗಳಿಗೆ ಆಗುವ ಲಾಭವೆಷ್ಟು?
ಕಬ್ಬಿನ ರಿವಕವರ್ ಶೇ. 10ರಷ್ಟು ಇದ್ದರೆ ಒಂದು ಟನ್ ಕಬ್ಬಿನಿಂದ 100 ಕೆಜಿ ಸಕ್ಕರೆ ಉತ್ಪಾದನೆಯಾಗುತ್ತದೆ. ಒಂದು ವೇಳೆ ಸಕ್ಕರೆ ಪ್ರಮಾಣ ಕಡಿಮೆ ಇದ್ದಲ್ಲಿ ಸಕ್ಕರೆ ಉತ್ಪಾದನೆ ಕೂಡ ಕಡಿಮೆ ಆಗುತ್ತದೆ. ಒಂದು ಕೆಜಿ ಸಕ್ಕರೆ ಮಾರುಕಟ್ಟೆಯಲ್ಲಿ 45 ರೂ.ಗೆ ಮಾರಾಟವಾಗುತ್ತದೆ. ಅಂದರೆ 100 ಕೆಜಿ ಸಕ್ಕರೆ ಬೆಲೆ 4500 ರೂಪಾಯಿಗಳು. ಆದರೆ, ಕೇಂದ್ರ ಸರ್ಕಾರ ನಿಗದಿ ಮಾಡಿರುವ ದರದ ಪ್ರಕಾರ ಕಾರ್ಖಾನೆಗಳು ಸಕ್ಕರೆಯನ್ನು ಪ್ರತಿ ಕೆಜಿಗೆ 31 ರೂ.ನಂತೆ ಮಾರಾಟ ಮಾಡಬೇಕು. 100 ಕೆಜಿ ಸಕ್ಕರೆಯನ್ನು 3100 ರೂ.ಗೆ ಮಾರಬೇಕು. ಹಾಗಂತ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಇದರಿಂದ ನಷ್ಟ ಎಂದು ಭಾವಿಸಲಾಗದು. ಏಕೆಂದರೆ ಕಬ್ಬಿನಿಂದ ತಯಾರಾಗುವ ಉಪ ಉತ್ಪನ್ನಗಳಿಂದ ಸಕ್ಕರೆಗಿಂತ ಅಧಿಕ ಆದಾಯ ಕಾರ್ಖಾನೆಗಳಿಗೆ ಬರುತ್ತದೆ.
ಉದಾಹರಣೆಗೆ, ಎಥನಾಲ್ ಪ್ರತಿ ಲೀಟರ್‌ಗೆ ಸುಮಾರು 65.61 ರೂಪಾಯಿಗೆ ಮಾರಾಟವಾಗುತ್ತದೆ. 1 ಟನ್ ಕಬ್ಬಿನಿಂದ ಸುಮಾರು 70ರಿಂದ 80 ಲೀಟರ್ ಎಥನಾಲ್ ಅನ್ನು ಉತ್ಪಾದಿಸಬಹುದು. ಅಂದರೆ, 70 ಲೀಟರ್‌ಗೆ 4,550 ರೂ . ಆದವು. ಎಥನಾಲ್ ಒಂದರಿಂದಲೇ ಇಷ್ಟೊಂದು ಲಾಭ ಕಾರ್ಖಾನೆ ಮಾಲೀಕರಿಗೆ ಆಗಲಿದ್ದು, ರೈತರಿಗೆ ನೀಡುವ ಹಣ ಎಥನಾಲ್ ಒಂದರಿಂದಲೇ ರಿಕವರಿ ಆಗಲಿದೆ. ಇನ್ನು ಮೋಲಾಸಿಸ್‌ನಿಂದ ತಯಾರಾಗುವ Distilled Spiritನಿಂದಲೂ ಏನು ಕಡಿಮೆ ಲಾಭ ಬರುವುದಿಲ್ಲ. ಈ Distilled Spirit ಅನ್ನು ಮದ್ಯ ತಯಾರಿಕೆ ಸೇರಿದಂತೆ ಅನೇಕ ವಸ್ತುಗಳನ್ನು ಉತ್ಪಾದಿಸಲು ಬಳಸಲಾಗುತ್ತದೆ. ಹೀಗಾಗಿ ಇದು ಕೂಡ ಸಕ್ಕರೆ ಕಾರ್ಖಾನೆ ಮಾಲೀಕರ ಕಿಸೆ ತುಂಬಿಸುತ್ತದೆ. ಕಾರ್ಖಾನೆ ಮಾಲೀಕರು ತಾವು ಉತ್ಪಾದಿಸುವ ವಿದ್ಯುತ್ ಅನ್ನು ತಮಗೆ ಎಷ್ಟು ಬೇಕೊ ಅಷ್ಟು ಬಳಸಿಕೊಂಡು, ಉಳಿದಿದ್ದನ್ನು ಮಾರಾಟ ಮಾಡುತ್ತಾರೆ. ಹೀಗೆ, ಸಕ್ಕರೆ ಕಾರ್ಖಾನೆಗಳು ಕಬ್ಬಿನಿಂದ ಉತ್ಪಾದಿಸುವ ಪ್ರತಿಯೊಂದು ವಸ್ತುವು ಲಾಭದಾಯಕವೇ. ಇಲ್ಲಿಗೆ ಲಾಭ ಯಾರಿಗೆ? ನಷ್ಟ ಯಾರಿಗೆ? ಎಂಬುದನ್ನು ನೀವೇ ಯೋಚಿಸಿ.
ಕೇಂದ್ರದ FRP ಬೆಲೆ ಎಷ್ಟು?
ಕೇಂದ್ರದ ಸರ್ಕಾರ ಕಬ್ಬು ಬೆಳೆಗಾರರಿಗೆ ಪ್ರತಿ ಕ್ವಿಂಟಾಲ್‌ಗೆ 355 ರೂ.ನಿಗದಿ ಮಾಡಿದೆ. ಆದರೆ ಇಲ್ಲಿ ಒಂದು ಟ್ವಿಸ್ಟ್ ಇದೆ. ಶೇ.10.25 ಮೂಲ ಇಳುವರಿ ದರವಿದ್ದರೆ (ಸಕ್ಕರೆ ಉತ್ಪಾದನಾ ಪ್ರಮಾಣ) ಪ್ರತಿ ಕ್ವಿಂಟಾಲ್ ಗೆ 355 ರೂ.ಗಳಂತೆ ನೀಡಲು ಅನುಮೋದನೆ ನೀಡಿದೆ. ಅಂದರೆ ಒಂದು ಟನ್‌ಗೆ 3550 ರೂ. ಆಗುತ್ತದೆ. ಕೇಂದ್ರ ಸರ್ಕಾರ 201 ರಿಂದ ಪ್ರತಿವರ್ಷ ಕಬ್ಬಿನ ಎಫ್‌ಆರ್‌ಪಿ ಬೆಲೆ ಏರಿಸುತ್ತಲೇ ಬಂದಿದ್ದರೂ ಸಕ್ಕರೆ ಕಾರ್ಖಾನೆಗಳು, ರಾಜ್ಯ ಸರ್ಕಾರ ಮಾತ್ರ ಈ ಬೆಲೆ ನೀಡಲು ಹಿಂದೇಟು ಹಾಕುತ್ತಿರುವುದು ಯಾಕೆ ಎಂಬುದನ್ನು ಮಾತ್ರ ಆ ದೇವರೇ ಬಲ್ಲ. ಇಲ್ಲಿ ರಾಜ್ಯ ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆಗಳ ನಡುವೆ ಏನು ಅಡ್ಜೆಸ್ಟಮೆಂಟ್ ಇದೆಯೋ ಗೊತ್ತಿಲ್ಲ.
ಲೇಖನ- ವಿವೇಕ ಬಿರಾದಾರ
Published On - 4:11 pm, Fri, 7 November 25




