ಬೇಡ್ತಿ ಮತ್ತು ಬೆಂಗಳೂರಿನ ಟನೆಲ್ ರಸ್ತೆ ವಿವಾದ: ಸೋನಿಯಾ ಗಾಂಧಿ ಮತ್ತು ಜೈರಾಮ್ ರಮೇಶ್ ಪರಿಸರ ಪ್ರೇಮ ತೋರಿಸಲಿ
ಕಾಂಗ್ರೆಸ್ ಪಕ್ಷಕ್ಕೆ ಒಂದು ಇತಿಹಾಸವಿದೆ. ಕೇರಳದ ಸೈಲೆಂಟ್ ವ್ಯಾಲಿ ಹೋರಾಟ ನಡೆದಾಗ, ಹೋರಾಟಗಾರರ ಮಾತಿಗೆ ಒಪ್ಪಿ ಆ ಯೋಜನೆಯನ್ನು ಕೈ ಬಿಟ್ಟಿದ್ದು ಅಂದಿನ ಇಂದಿರಾಗಾಂಧಿ ಸರಕಾರ. ಈಗ ಮತ್ತೆ ಪರಿಸರ ವಿರೋಧಿ ಯೋಜನೆಗೆ ರಾಜ್ಯ ಸರಕಾರ ಕೈ ಹಾಕಿರುವಾಗ ಕೇಂದ್ರದ ಕಾಂಗ್ರೆಸ್ ನಾಯಕರು ಮಧ್ಯಪ್ರವೇಶಿಸಿಸುವುದು ಅತೀ ಅವಶ್ಯ.

ಉದ್ದೇಶಿತ ಟನೆಲ್ ರೋಡ್, ಅಂದರೆ ಸುರಂಗ ಮಾರ್ಗ (Bengaluru Tunnel Road) ಯೋಜನೆ ಬೆಂಗಳೂರಿನಲ್ಲಿ (Bengaluru) ಭಾರೀ ಸದ್ದು ಮಾಡುತ್ತಿದೆ. ದಿನಗಳೆದಂತೆ ಟನೆಲ್ ರಸ್ತೆ ವಿರೋಧಿ ಹೋರಾಟ ಕಾವು ಪಡೆಯುತ್ತಿದೆ. ಇದರ ಮುಂಚೂಣಿಯಲ್ಲಿ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಒಂದುಕಡೆಯಾದರೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತೊಂದೆಡೆ ನಿಂತು ಈ ಯೋಜನೆಯ ಪರವಾಗಿ ಬ್ಯಾಟ್ ಬೀಸುತ್ತಿದ್ದಾರೆ. ಮಾತಿನ ಜಂಗಿ ಕುಸ್ತಿಯಲ್ಲಿ ತೊಡಗಿದ್ದಾರೆ. ಒಂದೆಡೆ ಈ ಯೋಜನೆಯ ಡಿಪಿಆರ್‌ನಲ್ಲಿರುವ ಐಬುಗಳನ್ನು ತೇಜಸ್ವಿ ಸೂರ್ಯ ಎತ್ತಿ ತೋರಿಸುತ್ತಿದ್ದರೆ, ಶಿವಕುಮಾರ್ ಜೊತೆಗೆ ನಿಂತ ಕೆಲ ಕಾಂಗ್ರೆಸ್ ನಾಯಕರು ಸೂರ್ಯ ಅವರ ವೈಯಕ್ತಿಕ ತೇಜೋವಧೆಗೆ ಇಳಿದಿದ್ದಾರೆ.
ಇಂತಹದೇ ಮತ್ತೊಂದು ಹೋರಾಟ ದೂರದ ಉತ್ತರ ಕನ್ನಡದ ಶಿರಸಿ ಮತ್ತು ಯಲ್ಲಾಪುರದಲ್ಲಿ ಶುರುವಾಗಿದೆ. ಬೇಡ್ತಿ-ವರದಾ ನದಿ ಜೋಡಣೆ ಯೋಜನೆ ವಿರುದ್ಧದ ಹೋರಾಟ ದಿನದಿಂದ ದಿನಕ್ಕೆ ಕಾವು ಪಡೆಯುತ್ತಿದೆ. ಉತ್ತರ ಕನ್ನಡದ ಅತ್ಯಂತ ಶ್ರೀಮಂತ ಕಾಡನ್ನು ಮತ್ತು ಕಾಡಿನ ಅಂಚಿನಲ್ಲಿರುವ ಅಪಾರ ಜೀವಸಂಪತ್ತನ್ನು ಒತ್ತೆಯಿಟ್ಟು ಪಕ್ಕದ ಜಿಲ್ಲೆಗೆ ನೀರು ಕೊಡಬೇಕೆಂಬ ಯೋಜನೆ ಇದರ ಹಿಂದಿದೆ. ಈ ಎರಡು ಯೋಜನೆಗಳು ಬೇಕು ಎನ್ನುವವರು ಒಂದಿಷ್ಟು ಜನ. ಈ ಎರಡೂ ಯೋಜನೆಗಳನ್ನು ವಿರೋಧಿಸುವವರ ಸಂಖ್ಯೆಯೇನು ಕಡಿಮೆಯಿಲ್ಲ.
ಟನೆಲ್ ರೋಡ್ ಮತ್ತು ಬೇಡ್ತಿ ಹೋರಾಟದ ನಡುವಿನ ಸಾಮ್ಯತೆ ಏನು?
ಇವೆರಡೂ, ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಹೋರಾಟಗಳು. ಸುರಂಗದ ಮೂಲಕ ನೀರು ಕೊಂಡೊಯ್ಯುವ ಪ್ರಸ್ತಾವನೆ ಬೇಡ್ತಿ ಯೋಜನೆಯಲ್ಲಿದ್ದರೆ, ಸುರಂಗ ಕೊರೆದು ರಸ್ತೆ ಮಾಡಿ, ಬೆಂಗಳೂರಿನ ಟ್ರಾಫಿಕ್ ಜಾಮ್ ಕಡಿಮೆ ಮಾಡುವ ಉದ್ದೇಶ ಟನೆಲ್ ರೋಡಿನದ್ದು. ಈ ಎರಡರ ವಿರುದ್ಧದ ಹೋರಾಟದಲ್ಲಿ ಇನ್ನೊಂದು ಸಾಮ್ಯತೆ ಇದೆ: ಅಭಿವೃದ್ಧಿಯ ಹೆಸರಿನಲ್ಲಿ ಭೌಗೋಳಿಕ ಮೇಲ್ಮೈಯಲ್ಲಿರುವ ಪರಿಸರದ ಮೇಲೆ ಮಾಡುವ ನಿರಂತರ ದಾಳಿಯಿಂದ ಭವಿಷ್ಯದಲ್ಲಿ ಆಗಬಹುದಾದ ಪ್ರಕೃತಿ ವಿಕೋಪ ಮತ್ತು ವಿರೂಪಗೊಳಿಸುವುದನ್ನು ತಡೆಯುವುದು. ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಹೆಚ್ಎಸ್ ದೊರೆಸ್ವಾಮಿಯವರ ನೆನಪಾಗುತ್ತದೆ. ಅವರು ಬದುಕಿದ್ದಿದ್ದರೆ ಈ ಪರಿಸರ ಹೋರಾಟಕ್ಕೆ ಇನ್ನಷ್ಟು ನೈತಿಕ ಸ್ಥೈರ್ಯ ತುಂಬುತ್ತಿದ್ದರೇನೋ? ದೊರೆಸ್ವಾಮಿಯವರನ್ನು ನೆನಪಿಸಿಕೊಳ್ಳಲು ಒಂದು ಕಾರಣವಿದೆ. ಪರಿಸರ ಸಂರಕ್ಷಣಾ ಹೋರಾಟಕ್ಕೆ ಜನ ಬೆಂಬಲ ತುಂಬಾ ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ದೊರೆಸ್ವಾಮಿಯಂತಹ ಸಾಮಾಜಿಕ ಹೋರಾಟಗಾರರು ಬೆಂಬಲ ಬೇಕಾಗಿತ್ತು ಎಂದು ಹಂಬಲಿಸುವುದು ಸಹಜ.
ನಗರ ಪ್ರದೇಶದಲ್ಲಿ ವಾಸಿಸುತ್ತಿರುವ ನಾಗರಿಕರಿಗೆ ದಿನನಿತ್ಯ ವಾಯು ಮತ್ತು ಜಲ ಮಾಲಿನ್ಯದ ಕಾಟ ಜೋರಾಗಿದೆ. ಈ ರೀತಿಯ ಮಾಲಿನ್ಯದ ವಿರುದ್ಧ ನಡೆವ ಹೋರಾಟಕ್ಕೆ ಜನ ದನಿಗೂಡಿಸುತ್ತಿದ್ದಾರೆ. ಆದರೆ, ಪರಿಸರ ಸಂರಕ್ಷಣಾ ಚಳುವಳಿಗೆ ಆ ರೀತಿಯ ಬೆಂಬಲ ಸಿಗುತ್ತಿಲ್ಲ, ಯಾಕೆ? ಅದಕ್ಕೊಂದು ಪ್ರಮುಖ ಕಾರಣವಿದೆ. ಮಾಲಿನ್ಯ ಹೇಗೆ ಎಂದರೆ, ಇಂದು ಡ್ರಾ, ಇಂದೇ ಬಹುಮಾನ ಇದ್ದಂತೆ. ಇಂದು ಮಾಡುವ ಮಾಲಿನ್ಯದ ಪರಿಣಾಮದಿಂದಾಗಿ, ನಾಳೆ ಬೆಳಿಗ್ಗೆಯೇ ಜನರ ಆರೋಗ್ಯದಲ್ಲಿ ಏರುಪೇರಾಗುವುದನ್ನು ಕಾಣುತ್ತಿದ್ದೇವೆ. ಇದಕ್ಕೆ ದೆಹಲಿಯ ಹವಾಮಾನದಲ್ಲಿ ಆಗುತ್ತಿರುವ ಏರುಪೇರು, ಒಂದು ಉದಾಹರಣೆ. ಪರಿಸರ ಸಂರಕ್ಷಣೆ ಹೋರಾಟ ಹಾಗಲ್ಲ. ಇದನ್ನು ವಿರೋಧಿಸುವವರ ವಾದವೇನೆಂದರೆ, ಯೋಜನೆಗಳಿಂದ ಪರಿಸರಕ್ಕೆ ಹಾನಿಯಾಗುತ್ತದೆ. ಹೊರ ಜಗತ್ತಿಗೆ ಈ ವಾದ ಸಪ್ಪೆಯನ್ನಿಸಿದರೆ ಆಶ್ಚರ್ಯವಿಲ್ಲ. ಪರಿಸರ ಹೋರಾಟಗಾರರು ಜನರನ್ನು ಹೆದರಿಸಿ ತಪ್ಪುದಾರಿಗೆಳೆಯುತ್ತಿದ್ದಾರೆ ಎಂಬುದು, ಅಭಿವೃದ್ಧಿ-ಹರಿಕಾರರ ವಾದ.
ಈ ರೀತಿಯಾಗಲು ಕಾರಣವಿಲ್ಲದಿಲ್ಲ. ಪರಿಸರ ಸಂರಕ್ಷಣಾ ಚಳವಳಿಗಳ ಬೆನ್ನು ಮುರಿದವರು ಮತ್ಯಾರೂ ಅಲ್ಲ, ಅವರು ವಿವಿಐಪಿ ಪರಿಸರ ಚಳವಳಿಗಾರರು. ವಿದೇಶಿ ಸಂಘ ಸಂಸ್ಥೆಗಳಿಂದ ಹಣ ಪಡೆದು, ಕೆಲವು ಬೃಹತ್ ಯೋಜನೆಗಳನ್ನು ವಿರೋಧಿಸುವುದನ್ನೇ ತಮ್ಮ ಜೀವನದ ಗುರಿಯಾಗಿಸಿಕೊಂಡು 80ರ ದಶಕದಿಂದ 2010ರವರೆಗೂ ಪ್ರಾಬಲ್ಯ ಮೆರೆದವರು ಇವರು. ಇವರಿಂದಾಗಿ ಪ್ರಾಮಾಣಿಕ ಹೋರಾಟಕ್ಕೆ ಜನ ಬೆಂಬಲ ಸಿಗುವುದು ನಿಂತಿತು. ಪರಿಸರ ಹೋರಾಟಗಳ ಬಗ್ಗೆ ಜನ ಸಿನಿಕರಾಗಿದ್ದಾರೆ. ಎರಡನೇ ಕಾರಣ, ನಮ್ಮ ನ್ಯಾಯಾಲಯಗಳು. ಪರಿಸರ ಸಂರಕ್ಷಣಾ ಕೇಸುಗಳನ್ನು ತೆಗೆದುಕೊಂಡು ನ್ಯಾಯಾಲಯದ ಮೆಟ್ಟಿಲು ಹತ್ತಿದ ಪರಿಸರವಾದಿಗಳಿಗೆ ಸೋಲು ಕಟ್ಟಿಟ್ಟ ಬುತ್ತಿ. ಇಲ್ಲೀವರೆಗೆ ಯಾವ ವ್ಯಾಜ್ಯವನ್ನು ಗೆಲ್ಲಲಾಗಿಲ್ಲ. ನ್ಯಾಯಾಲಯಗಳಲ್ಲಿ ನಡೆದ ಪರಿಸರ ಸಂರಕ್ಷಣಾ ಕೇಸುಗಳ ಹೋರಾಟವನ್ನು ಅಧ್ಯಯನ ಮಾಡಿರುವ ಹಿರಿಯ ವಿಜ್ಞಾನಿ ಶರತ್ ಚಂದ್ರ ಲೇಲೆ ಕೂಡ ಇದೇ ಅಭಿಪ್ರಾಯ ಪಡುತ್ತಾರೆ. ಅವರು ಗಮನಿಸದ ಕೆಲವೊಂದು ಹೊಸ ಅಂಶಗಳನ್ನು ಇಲ್ಲಿ ಚರ್ಚಿಸುವುದು ಸೂಕ್ತ.
1. ವಾಯು ಅಥವಾ ಜಲ ಮಾಲಿನ್ಯದ ಪರಿಣಾಮವನ್ನು ಅಳೆಯುವ ಮಾಪನಗಳು ಬಂದಿವೆ. ಹಾಗಾಗಿ ಅದಕ್ಕೆ ಸಂಬಂಧಿಸಿದ ವ್ಯಾಜ್ಯಗಳಲ್ಲಿ ಕೆಲವೊಮ್ಮೆ ನ್ಯಾಯಾಲಯಗಳು ಸರಕಾರಕ್ಕೆ ಚಾಟಿ ಬೀಸಿದ ಉದಾಹರಣೆಗಳಿವೆ. ಆದರೆ, ಪರಿಸರ ಸಂರಕ್ಷಣೆಯ ಹೋರಾಟ ಹಾಗಲ್ಲ. ಇಲ್ಲಿ ಪರಿಸರ ಸಮತೋಲನಕ್ಕೆ ಆಗಬಹುದಾದ ತೊಂದರೆಯನ್ನು ಯಾವುದೇ ಮಾನಕದಲ್ಲಿ ಅಳೆಯಲು ಸಾಧ್ಯವಿಲ್ಲ. ಗಂಭೀರತೆಯನ್ನು ತಕ್ಷಣ ಅನುಭವಿಸಲು ಸಾಧ್ಯವಿಲ್ಲ. ಅಥವಾ ನಮ್ಮ ಠಾವಿನಲ್ಲಿರುವ (Habitat) ಜನರ ಆರೋಗ್ಯದಲ್ಲಿ ಆಗಬಹುದಾದ ಅನಾಹುತ ಅಥವಾ ವ್ಯತಿರಿಕ್ತ ಪರಿಣಾಮವನ್ನು ಎತ್ತಿ ತೋರಿಸಲು ಸಾಧ್ಯವಿಲ್ಲ. ಇಂತಹ ಕೇಸುಗಳಲ್ಲಿ ಪರಿಸರ ಸಂರಕ್ಷಣಾ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ ಮಾಹಿತಿಯನ್ನು, ನ್ಯಾಯಾಲಯವು ‘ಇದು ಕೆಲವರ ಊಹೆ’ ಎಂದು ವಿಶ್ಲೇಷಿಸಿ ಕೇಸನ್ನು ವಜಾಮಾಡುವ ಸಾಧ್ಯತೆ ಜಾಸ್ತಿ ಇದೆ. ಈ ಹಿಂದೆ ಈ ರೀತಿ ಆದ ಉದಾಹರಣೆ ನಮ್ಮ ಮುಂದಿದೆ. ಇನ್ನೊಂದು ಮುಖ್ಯ ಅಂಶವನ್ನು ಇಲ್ಲಿ ಗಮನಿಸಬೇಕು: ಅಭಿವೃದ್ಧಿ ಅರ್ಥಶಾಸ್ತ್ರಜ್ಞರ ವಾದವೊಂದಿದೆ. ಅದೇನೆಂದರೆ- Pollute Now, Pay Later ಅಂತ. ಪ್ರಸ್ತುತದಲ್ಲಿ ಮಾಲಿನ್ಯವುಂಟು ಮಾಡಿ, ದೇಶ ಮತ್ತು ರಾಜ್ಯ ಅಭಿವೃದ್ಧಿಯಾದ ನಂತರ, ಜನರ ಕೈಗೆ ಹಣ ಬಂದು ಅವರ ಬದುಕು ಸುಸ್ಥಿರಗೊಂಡ ನಂತರ, ಅವರ ಕೈಯಿಂದಲೇ ಪರಿಸರ ಸಮತೋಲನಕ್ಕೆ ದುಡ್ಡು ಹಾಕಿಸುವುದು. ಅಂದರೆ, ಅಭಿವೃದ್ಧಿಯಾದ ನಂತರ ಪರಿಸರದ ಬಗ್ಗೆ ಚಿಂತನೆ ಮಾಡಿದರಾಯ್ತು ಎಂಬುದು ಪರಿಸರ ಅರ್ಥಶಾಸ್ತ್ರಜ್ಞರ ವಾದ. ನಮ್ಮ ಕಾಡು ಮೇಡುಗಳಲ್ಲಿ ಅಲೆದು ಪ್ರಾಣಿಗಳನ್ನು ಕೊಂದು ಪಟ ತೆಗೆದು ಗೋಡೆಯ ಮೇಲೆ ನೇತುಹಾಕಿ ತಮ್ಮ ಶೌರ್ಯವನ್ನು ಪ್ರದರ್ಶಿಸಿದ ಬ್ರಿಟಿಷರ ಬಗ್ಗೆ, ನಮ್ಮ ರಾಜ ಮಹಾರಾಜ ಬಗ್ಗೆ ಕೇಳಿರಬಹುದು. ಶೌರ್ಯ ಮೆರೆದು, ಎಲ್ಲ ಮುಗಿದ ಮೇಲೆ ಈಗ ಯಾರೂ ಪ್ರಾಣಿ ಹಿಂಸೆ ಮಾಡಬೇಡಿ ಎನ್ನುವ ತರ್ಕವಿದೆಯಲ್ಲ. ಇದು ಪರಿಸರ ಅರ್ಥಶಾಸ್ತ್ರಜ್ಞರ ವಾದಕ್ಕೆ ಒಂದು ಉದಾಹರಣೆ.
ಎರಡನೆಯ ವಾದವೇನೆಂದರೆ, ಒಂದು ರಾಜ್ಯವನ್ನು ನಿರ್ಮಿಸಲು ಕೆಲ ಹಳ್ಳಿಗಳನ್ನು ತ್ಯಾಗ ಮಾಡಬೇಕಾದ್ದು ಅನಿವಾರ್ಯ: ಅಭಿವೃದ್ಧಿಯಾಗಬೇಕೆಂದರೆ ಮೆಗಾ ಯೋಜನೆಗಳು ಬೇಕು. ಈ ರೀತಿಯ ಮೆಗಾ ಯೋಜನೆಗಳನ್ನು ತರಬೇಕೆಂದರೆ ಒಂದಿಷ್ಟು ತ್ಯಾಗಕ್ಕೆ ಜನ ಸಿದ್ಧರಾಗಬೇಕು ಎಂಬುದು ಇದರ ಅರ್ಥ. ಪಶ್ಚಿಮ ಘಟ್ಟದಲ್ಲಿನ ಉಸಿರಾಡುತ್ತಿರುವ ಜೀವವೈವಿಧ್ಯ ಅಥವಾ ಲಾಲ್ ಬಾಗ್ನ ಬೃಹತ್ ಕಲ್ಲು ಬಂಡೆಯಂತಹ ನಿಸರ್ಗದತ್ತ ಸ್ಮಾರಕವನ್ನು (natural monument) ಕಳೆದುಕೊಳ್ಳುವುದು ಎಂದರೆ ಶರೀರಕ್ಕೆ ಗ್ಯಾಂಗ್ರಿನ್ ಆದಂತೆ. ಗ್ಯಾಂಗ್ರಿನ್ ಆದಾಗ ಜೀವಕ್ಕೆ ಅಪಾಯವಿರುವುದಿಲ್ಲ, ಆದರೆ, ಜೀವ ಉಳಿಸಿಕೊಳ್ಳಲು ಗ್ಯಾಂಗ್ರಿನ್ ಆದ ದೇಹದ ಭಾಗವನ್ನು ವೈದ್ಯರು ಕತ್ತರಿಸುತ್ತಾರೆ. ನಮ್ಮ ಮುಂದಿರುವ ಸವಾಲೇನೆಂದರೆ, ಈ ರೀತಿಯ ರೂಪಕಗಳ ಮೂಲಕ ಹೇಳುವ ವಾದವನ್ನು ನ್ಯಾಯಾಲಯ ಒಪ್ಪಿಕೊಳ್ಳುವುದಿಲ್ಲ. ಆದ್ದರಿಂದ ಹೆಚ್ಚಿನ ಪರಿಸರ ಸಂರಕ್ಷಣಾ ಕೇಸುಗಳು ನ್ಯಾಯಾಲಯದಲ್ಲಿ ಸೋಲುತ್ತವೆ. ಕೆಲ ಊರುಗಳನ್ನು ತ್ಯಾಗ ಮಾಡಿ ಅಭಿವೃದ್ಧಿ ಮಾಡುವುದು ಅನಿವಾರ್ಯ ಎಂಬ ವಾದದಲ್ಲಿ ಹುರುಳಿಲ್ಲ. ಏಕೆಂದರೆ, ಜೀವ ಮತ್ತು ಸಾಂಸ್ಕೃತಿಕ ವೈವಿಧ್ಯ ಇರುವ ಭಾರತದ ಊರು ಕೇರಿಯನ್ನು ಮುಳುಗಿಸುವುದು ಎಂದರೆ ನಾವೇ ನಮ್ಮ ಸಂಸ್ಕೃತಿಯನ್ನು ಕೊಂದಂತೆ, ದೇಶಕ್ಕೆ ಗ್ಯಾಂಗ್ರಿನ್ ತಂದುಕೊಂಡಂತೆ. ಇದನ್ನು ಭಾವನಾತ್ಮಕ ಪ್ರತಿಕ್ರಿಯೆ ಎನ್ನಬಹುದು. ಆದರೆ, ಹವಾಮಾನ ವೈಪರಿತ್ಯದಿಂದ (Climate change) ಆಗಿರುವ ಮತ್ತು ಆಗುತ್ತಿರುವ ಅನಾಹುತಗಳ ಪಟ್ಟಿಯನ್ನು ನೋಡಿದರೆ ಗೊತ್ತಾಗುತ್ತದೆ: ಸುಸ್ಥಿರ ಅಭಿವೃದ್ಧಿ ಬಿಟ್ಟು ಬೇಕಾಬಿಟ್ಟಿ ಅಭಿವೃದ್ಧಿ ಮಾಡಲು ಹೋದರೆ ಎಂತಹ ಬೆಲೆತೆರಬೇಕಾಗುತ್ತದೆ ಎಂದು.
3. ಪರಿಸರ ಸಂರಕ್ಷಣಾ ಚಳುವಳಿಯಲ್ಲಿ ತೊಡಗಿರುವವರು ಸಾಮಾನ್ಯವಾಗಿ ಮಾಡುವ ತಪ್ಪು ಏನೆಂದರೆ, ಡಿಪಿಆರ್‌ನಲ್ಲಿರುವ ಲೋಪಗಳನ್ನು ನ್ಯಾಯಾಲಯದಲ್ಲಿ ಎತ್ತಿ ತೋರಿಸುವುದು. ಡಿಪಿಆರ್‌ನಲ್ಲಿರುವ ತಪ್ಪು ಅಥವಾ ಐಬಿನ ಆಧಾರದ ಮೇಲೆ ನ್ಯಾಯಾಲಯವು ಯಾವ ಯೋಜನೆಯನ್ನೂ ವಜಾಗೊಳಿಸುವುದಿಲ್ಲ . ಡಿಪಿಆರ್ ಅನ್ನು ಸರಿಪಡಿಸುವುದಾಗಿ ಭರವಸೆ ನೀಡಿ, ಪ್ರಕರಣವನ್ನು ಸರ್ಕಾರ ಗೆಲ್ಲಬಹುದು. ಹಾಗಂತ ಡಿಪಿಆರ್ಲ್ಲಿರುವ ತಪ್ಪುಗಳನ್ನು ತೋರಿಸಬಾರದು ಎಂದಲ್ಲ. ಆದರೆ ಅದೊಂದರಿಂದಲೇ ಜಯ ಸಾಧ್ಯವಿಲ್ಲ.
4. ಈ ರೀತಿಯ ವ್ಯಾಜ್ಯಗಳ ವಿಚಾರಣೆ ನಡೆಯುವಾಗ, ಸರಕಾರಗಳು ಇನ್ನೊಂದು ವಾದವನ್ನು ಮಾಡುತ್ತವೆ: ಅದೇನೆಂದರೆ, ಕಳೆದುಕೊಳ್ಳುವ ನೆಲೆಗೆ ಸರಿಯಾದ ಮತ್ತೂ ಅದರ ಮೌಲ್ಯಕ್ಕೆ ಸಮನಾದ ಸಾಮಾಜಿಕ ಅರಣ್ಯ ಅಭಿವೃದ್ಧಿ ಮಾಡುತ್ತೇವೆ, ಅಥವಾ ಖಾಲಿ ಜಾಗವನ್ನು ಊರ ಹೊರಗೆ ನೀಡುತ್ತೇವೆ ಎಂದು. ಪ್ರಾಮಾಣಿಕವಾಗಿ ಈ ವಿಚಾರವನ್ನು ವಿಮರ್ಶಿಸಿದಲ್ಲಿ, ಈ ಪರಿಹಾರ ಸೂತ್ರದ ತಾಂತ್ರಿಕ ಗುಣಮಟ್ಟವನ್ನು ನಿರ್ಧರಿಸುವ ಅರ್ಹತೆ ನ್ಯಾಯಾಲಯಕ್ಕೆ ಇರುವುದಿಲ್ಲ. ಸರಕಾರ ಸೂಚಿಸುವ ಪರಿಹಾರ ಸೂತ್ರ ಪರಿಸರ ಸಮತೋಲನವನ್ನು ಪುನಃಸ್ಥಾಪಿಸಲು ಹೇಗೆ ಸಹಾಯ ಮಾಡುತ್ತದೆ? ಇದನ್ನು ನಿರ್ಧರಿಸುವ ತಾಂತ್ರಿಕ ಜ್ಞಾನ ನ್ಯಾಯಾಲಯಕ್ಕೆ ಇರುವುದಿಲ್ಲ. ಇದನ್ನು ನ್ಯಾಯಾಲಯಕ್ಕೆ ಅರಿವು ಮೂಡಿಸಬೇಕು. ಇಲ್ಲದಿದ್ದಲ್ಲಿ, ಈ ರೀತಿಯ ಪರಿಹಾರಯುತ ಯೋಜನೆಗಳು ಬರೀ ಕಣ್ಕಟ್ಟಾಗುವ ಸಾಧ್ಯತೆಯೇ ಹೆಚ್ಚು. ಮತ್ತು ಸರಕಾರ ಪ್ರತಿ ಬಾರಿ ಈ ರೀತಿ ವಾದ ಮಾಡಿ ಗೆದ್ದು ತನಗೆ ಬೇಕಾದ ಹಾಗೆ ಮಾಡಿಕೊಂಡು ಹೋಗಬಹುದು.
5. ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಕಾನೂನು ಮಾಡಲು ಸರಕಾರಕ್ಕೆ ಅಧಿಕಾರ ಇದೆ. ಹಾಗೆಂದ ಮಾತ್ರಕ್ಕೆ ಪರಿಸರದ ಮೇಲಿನ ಋಣಾತ್ಮಕ ಪ್ರಭಾವದ ಅಧ್ಯಯನವನ್ನಾಗಲೀ, ಆ ಅಧ್ಯಯನದ ನಿಯತಾಂಕವನ್ನು ಕಾಲಕಾಲಕ್ಕೆ ಬದಲಾಯಿಸುವ ಅಧಿಕಾರ ಸರಕಾರಕ್ಕೆ ಇಲ್ಲ. ಇಲ್ಲೀವರೆಗೆ ಇದನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟ ಹಾಗೆ ಕಾಣುತ್ತಿಲ್ಲ. ಉದಾಹರಣೆಗೆ; ನಮಗೆ ವೈದ್ಯಕೀಯ ಕಾಲೇಜುಗಳು ಬೇಕೇ ಎಂಬುದರ ಕುರಿತು ಒಂದು ರಾಜ್ಯ ಸರಕಾರ ಕಾನೂನೊಂದನ್ನು ಮಾಡಬಹುದು. ಆದರೆ, ವೈದ್ಯಕೀಯ ಕಾಲೇಜುಗಳ ಮೂಲಸೌಕರ್ಯದ ಅವಶ್ಯಕತೆ, ಬೋಧನಾ ಅಧ್ಯಾಪಕರ ಅರ್ಹತೆ -ಈ ರೀತಿಯ ವಿಚಾರಕ್ಕೆ ಸಂಬಂಧಿಸಿದ ಅಳತೆಗೋಲನ್ನು ಸರಕಾರವೊಂದು ಏಕಪಕ್ಷೀಯವಾಗಿ ಬದಲಾಯಿಸಲು ಸಾಧ್ಯವಿಲ್ಲ. ಅಗತ್ಯವಿರುವ ಬದಲಾವಣೆಗಳನ್ನು ಸೂಚಿಸಲು ಅರ್ಹ ವೈದ್ಯರ ವರದಿ ಬೇಕಾಗುತ್ತದೆ. ಅದೇ ರೀತಿ, ಪರಿಸರದ ಮೇಲಾಗುವ ಋಣಾತ್ಮಕ ಪ್ರಭಾವದ ನಿಯತಾಂಕಗಳನ್ನು ಬದಲಾಯಿಸುವ ಅಧಿಕಾರ ಯಾವುದೇ ಸರಕಾರಕ್ಕಾಗಲೀ ಅಥವಾ ನ್ಯಾಯಾಲಯಕ್ಕೆ ಇಲ್ಲ. ಇದನ್ನು ಆಯಾ ಕ್ಷೇತ್ರದ ವಿಷಯ ತಜ್ಞರು ನಿರ್ಧರಿಸಬೇಕು. ಇದನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಬೇಕು. ಈಗ ಆಗುತ್ತಿರುವುದೇನೆಂದರೆ, ಕೆಲ ಐಎಎಸ್ ಅಧಿಕಾರಿಗಳು ತಮ್ಮ ಮುಂದಿರುವ ಮಾಹಿತಿಯನ್ನಿಟ್ಟುಕೊಂಡು, ಶಾಸಕಾಂಗದ ಮೂಲಕ ಈ ರೀತಿಯ ಕೆಲಸಕ್ಕೆ ಕೈ ಹಾಕುತ್ತಿದ್ದಾರೆ. ಇದು ಅಕ್ಷಮ್ಯ.
6. ಎಲ್ಲಾ ಕ್ಷೇತ್ರಗಳಲ್ಲೂ ಸಾಮಾನ್ಯವಾಗಿ ನಾವು ಪಾಶ್ಚಿಮಾತ್ಯ ದೇಶಗಳನ್ನು ಅನುಕರಿಸುತ್ತೇವೆ. ಪರಿಸರ ಸಂರಕ್ಷಣಾ ಕಾರ್ಯತಂತ್ರ ರೂಪಿಸುವಲ್ಲೂ ಸಹ ನಾವು ಮಾಡಿದ್ದು ಅದನ್ನೇ. ಪಶ್ಚಿಮ ಘಟ್ಟದ ಪರಿಸರ ತಾಣಗಳಿರಲಿ, ಲಾಲ್ಬಾಗ್ ನಂತಹ ಅಪರೂಪದ ವೈವಿಧ್ಯಮಯ ತಾಣ ಸಂರಕ್ಷಿಸಲು ನಾವು ವಿಫಲರಾಗುತ್ತಿದ್ದೇವೆ. ಏಕೆಂದರೆ, ನಮ್ಮಲ್ಲಿ ಇದರ ಮಹತ್ವ ತಿಳಿಸುವ ಅಥವಾ ಸಮತೋಲನವನ್ನು ಕೆಡಿಸುವುದರಿಂದ ಆಗುವ ಭಾನಗಡಿಯ ಕುರಿತಾದ ಸಿದ್ಧ ವೈಜ್ಞಾನಿಕ ಮಾದರಿಗಳು (template) ನಮ್ಮಲ್ಲಿಲ್ಲ. ಈ ಕಾರಣಕ್ಕಾಗಿ, ನ್ಯಾಯಾಲಯಗಳು ಎತ್ತುವ ಪ್ರಶ್ನೆಗಳಿಗೆ ಸಂರಕ್ಷಣಾ ಹೋರಾಟಗಾರರಲ್ಲಿ ಉತ್ತರ ಇರುವುದಿಲ್ಲ. ಖ್ಯಾತ ಪರಿಸರ ವಿಜ್ಞಾನಿ ಪ್ರೊ. ಮಾಧವ್ ಗಾಡ್ಗಿಳ್ ಅವರು ಮೊದಲ ಬಾರಿಗೆ ಪಶ್ಚಿಮ ಘಟ್ಟದ ಕುರಿತು ನೀಡಿದ ಸಮಗ್ರ ವರದಿಯನ್ನು ಸ್ವೀಕರಿಸುವ ಬದಲು, ಅಂದಿನ ಕೇಂದ್ರ ಸರಕಾರ, ಅದನ್ನು ವೈಭವೋಪೇತವಾಗಿ ಸಮಾಧಿ ಮಾಡಿತು. ಜನ ಪ್ರತಿನಿಧಿಗಳ ಒತ್ತಾಯಕ್ಕೆ ಈ ಕುರಿತು ಅಧ್ಯಯನ ನಡೆಸಲು ಮಣಿದು ಮತ್ತೊಂದು ಸಮಿತಿಯನ್ನು ಸ್ಥಾಪಿಸಿತು. ಈಗ ಹಿಂತಿರುಗಿ ನೋಡಿದರೆ, ಪ್ರೊ ಗಾಡಗೀಳ್ ಅವರ ವರದಿ ಸಮಗ್ರವಾಗಿತ್ತು, ವಾಸ್ತವತೆಯಿಂದ ಕೂಡಿತ್ತು. ಅಭಿವೃದ್ಧಿಗೆ ಹಿನ್ನಡೆಯಾಗುವ ಅಂಶಗಳು ಅದರಲ್ಲಿರಲಿಲ್ಲ. ಗಣಿಗಾರಿಕೆ, ಕಂಡ ಕಂಡಲ್ಲಿ ಗುಡ್ಡ ಕಡಿದು ಹೋಂ ಸ್ಟೇ ಮಾಡುವುದನ್ನು ಅಭಿವೃದ್ಧಿ ಎಂದುಕೊಂಡಿರುವ ನಮ್ಮ ಜನ ಮತ್ತು ರಾಜಕಾರಣಿಗಳಿಗೆ ಗಾಡಗೀಳ್ ಅವರ ವರದಿ ಖಳನಾಯಕನ ಧ್ವನಿಯಾಗಿ ಕೇಳಿದ್ದರಲ್ಲಿ ಆಶ್ಚರ್ಯವಿಲ್ಲ.
ಪ್ರಾಯಶಃ ಇನ್ನು ಮುಂದಿನ ದಿನಗಳಲ್ಲಿ, ಪರಿಸರ ಸಂರಕ್ಷಣೆಯ ಪ್ರಕರಣಗಳನ್ನು ಚರ್ಚಿಸುವಾಗ ನ್ಯಾಯಾಲಯಗಳು, ಆ ವರದಿಯನ್ನು ಉಲ್ಲೇಖಿಸಬೇಕು ಪುನರ್ ಪುನರ್ ಪರಿಶೀಲಿಸಬೇಕು. ಹೋರಾಟಗಾರರು ಕೂಡ ಆ ವರದಿಯ ಆಧಾರದ ಮೇಲೆ ಸಂರಕ್ಷಣಾ ಮಾದರಿ (template) ಗಳನ್ನು ರೂಪಿಸಿ, ನ್ಯಾಯಾಯಕ್ಕೆ ಸಲ್ಲಿಸಬೇಕು. ಆ ವರದಿಯನ್ನು ಪರಿಗಣನಗೆ ತೆಗೆದುಕೊಳ್ಳುವಂತೆ ನ್ಯಾಯಾಲಯಕ್ಕೆ ಒತ್ತಾಯಿಸಬೇಕು. ಇಲ್ಲವೆಂದರೆ, ಆರಿಸಿ ಬಂದ ಜನ ಪ್ರತಿನಿಧಿಗಳು ತಮ್ಮ ಮೂಗಿನ ನೇರಕ್ಕೆ ಸಂರಕ್ಷಣಾ ಮಾದರಿ ರೂಪಿಸಿ ತಮಗೆ ಬೇಕಾದಂತೆ ವಾದಿಸಿ ಕೇಸುಗಳನ್ನು ಸಾಧ್ಯತೆಯಿದೆ.
7. ಇನ್ನೊಂದು ಪ್ರಮುಖ ಅಂಶವನ್ನು ಇಲ್ಲಿ ಗಮನಿಸಬೇಕು. ದಕ್ಷಿಣ ಏಷ್ಯಾ, ಆಗ್ನೇಯ ಏಷ್ಯಾದ ಮಲೇಷಿಯಾ ಮತ್ತು ಇಂಡೋನೇಷಿಯಾದಂತ ರಾಷ್ಟ್ರಗಳು, Pollute Now, Pay Later ಪರಿಸರ ಆರ್ಥಿಕ ತಜ್ಞರ ವಾದಕ್ಕೆ ಒಲಿದು, ತಮ್ಮಲ್ಲಿರುವ ಖನಿಜ, ಇನ್ನಿತರೆ ನೈಸರ್ಗಿಕ ಸಂಪನ್ಮೂಲಗಳನ್ನು ಪಾಶ್ಚಾತ್ಯ ದೇಶಗಳಿಗೆ ಉಡುಗೊರೆಯಾಗಿ ನೀಡಿದರು. ಅದರ ಋಣಾತ್ಮಕ ಫಲವನ್ನು ಈ ದೇಶಗಳು ಈಗ ಅನುಭವಿಸುತ್ತಿವೆ. ಅತೀವೃಷ್ಟಿ, ಬರ ಹೀಗೆ ನೈಸರ್ಗಿಕ ವಿಕೋಪದಿಂದ, ವಾಯು ಮತ್ತು ಜಲ ಮಾಲಿನ್ಯದಿಂದ ಕಂಗೆಟ್ಟ ಅಲ್ಲಿನ ಜನರಿಗೆ ತಾವು ಮಾಡಿದ ಪಾಪಕೃತ್ಯದ ಅರಿವಾಗುತ್ತಿದೆ. ಆದರೆ, ಪರಿಸ್ಥಿತಿ ಕೈ ಮೀರಿ ಹೋಗಿದೆ.
8. ಯುರೋಪಿನ ಕೆಲ ದೇಶಗಳಲ್ಲಿ ಮತ್ತು ಆಸ್ಟ್ರೇಲಿಯಾದಲ್ಲಿ, ಪರಿಸರದ ಭಾಗವಾಗಿರುವ ಗಿಡ ಮರ ನದಿಗಳಿಗೆ ಕೂಡ, ನಾಗರಿಕರಿಗೆ ನೀಡಿದಂತೆ, ಬದುಕುವ ಹಕ್ಕನ್ನು ನೀಡಲಾಗಿದೆ. ಯಾಕೆಂದರೆ, ಮನುಷ್ಯನಿಗೆ ಬದುಕಲು ಬೇಕಾಗುವ ಆಮ್ಲಜನಕ ನೀಡುವ ಗಿಡಕ್ಕೆ ಬದುಕಲು ಹಕ್ಕಿಲ್ಲ. ಅದೇ ಆಮ್ಲಜನಕ ಪಡೆದು ಉಸಿರಾಡುವ ಮನುಷ್ಯನಿಗೆ ಮಾತ್ರ ಹಕ್ಕುಗಳಿವೆ. ಇದೆಂಥ ವಿಪರ್ಯಾಸ. ಈ ದೇಶಗಳಲ್ಲಿ, ನದಿ, ಮರ ಗುಡ್ಡಗಳನ್ನು ಮುಟ್ಟುವ ಹಾಗಿಲ್ಲ. ನ್ಯಾಯಾಲಯಕ್ಕೆ ಅಭಿವೃದ್ಧಿಯ ಹೆಸರಿನ ಕೇಸುಗಳು ಹೋದಾಗ, ಅಲ್ಲಿ, ಮರ ಗಿಡಗಳ ಪರವಾಗಿ ವಾದ ಮಾಡುವ ವಕೀಲರಿರುತ್ತಾರೆ. ನಮ್ಮಲ್ಲಿ ಉತ್ತರಾಖಂಡದ ಉಚ್ಛ ನ್ಯಾಯಾಲಯ ಗಂಗಾ ನದಿಗೆ ಈ ರೀತಿಯ ಹಕ್ಕು ನೀಡಿತು. ಆದರೆ, ಕಳೆದ ವರ್ಷ ಸರ್ವೋಚ್ಛ ನ್ಯಾಯಾಲಯ ಈ ವಾದಕ್ಕೆ ತಡೆಯಾಜ್ಞೆ ನೀಡಿದೆ. ನಾವೀಗ ಯಾವ ಹಂತ ತಲುಪಿದ್ದೇವೆಂದರೆ Die Daily To Live the Present ಎನ್ನುವಂತಾಗಿದೆ. ಅಂದರೆ, ಭವಿಷ್ಯ ಬಿಡಿ, ವಾಸ್ತವದಲ್ಲಿ ಬದುಕಬೇಕೆ? ನರಕ ಯಾತನೆ ಅನುಭವಿಸಲು ನಾಗರಿಕರು ತಯಾರಾಗಿ. ಇಂದಿನ ಸ್ಥಿತಿಗೆ ಈ ಹೊಸ ಘೋಷ ವಾಕ್ಯ ಸೂಕ್ತವಾಗಬಹುದು ಎಂಬುದು ನನ್ನ ವಾದ. ಬೆಂಗಳೂರಾದರೆ, ಪ್ರತಿ ನಿತ್ಯ ಮಾಲಿನ್ಯ ಅನುಭವಿಸಿ; ಮಳೆ ಬಂದರೆ ಅತಿವೃಷ್ಟಿಯಲ್ಲಿ ಮುಳುಗಲು ತಯಾರಾಗಿ-ಇದು ನರಕಯಾತನೆಯ ಸ್ಯಾಂಪಲ್.
9. ತೊಂಬತ್ತರ ದಶಕದಲ್ಲಿ ವಿಶ್ವ ಬ್ಯಾಂಕ್ನಲ್ಲಿ ಕೆಲಸ ಮಾಡಿದ ಸೂಸನ್ ರೋಸ್ ಆ್ಯಕರ್ಮನ್ ಭ್ರಷ್ಟಾಚಾರದ ಬಗ್ಗೆ ತುಂಬಾ ಅಧ್ಯಯನ ಮಾಡಿದವರು. ಭ್ರಷ್ಟಾಚಾರ ಮಾಡುವುದಕ್ಕಾಗಿಯೇ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಬೃಹತ್ ಅಭಿವೃದ್ಧಿ ಯೋಜನೆಗಳು ಹುಟ್ಟುತ್ತವೆ ಎಂಬುದು ಅವರ ವಾದ. ಭಾರತದ ಕೆಲ ರಾಜ್ಯಗಳಲ್ಲಿ ಪರಿಸರಕ್ಕೆ ಹೊಡೆತ ನೀಡುವ ಯೋಜನೆಗಳನ್ನು ರೂಪಿಸುವುದನ್ನು ನೋಡಿದರೆ ಇದು ಎಷ್ಟು ವಾಸ್ತವ ಎಂಬುದರ ಅರಿವಾಗುತ್ತದೆ.
10. ಅಧಿಕಾರದಲ್ಲಿದ್ದಾಗ ಕೆಲಸ ಮಾಡದೇ ಜನರಿಂದ ತಿರಸ್ಕರಿಸಲ್ಪಟ್ಟ ಬಿಜೆಪಿಯ ನಾಯಕರು ಬೇಡ್ತಿ ನದಿ ಮೇಲೆ ಕಣ್ಣು ಹಾಕಿದ್ದು ಅಕ್ಷಮ್ಯ ಅಪರಾಧವೇ ಸರಿ. ಈಗಾಗಲೇ, ಉತ್ತರ ಕನ್ನಡ, ಅತಿವೃಷ್ಟಿ ಪ್ರದೇಶವಾಗಿ ಪರಿವರ್ತಿತಗೊಂಡಿದೆ. ಇಲ್ಲಿ ಸುರಂಗ ಮಾರ್ಗ, ಆಣೆಕಟ್ಟು ಕಟ್ಟಿದರೆ ಕೇರಳದಲ್ಲಿ ಪ್ರತಿವರ್ಷ ಮಳೆಗಾಲದಲ್ಲಿ ಆಗುತ್ತಿರುವ ಪ್ರಕೃತಿ ವಿಕೋಪ ನಮ್ಮಲ್ಲೂ ಪುನರಾವರ್ತನೆಯಾಗುವುದರಲ್ಲಿ ಎರಡು ಮಾತಿಲ್ಲ. ಈಗ ಬೇಡ್ತಿ ಚಳುವಳಿಯಲ್ಲಿರುವವರು ಯಾರೂ ಸೀ ಬರ್ಡ್ ನೇವಲ್ ಬೇಸ್ ವಿರೋಧಿಸಿರಲಿಲ್ಲ. ಅಂದರೆ, ಇವರು ಯಾರೂ ಕೂಡ ವಿದೇಶಿ ಹಣ ಪಡೆದು ಪರಿಸರ ಚಳುವಳಿ ನಡೆಸುವವರಲ್ಲ. ವಿದೇಶ ಹಣದ ಪರಿಸರವಾದಿಗಳಲ್ಲಿ ಇನ್ನೊಂದು ವಿಶೇಷವಿದೆ. ಅವರು ದೇಶದ ಬೇರೆ ಬೇರೆ ಕಡೆ ಕೆಲಸ ಮಾಡುತ್ತಿದ್ದರೂ, ಹಣ ನೀಡುವವರ ಮರ್ಜಿಗೋಸ್ಕರ ಒಂದು ನೆಟ್ವರ್ಕ್ ಆಗಿ ಕೆಲಸ ಮಾಡುತ್ತಾರೆ. ಇಲ್ಲಿ ಹಾಗಿಲ್ಲ. ಬೆಂಗಳೂರಿನವರಿಗೆ ಬೇಡ್ತಿ ಬಗ್ಗೆ ಗೊತ್ತಿಲ್ಲ ಎಂದರೆ ತಪ್ಪಾಗಲಿಕ್ಕಿಲ್ಲ. ಅಥವಾ ಬೇಡ್ತಿ ಚಳವಳಿಗಾರರಿಗೆ ಬೆಂಗಳೂರಿನದು ದೊಡ್ಡ ಸಮಸ್ಯೆಯಾಗಿ ಕಾಣದಿರಬಹುದು. ಆದ್ದರಿಂದ ವಿದೇಶಿ ಹಣದ ಪರಿಸರವಾದಿಗಳಲ್ಲಿ ಕಂಡುಬರುವ ಪರಸ್ಪರ ಹೊಂದಾಣಿಕೆ ಇಲ್ಲಿ ಕಂಡುಬರುವುದಿಲ್ಲ.
11. ಬೆಂಗಳೂರಿನ ಸುರಂಗ ಮಾರ್ಗದ ಬಗ್ಗೆ ಇನ್ನೊಂದು ಮಾತು: ನಿಸರ್ಗದತ್ತ ಸ್ಮಾರಕವಾಗಿ (natural monument) ನಿಂತಿರುವ ಲಾಲ್ಬಾಗ್ನ ಬಂಡೆಯ ಜೊತೆ ಜೊತೆಗೆ ನಗರದ ಆಟದ ಮೈದಾನ ಮತ್ತು ಖಾಲಿ ಜಾಗಗಳನ್ನು (lung space)ತಿನ್ನುವ ಟನೆಲ್ ರಸ್ತೆ ಉಳಿಸುವ ಜವಾಬ್ದಾರಿ ಕಾಂಗ್ರೆಸ್ ಹೈಕಾಮಾಂಡ್ನದು. ಬೆಂಗಳೂರು ಕೂಡ ಹವಾಮಾನ ವೈಪರಿತ್ಯದ ಪರಿಣಾಮವನ್ನು ಪ್ರತಿ ಬಾರಿ ಮನ್ಸೂನಿನಲ್ಲಿ ಅನುಭವಿಸುತ್ತಿದೆ. ಟನೆಲ್ ರಸ್ತೆಯಾಗಿ ನಾಲ್ಕೈದು ವರ್ಷಕ್ಕೆ ನೀರು ಒಳಗೆ ಬರಲು ಪ್ರಾರಂಭವಾದರೆ ಅದನ್ನು ತಡೆಯಲು ಸಾಧ್ಯವಿಲ್ಲ. ಕಂಡಕಂಡಲ್ಲಿ ಸುರಂಗ ಕೊರೆದು ರಸ್ತೆ ಮಾಡಿದರೆ ನಮ್ಮ ಕೆರೆ ಕುಂಟೆಗಳ ನೀರು ಕೆಳಗಿಳಿದು ಭೂ ಕುಸಿತಕ್ಕೆ ಕಾರಣವಾಗಬಹುದು. ಇದು, ಒಂದು ಟನೆಲ್ ರಸ್ತೆಗೆ ಮುಗಿಯುವುದಿಲ್ಲ. ಮುಂದೆ ಬರುವವರು ಎರಡನೆಯ ಟನೆಲ್ಗೆ ಕೈ ಹಾಕಲ್ಲ ಎನ್ನುವುದಕ್ಕೆ ಏನಿದೆ ಗ್ಯಾರೆಂಟಿ? ಇಂದಿನ ತುರ್ತು ಮತ್ತು ಭವಿಷ್ಯದಲ್ಲಿನ ಪರಿಸರ- ಈ ವಿಷಯದ ಬಗ್ಗೆ ಆಗಬೇಕಿದ್ದ ಚರ್ಚೆಯ ಹಾದಿ ಬದಲಿಸಿ ಎರಡು ರಾಜಕೀಯ ಪಕ್ಷಗಳ ಹೋರಾಟವೆಂಬಂತೆ ಬಿಂಬಿಸಿ ಜನರನ್ನು ಈ ಹೋರಾಟದಿಂದ ದೂರ ಮಾಡುವ ಹುನ್ನಾರ ನಡೆಯುತ್ತಿರುವುದು ನಿಜಕ್ಕೂ ವಿಷಾದನೀಯ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಟನಲ್ ರಸ್ತೆ ಜಟಾಪಟಿ: ಡಿಕೆಶಿಗೆ ಪ್ರಶ್ನೆಗಳ ಸುರಿಮಳೆ, ಉತ್ತರಿಸುವಂತೆ ತೇಜಸ್ವಿ ಸೂರ್ಯ ಸವಾಲ್
ಕಾರ್ ನಿಕೋಬಾರ್ ದ್ವೀಪ ಉಳಿಸಲು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ಜೈರಾಮ್ ರಮೇಶ್ ಅವರು ಪ್ರಾಮಾಣಿಕವಾಗಿ ಕಣ್ಣೀರು ಸುರಿಸಿದ್ದು ನಿಜ. ‘ಕರ್ನಾಟಕದ ಈ ಎರಡು ಪ್ರಸ್ತಾವಿತ ಯೋಜನೆಗಳನ್ನು ನಿಲ್ಲಿಸಿ. ನ್ಯಾಯಾಲಯದಿಂದ ನಿಯುಕ್ತಿಗೊಂಡ ತಜ್ಞರಿಂದ ಎಲ್ಲವನ್ನೂ ಪರಿಶೀಲಿಸಿ. ಆಮೇಲೆ ನೋಡೋಣ. ಸದ್ಯಕ್ಕೆ ಮುಂದುವರಿಯುವುದು ಬೇಡ,’ ಎಂದು ರಾಜ್ಯ ಸರಕಾರಕ್ಕೆ ಕಿವಿ ಮಾತು ಹೇಳಿ ಮತ್ತೊಮ್ಮೆ ತಮ್ಮ ಪರಿಸರ ಕಳಕಳಿಯನ್ನು ಪ್ರದರ್ಶಿಸಿದರೆ ಜನ ಕಾಂಗ್ರೆಸ್ನ ಕೇಂದ್ರ ನಾಯಕರಿಗೆ ಖಂಡಿತ ಭೇಷ್ ಎನ್ನುತ್ತಾರೆ. ಅದನ್ನು ಬಿಟ್ಟು, ಈ ಮೇಲಿನ ಎರಡೂ ಯೋಜನೆಗಳನ್ನು ಜಾರಿ ಮಾಡಬೇಕೆಂದು ಹಠಕ್ಕೆ ಬಿದ್ದರೆ, ಅದನ್ನು ಜನತೆಗೆ ಮಾಡಿದ ದ್ರೋಹವೆಂದು ಹೇಳಬೇಕಾಗಿ ಬರಬಹುದೇ ವಿನಃ, ಇವನ್ನು ಅಭಿವೃದ್ಧಿಯ ಸಂಕೇತವೆಂದು ಹೇಳಲಾಗದು.
ಇನ್ನಷ್ಟು ಅಭಿಮತ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:31 pm, Sat, 8 November 25




