ಗೆಜೆಟೆಡ್​ ಪ್ರೊಬೇಷನರ್ಸ್​​ ಪರೀಕ್ಷೆ ಮರು ನಡೆಸಿ: ಕೆಪಿಎಸ್​ಸಿಗೆ ಸಿದ್ದರಾಮಯ್ಯ ಆದೇಶ

ಆಗಸ್ಟ್​ 27 ರಂದು ನಡೆದ ಕೆಪಿಎಸ್​ಸಿ ಗೆಜೆಟೆಡ್​ ಪ್ರೊಬೇಷನರ್ಸ್​​​ ಪೂರ್ವಭಾವಿ ಪರೀಕ್ಷೆ ಪ್ರಶ್ನೆ ಪತ್ರಿಕೆಯಲ್ಲಿನ ಕನ್ನಡ ದೋಷದ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಮರು ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಸೂಚನೆ ನೀಡಿದ್ದಾರೆ.

ಗೆಜೆಟೆಡ್​ ಪ್ರೊಬೇಷನರ್ಸ್​​ ಪರೀಕ್ಷೆ ಮರು ನಡೆಸಿ: ಕೆಪಿಎಸ್​ಸಿಗೆ ಸಿದ್ದರಾಮಯ್ಯ ಆದೇಶ
ಮುಖ್ಯಮಂತ್ರಿ ಸಿದ್ದರಾಮಯ್ಯ
Follow us
|

Updated on:Sep 02, 2024 | 1:55 PM

ಬೆಂಗಳೂರು, ಸೆಪ್ಟೆಂಬರ್​ 02: ಎರಡು ತಿಂಗಳ ಒಳಗಾಗಿ ಗೆಜೆಟೆಡ್​ ಪ್ರೊಬೇಷನರ್ಸ್​​​ ಪೂರ್ವಭಾವಿ ಪರೀಕ್ಷೆಯನ್ನು (Gazetted Probationers Preliminary Exam) ಮರು ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಕರ್ನಾಟಕ ಲೋಕಸೇವಾ ಆಯೋಗ (KPSC)​ಕ್ಕೆ ಸೂಚನೆ ನೀಡಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಟ್ವೀಟ್​ ಮಾಡಿದ ಸಿಎಂ ಸಿದ್ದರಾಮಯ್ಯ, “ಕೆಪಿಎಸ್‌ಸಿ ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ ಪರೀಕ್ಷೆಯಲ್ಲಿ ಕನ್ನಡಕ್ಕೆ ಅನುವಾದ ಮಾಡಲ್ಪಟ್ಟ ಪ್ರಶ್ನೆಗಳು ಅಸಮರ್ಪಕವಾಗಿದ್ದವೆಂಬ ವಿಚಾರ ನನ್ನ ಗಮನಕ್ಕೆ ಬಂದ ತಕ್ಷಣ, ಪರೀಕ್ಷಾರ್ಥಿಗಳಿಗೆ ಅನ್ಯಾಯವಾಗಬಾರದೆಂಬ ಉದ್ದೇಶದಿಂದ ಮುಂದಿನ ಎರಡು ತಿಂಗಳುಗಳ ಒಳಗೆ ಮರುಪರೀಕ್ಷೆ ಮಾಡುವಂತೆ ಕೆಪಿಎಸ್‌ಸಿಗೆ ಸೂಚನೆ ನೀಡಿದ್ದೇನೆ.” ಎಂದು ತಿಳಿಸಿದ್ದಾರೆ.

“ಕರ್ತವ್ಯ ಲೋಪವೆಸಗಿದ ಅಧಿಕಾರಿಗಳನ್ನು ಸೇವೆಯನ್ನು ಅಮಾನತು ಮಾಡಲಾಗಿದೆ. ಮುಂಬರುವ ಪರೀಕ್ಷೆಗಳನ್ನು ಅತ್ಯಂತ ಜವಾಬ್ದಾರಿಯುತವಾಗಿ, ಸಮರ್ಪಕವಾಗಿ ನಡೆಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ನಾವು ನೇಮಕಾತಿ ಪ್ರಕ್ರಿಯೆಗಳ ಸಮಗ್ರತೆ ಮತ್ತು ನಂಬಿಕಾರ್ಹತೆಯನ್ನು ಎತ್ತಿಹಿಡಿದು, ಪರೀಕ್ಷಾರ್ಥಿಗಳ ಹಿತರಕ್ಷಿಸಲು ಬದ್ಧರಾಗಿದ್ದೇವೆ” ಎಂದರು.

ಇದನ್ನೂ ಓದಿ: ಮುಡಾ ಹಗರಣ: ಹೈಕೋರ್ಟ್​ನಲ್ಲಿ ವಿರುದ್ಧ ತೀರ್ಪು ಬಂದರೆ ಸಿದ್ದರಾಮಯ್ಯ ಮುಂದಿರುವ ಆಯ್ಕೆಗಳೇನು?

ಸಿದ್ದರಾಮಯ್ಯ ಟ್ವೀಟ್​

ಪ್ರಶ್ನೆ ಪತ್ರಿಕೆಯಲ್ಲಿ ಕನ್ನಡ ತಪ್ಪು

ಆಗಸ್ಟ್​ 27 ರಂದು ಕೆಪಿಎಸ್​ಸಿ ಕೆಪಿಎಸ್‌ಸಿ ಗೆಜೆಟೆಡ್‌ ಪ್ರೊಬೆಷನರ್ಸ್​ 384 ಹುದ್ದೆಗಳ ನೇಮಕಾತಿ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಕನ್ನಡ ದೋಷ ಕಂಡು ಬಂದಿದ್ದವು. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಕೆಪಿಎಸ್​​ಸಿ ವಿರುದ್ಧ ಆಕ್ರೋಶ ವ್ಯಕ್ತವಾಯಿತು. ಕೆಪಿಎಸ್​ಸಿಯಲ್ಲಿ ಬದಲಾವಣೆ ಬೇಕು, ಕೆಪಿಎಸ್​ಸಿ ಮರು ಪರೀಕ್ಷೆ ನಡೆಸಬೇಕು ಎಂಬ ಕೂಗು ಜೋರಾಯ್ತು.

ಇದನ್ನು ಗಂಭೀರವಾಗಿ ಪರಿಗಣಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕೆಪಿಎಸ್​ಇಯಿಂದ ವರದಿಯನ್ನು ಕೇಳಿದೆ. ಈ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರಷೋತ್ತಮ ಬಿಳಿಮಲೆ ಮಾತನಾಡಿ, ಗ್ರಾಮೀಣ ಮಕ್ಕಳಿಗೆ ಉದ್ಯೋಗ ಸಿಗುವುದು ಬಹಳ ಕಷ್ಟ ಇದೆ. ಈ ಮಧ್ಯೆ ಕೆಪಿಎಸ್​ಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ತಪ್ಪು ಮತ್ತಷ್ಟು ನೋವು ತಂದಿದೆ. ನಾವು ಈಗಾಗಲೇ ಕೆಪಿಎಸ್​ಸಿಗೆ ಪತ್ರ ಬರೆದಿದ್ದು, ಉತ್ತರವೂ ಬಂದಿದೆ ಎಂದರು.

ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ ಮರು ಪರೀಕ್ಷೆಗೆ ಆದೇಶಿಸಿದ್ದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧನ್ಯವಾದ ಎಂದು ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ಹೇಳಿದರು. ಪೂರ್ವಭಾವಿ ಪರೀಕ್ಷೆ ಗೋಂದಲಕ್ಕೆ ಕಾರಣವಾಗಿತ್ತು. ಪರೀಕ್ಷೆ ವೇಳೆ ಕನ್ನಡದ ಅಭ್ಯರ್ಥಿಗಳಿಗೆ ಅನ್ಯಾಯವಾಗಿತ್ತು. ಪ್ರಶ್ನೆಗಳಲ್ಲಿ ಗೊಂದಲ ಇದೆ ಎಂದು ಅಭ್ಯರ್ಥಿಗಳು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಮರು ಪರೀಕ್ಷೆಗೆ ನಾವು ಆಗ್ರಹ ಮಾಡಿದ್ದೇವು. ಸಿಎಂ ಸಿದ್ದರಾಮಯ್ಯ ಮರು ಪರೀಕ್ಷೆಗೆ ಆದೇಶ ಮಾಡಿದ್ದಾರೆ. ಇದು ಕನ್ನಡಿಗರ ಜಯ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:54 pm, Mon, 2 September 24