ಸಿಎಂ ಮಮತಾ ಬ್ಯಾನರ್ಜಿ ಸ್ಪರ್ಧಿಸಲಿರುವ ಬಂಗಾಳದ ಬಾಬಿನೀಪುರ ಸೇರಿ 4 ವಿಧಾನಸಭಾ ಕ್ಷೇತ್ರಗಳಿಗೆ ಸೆ. 30ರಂದು ಉಪಚುನಾವಣೆ
West Bengal Bypolls-2021: ಸೆ. 30ರಂದು ಪಶ್ಚಿಮ ಬಂಗಾಳದ 3 ವಿಧಾನಸಭಾ ಕ್ಷೇತ್ರಗಳು ಹಾಗೂ ಒರಿಸ್ಸಾದ 1 ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಕೊಲ್ಕತ್ತಾ: ಮಮತಾ ಬ್ಯಾನರ್ಜಿ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರಾ? ಇಲ್ಲವಾ? ಎಂದು ನಿರ್ಧರಿಸಲಿರುವ ಪಶ್ಚಿಮ ಬಂಗಾಳದ ಬಾಬಿನೀಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಸೆ. 30ರಂದು ನಡೆಯಲಿದೆ. ಈಗಾಗಲೇ ನಂದಿಗ್ರಾಮದಲ್ಲಿ ಸೋಲನ್ನು ಅನುಭವಿಸಿರುವ ಮಮತಾ ಬ್ಯಾನರ್ಜಿ ಸಿಎಂ ಸ್ಥಾನದಲ್ಲಿ ಮುಂದುವರೆಯಬೇಕೆಂದರೆ ಬಾಬಿನೀಪುರ ಕ್ಷೇತ್ರದಲ್ಲಿ ಗೆಲ್ಲುವುದು ಅನಿವಾರ್ಯವಾಗಿದೆ.
ಸೆ. 30ರಂದು ಪಶ್ಚಿಮ ಬಂಗಾಳದ 3 ವಿಧಾನಸಭಾ ಕ್ಷೇತ್ರಗಳು ಹಾಗೂ ಒರಿಸ್ಸಾದ 1 ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಅ. 3ರಂದು ಮತ ಎಣಿಕೆ ನಡೆಯಲಿದೆ. ಬಾಬಿನೀಪುರ ಮಾತ್ರವಲ್ಲದೆ ಪಶ್ಚಿಮ ಬಂಗಾಳದ ಸಂಸೇರ್ನಗರ್, ಜಾಂಗೀಪುರ್ ಹಾಗೂ ಒರಿಸ್ಸಾದ ಪಿಪ್ಲಿ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.
ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೆ. 13 ಕೊನೆಯ ದಿನವಾಗಿದೆ. ನಾಮಪತ್ರ ವಾಪಾಸ್ ಪಡೆಯಲು ಸೆ. 16 ಕೊನೆಯ ದಿನವಾಗಿದೆ. ಕಳೆದ ಏಪ್ರಿಲ್-ಮೇ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸಿಎಂ ಮಮತಾ ಬ್ಯಾನರ್ಜಿ ನಂದಿಗ್ರಾಮದಿಂದ ಸ್ಪರ್ಧಿಸಿದ್ದರು. ಮಮತಾ ಬ್ಯಾನರ್ಜಿ ಅವರ ಎದುರಾಳಿಯಾಗಿ ಟಿಎಂಸಿ ತೊರೆದು ಬಿಜೆಪಿಗೆ ಸೇರ್ಪಡೆಯಾದ ಸುವೇಂದು ಅಧಿಕಾರಿ ಸ್ಪರ್ಧಿಸಿದ್ದರು. ಸುವೇಂದು ಅಧಿಕಾರಿ ಎದುರು ಮಮತಾ ಬ್ಯಾನರ್ಜಿ ಸೋಲನ್ನು ಅನುಭವಿಸಿದ್ದರು. ಅದಾದ ಬಳಿಕ ಬಹುಮತ ಪಡೆದ ಟಿಎಂಸಿ ಪಕ್ಷ ಅಧಿಕಾರಕ್ಕೆ ಬಂದ ಹಿನ್ನೆಲೆಯಲ್ಲಿ ಮಮತಾ ಬ್ಯಾನರ್ಜಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.
ಇದೀಗ ಬಾಬಿನೀಪುರ ಕ್ಷೇತ್ರದಿಂದ ಉಪ ಚುನಾವಣೆಗೆ ಸ್ಪರ್ಧಿಸಲಿರುವ ಮಮತಾ ಬ್ಯಾನರ್ಜಿ ಈ ಚುನಾವಣೆಯಲ್ಲಿ ಗೆದ್ದರೆ ಮಾತ್ರ ಸಿಎಂ ಸ್ಥಾನದಲ್ಲಿ ಮುಂದುವರೆಯಲು ಸಾಧ್ಯ. ಈ ಬಾರಿಯ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ 294 ಕ್ಷೇತ್ರಗಳಲ್ಲಿ 213 ಸ್ಥಾನಗಳಲ್ಲಿ ಜಯ ಗಳಿಸಿ ಟಿಎಂಸಿ ಭರ್ಜರಿ ಗೆಲುವು ಸಾಧಿಸಿತ್ತು. ಬಿಜೆಪಿ ಕೇವಲ 77 ಸ್ಥಾನಗಳಿಗೆ ತೃಪ್ತಿ ಪಡೆದುಕೊಂಡಿತ್ತು.
ಇದನ್ನೂ ಓದಿ: ನಮ್ಮತ್ತ ಬೆರಳು ತೋರಿಸಿ ಪ್ರಯೋಜನವಿಲ್ಲ, ಬಿಜೆಪಿ ದೇಶವನ್ನೇ ಮಾರಿದೆ: ಮಮತಾ ಬ್ಯಾನರ್ಜಿ
(Election Commission announces bypolls on Sep 30 in 4 seats including Bhabanipur where CM Mamata Banerjee will contest)
Published On - 2:00 pm, Sat, 4 September 21