ಇದೇನು ಶಿಕ್ಷಣವೋ ವ್ಯವಹಾರವೋ? ಹೂ ಮನಸಿನ ಮಕ್ಕಳ ಭವಿಷ್ಯ ಮುರುಟದಿರಲಿ
ಇಂದಿನ ಆಧುನಿಕ ಯುಗದಲ್ಲಿ ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಿದ್ದಾರೆ. ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಖಾಸಗಿ ಖಾಸಗಿ ಶಿಕ್ಷಣ ಸಂಸ್ಥೆಗಳು, ಶಿಕ್ಷಣವನ್ನು ಒಂದು ರೀತಿಯಲ್ಲಿ ಉದ್ಯಮವಾಗಿ ಮಾಡಿಕೊಂಡು ಬಿಟ್ಟಿವೆ. ಕೆಲ ಪ್ರತಿಷ್ಠಿತ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಂತೂ ಟೋಕನ್ ಅಡ್ವಾನ್ಸ್ ಕೊಟ್ಟು ಮಕ್ಕಳ ಸೀಟು ಕಾಯ್ದಿರಿಸಬೇಕು. ಈ ವ್ಯವಸ್ಥೆ ಬಗ್ಗೆ ಬೆಂಗಳೂರಿನ ಶ್ರೀನಿವಾಸ್ ಎನ್ನುವರು ವಿವರವಾಗಿ ಬರೆದುಕೊಂಡಿದ್ದಾರೆ.

ಈಗ ಎಸ್ಸೆಸ್ಸೆಲ್ಸಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸಕ್ಕೆ ಸೀಟು ಕಾಯ್ದಿರಿಸುವ ಪ್ರಕ್ರಿಯೆ ಶುರುವಾಗಿಬಿಟ್ಟಿದೆ. ಮೊದಲಿಗೆ ಇಂತಿಷ್ಟು ಮೊತ್ತ ಅಂತ ಪಾವತಿಸಿ “ಸೀಟು ಬ್ಲಾಕ್” ಮಾಡಬೇಕಂತೆ. ಇನ್ನು ಒಂದೆರಡು ತಿಂಗಳಲ್ಲಿಯೇ ಒಂದು ಪ್ರವೇಶ ಪರೀಕ್ಷೆಯನ್ನು ಕಾಲೇಜಿನ ಕಡೆಯವರು ನಿಗದಿ ಮಾಡುತ್ತಾರೆ. ಅದನ್ನು ಬರೆದ ವಿದ್ಯಾರ್ಥಿಗಳ ಅಂಕದ ಆಧಾರದ ಮೇಲೆ ವಿಜ್ಞಾನವೋ ವಾಣಿಜ್ಯವೋ ಕಲೆಯೋ ಅಂತ ತೀರ್ಮಾನಿಸಿ, ಅದರ ಮೂಲಕವೇ ಶುಲ್ಕವನ್ನು ಸಹ ನಿಗದಿ ಮಾಡಲಾಗುತ್ತದೆ. ನವೆಂಬರ್ ತಿಂಗಳಲ್ಲಿ ಇದೀಗ ಇದ್ದೇವೆ. ಹೆಚ್ಚೂ ಕಡಿಮೆ ಮುಂದಿನ ವರ್ಷದ ಮಾರ್ಚ್ ಹೊತ್ತಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆದು, ಮೇ ತಿಂಗಳ ಮೊದಲ ಅಥವಾ ಎರಡನೇ ವಾರದ ಹೊತ್ತಿಗೆ ಫಲಿತಾಂಶ ಬರುತ್ತದೆ. ಅಲ್ಲಿಗೆ ಮುಖ್ಯ ಪರೀಕ್ಷೆಗೇ ನಾಲ್ಕೈದು ತಿಂಗಳು ಬಾಕಿ ಇದೆ. ಅಷ್ಟರಲ್ಲಾಗಲೇ ಕಾಲೇಜು ಯಾವುದು, ಕಾಂಬಿನೇಷನ್ ಯಾವುದು ಅನ್ನುವುದನ್ನು ಆಖೈರು ಮಾಡಿಕೊಂಡುಬಿಡಬೇಕು.
ತಮಾಷೆ ವಿಷಯ ಏನು ಗೊತ್ತಾ? ಕಲಾ ವಿಭಾಗದ ಬಗ್ಗೆ ಅಷ್ಟಾಗಿ ಆಸಕ್ತಿಯೇ ಕಾಣುತ್ತಿಲ್ಲ. ಬೆಂಗಳೂರಿನ ಪ್ರತಿಷ್ಠಿತ ಕಾಲೇಜುವೊಂದಕ್ಕೆ ಸ್ನೇಹಿತನ ಮಗನ ಪ್ರವೇಶದ ವಿಚಾರಕ್ಕೆ ವಿಚಾರಿಸಲು ತೆರಳಿದ್ದಾಗ ನನಗೆ ತಿಳಿದ ಮಾಹಿತಿ ಏನೆಂದರೆ, ಮೊದಲಿಗೆ ಇಪ್ಪತ್ತೈದು ಸಾವಿರ ರೂಪಾಯಿ ಕೊಟ್ಟು ಸೀಟ್ ಬ್ಲಾಕ್ ಮಾಡಬೇಕು. ಕನಿಷ್ಠ ಎಪ್ಪತ್ತೈದು ಪರ್ಸೆಂಟ್ ಬಾರದೇ ಹೋದಲ್ಲಿ ಆ ಕಾಲೇಜಲ್ಲಿ ಪ್ರವೇಶ ಇಲ್ಲವಂತೆ. ಕನಿಷ್ಠ ಅಷ್ಟು ಅಂಕ ಬಂದಲ್ಲಿ ವಾಣಿಜ್ಯ ವಿಷಯದ ಆಯ್ಕೆಗೆ ತೊಂಬತ್ತು ಸಾವಿರ ಶುಲ್ಕ ಹಾಗೂ ವಿಜ್ಞಾನ ವಿಷಯಕ್ಕಾದಲ್ಲಿ ಒಂದು ಲಕ್ಷ ರೂಪಾಯಿ ಶುಲ್ಕ. ಆ ನಂತರ ಎಪ್ಪತ್ತೈದು ಪರ್ಸೆಂಟ್ ಗಿಂತ ಹೆಚ್ಚು ಅಂಕ ಬಂದಲ್ಲಿ, ಪ್ರತಿ ಐದು ಪರ್ಸೆಂಟ್ ಹೆಚ್ಚಳಕ್ಕೆ ಹತ್ತು ಸಾವಿರ ರೂಪಾಯಿ ಶುಲ್ಕ ಕಡಿಮೆ ಆಗುತ್ತದೆ. ಇನ್ನು ತಂದೆಯೋ ತಾಯಿಯೋ ಅದೇ ಕಾಲೇಜಿನಲ್ಲಿ ಓದಿದವರಾಗಿದ್ದರೆ ಶೇಕಡಾ ಹತ್ತು ಪರ್ಸೆಂಟ್ ರಿಯಾಯಿತಿ. ಅದೇ ಶಿಕ್ಷಣ ಸಂಸ್ಥೆಯೇ ನಡೆಸುವ ಶಾಲೆಯಲ್ಲಿ ಓದಿದ ಮಕ್ಕಳಿಗೆ ಕಾಲೇಜಿನ ಪ್ರವೇಶಕ್ಕೆ ಸೀಟು ಕಾಯ್ದಿರಿಸುವಿಕೆಯಲ್ಲೂ ಪ್ರಾಧಾನ್ಯ ಹಾಗೂ ಫೀ ಕೂಡ ರಿಯಾಯಿತಿ.
ಕಾಲೇಜಿನವರ ಉದಾರತೆ ಏನೆಂದರೆ, ಯಾರು ಸೀಟು ಬ್ಲಾಕ್ ಮಾಡಿಸಿರುತ್ತಾರಲ್ಲ ಆ ಹುಡುಗನದೋ ಅಥವಾ ಹುಡುಗಿಯದೋ ಎಪ್ಪತ್ತೈದು ಪರ್ಸೆಂಟ್ ಗಿಂತ ಕಡಿಮೆ ಬಂದರೂ ವಿನಾಯಿತಿ ತೋರಿಸಿ, ದೊಡ್ಡ ಮನಸ್ಸಿಂದ ಪ್ರವೇಶವನ್ನು ನೀಡಲಾಗುತ್ತದಂತೆ.
ಈ ವರ್ಷದ ಜೂನ್ ನಲ್ಲಿ ಎಸ್ಸೆಸ್ಸೆಲ್ಸಿಗೆ ತರಗತಿಗಳು ಆರಂಭವಾದವು ಅಂದುಕೊಂಡರೆ ನವೆಂಬರ್ ಸಹ ಪೂರ್ತಿಯಾದಲ್ಲಿ ಆರು ತಿಂಗಳು ಸಂಪೂರ್ಣ ಆದಂತಾಗುತ್ತದೆ. ಅದರಲ್ಲಿ ದಸರಾ ರಜಾ, ಹಬ್ಬ ಹರಿದಿನ, ಸರ್ಕಾರಿ ರಜಾ- ಭಾನುವಾರ ಎಂದೆಲ್ಲ ಲೆಕ್ಕ ಹಾಕಿದಲ್ಲಿ ಎಷ್ಟು ಪಠ್ಯಕ್ರಮ ಮುಗಿದಿರುವುದಕ್ಕೆ ಸಾಧ್ಯ? ಇನ್ನು ಟ್ಯೂಷನ್, ಯೂನಿಟ್ ಟೆಸ್ಟ್ ಗಳು, ಸರ್ ಪ್ರೈಸ್ ಟೆಸ್ಟ್ ಗಳು ಮತ್ತು ಇವೆಲ್ಲದರ ಮೇಲೆ ಕಾಲೇಜಿನ ಪ್ರವೇಶಕ್ಕೆ ಈಗಲೇ ಸೀಟ್ ಬ್ಲಾಕ್ ಮಾಡಬೇಕು, ಅದಕ್ಕೆ ಪ್ರವೇಶ ಪರೀಕ್ಷೆ ಬರೆಯಬೇಕು. ಅದರಲ್ಲಿಯೂ ಭಯಂಕರ ಒಳ್ಳೆ ಅಂಕ ಬರಲೇಬೇಕು.
ನನ್ನ ಸ್ನೇಹಿತನ ಮಗ ಡಿಪ್ಲೊಮಾ ತೆಗೆದುಕೊಂಡರೆ ಹೇಗೆ ಎಂದು ಶಾಲೆಯ ದಿನಗಳಲ್ಲಿ ಸಹಪಾಠಿಯಾಗಿದ್ದವನ ವಿಚಾರಿಸಿದರೆ, ಈಗೆಲ್ಲ ಬರೀ ಡಿಪ್ಲೊಮಾ ಸಾಕಾಗಲ್ಲ, ಎಂಜಿನಿಯರಿಂಗ್ ಸಹ ಮಾಡಬೇಕು. ಹಾಗೆ ಎಂಜಿನಿಯರಿಂಗ್ ಮಾಡಿದಂಥವರು ಇವತ್ತಿಗೆ ನನ್ನ ಕಂಪನಿಯಲ್ಲಿ ಒಂಬತ್ತು ಸಾವಿರ ರೂಪಾಯಿ ಅಪ್ರೆಂಟಿಸ್ ಷಿಪ್ ಪಡೆಯುವುದಕ್ಕೆ ಬಡಿದಾಟ ನಡೆಸುವಂತೆ ಪ್ರಯತ್ನ ಮಾಡುತ್ತಾ ಇದ್ದಾರೆ ಅಂತ ಹೇಳಿದ. ಅಂದ ಹಾಗೆ ನನ್ನ ಸ್ನೇಹಿತ ಡಿಪ್ಲೊಮಾ ಓದಿದವನು. ಸುಮಾರು ಹದಿನೈದು ವರ್ಷಗಳ ಹಿಂದೆ ಅವನಿಗೆ ಎಚ್ಎಎಲ್ ನಲ್ಲಿ ಕಾಯಂ ಕೆಲಸ ಸಿಕ್ಕಿತು. ಅವನು ಇನ್ನೂ ಮುಂದುವರಿದು, ಈಗ ಏನು ಓದಿದರೆ ಮುಂದೆ ಕೆಲಸ ಸಿಗುತ್ತದೆ, ಒಳ್ಳೆ ಸಂಬಳ ಸಿಗುತ್ತದೆ ಅಂತ ಹೇಳುವ ಧೈರ್ಯವೇ ನನಗಿಲ್ಲ. ಎಐ- ಮಶೀನ್ ಲರ್ನಿಂಗ್ ಇವೆಲ್ಲ ಬಂದ ಮೇಲೆ ಕೆಲಸ ಕಳೆದುಕೊಳ್ಳುವವರೇ ಎಲ್ಲ ಕಡೆ ಕಾಣಿಸುತ್ತಾ ಇದ್ದಾರೆ. ಈಗ ಓದಿಗೆಲ್ಲ ಲಕ್ಷಗಟ್ಟಲೆ ದುಡ್ಡು ಸುರಿಯುವ ಬದಲಿಗೆ, ಒಂದು ಸರ್ಕಾರಿ ಪಿಯು ಕಾಲೇಜಿಗೆ ಹುಡುಗನನ್ನು ಸೇರಿಸಿ, ಒಂದೊಳ್ಳೆ ಕಡೆ ಟ್ಯೂಷನ್ ಗೆ ಸೇರಿಸಿದರೆ ಒಳ್ಳೆಯದು. ಏನೇ ಒಳ್ಳೆಯ ಕಾಲೇಜು ಅಂತ ಲಕ್ಷಾಂತರ ರೂಪಾಯಿ ಕೊಟ್ಟು ಕಾಲೇಜಿಗೆ ಸೇರಿಸಿದರೂ ಟ್ಯೂಷನ್ ಗೆ ಸೇರಿಸಿಯೇ ಸೇರಿಸಬೇಕು. ಅದರ ಬದಲಿಗೆ ಕಡಿಮೆ ಫೀ ಇರುವ ಕಾಲೇಜಿಗೆ ಸೇರಿಸುವುದು ಒಳ್ಳೆಯದು ಎಂಬ ಸಲಹೆ ನೀಡಿದ.
ಆದರೆ, ಎಸ್ಸೆಸ್ಸೆಲ್ಸಿ ನಂತರದ ಕೋರ್ಸ್ ಗಳಿಗೆ ಇಷ್ಟು ಬೇಗ ಪ್ರವೇಶ ಪ್ರಕ್ರಿಯೆ ಶುರು ಮಾಡುವುದು ಎಷ್ಟರ ಮಟ್ಟಿಗೆ ಸರಿ? ಇಂಥ ವಿಚಾರಗಳಿಗೆ ಸರ್ಕಾರದಿಂದ ಸಹಮತ ಇದೆಯಾ? ಮಕ್ಕಳು ಹಾಗೂ ಪೋಷಕರ ಪರಿಸ್ಥಿತಿ ಎಲ್ಲಿಗೆ ಮುಟ್ಟುತ್ತಾ ಇದೆ ಎಂಬುದು ಈಗ ಬಹುವಾಗಿ ಕಾಡುತ್ತಿರುವ ಆತಂಕ. ಈ ಲೇಖನದಲ್ಲಿ ಹೇಳಿರುವ ಕಾಲೇಜು ಒಂದು ಸಂಕೇತ ಮಾತ್ರ. ಆದ್ದರಿಂದ ಆ ಕಾಲೇಜಿನ ಹೆಸರನ್ನು ಉಲ್ಲೇಖಿಸುವುದಕ್ಕೆ ಹೋಗಿಲ್ಲ. ಆದರೆ ಬಹುತೇಕ ಕಡೆ ಇದೇ ಪರಿಸ್ಥಿತಿ ಇದೆ.
ನಾನು ಹಾಗೂ ನನ್ನ ಸ್ನೇಹಿತ ಭೇಟಿ ನೀಡಿದ್ದ ಕಾಲೇಜಿನಲ್ಲಿ ಅಲ್ಲಿನ ಉಪನ್ಯಾಸಕರಿಗೆ ಯಾರಿಗೂ ಸರ್ಕಾರದಿಂದ ಸಂಬಳ ಬರುವುದಿಲ್ಲವಂತೆ. ಆದ್ದರಿಂದ ಸರ್ಕಾರದ ನಿಯಮಗಳು ಹಲವು ತಮಗೆ ಅನ್ವಯಿಸುವುದಿಲ್ಲ ಎಂಬ ಧ್ವನಿಯಲ್ಲಿ ಉತ್ತರ ನೀಡಿದರು.
ಎಸ್ಸೆಸ್ಸೆಲ್ಸಿಗೆ ಸಪ್ಲಿಮೆಂಟರಿ ಪರೀಕ್ಷೆ ಸಹ ಇರುತ್ತದೆ. ಅದರಲ್ಲಿ ಪಾಸ್ ಆಗಿ ಹೊರಬಂದವರು ಸ್ಥಿತಿ ಏನು ಅಂತ ನೆನೆಸಿಕೊಂಡರೆ ಗಾಬರಿ ಆಗುತ್ತದೆ. ಈ ಮಧ್ಯೆ ಸರ್ಕಾರದಿಂದ ಪಾಸ್ ಆಗುವ ಕನಿಷ್ಠ ಅಂಕವನ್ನು 33ಕ್ಕೆ ಇಳಿಸಲಾಗಿದೆ. ಸರಿ, ಇಷ್ಟು ಅಂಕ ಪಡೆದು ಆ ವಿದ್ಯಾರ್ಥಿಯು ಬೆಂಗಳೂರಿನಂಥ ನಗರದಲ್ಲಿ ಯಾವ ಕಾಲೇಜಿನಲ್ಲಿ ಪ್ರವೇಶ ಪಡೆದುಕೊಳ್ಳಲು ಸಾಧ್ಯ? ಹೀಗೆ ಬರೆದು ಯಾರನ್ನೂ ಹೀಗಳೆಯುವುದೋ ಅಥವಾ ಆತ್ಮಸ್ಥೈರ್ಯ ಕುಗ್ಗಿಸುವುದು ಖಂಡಿತಾ ಉದ್ದೇಶವಲ್ಲ.
ಶಿಕ್ಷಣದಲ್ಲಿನ ವ್ಯವಸ್ಥೆ ಹೀಗಿದೆ, ಇದರ ದೂರಗಾಮಿ ಪರಿಣಾಮವನ್ನು ಆಲೋಚಿಸಿದರೆ ಹೃದಯ ಕತ್ತರಿಸಿದಷ್ಟು ನೋವೆನಿಸುತ್ತದೆ. ಶಿಕ್ಷಣ ಸಂಸ್ಥೆಗಳನ್ನು ಲಾಭದ ಉದ್ದೇಶವಿಲ್ಲದೆ ನಡೆಸಬೇಕು ಎಂಬ ಕಾನೂನು ಇರುವಂಥ ದೇಶ ಭಾರತ. ಆದರೆ ಶುಲ್ಕಕ್ಕೆ ಸಂಬಂಧಿಸಿದಂತೆ, ಪ್ರವೇಶಾತಿಯ ವಿಚಾರಕ್ಕೆ ನಡೆಯುವ ಇಂಥ “ವ್ಯವಹಾರ”ಗಳು ಒಂದು ಚುನಾಯಿತ ಸರ್ಕಾರದ ಮೂಗಿನಡಿಯಲ್ಲಿಯೇ ನಡೆಯುತ್ತಿದೆ ಹಾಗೂ ಅದನ್ನು ವಿರೋಧಿಸಬೇಕಾದ ಪೋಷಕರು- ವಿದ್ಯಾರ್ಥಿಗಳು ಹಾಗೂ ಪ್ರತಿಯೊಬ್ಬರೂ ಹೊಂದಾಣಿಕೆ ಮಾಡಿಕೊಂಡು ಹೋಗುತ್ತಿರುವುದು ಅಸಹ್ಯ ಹಾಗೂ ನಾಚಿಕೆಗೇಡು.
ಎಮ್. ಶ್ರೀನಿವಾಸ, ಬೆಂಗಳೂರು




